ಮುಂಬೈ : ನಕಲಿ ಟಿಆರ್‌ಪಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರನ್ನು ಬಾಂಬೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಹೇಗಾದರೂ ಮಾಡಿ ಅರ್ನಬ್ ಗೋಸ್ವಾಮಿಯನ್ನು ಸಿಕ್ಕಿಸಲೇಬೇಕು ಎಂದು ನೀವು ( ಮುಂಬೈ ಪೊಲೀಸರು ) ತೀರ್ಮಾನಿಸಿದಂತೆ ಕಾಣಿಸುತ್ತಿದೆ ಎಂದು ಚಾಟಿ ಬೀಸಿದ ಹೈಕೋರ್ಟ್, ಪದೇ ಪದೇ ಅವರ ವಿರುದ್ಧ ಸಾಕ್ಷಿ ಇದೆ ಅನ್ನುತ್ತೀರಿ, ಆದರೆ ಅದು ಎಲ್ಲಿದೆ ತೋರಿಸಿ ಅಂದಿದೆ.
ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ತನಿಖೆ ನಡೆಯುತ್ತಿದೆ. ಆದರೆ ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ವಿರುದ್ಧ ಯಾವ ಸಾಕ್ಷ್ಯಿಯನ್ನು ಕಂಡು ಹಿಡಿದಂತಿಲ್ಲ ಎಂದ ಹೈಕೋರ್ಟ್ ರಿಪಬ್ಲಿಕ್ ಟಿವಿಯ ಸಂಪಾದಕೀಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅಥವಾ ಇತರೆ ಯಾವುದೇ ಪತ್ರಕರ್ತರನ್ನು ಆರೋಪಿಗಳನ್ನಾಗಿ ಯಾಕೆ ಹೆಸರಿಸಿಲ್ಲ ಎಂದು ಪ್ರಶ್ನಿಸಿತು.
2020ರ ಅಕ್ಟೋಬರ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದು 2021ರ ಮಾರ್ಚ್. ಹಾಗಿದ್ದರೂ ಸಾಕ್ಷಿ ಮಾತ್ರ ಸಿಕ್ಕಿಲ್ಲ, ಕಳೆದ ಮೂರು ತಿಂಗಳಿನಿಂದ ತನಿಖೆ ನಡಸುತ್ತಿದ್ದೀರಿ ಮತ್ತು ಅವರ ವಿರುದ್ಧ ಯಾವ ಪುರಾವೆಯೂ ಸಿಕ್ಕಿಲ್ಲವೇ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು ಹೇಗಾದರೂ ಮಾಡಿ ಅರ್ನಬ್ ಗೋಸ್ವಾಮಿಯನ್ನು ಸಿಕ್ಕಿಸಲೇಬೇಕು ಎಂದು ನೀವು ( ಮುಂಬೈ ಪೊಲೀಸರು ) ತೀರ್ಮಾನಿಸಿದಂತೆ ಕಾಣಿಸುತ್ತಿದೆ ಅಂದಿದ್ದಾರೆ.
ರಿಪಬ್ಲಿಕ್ ಟಿವಿ ವಾಹಿನಿಗಳ ಮಾಲೀಕ ಸಂಸ್ಥೆ ಎಆರ್‌ಜಿ ಔಟ್‌ಲೀರ್ ಮೀಡಿಯ ತನ್ನ ಚಾನೆಲ್ ಹಾಗೂ ಉದ್ಯೋಗಿಗಳ ವಿರುದ್ಧ ಟಿಆರ್‌ಪಿ ಹಗರಣದಲ್ಲಿ ಅಪರಾಧ ವಿಚಾರಣೆ ಪ್ರಕ್ರಿಯೆ ಆರಂಭಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್‌ಎಸ್ ಶಿಂದೆ ಮತ್ತು ಮನೀಶ್ ಪಿಟಾಲೆ ಮುಂಬೈ ಪೊಲೀಸರ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಈ ವೇಳೆ ಮುಂಬೈ ಪೊಲೀಸರು ಸಲ್ಲಿಸಿರುವ ಎರಡು ಆರೋಪ ಪಟ್ಟಿಗಳ ಬಗ್ಗೆ ರಿಪಬ್ಲಿಕ್ ಟಿವಿ ಪರ ವಕೀಲರು ಗಮನ ಸೆಳೆದಾಗ, ರಿಪಬ್ಲಿಕ್ ಟಿವಿ ವಿರುದ್ಧ ಯಾವುದೇ ಪುರಾವೆ ದೊರೆತಿಲ್ಲ ಅನ್ನುವುದನ್ನು ಕೋರ್ಟ್ ನೋಟ್ ಮಾಡಿಕೊಂಡಿದೆ..
Discussion about this post