ಬೆಂಗಳೂರು : ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಷ್ಟು ನಿರ್ಲಕ್ಷ್ಯವನ್ನು ಮತ್ಯಾವ ರಾಜ್ಯಗಳು ತೋರಿಸಿಲ್ಲ. ಈ ನಿರ್ಲಕ್ಷ್ಯದ ನಡುವೆಯೂ ಸೋಂಕು ನಿಯಂತ್ರಣಕ್ಕೆ ಬಂದಿದೆ ಅನ್ನುವುದೇ ಅಚ್ಚರಿ.
ಸೋಂಕು ಪ್ರಾರಂಭದ ದಿನದಿಂದಲೂ ಯಡವಟ್ಟು ಸ್ಟೇಟ್ ಮೆಂಟ್ ಗಳನ್ನು ಕೊಡುತ್ತಾ ಬಂದಿರುವ ಮಂತ್ರಿ ಮಾಗಧರು, ಇಂದಿಗೂ ಆ ಯಡವಟ್ಟುಗಳನ್ನು ಮುಂದುವರಿಸಿದ್ದಾರೆ.
ಈಗಾಗಲೇ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದೆ. ಹಾಗೇ ನೋಡಿದರೆ ಎರಡೂ ರಾಜ್ಯಗಳ ಸಂಪರ್ಕವನ್ನು ರಾಜ್ಯ ಸರ್ಕಾರ ಕಡಿತಗೊಳಿಸುವುದು ಉತ್ತಮ. ಹೋಗ್ಲಿ ಹಾಗೇ ಮಾಡೋದು ಅಸಾಧ್ಯ ಅನ್ನುವ ಕಾರಣದಿಂದ ಕೇರಳದಿಂದ ಬರುವವರು ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ತರಬೇಕು ಎಂದು ಸೂಚಿಸಲಾಗಿದೆ. ಅದು ಕೂಡಾ RT-PCR ಪರೀಕ್ಷೆಯ ವರದಿಯೇ ಆಗಿರಬೇಕು.
ಆದರೆ ಕೇರಳದಂತೆ ಮಹಾರಾಷ್ಟ್ರದಲ್ಲೂ ಕೊರೋನಾ ಅಬ್ಬರಿಸುತ್ತಿದೆ. ಅಲ್ಲಿನ ಮುಖ್ಯಮಂತ್ರಿಗಳೇ ಲಾಕ್ ಡೌನ್ ಎಚ್ಚರಿಕೆ ನೀಡಿದ್ದಾರೆ. ಆದರೆ ಕರ್ನಾಟಕ ಸರ್ಕಾರಕ್ಕೆ ಮಾತ್ರ ಮಹಾರಾಷ್ಟ್ರದ ಪರಿಸ್ಥಿತಿ ಗಮನಕ್ಕೆ ಬಂದಿಲ್ಲ.
ಮಹಾರಾಷ್ಟ್ರದಿಂದ ಆಗಮಿಸುವ ಸೋಂಕಿತರನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇನ್ನು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಫೆಬ್ರವರಿ ಬಳಿಕ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಹಾಗಿದ್ದರೂ ಯಡಿಯೂರಪ್ಪ ಸರ್ಕಾರದ್ದು ಈ ಬಗ್ಗೆ ಮಾತ್ರ ದಿವ್ಯ ನಿರ್ಲಕ್ಷ್ಯ.
ಈಗಾಗಲೇ ಶಾಲಾ ಕಾಲೇಜುಗಳು ಬಹುತೇಕ ಪ್ರಾರಂಭವಾಗಿದೆ. ಈ ನಡುವೆ ಮಹಾರಾಷ್ಟ್ರದಿಂದ ಸೋಂಕು ಕರ್ನಾಟಕಕ್ಕೆ ಹರಡಿದರೆ ಆಗಬಹುದಾದ ಅನಾಹುತದ ಅರಿವು ರಾಜ್ಯ ಸರ್ಕಾರಕ್ಕೆ ಇದೆಯೇ..?
Discussion about this post