ಮಂಗಳೂರು : ಕರ್ನಾಟಕ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಎರಡು ದಿನಗಳ ಭೇಟಿಗಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರಿನಲ್ಲಿ ರಾಷ್ಟ್ರಪತಿಗಳ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ. ಶೃಂಗೇರಿಗೆ ಭೇಟಿ ನೀಡುವ ನಿಟ್ಟಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಪತ್ನಿ ಸವಿತಾ ಕೋವಿಂದ ಹಾಗೂ ಪುತ್ರಿ ಸ್ವಾತಿ ಕೋವಿಂದ ಅವರು ಆಗಮಿಸಿದ್ದಾರೆ.
ರಾಷ್ಟ್ರಪತಿಗಳ ಭೇಟಿ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ವಿಮಾನ ನಿಲ್ದಾಣದಿಂದ ಸರ್ಕಿಟ್ ಹೌಸ್ ಬರುವ ದಾರಿಯ ಹಂಪ್ ಗಳನ್ನು ಈಗಾಗಲೇ ತೆರವು ಮಾಡಲಾಗಿದೆ.
ಈ ನಡುವೆ ರಾಷ್ಟ್ರಪತಿಗಳ ಭೇಟಿ ಹಿನ್ನಲೆಯಲ್ಲಿ ಹಿಂದಿ ದೈನಿಕ ಒದಗಿಸಲು ಜಿಲ್ಲಾಡಳಿತ ಪರದಾಡಿದೆ ಅನ್ನುವ ಸುದ್ದಿ ಬೆಳಕಿಗೆ ಬಂದಿದೆ. ಪ್ರೊಟೋಕಾಲ್ ಪ್ರಕಾರ ರಾಷ್ಟ್ರಪತಿ ಹಾಗೂ ಅವರ ಜೊತೆಗೆ ಬರುವ ಅಧಿಕಾರಿಗಳಿಗಾಗಿ ಎಲ್ಲಾ ಸುದ್ದಿ ಪತ್ರಿಕೆಗಳ 25 ಪ್ರತಿಗಳನ್ನು ಒದಗಿಸಬೇಕು. ಅದರಲ್ಲಿ ಹಿಂದಿ ಪತ್ರಿಕೆಯೂ ಸೇರಿದೆ.

ಆದರೆ ಮಂಗಳೂರಿನಲ್ಲಿ ಹಿಂದಿ ಪತ್ರಿಕೆ ಓದುಗರೇ ಇಲ್ಲ, ಇನ್ನು ಹಿಂದಿ ಪತ್ರಿಕೆ ಎಲ್ಲಿಂದ ತರಿಸೋಣ, ಹಿಂದಿ ಪತ್ರಿಕೆ ಸಲುವಾಗಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಬುಧವಾರ ನಗರದ ಎಲ್ಲಾ ಪತ್ರಿಕಾ ಏಜೆಂಟ್ ಗಳನ್ನು ವಿಚಾರಿಸಿದ್ದಾರೆ. ಆದರೆ ಹಿಂದಿ ಪತ್ರಿಕೆ ಲಭ್ಯವಾಗಿರಲಿಲ್ಲ. ಲಾಕ್ ಡೌನ್ ಮುಂಚೆ ಹಿಂದಿ ದೈನಿಕವೊಂದರ 75 ಪ್ರತಿ ಬರುತ್ತಿತ್ತು. ಲಾಕ್ ಡೌನ್ ಬಳಿಕ ಅದು ಕೂಡಾ ನಿಂತು ಹೋಗಿದೆ.
ಹೀಗಾಗಿ ಹುಬ್ಬಳ್ಳಿ, ಬೆಂಗಳೂರು ಹಾಗೂ ಹೈದರಬಾದ್ ನ ಏಜೆಂಟ್ ಗಳನ್ನು ಸಂಪರ್ಕಿಸಲಾಗಿದ್ದು, ನಾಳೆ ಬೆಳಗ್ಗೆ ಪೇಪರ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆಯಂತೆ.
Discussion about this post