ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿರುವ ಟೇಬಲ್ ಟೆನಿಸ್ ಆಟಗಾರ್ತಿ ಭಾವೀನಾ ಪಟೇಲ್ ಅವರಿಗ ಇದೀಗ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ವಿಶೇಷವಾಗಿ ಭಾವೀನಾ ಅವರನ್ನು ಅಭಿನಂದಿಸಿದ್ದು, ರಾಜ್ಯ ಸರ್ಕಾರದ ದಿವ್ಯಾಂಗ್ ಖೇಲ್ ಪ್ರತಿಭಾ ಪ್ರೊತ್ಸಾಹನ್ ಪುರಸ್ಕಾರ್ ಯೋಜನೆಯಡಿ ಭಾವೀನಾ ಪಟೇಲ್ ಗೆ 3 ಕೋಟಿ ರೂ. ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
ಗುಜರಾತ್ ನ ವಡಾ ನಗರ ನಿವಾಸಿ ಭಾವಿನಾ 12 ತಿಂಗಳು ಮಗುವಾಗಿದ್ದಾಗ ಪೋಲಿಯೊ ಪೀಡಿತರಾಗಿದ್ದರು. ಬೆಳೆದಂತೆ ಅವರು ಮಾನಸಿಕವಾಗಿ ಕುಗ್ಗಲಿಲ್ಲ, ಸ್ಥೈರ್ಯ ಕಳೆದುಕೊಳ್ಳಲಿಲ್ಲ, ಬದಲಾಗಿ ಸಾಧಿಸುವ ಪಣ ತೊಟ್ಟರು. ಪದವಿ ವ್ಯಾಸಂಗ ಸಮಯದಲ್ಲಿ ಟೇಬಲ್ ಟೆನಿಸ್ ಬಗ್ಗೆ ಆಸಕ್ತಿ ಬೆಳೆಸಿಕೊಂಡರು.
ಹೀಗೆ ಶುರುವಾದ ಆಸಕ್ತಿ ಅವರನ್ನು ಮೈದಾನ ತನಕ ಕರೆದುಕೊಂಡು ಬಂತು, ನಂತರ ಹಿಂತಿರುಗಿ ನೋಡಲಿಲ್ಲ, ಈಗಾಗಲೇ ಹಲವು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಿರುವ ಭಾವೀನಾ 5 ಚಿನ್ನದ ಪದಕ ಹಾಗೂ 13 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಇದೀಗ ಆಡಿದ ಮೊದಲ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಗೆಲುವಿನ ನಗೆ ಬೀರಿದ್ದಾರೆ.
Discussion about this post