ವೈಜ್ಞಾನಿಕ ಜಗತ್ತಿಗೆ ಮತ್ತೆ ಸವಾಲೆಸೆದರು ನಾಗಪಾತ್ರಿ – ಮನೆಯ ಪಂಚಾಂಗ ಅಗೆದು ನಾಗಶಿಲೆ ತೆಗೆದು ಕೊಟ್ಟ ನಾಗಪಾತ್ರಿ
ನಿಜವಾಯಿತು ನಾಗಪಾತ್ರಿಯ ಭವಿಷ್ಯನುಡಿ: ಮನೆಯೊಳಗಿತ್ತು ನಾಗನ ಮೂರ್ತಿ
ಮನೆಯ ಹಾಲ್ನ ಒಳಗೆ ಸಿಕ್ಕಿತು ವಿಗ್ರಹ- ಭೂಮಿ ಅಗೆದಾಗ 6 ಅಡಿ ಕೆಳಗೆ ಸಿಕ್ಕಿತು ಸಾವಿರ ವರ್ಷದ ಹಿಂದಿನ ಬಿಂಬ ಹೀಗೆ ಹತ್ತು ಹಲವು ಹೆಡ್ ಲೈನ್ ಇವತ್ತು ಮಾಧ್ಯಮಗಳಲ್ಲಿ ರಾರಾಜಿಸಿತ್ತು.
ಆದರೆ ಇದೀಗ ನಾಗಪಾತ್ರಿ ಈ ಹಿಂದೆ ಸಾಕಷ್ಟು ಮಂದಿ ಮೋಸ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಅದಕ್ಕಿಂತ ಮುಂಚೆ ನಾಗಪಾತ್ರಿ ಭವಿಷ್ಯವೇನು ಅನ್ನುವುದನ್ನು ತಿಳಿದುಕೊಳ್ಳಿ.
ಹೊಸದಾಗಿ ಕಟ್ಟಿಸಿದ ಮನೆಯಲ್ಲಿ ನೆಮ್ಮದಿ ಇಲ್ಲ, ಉದ್ಯಮದಲ್ಲಿ ನಷ್ಟವಾಗುತ್ತಿದೆ ಎಂದು ಹೆಬ್ರಿ ಮುದ್ರಾಡಿಯ ಗಂಗಾಧರ ಶೆಟ್ಟಿಯವರು ಸ್ನೇಹಿತರ ಸಲಹೆಯ ಮೇರೆಗೆ ನಾಗಪಾತ್ರಿ ತೀರ್ಥಹಳ್ಳಿಯ ಆರಗ ಅಗ್ರಹಾರ ನಾಗರಾಜ್ ಭಟ್ಟರಲ್ಲಿ ಪ್ರಶ್ನೆ ಕೇಳಿದ್ದರು.
ಆಗ ಮನೆಯಲ್ಲಿ ಹಾಲಿನ ಒಳಗೆ ನಾಗ ದೇವರ ಕಲ್ಲು ಇದೆ, ಅದರ ಮೇಲೆ ಮನೆ ಕಟ್ಟಿದ್ದೀರಿ. ಅದೇ ಈ ತೊಂದರೆಗೆಲ್ಲಾ ಕಾರಣ, ಅದನ್ನು ಮೇಲೆ ತೆಗೆದು, ಆ ಮೂರ್ತಿಗೆ ಪೂಜೆ ಮಾಡಬೇಕು ಎಂದು ಪರಿಹಾರ ಸೂಚಿಸಿದ್ದರು.
ಈ ನಾಗನ ಪ್ರತಿಮೆಗೆ ಜೈನರ ಕಾಲದಲ್ಲಿ ಆರಾಧನೆಯಾಗುತ್ತಿದ್ದು ಬಳಿಕ ಭೂಗರ್ಭ ಸೇರಿತ್ತು. ಕಾಲಾಂತರದಲ್ಲಿ ಗಂಗಾಧರ ಶೆಟ್ಟರು ಅದೇ ಜಾಗದಲ್ಲಿ ಮನೆ ಕಟ್ಟಿಸಿದ್ದರು. ಆದರೆ ನಾಗ ದೋಷದಿಂದ ಅವರಿಗೆ ತೊಂದರೆ ಆಯ್ತು. ಹೂತಿದ್ದ ವಿಗ್ರವನ್ನು ನಿಗದಿತ ಸ್ಥಳದಲ್ಲೇ ಪತ್ತೆಮಾಡಿದ್ದು ಈ ಪವಾಡ ವಿಶೇಷ. ನಾಗರಾಜ್ ಭಟ್ ಈ ಹಿಂದೆಯೂ ಉಡುಪಿ ಹಾಗೂ ಮಲೆನಾಡು ಭಾಗದಲ್ಲಿ ಹಲವೆಡೆ ಮನೆಯೊಳಗೆ ಹೂತು ಹೋಗಿದ್ದ ನಾಗ ವಿಗ್ರಹ ಪತ್ತೆ ಮಾಡಿದ್ದರಂತೆ.
ಇನ್ನು ಈ ಕುರಿತಂತೆ ಮಾತನಾಡಿರುವ ನಾಗಪಾತ್ರಿ ನಾಗರಾಜ ಭಟ್, ಅಘೋರಿ ಶಕ್ತಿಯಿಂದ ನನಗೆ ನಾಗನ ಬಿಂಬದ ಗೋಚರವಾಗುತ್ತದೆ. ಮುದ್ರಾಡಿಯಲ್ಲೂ ಇದೇ ರೀತಿ ಆಗಿದೆ. ಪೆರ್ಡೂರು, ಹೆಬ್ರಿ ವ್ಯಾಪ್ತಿಯಲ್ಲಿ ಎರಡು ನಾಗನ ಕಲ್ಲುಗಳನ್ನು ಮೇಲಕ್ಕೆತ್ತಿ ಪೂಜಾ ವಿಧಿವಿಧಾನ ಮಾಡಲಾಗಿದೆ. ದೇವರ ವಿಗ್ರಹ ಭೂಮಿಯೊಳಗಿದ್ದು ಅದರ ಮೇಲೆ ಕಟ್ಟಡ, ಮನೆ ನಿರ್ಮಾಣ ಆದರೆ ಅಲ್ಲಿ ಸಮಸ್ಯೆಗಳು ಬರುತ್ತದೆ. ಈಗ ಕುಟುಂಬಕ್ಕೂ ನೆಮ್ಮದಿ ಪ್ರಾಪ್ತಿಯಾಗಿದೆ. ಸಿಕ್ಕ ನಾಗನ ಕಲ್ಲಿನ ಪುನರ್ ಪ್ರತಿಷ್ಠಾಪನೆ ಆಗಬೇಕಿದೆ. ಆಶ್ಲೇಷ ಬಲಿ ವಿಧಾನಗಳು ನಡೆಯಲಿದೆ ಎಂದಿದ್ದಾರೆ.
ಈ ಸ್ಟೋರಿ ವೈರಲ್ ಆಗುತ್ತಿದ್ದಂತೆ ದೂರದ ಪುಣೆಯಿಂದ ಮಾತನಾಡಿರುವ ಉಡುಪಿಯ ನಿವಾಸಿಯೊಬ್ಬರು, ಇದೇ ವ್ಯಕ್ತಿ ನನ್ನ ಮನೆಯಲ್ಲೂ ಹೀಗೆ ನಾಗನ ಕಲ್ಲು ತೆಗೆದಿದ್ದಾರೆ. ಇವರದ್ದು ಕಾಸು ಮಾಡುವ ವ್ಯವಹಾರ. ಅವರೇ ಅಗೆಯಲು ಹೇಳಿ, ಬಳಿಕ ಅವರೇ ಅಲ್ಲಿ ನಾಗನ ಕಲ್ಲು ತಂದು ನಾಟಕ ಮಾಡುತ್ತಾರೆ ಎಂದಿದ್ದಾರೆ.
ಅದರ ಪೂರ್ತಿ ಆಡಿಯೋ ಇಲ್ಲಿದೆ ಕೇಳಿಸಿಕೊಳ್ಳಿ.
ಒಂದು ವೇಳೆ ಇದೇ ನಾಗಪಾತ್ರಿ ಹೀಗೆಲ್ಲಾ ಹೇಳುವುದಾಗಿದ್ದರೆ, ರೈಲ್ವೆ, ಬೆಂಗಳೂರು ಜಲಮಂಡಳಿ ಮಂದಿಗೆ ಸಾಕಷ್ಟು ಅನುಕೂಲವಾಗಲಿದೆ. ರೈಲ್ವೆ ಇಲಾಖೆಯವರು ತಮ್ಮ ಕೇಬಲ್ ಎಲ್ಲಿದೆ ಎಂದು ಹುಡುಕಾಡಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ.
ಜಲಮಂಡಳಿಯವರಿಗೆ ತಮ್ಮ ಹಳೆಯ ನೀರಿನ ಪೈಪ್ ಎಲ್ಲಿದೆ ಎಂದೇ ಗೊತ್ತಿಲ್ಲ. ಈ ನಾಗಪಾತ್ರಿಯನ್ನು ಕರೆಸಿ ಕಳೆದು ಹೋದ ಎಲ್ಲಾ ವಸ್ತುಗಳನ್ನು ಹುಡುಕಾಟ ನಡೆಸಬಹುದಲ್ವ.
ಇನ್ನು ಪೊಲೀಸರು ಆರೋಪಿಗಳನ್ನು ಹಿಡಿಯಲು ತಮ್ಮ ಎಲ್ಲಾ ಬುದ್ದಿ ಶಕ್ತಿಯನ್ನು ಉಪಯೋಗಿಸುತ್ತಾರೆ. ಈ ಕಷ್ಟವೇ ಬೇಡ ಅಘೋರಿ ವಿದ್ಯೆ ಕಲಿತಿರುವ ನಾಗರಾಜ್ ಭಟ್ ಅವರನ್ನು ಕರೆಸಿದರೆ ಸಾಕು, ಇಂತಹುದೇ ಜಾಗದಲ್ಲಿ ಆರೋಪಿಗಳಿದ್ದಾರೆ ಎಂದು ಕಂಡು ಹಿಡಿಯ ಬಹುದಲ್ವ.

Discussion about this post