ಮಗಳು ಜಾನಕಿ ಧಾರಾವಾಹಿಯಲ್ಲಿ ಮಂಗಳಕ್ಕ (ಆನಂದ ಬೆಳಗೂರ್ ತಾಯಿ) ಪಾತ್ರಧಾರಿಯಾಗಿ ನಟಿಸುತ್ತಿದ್ದ ಶೋಭಾ ಎಮ್.ವಿ. ಅವರು ಬುಧವಾರ ಘಟಿಸಿದ ಅಪಘಾತದಲ್ಲಿ ನಿಧನರಾಗಿದ್ದಾರೆ.
ಅನೇಕ ಚಲನಚಿತ್ರಗಳು ಧಾರಾವಾಹಿಗಳಲ್ಲಿ ನಟಿಸಿರುವ ಇವರು, ಅತ್ಯಂತ ಸಜ್ಜನರು, ಸೌಮ್ಯ ಸ್ವಭಾವದವರಾಗಿದ್ದರು, ಇವರ ಅಗಲಿಕೆ ತಂಡಕ್ಕೆ ದೊಡ್ಡ ನಷ್ಟ ಎಂದು ಮಗಳು ಜಾನಕಿ ತಂಡ ಅಭಿಪ್ರಾಯಪಟ್ಟಿದೆ.
“ಮಗಳು ಜಾನಕಿಯಲ್ಲಿ ಮಂಗಳಕ್ಕನ ಪಾತ್ರ ಮಾಡುತ್ತಿದ್ದ ಶೋಭಾ, ರಸ್ತೆ ಅಪಘಾತ ದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಸದಾ ನಗುಮುಖದ, ಅಪಾರ ಪ್ರತಿಭೆಯ, ಸೌಜನ್ಯ ತುಂಬಿದ ಮಂಗಳಕ್ಕನ ಅನಿರೀಕ್ಷಿತ ಸಾವು ನನ್ನನ್ನು ದಿಗ್ಭ್ರಮೆಗೊಳಿಸಿದೆ. ತಂಡದ ಪರವಾಗಿ ತೀವ್ರ ಸಂತಾಪಗಳು” ಎಂದಿದ್ದಾರೆ ಸೀತಾರಾಮ್.
ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಐವರು ಮೃತಪಟ್ಟು ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದರು. ಪೊಲೀಸ್ ಮೂಲಗಳ ಪ್ರಕಾರ ಕಾರಿನಲ್ಲಿ ಅಶೋಕ್, ಪ್ರವಿತಾ, ಮಂಜುಳಾ, ಕಿರುತೆರೆ ನಟಿ ಶೋಭಾ, ಸುಕನ್ಯಾ, ಶ್ರೇಷ್ಠ ಸೇರಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲಾ ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸಿಗಳಾಗಿದ್ದು ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ದೇವಾಲಯಕ್ಕಾಗಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಗಾಯಾಳುಗಳಲ್ಲಿ ಇಬ್ಬರು ಮಕ್ಕಳೂ ಸೇರಿದ್ದು ಎಲ್ಲಾ ಗಾಯಾಳುಗಳನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂ ಆಗಿದ್ದು, ಸ್ಥಳಕ್ಕೆ ಚಿತ್ರದುರ್ಗ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
Discussion about this post