ಮಾಜಿ ಸಂಸದ ದಿ. ಅನಂತಕುಮಾರ್ ಅವರು ಬಳಸುತ್ತಿದ್ದ ಸಂಸದರ ಕಚೇರಿಯನ್ನು ಬಳಸಲು ಒಲ್ಲೆ ಅಂದಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ನೂತನ ಸಂಸದ ತೇಜಸ್ವಿ ಸೂರ್ಯ ಜಯನಗರ ಸಾರ್ವಜನಿಕ ಲೈಬ್ರರಿ ಆವರಣದಲ್ಲೇ ಸಂಸದರ ಕಚೇರಿ ಪ್ರಾರಂಭಿಸಲು ಮುಂದಾಗಿದ್ದರು.
ಈ ಸಂಬಂಧ ಬಿಬಿಎಂಪಿ ಆದೇಶ ಕೂಡಾ ಹೊರಡಿಸಿತ್ತು. ಆದರೆ ಗ್ರಂಥಾಲಯ ಮತ್ತು ಬಡ ಮಕ್ಕಳ ಟ್ಯೂಷನ್ ಗೆ ನೆಲೆ ಒದಗಿಸಿದ್ದ ಕಟ್ಟಡದಲ್ಲೇ ಸಂಸದರ ಕಚೇರಿ ತೆರೆಯುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದರಿಂದ ಮಕ್ಕಳ ಟ್ಯೂಷನ್ ಮತ್ತು ಗ್ರಂಥಾಲಯಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ ಅನ್ನುವ ಆರೋಪ ಕೇಳಿ ಬಂದಿತ್ತು.
ಆದರೆ ಇದಕ್ಕೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ತೇಜಸ್ವಿ ಸೂರ್ಯ, ಸಂಸದರ ಕಚೇರಿ ನಿರ್ಮಾಣದಿಂದ ಮಕ್ಕಳಿಗಾಗಲಿ, ಗ್ರಂಥಾಲಯಕ್ಕೆ ತೊಂದರೆ ಇಲ್ಲ. ಈ ಕಟ್ಟಡ ಮೊದಲ ಫ್ಲೋರಿನಲ್ಲಿ ಲೈಬ್ರರಿ ಇದೆ. ಅದರ ಕೆಳಗೆ ಇರುವ ಟ್ರಸ್ಟ್ ಕಚೇರಿಯನ್ನು ಸಂಸದರ ಕಚೇರಿಯಾಗಿ ಮಾಡುತ್ತಿದ್ದೇವೆ ಅಂದಿದ್ದರು.
ದಿ.ಅನಂತ ಕುಮಾರ್ ಕಾರ್ಯಾಲಯ ನಿರಾಕರಿಸಿದ ತೇಜಸ್ವಿ ಸೂರ್ಯ : ಮಕ್ಕಳ ಗ್ರಂಥಲಾಯಕ್ಕೆ ಸಂಸದರ ಕಣ್ಣು
ಈ ವಿಚಾರದಲ್ಲಿ ವಿದ್ಯಾರ್ಥಿಗಳು ನನ್ನ ಪರವಿದ್ದಾರೆ. ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ. ಕೆಲವರು ಮೊದಲು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಟ್ರಸ್ಟನ್ನು ಅಲ್ಲಿಂದ ಖಾಲಿ ಮಾಡಿಸಿ ಬೇರೆಯವರಿಗೆ ನೀಡಲು ತೀರ್ಮಾನ ಮಾಡಿದ್ದರು. ಸದ್ಯ ಬಿಬಿಎಂಪಿ ಸಂಸದರ ಕಚೇರಿಗೆ ನೀಡಿದೆ ಎಂದು ಹೇಳಿದ್ದರು.
ಇದೀಗ ಜಯನಗರ ಶೈಕ್ಷಣಿಕ ಸಮಿತಿಯವರು ಈ ಸಂಬಂಧ ಕೊಟ್ಟಿರುವ ಪತ್ರಿಕಾ ಹೇಳಿಕೆಯನ್ನು ಟ್ವೀಟರ್ ನಲ್ಲಿ ಪ್ರಕಟಿಸಿರುವ ತೇಜಸ್ವಿ ಸೂರ್ಯ, “ ನಿನ್ನೆಯಿಂದ ಸಂಸದರ ಕಛೇರಿಯಿಂದಾಗಿ ಬಡ ಮಕ್ಕಳ ಟ್ಯೂಷನ್ ಸೆಂಟರ್ ಬಂದಾಗುತ್ತಿದೆ ಎಂದು ಕಾಂಗ್ರೆಸ್ ನ ಸುಳ್ಳು ಸುದ್ದಿ ಕಾರ್ಖಾನೆ ಅಪಪ್ರಚಾರ ಮಾಡುತ್ತಿದೆ. ಇದರ ಬಗ್ಗೆ ಟ್ಯೂಷನ್ ಸೆಂಟರ್ ನಡೆಸುವ ಶೈಕ್ಷಣಿಕ ಸಮಿತಿಯವರೇ ಸತ್ಯವನ್ನು ಜನರ ಮುಂದಿಟ್ಟಿದ್ದಾರೆ ಅಂದಿದ್ದಾರೆ ”
ಶೈಕ್ಷಣಿಕ ಸಮಿತಿಯವರೇ ಸ್ಪಷ್ಟನೆ ಕೊಟ್ಟಿರುವುದರಿಂದ ಈ ವಿವಾದವನ್ನು ಇಲ್ಲಿಗೆ ನಿಲ್ಲಿಸುವುದು ಸೂಕ್ತ ಅನ್ನುವುದು Torrent Spree ಅಭಿಪ್ರಾಯ. ಸಂಸದರ ಕಚೇರಿಯಿಂದ ತೊಂದರೆಯಾಗುತ್ತದೆ ಅನ್ನುವುದಾದರೆ ಮುಂದಿನ ದಿನಗಳಲ್ಲಿ ಆಕ್ರೋಶ, ಅಸಮಾಧಾನ ಖಂಡಿತಾ ಹೊರ ಬರುತ್ತದೆ. ಅಂತಹ ದಿನ ಬಾರದಿರಲಿ ಅನ್ನುವುದು ನಮ್ಮ ಹಾರೈಕೆ.
Discussion about this post