ನವದೆಹಲಿ : ಹಿಂದೆಲ್ಲಾ ತಮಿಳುನಾಡು ರಾಜಕೀಯದ ಬಣ್ಣವೇ ಬೇರೆ. ಅಲ್ಲಿ ಕೊಡುವ ಭರವಸೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿತ್ತು.
ಗೆದ್ದರೆ ಟಿವಿ ಕೊಡುತ್ತೇವೆ, ಮಿಕ್ಸಿ ನೀಡುತ್ತೇವೆ ಹೀಗೆ ಐಷರಾಮಿ ವಸ್ತುಗಳ ಆಮಿಷ ಒಡ್ಡಲಾಗುತ್ತಿತ್ತು. ಹೀಗಾಗಿಯೇ ಪ್ರತೀ ಬಾರಿ ಎಲೆಕ್ಷನ್ ಬಂದಾಗ ತಮಿಳುನಾಡಿನ ರಾಜಕೀಯ ಪಕ್ಷಗಳ ಪ್ರಣಾಳಿಕೆ ಏನು ಅನ್ನುವ ಕುತೂಹಲ ಎಲ್ಲರಲ್ಲಿತ್ತು.
ಅವರೇನು ಕೊಡ್ತಾರೆ, ಇವರೇನು ನೀಡ್ತಾರೆ ಅನ್ನುವುದೇ ಮತದಾರರ ಪ್ರಶ್ನೆಯಾಗಿತ್ತು.
ಆದರೆ ಅಲ್ಲಿ ಸಾಮಾಜಿಕ ಭದ್ರತೆ ಒದಗಿಸುವ ಭರವಸೆಗಳು ಪ್ರಣಾಳಿಕೆಯಲ್ಲಿ ಕಾಣಿಸಿಕೊಂಡಿದ್ದು ಅಪರೂಪ.
ಇದೀಗ ಭರವಸೆಗಳು ಒಂದಿಷ್ಟು ಬದಲಾಗಿದೆ. ಅದರಲ್ಲೂ ಈ ಬಾರಿ ಚುನಾವಣೆಯಲ್ಲಿ ವಸ್ತುಗಳ ಆಮಿಷದ ಬದಲಾಗಿ ಹೊಸ ರೀತಿಯ ಭರವಸೆಗಳನ್ನು ನೀಡಲಾಗಿದೆ.
ತಮಿಳುನಾಡಿನಲ್ಲಿ ಮತದಾರರನ್ನು ಒಲಿಸಲು ಪ್ರಮುಖ ಪಕ್ಷಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಗೆದ್ದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಕಡಿತ ಮಾಡುವುದಾಗಿ ಡಿಎಂಕೆ ಹೇಳಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಶನಿವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ ಗೆ ಕ್ರಮವಾಗಿ 5 ರೂ. ಹಾಗೂ 4 ರೂ.ಕಡಿತ, ಎಲ್ ಪಿಜಿ ಅನಿಲ ಸಿಲಿಂಡರ್ ಗೆ 100 ರೂ.ಸಬ್ಸಿಡಿ, ಹಾಲಿನ ಬೆಲೆ 3 ರೂ.ಕಡಿತ, ರೇಶನ್ ಅಕ್ಕಿ ಕಾರ್ಡ್‍ದಾರರಿಗೆ 4,000 ರೂ ನಗದು, ಪ್ರತೀ ಕುಟುಂಬದ ಮಹಿಳೆಗೆ ಸಾವಿರ ರೂ ನಗದು, ಮಹಿಳೆಯರಿಗೆ ಹೆರಿಗೆ ರಜೆ 12 ತಿಂಗಳಿಗೆ ವಿಸ್ತರಣೆ ಸೇರಿ ಹಲವು ಭರವಸೆಗಳನ್ನು ನೀಡಲಾಗಿದೆ.
ಇನ್ನು ಈಗಾಗಲೇ ಆಡಳಿತ ವಿರೋಧಿ ಅಲೆಯ ಆತಂಕಕ್ಕೆ ಸಿಲುಕಿರುವ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಮಹಿಳಾ ಮತದಾರರ ಒಲವು ಗಳಿಸಲು ಸಬ್ಸಿಡಿಗಳ ಉಡುಗೊರೆ ಪ್ರಕಟಿಸಿದ್ದಾರೆ.
ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಮಾಸಿಕ 1500 ರೂ. ಗೌರವಧನ, ವರ್ಷಕ್ಕೆ ಕುಟುಂಬವೊಂದಕ್ಕೆ ಆರು ಎಲ್‌ಪಿಜಿ ಉಚಿತ ಸಿಲೆಂಡರ್, ಉಚಿತ ಮೊಬೈಲ್, ಸೆಟ್ – ಟಾಪ್ ಬಾಕ್ಸ್ ಹಾಗೂ ಲ್ಯಾಪ್ ಟಾಪ್ ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.
ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಅದ್ಯಾವ ಪಕ್ಷವೇ ಗೆಲ್ಲಲಿ ಮನೆಗೆ ಮನೆಗೆ ಉಚಿತ ಗಿಫ್ಟ್ ಗಳು ಬಂದು ಸೇರುತ್ತವೆ.
Discussion about this post