ಬೀದಿಯಲ್ಲಿ ಕಚೋರಿ, ಸಮೋಸ ಮಾರೋ ಮಂದಿ ಎಷ್ಟು ಆದಾಯ ಗಳಿಸಬಹುದು ಅನ್ನೋ ಪ್ರಶ್ನೆ ಬಂದ್ರೆ ಒಂದಿಷ್ಟು ಸಾವಿರ ಅನ್ನುವ ಉತ್ತರ ಸಿಗುತ್ತದೆ. ಆದರೆ ಇಲ್ಲೊಬ್ಬರು ಕಚೋರಿ ಸಮೋಸ ಮಾರಿ ವಾರ್ಷಿಕ 60 ಲಕ್ಷದಿಂದ 1 ಕೋಟಿ ರೂ. ಆದಾಯ ಪಡೆಯುತ್ತಾರೆ ಅಂದ್ರೆ ನಂಬ್ತೀರಾ..ನಂಬಲೇಬೇಕು.
ಯಾಕಂದ್ರೆ ಈ ಬೀದಿ ವ್ಯಾಪಾರಿ ಮೇಲೆ ಇದೀಗ ಇದೀಗ ತೆರಿಗೆ ಇಲಾಖೆ ಕಣ್ಣುಬಿದ್ದಿದ್ದು, ಅಂಗಡಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಉತ್ತರ ಪ್ರದೇಶದ ಅಲಿಗಢ್ನಲ್ಲಿರುವ ಬೀದಿ ವ್ಯಾಪಾರಿ ಮುಖೇಶ್, ಹಲವಾರು ವರ್ಷಗಳಿಂದ ‘ಮುಖೇಶ್ ಕಚೋರಿ’ ಹೆಸರಿನಲ್ಲಿ ಕಚೋರಿ, ಸಮೋಸ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕವೇ ಅವರು ಕೋಟ್ಯಧಿಪತಿ ಆಗಿದ್ದಾರೆ.
ಮುಖೇಶ್ ಕಚೋರಿ ಅಂಗಡಿ ಅದೆಷ್ಟು ಫೇಮಸ್ ಅಂದ್ರೆ ಇಲ್ಲಿ ಜನ ತಿನ್ನೋ ಸಲುವಾಗಿ ಕ್ಯೂ ನಿಲ್ಲುತ್ತಾರೆ. ಇದರಿಂದ ಬಂಪರ್ ಆದಾಯ ಬರುತ್ತದೆ.
ಈ ನಡುವೆ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಇವರ ವ್ಯಾಪಾರ ಭರ್ಜರಿಯಾಗಿದೆ, ಆದರೆ ತೆರಿಗೆ ಮಾತ್ರ ಬರುತ್ತಿಲ್ಲ ಅನ್ನುವ ವಾಸನೆ ಸಿಕ್ಕಿದೆ. ವ್ಯಕ್ತಿಯೊಬ್ಬರು ವಾಣಿಜ್ಯ ತೆರಿಗೆ ಇಲಾಖೆಗೆ ಕೊಟ್ಟ ದೂರಿನ ಜಾಡು ಹಿಡಿದ ಹೊರಟ ಅಧಿಕಾರಿಗಳು ಮುಖೇಶ್ ವ್ಯಾಪಾರದ ಮೇಲೆ ನಿಗಾ ಇಟ್ಟಿದ್ದಾರೆ. ಆಗ ಗೊತ್ತಾಗಿದ್ದು ವಾರ್ಷಿಕ 60 ಲಕ್ಷದಿಂದ 1 ಕೋಟಿ ಆದಾಯ ಬರುತ್ತಿದೆ ಎಂದು.
ಹೀಗಾಗಿ GST ಕಾಯ್ದೆಯಂತೆ ನಿಮ್ಮ ಅಂಗಡಿ ನೋಂದಣಿಯಾಗಿಲ್ಲ ಹಾಗೂ ನೀವು ತೆರಿಗೆಯನ್ನೂ ಪಾವತಿಸುತ್ತಿಲ್ಲ ಎಂದು ನೋಟೀಸ್ ಕೊಟ್ಟಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಪತ್ರಿಕೆಯೊಂದಿಗೆ ಮಾತನಾಡಿರುವ ಮುಖೇಶ್, 12 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದೇನೆ. ತೆರಿಗೆ ಕಟ್ಟಬೇಕು, ಅಂಗಡಿ ನೋಂದಾಯಿಸಿಕೊಳ್ಳಬೇಕು ಅನ್ನುವುದನ್ನು ಯಾರು ನನಗೆ ಹೇಳಿಲ್ಲ. ಈ ಬಗ್ಗೆ ನನಗೆ ಅರಿವಿಲ್ಲ ಎಂದು ಉತ್ತರಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ತೆರಿಗೆ ಇಲಾಖೆ ಅಧಿಕಾರಿ ‘40 ಲಕ್ಷಕ್ಕಿಂತ ಹೆಚ್ಚು ವ್ಯವಹಾರ ನಡೆಸುವ ಮಂದಿ GST ಕಾಯ್ದೆಯಡಿ ಬರುತ್ತಾರೆ. ಇದೀಗ ಮುಖೇಶ್ ಅವರು ತಮ್ಮ ಆದಾಯವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಗ್ಯಾಸ್, ಆಯಿಲ್, raw material ಲೆಕ್ಕವನ್ನೂ ಕೊಟ್ಟಿದ್ದಾರೆ.ಹೀಗಾಗಿ ಅವರಿಗೆ ಶೀಘ್ರದಲ್ಲೇ GST ಸಂಖ್ಯೆ ಸಿಗಲಿದ್ದು, ಒಂದು ವರ್ಷದ ತೆರಿಗೆಯನ್ನೂ ಪಾವತಿಸಬೇಕಾಗಿದೆ.
Discussion about this post