ಗುಜರಾತ್ : ಮಕ್ಕಳಿರುವ ಮನೆಯಲ್ಲಿ ಮೈ ಎಲ್ಲಾ ಕಣ್ಣಾಗಿರಬೇಕು ಅನ್ನುವುದು ಮಾತು. ಅದು ಹೌದು ಕೂಡಾ. ಪುಟ್ಟ ಮಕ್ಕಳು ಅರೆ ಕ್ಷಣದಲ್ಲಿ ಕೈಗೊಳ್ಳುವ ನಿರ್ಧಾರಗಳು ದೊಡ್ಡ ಅನಾಹುತ ಮಾಡಿರುತ್ತದೆ. ಮುಗ್ಧ ಮಕ್ಕಳಿಗೆ ಸರಿ ಯಾವುದು ತಪ್ಪು ಯಾವುದು ಅನ್ನೋದು ಗೊತ್ತಿರುವುದಿಲ್ಲ. ಹೀಗಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು.
ಹೀಗೆ ಗುಜರಾತ್ ನಲ್ಲಿ 8ನೇ ಮಹಡಿಯಿಂದ ಬಿದ್ದು 2 ವರ್ಷದ ಮಿಹಿರ್ ದವೆ ಎಂಬ ಗಂಡು ಮಗು ಮೃತಪಟ್ಟಿದೆ. ಇದು ಪೋಷಕರ ನಿರ್ಲಕ್ಷ ಎಂದು ಅಪಾರ್ಟ್ ಮೆಂಟ್ ನಿವಾಸಿಗಳು ಹೇಳಿದ್ದಾರೆ.ಎಂಟನೇ ಮಹಡಿಯಿಂದ ಮಗು ಬೀಳುವ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಎದೆ ಝಲ್ ಅನ್ನುವಂತಿದೆ.
ಮಗುವನ್ನು ಆಟವಾಡಲು ಬಿಟ್ಟಿದ್ದ ಪೋಷಕರು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಆಟವಾಡುತ್ತಾ ಮಗು ಬಾಲ್ಕನಿಗೆ ಬಂದಿದೆ. ನಂತರ ಬಾಲ್ಕನಿಯ ಕಂಬಿ ಹತ್ತಲು ಪ್ರಯತ್ನಿಸಿದೆ. ಈ ವೇಳೆಯಲ್ಲೂ ಪೋಷಕರು ತಮ್ಮ ಮಗುವಿನತ್ತ ಗಮನಹರಿಸಿರಲಿಲ್ಲ.
ಕಂಬಿಯ ಮೇಲೆ ಹತ್ತಿದ ಮಗು ನಿಯಂತ್ರಣ ತಪ್ಪಿ ಕೆಲವೇ ಸೆಕೆಂಡುಗಳಲ್ಲಿ ಎಂಟನೇ ಅಂತಸ್ತಿನಿಂದ ಕೆಳಗೆ ಬಿದ್ದು, ಉಸಿರು ಚೆಲ್ಲಿದೆ, ಮಗು ಬಿದ್ದ ರಭಸಕ್ಕೆ ಶಬ್ದ ಕೇಳಿ ಅಕ್ಕ ಪಕ್ಕ ಮನೆಯವರು ಓಡಿ ಬಂದ್ರೆ ಮಗು ರಕ್ತದ ಮಡುವಿನಲ್ಲಿತ್ತು. ಇಷ್ಟಾದರೂ ಪೋಷಕರಿಗೆ ವಿಚಾರವೇ ಗೊತ್ತಿರಲಿಲ್ಲ.ಸ್ಥಳೀಯರು ಬಂದು ಮಗುವಿನ ದಾರುಣ ಘಟನೆಯನ್ನು ವಿವರಿಸಿದಾಗಲೇ ಅವರಿಗೆ ಗೊತ್ತಾಗಿದ್ದು.
ಒಟ್ಟಿನಲ್ಲಿ ಪೋಷಕರ ನಿರ್ಲಕ್ಷಕ್ಕೆ ಮಹಡಿ ಮೇಲಿಂದ ಮಗು ಬಿದ್ದು ಸಾವನ್ನಪ್ಪಿರುವುದು ಸ್ಪಷ್ಟ. ಹಾಗಂತ ಅವರೇನು ಬೇಕು ಅಂತಾ ನಿರ್ಲಕ್ಷ್ಯ ಮಾಡಿರೋದಿಲ್ಲ. ಹಾಗಿದ್ದರೂ ಮಗುವಿದ್ದ ಮನೆ ಅಂದ ಮೇಲೆ ಎಚ್ಚರವಾಗಿರಲೇಬೇಕಲ್ವ.
Discussion about this post