ಕೆಲ ದಿನಗಳ ಹಿಂದೆ ಆಸ್ತಾ ವರ್ಮಾ ಎಂಬ ಕಾನೂನು ವಿದ್ಯಾರ್ಥಿನಿ ತನ್ನ 50 ವರ್ಷದ ತಾಯಿಗೆ ಸೂಕ್ತ ವರ ಬೇಕು ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದರು. ತನ್ನ ತಾಯಿಗೊಂದು ಸೂಕ್ತ ಸಂಗಾತಿ ಹುಡುಕುವ ಆಸ್ತಾರ ಪ್ರಯತ್ನವನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಇದೀಗ ಈ ಆಸ್ತಾ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.
ಇದಾದ ಬೆನ್ನಲ್ಲೇ ಮೋಹಿನಿ ಎಂಬ ಈ ಯುವತಿ ತನ್ನ ತಾಯಿ ಜೊತೆಗಿನ ಸೆಲ್ಫಿಯನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ ತನ್ನ ತಾಯಿಗೆ ಸೂಕ್ತ ವರ ಬೇಕಾಗಿದೆ ಎಂದು ಬರೆದುಕೊಂಡಿದ್ದರು. ತಾಯಿಗೆ ಒಳ್ಳೆಯ ಸಂಗಾತಿ ಮತ್ತು ಮಕ್ಕಳಿಗೆ ತಂದೆಯ ಸ್ಥಾನವನ್ನು ತುಂಬುವವರು ಬೇಕು ಎಂದಿರುವ ಮೋಹಿನಿ, ತಾನು ಆಸ್ತಾ ವರ್ಮಾರಿಂದ ಸ್ಫೂರ್ತಿ ಪಡೆದಿದ್ದಾಗಿಯೂ ಬರೆದುಕೊಂಡಿದ್ದರು.
ಇವೆರಡೂ ಕೂಡಾ ತಾಯಿ ಮಗಳಂದಿರುವ ವರ ಹುಡುಕಿದ ಕಥೆಯಾದರೆ ಇದೀಗ ಮಗನೊಬ್ಬ ತಾಯಿಗಾಗಿ ವರ ಹುಡುಕಲು ಮುಂದಾಗಿದ್ದಾನೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್ ನಗರದ ಫ್ರೆಂಚ್ ಕಾಲೋನಿಯ ನಿವಾಸಿ ಗೌರವ್ ತಾಯಿಗಾಗಿ ಸೂಕ್ತ ವರನನ್ನು ಹುಡುಕುತ್ತಿದ್ದಾರೆ. ಐದು ವರ್ಷಗಳ ಹಿಂದೆ ನನ್ನ ತಂದೆ ವಿಧಿವಶರಾಗಿದ್ದು, 45 ವರ್ಷದ ನನ್ನ ಅಮ್ಮ ಮನೆಯಲ್ಲಿ ಏಕಾಂಗಿ ಆಗಿರುತ್ತಾರೆ. ಮದ್ಯ ಸೇವಿಸದ ಮತ್ತು ಶುದ್ಧ ಸಸ್ಯಹಾರಿಯಾಗಿರುವ ವರ ಬೇಕಿದೆ ಎಂದು ಗೌರವ್ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ತಂದೆ ಕುಲ್ಟಿಯಲ್ಲಿ ನೌಕರಿ ಮಾಡುತ್ತಿದ್ದರು. 2014ರಲ್ಲಿ ತಂದೆಯ ನಿಧನದ ಬಳಿಕ ಅಮ್ಮ ಮನೆಯಲ್ಲಿ ಏಕಾಂಗಿಯಾಗಿದ್ದಾರೆ.ಬೆಳಗ್ಗೆ ಏಳು ಗಂಟೆಗೆ ಕೆಲಸಕ್ಕಾಗಿ ನಾನು ಮನೆಯಿಂದ ಹೋದರೆ ರಾತ್ರಿ ಹಿಂದಿರುಗುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಓರ್ವ ಗೆಳೆಯನ ಅವಶ್ಯಕತೆ ಇರುತ್ತದೆ. ಹೀಗಾಗಿ ಮದುವೆ ಬಗ್ಗೆ ಅಮ್ಮನ ಜೊತೆ ಮಾತನಾಡಿದ್ದೇನೆ. ಅಮ್ಮ ಸಹ ಈ ಕುರಿತು ಯೋಚನೆ ಮಾಡುತ್ತಿದ್ದಾರೆ.ಹೀಗಾಗಿ ಪೋಸ್ಟ್ ಮಾಡಿದ್ದೇನೆ ಅಂದಿದ್ದಾರೆ.
ಈಗಾಗಲೇ ಗೌರವ್ ಪೋಸ್ಟ್ ಗೆ ಪ್ರತಿಕ್ರಿಯೆಗಳು ಬಂದಿವೆ. ಇಂಜಿನಿಯರ್, ಡಾಕ್ಟರ್ ಮತ್ತು ಶಿಕ್ಷಕರು ಸೇರಿ ಹಲವರು ಮಂದಿ ಬಯೋಡೇಟಾ ಕಳುಹಿಸಿದ್ದಾರಂತೆ. ಇನ್ನು ಮುಂದೆ ಇವುಗಳನ್ನು ಪರಿಶೀಲನೆ ಮಾಡಿ ಅಂತಿಮ ಆಯ್ಕೆ ಮಾಡುವುದೊಂದು ಬಾಕಿ.
Discussion about this post