ಬೆಂಗಳೂರು : ನಗರದ ಜಾಲಹಳ್ಳಿ ವಿಲೇಜ್ ಹಳಿ ನಡೆದ ಭೀಕರ ಅಪಘಾತದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ಬರು ಸ್ವಿಗ್ಗಿ ಫುಡ್ ಡೆಲಿವರಿ ಹುಡುಗರನ್ನು ಬಲಿ ಪಡೆದ ಯಮಕಿಂಕರ ಚಾಲಕನನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.
ಜಾಲಹಳ್ಳಿ ಸಮೀಪದ ಎಚ್ಎಂಟಿ ಕಾರ್ಖಾನೆ ಲಿಂಕ್ ರಸ್ತೆಯಲ್ಲಿ ಮಂಗಳವಾರ ನಸುಕಿನಲ್ಲಿ ಈ ಅಪಘಾತ ಸಂಭವಿಸಿತ್ತು.
ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಿಟ್ ಅಂಡ್ ರನ್ ಪ್ರಕರಣದ ಬೆನ್ನು ಹತ್ತಿದ್ದರು.

ಕೊನೆಗೆ ಚೂರಾದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಚಾಲಕನನ್ನು ಬಂಧಿಸುವಲ್ಲಿ ಯಶವಂತಪುರ ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಅಪಘಾತವೆಸಗಿದ ಕಾರನ್ನು ಕೂಡಾ ಸೀಜ್ ಮಾಡಲಾಗಿದೆ.
ಬಂಧಿತನನ್ನು ಮಾದನಾಯಕನಹಳ್ಳಿಯ ಟ್ರಾವೆಲ್ ಏಜೆನ್ಸಿ ಮಾಲೀಕ ಭರತ್ ಎಂದು ಗುರುತಿಸಲಾಗಿದೆ
ಆರೋಪಿ ಪತ್ತೆಯಾಗಿದ್ದು ಹೇಗೆ..?
ಘಟನೆ ನಡೆದ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳನ್ನು ಸಂಗ್ರಹಿಸಿದ್ದರು. ಆಗ ಪೊಲೀಸರಿಗೆ ಸಹಕಾರಿಯಾಗಿದ್ದು ಕಾರಿನ ಮುಂಭಾಗದ ಬಿಡಿ ಭಾಗ ಮತ್ತು ಚೂರಾದ ನಂಬರ್ ಪ್ಲೇಟ್ .
ಈ ಎರಡು ಸಾಕ್ಷಿಗಳನ್ನು ಇಟ್ಟುಕೊಂಡು ತನಿಖೆ ಪ್ರಾರಂಭಿಸಿದ ಸಬ್ ಇನ್ಸ್ ಪೆಕ್ಟರ್ ಹನುಮಂತರಾಜು, ಜೆಸಿ ರಸ್ತೆಯಲ್ಲಿರುವ ಪ್ಲೇಟ್ ಮತ್ತು ಸ್ಟಿಕರ್ ಅಂಗಡಿಗಳನ್ನು ಸಂಪರ್ಕಿಸಿದ್ದಾರೆ.
ಆಗ ಗೊತ್ತಾಗಿದ್ದು ಅದು ಶೆವಾರ್ಲೆ ಕ್ಯಾಪ್ಟಿವಾ ಕಾರು ಎಂದು. ಬಳಿಕ ಆರ್ ಟಿ ಓ ಕಚೇರಿ ಸಂಪರ್ಕಿಸಿದಾಗ ನಗರದಲ್ಲಿ 15 ಕಾರುಗಳ ಮಾಹಿತಿ ಲಭ್ಯವಾಗಿದೆ.

ಎಲ್ಲಾ ಮಾಲೀಕರ ವಿಳಾಸ ಪಡೆದು ವಿಚಾರಣೆ ನಡೆಸಿದರೆ ಭರತ್ ನಡೆ ನುಡಿ ಅನುಮಾನ ಹುಟ್ಟಿಸಿದೆ.
ವಿಚಾರಣೆಗೆಂದು ಭರತ್ ನನ್ನು ಕರೆ ತಂದ್ರೆ, ನನ್ನ ಸ್ನೇಹಿತ ಮದುವೆ ಸಲುವಾಗಿ ಕಾರು ತೆಗೆದುಕೊಂಡು ಹೋಗಿದ್ದ. ಬಳಿಕ ಕಾರನ್ನು ಟಿಪಿಐನ ಫಾಸ್ಟ್ ಫೈ ರೇಸಿಂಗ್ ಗ್ಯಾರೇಜ್ ಬಳಿ ಬಿಟ್ಟು ಹೋಗಿರುವುದಾಗಿ ಹೇಳಿದ್ದಾನೆ.
ಭರತ್ ಹೇಳಿಕೆಯಂತೆ ಮಂಡ್ಯಕ್ಕೆ ಹೋಗಿ ಆರೋಪಿ ಸ್ನೇಹಿತನನ್ನು ಕರೆದುಕೊಂಡು ಬಂದು ಮುಖಾಮುಖಿ ಕೂರಿಸಿದ್ರೆ, ನಾನೇ ಇಬ್ಬರು ಹುಡುಗರನ್ನು ಕೊಂದಿದ್ದು ಎಂದು ಭರತ್ ಒಪ್ಪಿಕೊಂಡಿದ್ದಾನೆ.
ಮಂಜುನಾಥ ನಗರದ ನಿವಾಸಿಗಳಾದ ಗೌತಮ್ ಮತ್ತು ಶ್ರೀಕಾಂತ್ ಫುಡ್ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡಿಕೊಂಡಿದ್ದರು.
ಮಂಗಳವಾರ ರಾತ್ರಿ 1.20ಕ್ಕೆ ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ ಮೆಂಟ್ ಬಳಿ ಊಟ ಕೊಟ್ಟು ವಾಪಾಸ್ ಬರುವಾಗ ಅಪಘಾತ ಸಂಭವಿಸಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ 100 ಮೀಟರ್ ದೂರ ಹಾರಿ ಬಿದ್ದ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ವೇಳೆ ಕಾರು ನಿಲ್ಲಿಸದ ಚಾಲಕ ಅಲ್ಲಿಂದ ಪರಾರಿಯಾಗಿದ್ದ.
Discussion about this post