ಬೆಂಗಳೂರು : ಚಂದನವನದ ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕ ( ICU ) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಈಗಾಗಲೇ ಗ್ಯಾಂಗ್ರಿನ್ನಿಂದಾಗಿ ಸತ್ಯಜಿತ್ ಅವರ ಒಂದು ಕಾಲು ಕತ್ತರಿಸಲಾಗಿದ್ದು, ಪ್ರಸ್ತುತ ಸಕ್ಕರೆ ಕಾಯಿಲೆ ಹಾಗೂ ವಯೋಸಹಜ ಕಾಯಿಲೆಗಳಿಂದ ನರಳುತ್ತಿದ್ದಾರೆ. ಸತ್ಯಜಿತ್ ಅವರಿಗೆ 72 ವರ್ಷ ವಯಸ್ಸಾಗಿದೆ. ಕೆಲ ದಿನಗಳ ಹೃದಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುಣಮುಖರಾಗಿ ಮನೆಗೆ ಮರಳಿದ್ದರು. ಇದೀಗ ಮತ್ತೆ ಆರೋಗ್ಯ ಕೈ ಕೊಟ್ಟಿದೆ.
ಸತ್ಯಜಿತ್ ಅವರ ಪುತ್ರನ ಹೇಳಿಕೆ ಪ್ರಕಾರ ಅವರ ಪರಿಸ್ಥಿತಿ ಗಂಭೀರವಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆ.
1986 ರಿಂದ ಚಂದನವನದಲ್ಲಿ ಸಕ್ರಿಯರಾಗಿದ್ದ ಸತ್ಯಜಿತ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಬೇಡಿಕೆಯ ನಟರಾಗಿದ್ದ ಸತ್ಯಜಿತ್ ಅಪ್ಪು, ಅರಸು, ಅಭಿ, ಆಪ್ತಮಿತ್ರ ಹೀಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಬಿಡುಗಡೆಯಾದ ಪ್ರಿಯಾಂಕ ನಟನೆಯ ಸೆಕೆಂಡ್ ಹಾಫ್ ಸತ್ಯಜಿತ್ ಅಭಿನಯದ ಕೊನೆಯ ಸಿನಿಮಾ.
Discussion about this post