ಬೆಂಗಳೂರು : ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಚಂದನವನದ ಡ್ರಗ್ಸ್ ಪ್ರಕರಣ ಮತ್ತೆ ಚಾಲ್ತಿಗೆ ಬಂದಿದೆ. ಈಗಾಗಲೇ ಸಿಸಿಬಿ ಪೊಲೀಸರು ಬೆಂಗಳೂರಿನ 33ನೇ CCH ಕೋರ್ಟ್ ಗೆ 145 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಅದರಲ್ಲಿ ನಟಿ ಮಣಿಯರು ಸೇರಿದಂತೆ ಅವರ ಬಳಗದ ಡ್ರಗ್ಸ್ ದಂಧೆಯ ಮಾಹಿತಿಯನ್ನು ವಿವರಿಸಲಾಗಿದೆ.
ಈ ನಡುವೆ ಡ್ರಗ್ಸ್ ಕೋರರು ಮಾದಕ ವಸ್ತು ಸೇವಿಸಿದ್ದರೆ ಇಲ್ಲವೇ ಅನ್ನುವ ಕುರಿತ FSL Report ಸಿಸಿಬಿ ಪೊಲೀಸರ ಕೈ ಸೇರಿದ್ದು, ಅದರಲ್ಲಿ ನಟಿ ಸಂಜನ, ತುಪ್ಪ ಬೆಡಗಿ ಖ್ಯಾತಿಯ ರಾಗಿಣಿ ಸೇರಿದಂತೆ ಬಹುತೇಕ ಆರೋಪಿಗಳು ಪಾಸಿಟಿವ್ ಎಂದು ಗೊತ್ತಾಗಿದೆ. ಹೈದ್ರಬಾದ್ FSL ನಿಂದ ಬಂದಿರುವ ವರದಿಯನ್ನು ಇದೀಗ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಆರೋಪಿಗಳಿಗೆ ಸಂಕಷ್ಟ ಕಾದಿದೆ ಎನ್ನಲಾಗಿದೆ. ಜೊತೆಗೆ ಆರೋಪಿಗಳ ಜಾಮೀನು ಕೂಡಾ ರದ್ದುಗೊಳ್ಳುವ ನಿರೀಕ್ಷೆಗಳಿದೆ.

ಇದೇ ಜಾರ್ಜ್ ಶೀಟ್ ನಲ್ಲಿ ರಾಗಿಣಿ ಸೇರಿದಂತೆ ಅನೇಕರು ಮಾಡಿದ ವಾಟ್ಸಾಪ್ ಚಾಟ್, ಡ್ರಗ್ಸ್ ಸರಬರಾಜು ಆಗಿದ್ದು ಹೇಗೆ, ಡ್ರಗ್ಸ್ ಕುರಿತ ಕಾನೂನು ಹುಡುಕಾಟ ಹೀಗೆ ಆರೋಪಿಗಳಿಗೆ ಶಿಕ್ಷೆಯಾಗಬಹುದಾದ ಎಲ್ಲಾ ಅಂಶಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

ಇನ್ನು ರಾಗಿಣಿ ರವಿಶಂಕರ್ ನಡುವಿನ ಸಂಬಂಧ, ಆದಿತ್ಯ ಆಳ್ವ ಜೊತೆಗಿನ ನಂಟು, ಲೂಮ್ ಪೆಪ್ಪರ್ ವ್ಯವಹಾರ, ಇಮ್ರಾನ್ ಪಾಲುಗಳನ್ನು ಅರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ಇನ್ನು ಇದೇ ಆರೋಪ ಪಟ್ಟಿಯಲ್ಲಿ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಸೇವಿಸಿದ್ದರು ಅನ್ನುವುದನ್ನು ಉಲ್ಲೇಖಿಸಲಾಗಿದೆಯಂತೆ. ಇದರ ಪೂರಕವಾಗಿ ನಿರೂಪಕ ಅಕುಲ್ ಬಾಲಾಜಿ ಸಾಕ್ಷ್ಯ ಹೇಳಿದ್ದಾರಂತೆ.

ರಾಗಿಣಿ ಮಾದಕ ದ್ರವ್ಯ ಸೇವಿಸುತ್ತಿದ್ದರು. ತಾವು ಸೇವನೆ ಮಾಡುವುದು ಮಾತ್ರವಲ್ಲದೆ ಬೇರೆಯವರನ್ನೂ ಪ್ರಚೋದಿಸುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಅಕುಲ್ ಸಾಕ್ಷಿ ನುಡಿದಿದ್ದಾರೆ. ಇನ್ನು ರಾಗಿಣಿ ವಿರುದ್ಧ ಈಗಾಗಲೇ 19 ಮಂದಿ ಸಾಕ್ಷಿಯನ್ನು ಪಡೆಯಲಾಗಿದೆ.
Discussion about this post