ಡಿ ಬಾಸ್ ಅಭಿಮಾನಿಗಳು ಕಾಯುತ್ತಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರ ದೇಶಾದ್ಯಂತ ಬಿಡುಗಡೆಯಾಗಿದ್ದು, ದಚ್ಚು ಭಕ್ತಗಣಕ್ಕಿಂದು ಜಾತ್ರೆ ಶುರುವಾಗಿದೆ.
ರಾಬರ್ಟ್ ಚಿತ್ರದ ಬೆಳಗಿನ ಶೋಗಳು ಈಗಾಗಲೇ ಆರಂಭವಾಗಿದ್ದು, ರಾತ್ರಿ ಹೆಚ್ಚುವರಿ 2 ಶೋಗಳನ್ನು ಆಯೋಜನೆ ಮಾಡಲಾಗಿದೆ.
ಬೆಂಗಳೂರಿನ 12 ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಹಾಗೂ 6.30ಕ್ಕೆ ಎರಡು ಶೋಗಳು ಪ್ರಾರಂಭವಾಗಿದೆ. ಜೊತೆಗೆ ತುಮಕೂರು, ಕೋಲಾರ ಭಾಗದಲ್ಲೂ ಬೆಳಗಿನ ಹೆಚ್ಚುವರಿ ಶೋಗಳು ನಡೆಯುತ್ತಿದೆ.
ಈ ನಡುವೆ ಪದ್ಮನಾಭನಗರದ ಶ್ರೀನಿವಾಸ ಥಿಯೇಟರ್ ನಲ್ಲಿ ರಾಬರ್ಟ್ ತಂಡ ವಿಶೇಷ ಪೂಜೆ ಸಲ್ಲಿಸಿದೆ. ಈ ವೇಳೆ ನಿರ್ದೇಶಕ ತರುಣ್ ಸುಧೀರ್, ನಾಯಕಿ ಆಶಾ ಭಟ್ ಭಾಗಿಯಾಗಿದ್ದರು.
ದೇಶಾದ್ಯಂತ 1596 ಚಿತ್ರಮಂದಿರಗಳಲ್ಲಿ 3889ಶೋಗಳು ಆಯೋಜನೆಗೊಂಡಿದ್ದು, ಈ ಪೈಕಿ ಕರ್ನಾಟಕದ 656, ಅಂಧ್ರ 433, ತೆಲಂಗಾಣ 407 ಥಿಯೇಟರ್ ಗಳಲ್ಲಿ ರಾಬರ್ಟ್ ದರ್ಶನವಾಗಲಿದೆ.
ಇನ್ನು ರಾಬರ್ಟ್ ಚಿತ್ರತಂಡಕ್ಕೆ ಪೈರೆಸಿ ಭೀತಿ ಕಾಡುತ್ತಿದೆ. ಈಗಾಗಲೇ ನಿರ್ಮಾಪಕರು ಈ ಬಗ್ಗೆ ಖಡಕ್ಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಜೊತೆಗೆ ಇಂದು ಟ್ವೀಟ್ ಮಾಡಿರುವ ನಿರ್ಮಾಣ ಸಂಸ್ಥೆ, ಚಿತ್ರಮಂದಿರಗಳಲಲೇ ಸಿನಿಮಾ ನೋಡಿ, ಪೈರೆಸಿ ಸಹವಾಸ ಬೇಡ ಎಂದು ಮನವಿ ಮಾಡಿದೆ.
Discussion about this post