ಬೆಂಗಳೂರು : ನಟ ಸಂಚಾರಿ ವಿಜಯ್ ನಮ್ಮೊಂದಿಗೆ ಇಲ್ಲ, ಆದರೆ ವೈದ್ಯಕೀಯ ಲೋಕದ ಪ್ರಕಾರ ಸಂಚಾರಿ ವಿಜಯ್ ಇನ್ನೂ ಉಸಿರಾಡುತ್ತಿದ್ದಾರೆ. ಅವರ ಹೃದಯ ಬಡಿದುಕೊಳ್ಳುತ್ತಿದೆ. ಹಾಗಂತ ಸಂಚಾರಿ ವಿಜಯ್ ಜೀವಂತವಾಗಿ ನಮ್ಮೊಂದಿಗೆ ಇಲ್ಲದಿರಬಹುದು, ಅವರ ಕಣ್ಣು, ಲಿವರ್, ಕಿಡ್ನಿ ಹೀಗೆ ವಿವಿಧ ಅಂಗಾಂಗಳು ಈ ಭೂಮಿಯಲ್ಲಿ ಮತ್ತಷ್ಟು ವರ್ಷಗಳ ಕಾಲ ಇರಲಿದೆ.
ಈಗಾಗಲೇ ಅಪೋಲೋ ಆಸ್ಪತ್ರೆಯ ವೈದ್ಯರು ಸಂಚಾರಿ ವಿಜಯ್ ಅವರ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಕುಟುಂಬ ಸದಸ್ಯರ ಆಶಯದಂತೆ ಅಂಗಾಂಗ ದಾನಕ್ಕೆ ನಿರ್ಧರಿಸಲಾಗಿದ್ದು, ಅದಕ್ಕೆ ಬೇಕಾದ ಸಿದ್ದತೆಗಳು ಪೂರ್ಣಗೊಂಡಿದೆ. ಇದೀಗ ಅದರ ಪೂರ್ತಿ ಪ್ರಕ್ರಿಯೆಯನ್ನು ಜೀವಸಾರ್ಥಕತೆ ಟೀಂ ಮುಗಿಸುತ್ತದೆ.
ಇದೊಂದು ಅಪಘಾತ ಪ್ರಕರಣವಾಗಿರುವ ಕಾರಣ ಪೊಲೀಸ್ ಇಲಾಖೆಯ ಕ್ಲಿಯರೆನ್ಸ್ ಬೇಕಾಗಿತ್ತು. ಅದನ್ನು ಈಗಾಗಲೇ ಪಡೆಯಲಾಗಿದೆ. ಜೊತೆಗೆ ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಫಾರಂ ನಂಬರ್ 8 ಹಾಗೂ ಫಾರಂ ನಂಬರ್ 10ನ್ನು ಸಿದ್ದಗೊಳಿಸಲಾಗಿದ್ದು, ಕುಟುಂಬ ಸದಸ್ಯರ ಸಹಿಯನ್ನು ಪಡೆಯಲಾಗಿದೆ.
ಇದೀಗ ಅಂಗಾಂಗ ಹಸ್ತಾಂತರ ಪ್ರಕ್ರಿಯೆ ಕೊನೆಯ ಕ್ಷಣದಲ್ಲಿದ್ದು, ಕೆಲವೇ ಹೊತ್ತಿನಲ್ಲಿ ಅಧಿಕೃವಾಗಿ ಸಂಚಾರಿ ವಿಜಯ್ ಇನ್ನಿಲ್ಲ ಅನ್ನುವ ಸುದ್ದಿ ಬರಲಿದೆ. ನಾಳೆ ಬೆಳಗ್ಗೆ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ.
Discussion about this post