ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಬುಡ ಅಲ್ಲಾಡುತ್ತಿರುವ ಸಂದರ್ಭದಲ್ಲಿ ಆರೋಪ, ಪ್ರತ್ಯಾರೋಪಗಳು ಭರ್ಜರಿಯಾಗಿ ಸಾಗಿದೆ.
ಅದರಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಸಚಿವ ಸಾರಾ ಮಹೇಶ್ ಮತ್ತು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಶಾಸಕರಾಗಿರುವ ವಿಶ್ವನಾಥ್ ಅವರ ನಡುವೆ ಆರೋಪ ಪ್ರತ್ಯಾರೋಪ.
ಈಗಾಗಲೇ 28 ಕೋಟಿ ರೂಪಾಯಿ ಸಾಲ ತೀರಿಸಲು ವಿಶ್ವನಾಥ್ ಅವರು ಬಿಜೆಪಿ ಸೇರುತ್ತಿದ್ದಾರೆ ಎಂದು ಸದನದಲ್ಲಿ ಸಾ ರಾ ಮಹೇಶ್ ಆರೋಪಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ವಿಶ್ವನಾಥ್ ಎಲ್ಲವೂ ಸುಳ್ಳು ಅಂದಿದ್ದಾರೆ.
ಆದರೆ ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಾರಾ ಮಹೇಶ್ , ನಿಮಗೆ ಮಂತ್ರಿ ಸ್ಥಾನವೂ ಬೇಕಾಗಿಲ್ಲ, ಹಣವೂ ಬೇಡ ಎಂದಾದರೆ ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿ ಏಕೆ ಕುಳಿತಿದ್ದೀರಿ, ಮುಂಬೈನಲ್ಲಿದ್ದುಕೊಂಡು ಮಾತನಾಡುವುದಲ್ಲ, ವಿಧಾನಸಭೆಗೆ ಬನ್ನಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ, ಮತ್ತಷ್ಟು ವಿಚಾರಗಳ ಬಿಚ್ಚಿಡುತ್ತೇನೆ ಎಂದು ಎಚ್ ವಿಶ್ವನಾಥ್ ಅವರಿಗೆ ಸಚಿವ ಸಾರಾ ಬಹಿರಂಗ ಸವಾಲು ಹಾಕಿದ್ದಾರೆ.
ಸೋಮವಾರದ ವಿಧಾನಸಭೆ ಕಲಾಪಕ್ಕೆ ಬನ್ನಿ, ವಿಶ್ವನಾಥ್ ಸಮ್ಮುಖದಲ್ಲೇ ನಾನು ಮಾತನಾಡುತ್ತೇನೆ. ಅವರ ಬಗ್ಗೆ ಬಹಿರಂಗಪಡಿಸುವ ವಿಷಯ ಸಾಕಷ್ಟಿವೆ. ಸದನಕ್ಕೆ ಬಂದು ಸತ್ಯ ಹೇಳಲಿ. ಸದನದಲ್ಲಿ ಬೇಕಾದರೆ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸಲಿ.
ಪಕ್ಷದ ಮುಖಂಡರ ವಿರೋಧದ ನಡುವೆಯೂ ನಿಮ್ಮನ್ನು ಪಕ್ಷಕ್ಕೆ ಕರೆತಂದಿದ್ದು ನನ್ನ ತಪ್ಪು. ನನ್ನನು ನೀವು ಜಾತಿವಾದಿ ಎಂದು ಹೇಳಿದ್ದೀರಿ. ನೀವು ನಿಮ್ಮ ಬಗ್ಗೆ ಸತ್ಯ ಸಂಗತಿಯನ್ನು ಬಹಿರಂಗಪಡಿಸಲು ಸೋಮವಾರ ಸದನಕ್ಕೆ ಬನ್ನಿ. ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನಮ್ಮ ಪಕ್ಷದ ಶಾಸಕರು ನಿಮ್ಮ ಜೊತೆ ಮುಂಬೈಗೆ ಹೋಗಿದ್ದಾರೆ. ಆದರೆ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಎಚ್ ವಿಶ್ವನಾಥ್ ನನ್ನ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದೇನೆ.
ಯಾವುದೇ ಅಮಿಷಕ್ಕೊಳಗಾಗದೇ ರಾಜೀನಾಮೆ ನೀಡಿದ್ದೇನೆಂದು ಆಣೆ ಪ್ರಮಾಣ ಮಾಡಿದ ಹೆಚ್. ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡ ಸಾ.ರಾ. ಮಹೇಶ್, ನೀವು ಯಾವ ಆಸೆಗೆ ಹೋಗಿದ್ದೀರೋ ಹೋಗಿ. ನಿಮ್ಮ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡಲ್ಲ. ನೀವು ಯಾವ ದೇವಸ್ಥಾನಕ್ಕಾದರೂ ಬನ್ನಿ, ನಾನೂ ಆಣೆ ಮಾಡಿ ಹೇಳುತ್ತೇನೆ ಎಂದು ಸವಾಲು ಎಸೆದಿದ್ದಾರೆ.
ಸಾರಾ ಮಹೇಶ್ ಮಾತನಾಡುತ್ತಿರುವುದನ್ನು ನೋಡಿದರೆ ವಿಶ್ವನಾಥ್ ನಡೆಯ ಬಗ್ಗೆ ಅನುಮಾನಗಳಿದೆ. ವಿಶ್ವನಾಥ್ ಅವರಿಗೆ ಜೆಡಿಎಸ್ ನಲ್ಲಿ ಅವಮಾನವಾಗಿದೆ ಅನ್ನುವುದು ಸತ್ಯ. ಕುದುರೆ ಕೊಟ್ಟವರು ಲಗಾಮು ಕೊಡದೇ ಕೆಡಿಸಿದರೂ ಅನ್ನುವುದೂ ನಿಜ.
ಹಾಗಂತ ಕೋಟಿ ಕೋಟಿ ಮೊತ್ತಕ್ಕೆ ನೀವು ಸೇಲ್ ಆಗಿದ್ದೀರಿ ಅನ್ನುವ ಆರೋಪವನ್ನು ವಿಶ್ವನಾಥ್ ಎದುರಿಸುತ್ತಿರುವ ಬಗೆ ನೋಡಿದರೆ ಖಂಡಿತಾ ಅನುಮಾನ ಬರುತ್ತಿದೆ. ನಿಜಕ್ಕೂ ನೀವು ಸೇಲ್ ಆಗಿಲ್ಲ ಅನ್ನುವುದಾದರೆ ದಯವಿಟ್ಟು ಸದನಕ್ಕೆ ಬನ್ನಿ. ಅಸಾಧ್ಯ ಅನ್ನುವುದಾಗಿದ್ದರೆ ಆಣೆ ಪ್ರಮಾಣದ ಸವಾಲು ಸ್ವೀಕರಿಸಿ. ಯಾರು ಸತ್ಯವಂತರು ಅನ್ನುವುದು ರಾಜ್ಯಕ್ಕೆ ಅಲ್ಲದಿದ್ದರೂ ನಿಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೆ ಗೊತ್ತಾಗಲಿ.
ಅದನ್ನು ಬಿಟ್ಟು ನಿಮ್ಮ ಸ್ವಾರ್ಥದ ಸಲುವಾಗಿ ಕ್ಷೇತ್ರದ ಜನತೆಗೆ ವಿಶ್ವನಾಥ್ ಮೋಸ ಮಾಡುತ್ತಿರುವುದು ಯಾವ ನ್ಯಾಯ.
Discussion about this post