ಸಾಮಾಜಿಕ ಮತ್ತು ಆರ್ಥಿಕ ಸಬಲತೆಗಾಗಿ ಸರ್ಕಾರವು ಸಮುದಾಯದ ಪರ
ಶೋಷಿತ ಸಮುದಾಯದ ಏಳಿಗೆಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ನಮ್ಮ ಸರ್ಕಾರದಿಂದ ಒದಗಿಸಲಾಗುವುದು. ಸಾಮಾಜಿಕ ಮತ್ತು ಆರ್ಥಿಕ ಸಬಲತೆಗಾಗಿ ಸರ್ಕಾರವು ಸಮುದಾಯದ ಪರ ಸದಾ ಇರಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಎಂದು ಭರವಸೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಕಲಾಮಂದಿರಲ್ಲಿ ಆಯೋಜಿಸಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ನುಲಿಯ ಚಂದಯ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಚಿವರು ಮಾತನಾಡಿದರು.
ಸಮಾನತೆ ಹಾಗೂ ಸಮಾನ ಅವಕಾಶಗಳು ಸಂವಿಧಾನದ ಆಶಯವಾಗಿದೆ. ಅದನ್ನು ಸಾಕಾರಗೊಳಿಸುವುದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ.
ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿ, ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತುವುದೇ ನಮ್ಮ ಸರ್ಕಾರದ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಹನ್ನೆರಡನೇ ಶತಮಾನದ ಶರಣ ಚಳುವಳಿಯನ್ನ ನೆನಪಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಸಾಮಾಜಿಕ ಪಿಡುಗು ಮತ್ತು ಮೌಢ್ಯಗಳನ್ನು ಪ್ರತಿಪಾದನೆ ಮಾಡುತ್ತ ವೈದಿಕಶಾಹಿಗಳು ಶ್ರಮಜೀವನಕ್ಕೆ ಒಗ್ಗದೆ ಕಾಯಕ ಸಮುದಾಯಗಳಲ್ಲಿ ಮೂಢನಂಬಿಕೆ ಬಿತ್ತು, ಅನೇಕ ಸಂಪ್ರದಾಯಗಳನ್ನು ಹೇರಿದರು. ಇದರ ವಿರುದ್ಧ ಬಸವಣ್ಣನವರು ಹೋರಾಟ ನಡೆಸಿದರು ಎಂದರು.