ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಫ್ರೆಂಡ್ಸ್ ಕಟಪಾಡಿ ಸಹಕಾರದೊಂದಿಗೆ ವಿಭಿನ್ನ ಶೈಲಿಯ ವೇಷ ಹಾಕಿ ಅದರಿಂದ ಬಂದ ಲಕ್ಷಾಂತರ ರೂಪಾಯಿ ಹಣವನ್ನು ಅನಾರೋಗ್ಯ ಪೀಡಿತರಿಗೆ ದೇಣಿಗೆ ನೀಡಿ ಹೆಸರುವಾಸಿಯಾಗಿರುವ ಕಟಪಾಡಿ ಜೆ.ಎನ್.ನಗರ ಕಾಲೊನಿಯ ಯುವಕ ಸೆಂಟ್ರಿಂಗ್ ರವಿ ಈ ಬಾರಿ ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ಬೀದಿಗಿಳಿದು ದೇಣಿಗೆ ಸಂಗ್ರಹಿಸಲಿದ್ದಾರೆ. ಆಗಸ್ಟ್ 30 ಮತ್ತು 31 ರಂದು ಅವರು ಡಾರ್ಕ್ ಅಲೈಟ್ ವೇಷ ಧರಿಸಲಿದ್ದಾರೆ.
ಕಳೆದ ಆರು ವರ್ಷಗಳಿಂದ ಸುಮಾರು ರೂ 72 ಲಕ್ಷ ಸಾಮಾಜಿಕ ಸೇವೆಗೆ ನೆರವು ನೀಡಿ ಗಮನ ಸೆಳೆದಿರುವ ರವಿ ಮತ್ತು ಅವರ ಗೆಳೆಯರು, ಈ ಬಾರಿ ನಾಲ್ವರು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ಡಾರ್ಕ್ ಅಲೈಟ್ ವೇಷ ಹಾಕಿ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.
ಬಡವರ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಡಮಕ್ಕಳ ಬಾಳಿಗೆ ಆಶಾಕಿರಣವಾಗಿ ಮೂಡಿಬಂದಿರುವ ಕಟಪಾಡಿಯ ರವಿ ಮತ್ತು ರವಿ ಫ್ರೆಂಡ್ಸ್ ಬಳಗದವರು ತಮ್ಮ ಬಡತನ ಮರೆತು ಇತರರ ನೋವಿಗೆ ಸ್ಪಂದಿಸುವ ಮೂಲಕ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.
ಕಳೆದ ಬಾರಿ ಕೊರೋನಾ ಕಾರಣದಿಂದ ಜನ ಜಾಗೃತಿಗಾಗಿ ರವಿ ವೇಷ ಹಾಕಿದ್ದರು. ಹಣ ಸಂಗ್ರಹಿಸಿ ಇರಲಿಲ್ಲ. ಈ ಬಾರಿ ಮತ್ತೆ ಶ್ರೀಕೃಷ್ಣಜನ್ಮಾಷ್ಟಮಿ ಬಂದಿದೆ. ನಾಲ್ಕು ಮಕ್ಕಳಿಗೆ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಇದೀಗ ಮತ್ತೆ ಎರಡು ಕುಟುಂಬಗಳು ನಮ್ಮನ್ನು ಸಂಪರ್ಕ ಮಾಡಿದ್ದು, ಅವರಿಗೂ ಸಹಾಯ ಮಾಡುತ್ತೇವೆ ಎಂದು ರವಿ ಹೇಳಿದ್ದಾರೆ.
Discussion about this post