ಕೊಡಗು : ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸ ಹುಡುಕಿಕೊಂಡು ಬಂದ ಅಭಿಮಾನಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ನಡೆದಿದೆ.
ಆಕಾಶ್ ತ್ರಿಪಾಠಿ ಹೆಸರಿನ ರಶ್ಮಿಕಾ ಅಭಿಮಾನಿ ಶನಿವಾರ ರಾತ್ರಿ ವಿರಾಜಪೇಟೆಗೆ ತಲುಪಿದ್ದಾನೆ. ಮೈಸೂರು ತನಕ ರೈಲಿನಲ್ಲಿ ಬಂದ ತ್ರಿಪಾಠಿ ಬಳಿಕ ಗೂಡ್ಸ್ ಆಟೋದಲ್ಲಿ ವಿರಾಜಪೇಟೆ ತಲುಪಿದ್ದಾನೆ. ಬಳಿಕ ಗೂಗಲ್ ಮ್ಯಾಪ್ ಮೂಲಕ ರಶ್ಮಿಕಾ ಮಂದಣ್ಣ ಮನೆ ಹುಡುಕಿದ್ದಾನೆ. ಈ ಸಂದರ್ಭದಲ್ಲಿ ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಅನ್ನುವವರ ಜಾಗ ತೋರಿಸಿದೆ. ಇದೇ ರಶ್ಮಿಕಾ ಮಂದಣ್ಣ ಮನೆ ಇರಬೇಕು ಅಂದುಕೊಂಡ ಅಭಿಮಾನಿ ಅಟೋದಲ್ಲಿ ಮಗ್ಗುಲ ಗ್ರಾಮಕ್ಕೆ ಬಂದಿದ್ದಾನೆ.
ಆಟೋದಿಂದ ಇಳಿದವನೇ ರಶ್ಮಿಕಾ ಮಂದಣ್ಣ ಮನೆ ಎಲ್ಲಿ ಎಂದು ಅಕ್ಕಪಕ್ಕದವರಲ್ಲಿ ವಿಚಾರಿಸಿದ್ದಾನೆ. ಈತನ ನಡವಳಿಕೆ ನೋಡಿದ ಸ್ಥಳೀಯರಿಗೆ ಅನುಮಾನ ಬಂದಿದೆ. ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ ತ್ರಿಪಾಠಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ವಿಚಾರಣೆ ನಡೆಸಿದಾಗ ನಾನು ರಶ್ಮಿಕಾರನ್ನು ನೋಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ಕೊನೆಗೆ ಮನವೊಲಿಸಿದ ಪೊಲೀಸರು ಎಚ್ಚರಿಕೆ ಕೊಟ್ಟು ವಾಪಾಸ್ ಕಳುಹಿಸಿದ್ದಾರೆ.
Discussion about this post