ರಾಜಭವನ ಮೂಲಕ ಸರ್ಕಾರ ಅಸ್ಥಿರಕ್ಕೆ ಯತ್ನ : ಆರೋಪ
ಜನಾಭಿಪ್ರಾಯ ಪಡೆಸಲು ವಿಫಲವಾಗಿರುವ ಬಿಜೆಪಿ ನಾಯಕರಿಗೆ, ಸರ್ಕಾರದ ವಿರುದ್ಧವೂ ಜನಾಭಿಪ್ರಾಯ ಮೂಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇದೀಗ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಈ ಸಲುವಾಗಿಯೇ ರಾಜಭವನವನ್ನು ಕೇಸರಿ ಭವನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದ ಮತದಾರರು ಕಾಂಗ್ರೆಸ್ ಗೆ 136 ಸ್ಥಾನಗಳನ್ನು ನೀಡೋ ಮೂಲಕ ಸ್ಥಿರ ಸರ್ಕಾರವನ್ನು ಬಯಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕೂಡಾ ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ. ಹಾಗಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದು, ಇದರಲ್ಲಿ ಅವರು ಜಯಶಾಲಿಯಾಗೋದಿಲ್ಲ.
ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರ ಕೆಡವಿ ಹಿಂಬಾಗಿಲ ಮೂಲಕ ಅಧಿಕಾರ ಪಡೆದಂತೆ, ಕರ್ನಾಟಕದಲ್ಲೂ ಅಧಿಕಾರ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ರಾಜ್ಯಪಾಲರನ್ನು ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಪಾದಯಾತ್ರೆ ಹೆಸರಿನಲ್ಲಿ ಬೀದಿ ನಾಟಕ ನಡೆಯುತ್ತಿದೆ ಎಂದು ಸುರ್ಜೇವಾಲ ಟೀಕಿಸಿದ್ದಾರೆ.