Sunday, April 18, 2021

ಮುಖ್ಯಮಂತ್ರಿ ಬುಡದಲ್ಲೇ ಬಾಂಬ್ ಇಟ್ಟ ಸಿಡಿ ಲೇಡಿ – ಜಾರಕಿಹೊಳಿಗೆ ಶುರುವಾಯ್ತು ಹೊಸ ಸಂಕಷ್ಟ

Must read

- Advertisement -
- Advertisement -

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಸಿಡಿ ಲೇಡಿ ಹಾಗೂ ಅವರ ಪರ ವಕೀಲರನ್ನು ನಿಭಾಯಿಸುವುದೇ ಸಮಸ್ಯೆಯಾಗಿದೆ. ಪ್ರತೀ ದಿನ ಒಂದಲ್ಲ ಒಂದು ವಿಷಯದಲ್ಲಿ ಎಸ್ಐಟಿಯನ್ನು ಪೀಕಲಾಟಕ್ಕೆ ಸಿಲುಕಿಸುತ್ತಿದ್ದಾರೆ.

ಇದೀಗ ಎಸ್ಐಟಿ ವಿರುದ್ಧ ಸಿಡಿ ಲೇಡಿಯೇ ಸಿಡಿದೆದ್ದಿದ್ದಾಳೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರನ್ನು ಎಳೆದು ತರುವ ಮೂಲಕ ಹೌದಲ್ವ, ಹೀಗಾದ್ರೆ ನ್ಯಾಯ ಸಿಗಲು ಸಾಧ್ಯವೇ ಅನ್ನುವ ಪ್ರಶ್ನೆಯನ್ನು ಮೂಡಿಸುವಂತೆ ಮಾಡಿದ್ದಾಳೆ.

ಎಸ್ಐಟಿ ತನಿಖೆ ವಿಚಾರದಲ್ಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಸಿಡಿ ಲೇಡಿ, ನ್ಯಾಯ ಸಿಗೋದು ನನಗ್ಯಾಕೋ ಅನುಮಾನ ಅನ್ನಿಸುತ್ತಿದೆ. ಪೊಲೀಸರ ವರ್ತನೆ ನೋಡಿದರೆ ನನ್ನನ್ನು ಸಂತ್ರಸ್ಥೆಯಂತೆ ಟ್ರೀಟ್ ಮಾಡಲಾಗುತ್ತಿಲ್ಲ. ಬದಲಾಗಿ ಆರೋಪಿಯನ್ನಾಗಿಸುವ ಹುನ್ನಾರ ನಡೆದಿದೆ ಎಂದು ದೂರಿದ್ದಾರೆ.

ಅವರು ಬರೆದಿರುವ ಪತ್ರದ ಸಂಪೂರ್ಣ ಸಾರಾಂಶ ಈ ರೀತಿ ಇದೆ.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ನನಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಾರ್ಚ್ 26ರಂದು ನನ್ನ ವಕೀಲರಾದ ಕೆ.ಎನ್.ಜಗದೀಶ್ ಅವರ ಮುಖಾಂತರ ತಮಗೆ ದೂರು ನೀಡಿದ್ದೇನೆ. ಅದನ್ನು ಸ್ವೀಕರಿಸಿದ ತಾವು ನನಗೆ ನ್ಯಾಯ ಕೊಡಿಸುವ ಸಲುವಾಗಿ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದೀರ. ಮೊಕದ್ದಮೆ ಸಂಖ್ಯೆ 30/2021ರಲ್ಲಿ ಐಪಿಸಿ 354(ಎ), 506, 504, 376(ಸಿ), 417 ಹಾಗೂ ಐಟಿ ಆಯಕ್ಟ್ 67(ಎ)ರಡಿ ಪ್ರಕರಣ ದಾಖಲಾಗಿರುತ್ತದೆ.

ನಂತರ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಮತ್ತು ಭದ್ರತೆ ಕಲ್ಪಿಸಲು ಮಾಹಿತಿ ಒದಗಿಸುವಂತೆ ನೋಟಿಸ್ ನೀಡಿದ್ದರು. ನಾನು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಲಾಗಿ ಸಿಆರ್‍ಪಿಸಿ 164ರ ಹೇಳಿಕೆ ದಾಖಲಿಸಲು ಅವಕಾಶ ಸಿಕ್ಕಿತ್ತು.

ಮಾ.31ರಂದು ವಕೀಲರ ಮೂಲಕ ನಾನು ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ. ಆ ದಿನ ಎಸ್‍ಐಟಿ ಮುಖ್ಯಸ್ಥರಾದ ಸೌಮೆಂದು ಮುಖರ್ಜಿ ನನ್ನನ್ನು ವಿಚಾರಣೆಗಾಗಿ ಆಡುಗೋಡಿಯ ಟೆಕ್ನಿಕಲ್ ವಿಭಾಗಕ್ಕೆ ಭದ್ರತೆಯೊಂದಿಗೆ ಕರೆದುಕೊಂಡು ಹೋದರು.

ಅವರೊಂದಿಗೆ ಎಸ್‍ಐಟಿ ತಂಡದ ತನಿಖಾಧಿಕಾರಿ ಸಂದೀಪ್ ಪಾಟೀಲ್, ಎಸಿಪಿ ಕವಿತಾ ಅವರು ಪ್ರಶ್ನೆಗಳನ್ನು ಕೇಳಿದರು. ನಾನು ಸಂಪೂರ್ಣವಾಗಿ ಎಲ್ಲಾ ವಿಚಾರಗಳನ್ನು ವಿವರಿಸಿದ್ದೇನೆ. ಮಾರನೇ ದಿನ ನನಗೆ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಸಿಆರ್‍ಪಿಸಿ 161 ಪ್ರಕಾರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭಿಸಿದರು.

ಏ.1ರಂದು ಬೆಳಗ್ಗೆ ಸ್ಥಳ ಪಂಚನಾಮೆ ಪ್ರಕ್ರಿಯೆಗೆ ನನ್ನ ಆರ್‍ಟಿನಗರ ಪಿಜಿ ಹಾಗೂ ಕೃತ್ಯ ನಡೆದ ರಮೇಶ್ ಜಾರಕಿಹೊಳಿಯವರ ಅಪಾರ್ಟ್‍ಮೆಂಟ್‍ಗೆ ಕರೆದೊಯ್ಯಲಾಯಿತು. ಏ.2ರಂದು 161 ಹೇಳಿಕೆ ಮುಂದುವರೆದ ವಿಚಾರಗಳನ್ನು ದಾಖಲಿಸಿಕೊಳ್ಳಲಾಯಿತು.

ಒಟ್ಟಾರೆ ಪ್ರಕ್ರಿಯೆಗಳನ್ನು ನೋಡುತ್ತಿದ್ದರೆ ನಾನು ಸಂತ್ರಸ್ತೆಯೋ, ಪ್ರಕರಣದ ಆರೋಪಿಯೋ ಎಂಬ ಅನುಮಾನ ಮೂಡಿದೆ. ಪ್ರಕರಣದ ಆರೋಪಿಯನ್ನು 3 ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ವಕೀಲರೊಂದಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದು, ಮುಕ್ತವಾಗಿ ಓಡಾಡಿಕೊಂಡು ಇರಲು ಎಸ್‍ಐಟಿ ತಂಡ ಅವಕಾಶ ಮಾಡಿಕೊಟ್ಟಿದೆ.

ಒಂದು ದಿನವೂ ಬಿಡುವು ನೀಡದೆ ನಿರಂತರವಾಗಿ ನನ್ನನಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ಈ ಮೊದಲು ರಮೇಶ್ ಜಾರಕಿಹೊಳಿ ಅವರು ನೀಡಿದ ದೂರಿನಲ್ಲಿ ನನ್ನ ಹೆಸರು ಉಲ್ಲೇಖವಾಗದೆ ಇದ್ದರೂ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿರುವ ಸಾಕ್ಷ್ಯಗಳನ್ನು ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಸರ್ಕಾರದ ಒತ್ತಡಕ್ಕೆ ಮಣಿದಿರುತ್ತಾರೆ.

ಈ ಕ್ಷಣದವರೆಗೂ ನನ್ನ ತೇಜೋವಧೆ ಮಾಡುವಂತಹ ಅಸಂಬದ್ಧ ಕಪೋಕಲ್ಪಿತ ವಿಚಾರಗಳನ್ನು ಮಾಧ್ಯಮಗಳಲ್ಲಿ ವರದಿಯಾಗುವಂತೆ ಮಾಡುವ ಮೂಲಕ ಆರೋಪಿಯ ರಕ್ಷಣೆಗೆ ಮುಂದಾಗಿರುವುದು ಎದ್ದು ಕಾಣುತ್ತದೆ. ಪ್ರಕರಣದ ದೂರುದಾರಳಾದ ನನ್ನ ಚಾರಿತ್ರ್ಯ ವಧೆ ಮಾಡುವಂತಹ ಷಡ್ಯಂತ್ರಗಳನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದು, ಎಸ್‍ಐಟಿ ಅಧಿಕಾರಿಗಳ ಮೇಲೆ ತೀವ್ರವಾದ ಒತ್ತಡ ಹಾಕಿಸುತ್ತಿದ್ದಾರೆ.

ನಾನು ಅತ್ಯಾಚಾರದ ಸಂತ್ರಸ್ತೆ ಎಂಬುದನ್ನು ಮರೆಮಾಚಲು ಮಾಧ್ಯಮಗಳಲ್ಲಿ ಸೃಷ್ಟಿತ ಸುದ್ದಿಗಳನ್ನು ಅವಹೇಳನಕಾರಿಯಾಗಿ ಪ್ರಸಾರ ಮಾಡಲಾಗುತ್ತಿದೆ. ನನ್ನ ದೂರಿನ ವಿಚಾರವಾಗಿ ಆರೋಪಿಯ ವಿರುದ್ಧ ಯಾವುದೇ ಗಂಭೀರ ವಿಚಾರಣೆ ನಡೆಸಿಲ್ಲ. ಮುಖ್ಯಮಂತ್ರಿಯವರು ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಬರುತ್ತಾರೆ ಎಂದು ಹೇಳಿಕೆ ನೀಡಿರುವುದು ನನಲ್ಲಿ ತೀವ್ರ ಆತಂಕ ಮೂಡಿಸಿದೆ.

ನನ್ನ ಸಹಮತ ಪಡೆಯದೆ ಗೃಹ ಇಲಾಖೆ ಪ್ರಕರಣದ ವಿಚಾರಣೆಗೆ ಸರ್ಕಾರದ ಅಭಿಯೋಜಕರನ್ನು ನೇಮಕ ಮಾಡಿರುವುದಕ್ಕೂ ನನ್ನ ಆಕ್ಷೇಪವಿದೆ. ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿರುವ ಬಗ್ಗೆ ನನಗೆ ನಂಬಿಕೆ, ವಿಶ್ವಾಸ ಇಲ್ಲವಾಗಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

- Advertisement -
- Advertisement -
- Advertisement -

Latest article