ಕನ್ನಡಿಗ ರಜನಿಕಾಂತ್ ಇದೀಗ ತಮಿಳು ಮಗನಾಗಿ ಬೆಳೆದರೂ ಅವರಿಗೆ ಕನ್ನಡದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅವರ ಅನೇಕ ಬಾಲ್ಯ ಸ್ನೇಹಿತರು ಬೆಂಗಳೂರಿನಲ್ಲೇ ಇರುವುದರಿಂದ ಕನ್ನಡದ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವುದು ಸಾಧ್ಯವಿಲ್ಲ. ಜೊತೆಗೆ ಅವರನ್ನು ನಟನಾಗಿ ಬೆಳೆಸಿದ್ದು ಇದೇ ಚಂದನವನ.
ಇನ್ನು ಸೂಪರ್ ಸ್ಟಾರ್ ಗಡಿಗಳನ್ನು ಮೀರಿ ಬೆಳೆದ ನಟ. ಅವರಿಗೆ ಭಾಷೆಯ ಗಡಿಯಾಚೆಗೂ ಅಭಿಮಾನಿಗಳಿದ್ದಾರೆ. ಈ ನಡುವೆ ಇಂದು 69ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಜನಿಕಾಂತ್ ಬಗೆಗಿನ ಕುತೂಹಲಕಾರಿ ಅಂಶವೊಂದನ್ನು ಹೇಳಲೇಬೇಕು.
ಅದು 2012. ಆಗಷ್ಟೇ ಆರೋಗ್ಯ ಸುಧಾರಿಸಿಕೊಂಡಿದ್ದ ರಜನಿ ಮತ್ತೆ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ಕೊನೆಯ ಮಗಳು ‘ಕೊಚ್ಚಾಡೈಯನ್’ ಅನ್ನುವ ಸಿನಿಮಾವೊಂದನ್ನು ತಂದೆಗಾಗಿ ನಿರ್ದೇಶಿಸುತ್ತಿದ್ದರು.
ಹದಗೆಟ್ಟಿದ್ದ ಆರೋಗ್ಯದಿಂದ ಚೇತರಿಸಿಕೊಂಡ ಮೇಲೆ ಮಾಡುತ್ತಿರುವ ಮೊದಲ ಚಿತ್ರ ಇದಾಗಿತ್ತು. ಜೊತೆಗೆ ಹಾಲಿವುಡ್ ನ ಅವತಾರ್ ಚಿತ್ರದಲ್ಲಿ ಬಳಸಲಾದ ಮೋಶನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ಚಿತ್ರಿಸಲಾಗುತ್ತಿರುವ ಭಾರತದ ಮೊದಲ ಚಿತ್ರ ಅನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು. ಹೀಗಾಗಿ ಜನರಲ್ಲಿ ಇನ್ನಿಲ್ಲದ ನಿರೀಕ್ಷೆಗಳಿತ್ತು.
ಈ ಸಂದರ್ಭದಲ್ಲಿ ಈ ಚಿತ್ರಕ್ಕೆ ಮತ್ತಷ್ಟು ಹೈಪ್ ಕೊಡಲು ನಿರ್ಧರಿಸಿದ ಇರೋಸ್ ಇಂಟರ್ನ್ಯಾಷನಲ್ ಹಾಗು ಮೀಡಿಯಾ ಒನ್ ( ಈ ಎರಡೂ ಸಂಸ್ಥೆಗಳು ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿತ್ತು.) ಕಾರ್ಬನ್ ಮೊಬೈಲ್ ನ ಜೊತೆ ಒಪ್ಪಂದ ಮಾಡಿಕೊಂಡು, ರಜನೀಕಾಂತ್ ವಿಶೇಷ ಕೊಚಾಡಿಯಾನ್ ಮೊಬೈಲ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿತು.
ಕೊಚಡೈಯಾನ್ ಚಿತ್ರದ ಹಾಡುಗಳು, ಟ್ರೈಲರ್ ಹಾಗು ರಜನಿ ರವರ ಫೇಮಸ್ ಡೈಲಾಗ್ ಗಳು, ವಾಲ್ ಪೇಪರ್ ಹಾಗೂ ಚಿತ್ರೀಕರಣದ ತುಣುಕುಗಳನ್ನೂ ಈ ಮೊಬೈಲ್ ಒಳಗೊಂಡಿತು.
ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಮೊಬೈಲ್ ಮಾರುಕಟ್ಟೆಗೆ ಬಂತು. ಆದರೆ ನಿರೀಕ್ಷಿತ ಮತ್ತ ಯಶಸ್ಸು ಸಿಗಲಿಲ್ಲ. ಜನ ರೊಚ್ಚಿಗೆದ್ದು ಮೊಬೈಲ್ ಖರೀದಿಸುತ್ತಾರೆ ಅನ್ನುವ ನಿರೀಕ್ಷೆ ಸುಳ್ಳಾಯಿತು.
ನಂತ್ರ ಬಿಡುಗಡೆಯಾದ ಚಿತ್ರದ ಕಥೆ ಏನಾಯ್ತು ಅನ್ನುವುದು ಎಲ್ಲರಿಗೂ ಗೊತ್ತಿದೆ. ಅದು ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಕಥೆ.
Discussion about this post