ಚೆನೈ : ತಮಿಳುನಾಡಿನ ರಾಜಕೀಯ ರಂಗ, ಸಿನಿಮಾ ನಟರ ರಾಜಕೀಯ ಪ್ರಯೋಗಶಾಲೆ ಅಂದ್ರೆ ತಪ್ಪಲ್ಲ. ಕಾಲಿವುಡ್ ನ ಬಹುತೇಕ ನಟರಿಗೆ ರಾಜಕೀಯದ ಹುಚ್ಚು ಇರುವ ಕಾರಣ ಒಂದಲ್ಲ ಒಂದು ನಟ ಸುದ್ದಿಯಲ್ಲಿರುತ್ತಾರೆ. ಹಾಗೇ ನೋಡಿದರೆ ಆಂಧ್ರದಲ್ಲೂ ಸಿನಿಮಾ ಮಂದಿ ರಾಜಕೀಯ ಪಡಸಾಲೆಯಲ್ಲಿ ಮಿಂಚುವ ಕ್ರೇಜ್ ಇಟ್ಟುಕೊಂಡಿದ್ದಾರೆ. ಆದರೆ ತಮಿಳುನಾಡಿನಷ್ಟಲ್ಲ.
ದುರಂತ ಅಂದ್ರೆ ಈವರೆಗೆ ಬಂದಿರುವ ಅದ್ಯಾವ ಪಕ್ಷವೂ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಕ್ಕೆ ಪರ್ಯಾಯವಾಗಿ ಸಾಮರ್ಥ್ಯ ಬೆಳೆಸಿಕೊಳ್ಳಲೇ ಇಲ್ಲ. ಇದಕ್ಕೆ ಮತ್ತೊಂದು ಸೇರ್ಪಡೆ ಸೂಪರ್ ಸ್ಟಾರ್ ರಜನಿಕಾಂತ್ ಸ್ಥಾಪಿಸಿದ್ದ ಮಕ್ಕಳ ಮಂಡ್ರಮ್ ಪಕ್ಷ. ರಜನಿ ಕಟ್ಟಿದ ಪಕ್ಷ ಬೆಳೆದು ಹೆಮ್ಮರವಾಗುತ್ತದೆ, ತಮಿಳುನಾಡು ರಾಜಕೀಯ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದ ರಾಜಕೀಯ ತಜ್ಞರ ಹೇಳಿಕೆಗಳನ್ನೇ ಉಲ್ಟಾ ಮಾಡುವ ನಿರ್ಧಾರವೊಂದನ್ನು ರಜನಿಕಾಂತ್ ಕೈಗೊಂಡಿದ್ದು, 2020ರಲ್ಲಿ ಸ್ಥಾಪಿಸಿದ್ದ ಪಕ್ಷವನ್ನು 2021 ವಿಸರ್ಜಿಸಿದ್ದಾರೆ.

ಹಾಗಂತ ಇದೇನು ಬ್ರೇಕಿಂಗ್ ಸುದ್ದಿಯಲ್ಲ, ಈ ಹಿಂದೆ ಚುನಾವಣೆಗೆ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಅಂದಾಗಲೇ, ರಜನಿ ರಾಜಕೀಯ ಜರ್ನಿ ಅಂತ್ಯಗೊಂಡಿದೆ ಎಂದೇ ಭಾವಿಸಲಾಗಿತ್ತು. ಅವತ್ತು ಅನಾರೋಗ್ಯದ ಕಾರಣ ಕೊಟ್ಟಿದ್ದ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುವುದಾಗಿ ಹೇಳಿದ್ದರು. ಆದರೆ ಇದೀಗ ಪಕ್ಷವನ್ನು ವಿಸರ್ಜಿಸುವ ಮೂಲಕ ರಾಜಕೀಯದಿಂದ ಶಾಶ್ವತ ನಿವೃತ್ತಿಯನ್ನು ರಜನಿ ಘೋಷಿಸಿದ್ದಾರೆ.
ರಜನಿ ನಿರ್ಧಾರದಿಂದ ಇದೀಗ ಬಿಜೆಪಿಗೆ ತುಂಬಾ ಅನುಕೂಲವಾಗಲಿದೆ. ಈಗಾಗಲೇ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಸಾಧಿಸಿರುವ ಪಕ್ಷ ತಮಿಳುನಾಡಿನಲ್ಲಿ ತಳಮಟ್ಟದ ಸಂಘಟನೆ ಪ್ರಾರಂಭಿಸಿದೆ. ಜೊತೆಗೆ ರಜನಿ ಜೊತೆಗೆ ಬಿಜೆಪಿಗೆ ಉತ್ತಮ ಬಾಂಧವ್ಯ ಇರುವುದರಿಂದ ರಜನಿ ಪಾರ್ಟಿಯ ಕಾರ್ಯಕರ್ತರನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಳ್ಳುವ ಸಾಧ್ಯತೆಗಳಿದೆ.

Discussion about this post