ಬಿಡದಿ : ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಫೈಟರ್ ವಿವೇಕ್ ಸಾವಿನ ಕುರಿತಂತೆ ಬಿಡದಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಹೊಣೆಗಾರಾದ ಕೆಲರನ್ನು ಬಂಧಿಸಿ ಜೈಲಿಗಟ್ಟಿಲಾಗಿದೆ. ಇನ್ನು ಕೆಲವರು ತಲೆ ಮರೆಸಿಕೊಂಡಿದ್ದು, ಅವರಿಗೆ ಶೋಧ ನಡೆಯುತ್ತಿದೆ.
ಈ ನಡುವೆ love you racchu ಸಿನಿಮಾದ ನಾಯಕಿ ರಚಿತಾ ರಾಮ್ ಅವರನ್ನು ಬಿಡದಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಈ ಸಂಬಂಧ ಇಂದು ಸಂಜೆ ಬಿಡದಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿರುವ ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಘಟನೆ ನಡೆದಾಗ ನೀವಿದ್ರ, ಒಂದು ವೇಳೆ ನೀವು ಅಲ್ಲಿದ್ರೆ ಏನಾಯ್ತು, ಯಾರ ತಪ್ಪು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ ಹೀಗೆ ಹಲವು ಪ್ರಶ್ನೆಗಳನ್ನು ಕೇಳುವ ಸಾಧ್ಯತೆಗಳಿದೆ. ಆದರೆ ಈಗಾಗಲೇ ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಕಾರ ಘಟನೆ ನಡೆದ ಸಂದರ್ಭದಲ್ಲಿ ರಚಿತಾ ರಾಮ್ ಸ್ಥಳದಲ್ಲಿ ಇರಲಿಲ್ಲ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸುದೀರ್ಘ ಪತ್ರವೊಂದನ್ನು ಬರೆದಿದ್ದರು.
“ ಎಲ್ಲರಿಗೂ ನಮಸ್ಕಾರ. ನೀವೆಲ್ಲರೂ ಕ್ಷೇಮವಾಗಿದ್ದೀರಿ ಅಂತಾ ನಂಬಿದ್ದೀನೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ ಅಂತ ನಿಮ್ಮಲ್ಲರಲ್ಲಿ ನಾನು ರಿಕ್ವೆಸ್ಟ್ ಮಾಡ್ತೀನಿ. ಲವ್ ಯೂ ರಚ್ಚು ಸೆಟ್ನಲ್ಲಿ ಒಂದು ನಡೀಬಾರದ ಘಟನೆ ನಡೆದಾಗಿಂದ ಆ ಆಘಾತ ನನ್ನನ್ನು ಸೈಲೆಂಟ್ ಆಗಿರುವ ಹಾಗೆ ಮಾಡಿತ್ತು. ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ. ತಪ್ಪಾಗಿ ಬಳಕೆ ಆಗ್ತಾ ಇದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ. ಆ ದುರ್ಘಟನೆ ನಡೆದಾಗ ನಾನು ಸೆಟ್ನಲ್ಲಿ ಇರ್ಲಿಲ್ಲ. ಆಗಿದ್ದಂತು ಸತ್ಯ. ಆಗಸ್ಟ್ 2ನೇ ತಾರೀಕಿನಿಂದ ನಾನು ಶಬರಿ ಸಿನಿಮಾ ಶೂಟಿಂಗ್ಗೋಸ್ಕರ ಮೈಸೂರಿನಲ್ಲಿದ್ದೆ. ಆಗ ಘಟನೆ ನಡೆದಾಗ ನಾನು ಆ ಜಾಗದಲ್ಲಿ ಇರಲಿಲ್ಲ. ಸತ್ಯವನ್ನು ಒಂದೇ ಒಂದು ಸಲ ಪುನರ್ ಪರಿಶೀಲಿಸಿದ್ರೆ ನನ್ನ ಬಗ್ಗೆ ಕೆಟ್ಟ ಕಮೆಂಟ್ಗಳನ್ನು ಬರೆಯುೋ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿ ಬರುತ್ತಿರಲಿಲ್ಲ ಎನಿಸುತ್ತೆ.
ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ. ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಅನ್ನೋ ನೋವು ನನ್ನನ್ನು ಕಾಡುತ್ತಿದೆ. ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಭಗವಂತ ನೀಡಲಿ ಅಂತ ನಾನು ಬೇಡಿಕೊಳ್ತೀನಿ. ನನ್ನ ಬೆಳೆಸಿರುವ ಜನರು ನನ್ನ ಮಾತುಗಳನ್ನು, ನನ್ನನ್ನು ನಂಬುತ್ತಾರೆ ಅಂತ ನಂಬಿದ್ದೇನೆ. ಆರೋಪಗಳು ಏನೇ ಇದ್ರೂ, ಸರಿ-ತಪ್ಪುಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ ಅಂತಾನೂ ನಂಬಿದ್ದೇನೆ ಎಂದು ರಚಿತಾ ಇನ್ಸ್ಟಾ ಪೋಸ್ಟ್ ನಲ್ಲಿ ಹೇಳಿದ್ದರು.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಸಿನಿಮಾ ನಿರ್ದೇಶಕ ಶಂಕರಯ್ಯ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್ ಅವರಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಆದೇಶಿಸಿದೆ.
Discussion about this post