ಮಂಗಳೂರು : ಪ್ರತಿಭೆ ಯಾರಪ್ಪನ ಮನೆ ಸೊತ್ತೂ ಅಲ್ಲ. ಮನಸ್ಸಿದ್ದರೆ ಮಾರ್ಗ ಅನ್ನುವಂತೆ ನಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಸಮಾಜದ ಮುಂದೆ ತೆರೆದಿಡಲು ಸಾಧ್ಯವಿದೆ. ಹಾಗಂತ ಅದು ಎಲ್ಲಾ ಸಂದರ್ಭಗಳಲ್ಲೂ ಅಸಾಧ್ಯ. ಮನೆಯ ಪರಿಸ್ಥಿತಿಗಳು ನಮ್ಮನ್ನು ಕಟ್ಟಿ ಹಾಕಿ ಬಿಡುತ್ತದೆ.
ಆದರೆ ಸಾಮಾಜಿಕ ಜಾಲತಾಣ ಬಂದ ಮೇಲೆ ಹಾಗಿಲ್ಲ, ಎಲೆ ಮರೆಕಾಯಿಯಂತಿರುವ ಅನೇಕ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸಿದ ಹಿರಿಮೆ ಸೋಷಿಯಲ್ ಮೀಡಿಯಾಗೆ ಸಲ್ಲಬೇಕು. ಇದೇ ಕಾರಣಕ್ಕಾಗಿ ಅನೇಕ ಪ್ರತಿಭೆಗಳು ವಯಸ್ಸು, ವಿದ್ಯಾರ್ಹತೆ, ಉದ್ಯೋಗ ಎಲ್ಲವನ್ನೂ ಮೀರಿ ಬೆಳೆದು ನಿಂತಿದ್ದಾರೆ.
ಹೀಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇಳಿ ವಯಸ್ಸಿನ ಮಹಿಳೆಯೊಬ್ಬರ ಹಾಡು ಸದ್ದು ಮಾಡುತ್ತಿದೆ. ಆಮಂತ್ರಣ ಅನ್ನುವ ಫೇಸ್ ಬುಕ್ ಪೇಜ್ ನಲ್ಲಿ ಈ ಹಾಡು ಆಪ್ ಲೋಡ್ ಆಗಿದ್ದು, 89 ಸಾವಿರ ಲೈಕ್ಸ್ ಗಳನ್ನು ಪಡೆದಿದ್ದು, 4 ಸಾವಿರ ಕಮೆಂಟ್ 7 ಸಾವಿರ ಶೇರ್ ಗಳಾಗಿದೆ. ಅಷ್ಟೇ ಪ್ರಮಾಣದಲ್ಲಿ ವಾಟ್ಸಾಪ್ ಗ್ರೂಪ್ ಗಳಲ್ಲೂ ಈ ಹಾಡು ಓಡಾಡುತ್ತಿದೆ.
ಪೇಜ್ ನಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ, ಪುತ್ತೂರು ಪುರುಷಕಟ್ಟೆಯ ನಿವಾಸಿ ರೇವತಿ ಎಂದು ಹೇಳಲಾಗಿದೆ. ಬೀಡಿ ಕಟ್ಟಿ ಜೀವನ ನಿರ್ವಹಿಸುತ್ತಿರುವ ಇವರು ಹಿಂದಿನಿಂದಲೂ ಹಾಡಿನ ಮೇಲೆ ಹಿಡಿತ ಸಾಧಿಸಿದ್ದರು, ಆದರೆ ವೇದಿಕೆಗಳು ಸಿಗದ ಕಾರಣ ಪ್ರತಿಭೆ ಅನಾವರಣವಾಗಿರಲಿಲ್ಲ. ಆದರೆ ಇದೀಗ ಇವರ ಕಂಠ ಸಿರಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಸಂಸ್ಥೆಯೊಂದು ಮಾಡುತ್ತಿದೆ ಎನ್ನಲಾಗಿದೆ.
Discussion about this post