ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಶಿಸ್ತಿಗೆ ಹೆಸರಾಗಿದ್ದ ಪೊಲೀಸ್ ಇಲಾಖೆಯ ಮೇಲೆ ಜನರಿಗೆ ವಿಶ್ವಾಸ ಕಡಿಮೆಯಾಗತೊಡಗಿದೆ. ಇಲಾಖೆಯ ಮೇಲೆ ಪದೇ ಪದೇ ಕೇಳಿ ಬರುತ್ತಿರುವ ಭ್ರಷ್ಟಚಾರ ಆರೋಪಗಳ ಕಾರಣದಿಂದ ಪೊಲೀಸ್ ಇಲಾಖೆಯ ಪರಿಸ್ಥಿತಿ ಹೀಗಾಗಿದೆ.
ಇದಕ್ಕೆ ಪೂರಕ ಅನ್ನುವಂತೆ ವಿಧಾನಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಮಾತ್ರವಲ್ಲದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ಪೊಲೀಸರು ಹೇಗೆ ಅರೋಪಿಗಳ ಪರ, ಕಾನೂನು ವಿರೋಧಿಗಳ ಪರ ನಿಂತಿರುತ್ತಾರೆ ಅನ್ನುವುದನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣೆ ಪೊಲೀಸರ ಕಾರ್ಯವೈಖರಿಯನ್ನು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಯವರು ಸದನದಲ್ಲಿ ಬಯಲು ಮಾಡಿದ್ದಾರೆ.
ಇನ್ನು ರಾಜ್ಯದ ಅದ್ಯಾವ ಮೂಲೆಯ ಟ್ರಾಫಿಕ್ ಪೊಲೀಸರ ಕಥೆಗಳನ್ನು ಕೇಳುವುದೇ ಬೇಡ, ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ವಿಡಿಯೋಗಳು ಸಾಕ್ಷಿಯಾಗಿ ನಿಂತಿದೆ.
ಈ ನಡುವೆ ಇಂತಹ ಆರೋಪಗಳು ನಿಷ್ಟಾವಂತ ಪೊಲೀಸ್ ಅಧಿಕಾರಿಗಳ ನೈತಿಕ ಮೌಲ್ಯವನ್ನು ಕುಸಿಯುವಂತೆ ಮಾಡಿದೆ. ಹೀಗಾಗಿ ನಿಷ್ಟಾವಂತರು ಕೂಡಾ ಬೇಸರ ವ್ಯಕ್ತಪಡಿಸುವಂತಾಗಿದೆ. ಈ ಎಲ್ಲದರ ನಡುವೆ ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆ ಮತ್ತು ಗೋಪಾಲಗೌಡ ಬಡಾವಣೆಯಲ್ಲಿ ಕಳವು, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕ್ರಮ ಕೈಗೊಳ್ಳಬೇಕಾದ ಪೊಲೀಸರು ಸರಿಯಾಗಿ ಗಸ್ತು ತಿರುಗಿದರೆ ಹೀಗಾಗುತ್ತಿರಲಿಲ್ಲ. ಈ ಕಾರಣ ನಿವಾಸಿಗಳೇ ಸ್ವಯಂ ರಕ್ಷಣೆಗೆ ಮುಂದಾಗಿದ್ದಾರೆ. ನಿವಾಸಿಗಳೇ ಗಸ್ತು ಪ್ರಾರಂಭಿಸಿದ್ದಾರೆ.
ಕಳ್ಳರ ಕಾಟದಿಂದ ಜನ ಓಡಾಡಲೂ ಭಯಪಡುವಂತಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾವೇ ನಮ್ಮ ರಕ್ಷಣೆಗೆ ಗಸ್ತು ಪ್ರಾರಂಭಿಸಿದ್ದೇವೆ ಅಂದಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಜ ಹುಲಿ ಖ್ಯಾತಿಯ ಯಡಿಯೂರಪ್ಪ ಊರಿನಲ್ಲೇ ಹೀಗಾದ್ರೆ ರಾಜ್ಯದ ಉಳಿದ ಭಾಗದ ಕಥೆ ಹೇಗಿರಬಹುದು.
Discussion about this post