ಪಿಎಸ್ಐ ಉದ್ದಪ್ಪನಿಗೆ ಯುವತಿ ಜೊತೆಗೆ ಅಕ್ರಮ ಸಂಬಂಧ
ಗಂಡನ ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಿಎಸ್ಐ ಉದ್ದಪ್ಪ ಕಟ್ಟಿಕಾರ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಪ್ರತಿಮಾ ದೂರು ಸಲ್ಲಿಸಿದ್ದು, ಸದ್ಯ ಹಲ್ಲೆಗೊಳಗಾದ ಪ್ರತಿಮಾ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉದ್ದಪ್ಪ ಯುವತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಮಾಡಲಾಗಿದ್ದು, ಅದನ್ನು ಪ್ರಶ್ನಿಸಿದ್ದಕ್ಕೆ ಮಕ್ಕಳ ಎದುರೇ ಪ್ರತಿಮಾ ಮೇಲೆ ಹಲ್ಲೆ ಮಾಡಿದ್ದು, ಕಣ್ಣು, ಕುತ್ತಿಗೆ ಭಾಗಕ್ಕೆ ಹಲ್ಲೆ ಉದ್ದಪ್ಪ ಹಲ್ಲೆ ಮಾಡಿದ್ದಾನೆ ಅನ್ನಲಾಗಿದೆ.
ಬೆಳಗಾವಿಯ ರಾಮತೀರ್ಥನಗರದಲ್ಲಿ ಪತ್ನಿ ಹಾಗೂ ಮಕ್ಕಳು ಬಾಡಿಗೆ ಮನೆಯಲ್ಲಿದ್ದರು. ಈ ಹಿಂದೆಯೂ ಪತ್ನಿ ಮೇಲೆ ಉದ್ದಪ್ಪ ಕಟ್ಟಿಕಾರ ಹಲ್ಲೆ ಮಾಡಿದ ಆರೋಪವಿದ್ದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈಗ ಕೋರ್ಟ್ ಸೂಚನೆ ಮೇರೆಗೆ ಬೆಳಗಾವಿಗೆ ಬಂದಿದ್ದರು.
ಮಕ್ಕಳ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕೇಳಿದ ಕಾರಣಕ್ಕೆ ಪಿಎಸ್ಐ ಉದ್ದಪ್ಪ ಕಟ್ಟಿಕಾರ ಪತ್ನಿ ಪ್ರತಿಮಾ ಮೇಲೆ ಹಲ್ಲೆ ಮಾಡಿದ್ದಾನೆ ಅನ್ನೋದು ಪ್ರಾಥಮಿಕ ಮಾಹಿತಿ.
2016ರ ಜುಲೈ ತಿಂಗಳಲ್ಲಿ ಇದೇ ಪಿಎಸ್ಐ ಮೇಲೆ ಮಹಿಳಾ ರಾಜಕಾರಣಿಯೊಬ್ಬರು ಹರಿಹಾಯ್ದ ಘಟನೆ ನಡೆದಿತ್ತು. ಮರಳು ಲಾರಿ ಬಿಡುವ ವಿಚಾರದಲ್ಲಿ ಪಿಎಸ್ಐ ಉದಪ್ಪ ಕಟ್ಟಿಕಾರ ಅವರಿಗೆ ಕರೆ ಮಾಡಿದ ರಾಜಕಾರಣಿ ಅವಾಜ್ ಹಾಕಿದ್ದರು.
ಆದರೆ, ಜಿಲ್ಲಾಧಿಕಾರಿ ಎನ್. ಜಯರಾಂ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಲು ನೀಡಿರುವ ಮಾರ್ಗದರ್ಶನದಂತೆ ನಾನು ನಡೆದುಕೊಂಡಿದ್ದೇನೆ ಎಂದು ಪಿಎಸ್ ಐ ಉದ್ದಪ್ಪ ಅವರು ಹೇಳಿದ್ದರು. ಈ ಮೂಲಕ ಪಿಎಸ್ ಐ ಉದ್ದಪ್ಪ ರಾಜ್ಯದ ಜನರ ಮುಂದೆ ಹೀರೋ ಅನ್ನಿಸಿಕೊಂಡಿದ್ದರು.