ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ರಿಗೆ ಅಭಯವಿತ್ತ ನ್ಯಾಯಾಲಯ
ರಾಜ್ಯದಲ್ಲಿ ಏನಾಗುತ್ತಿದೆ ಅನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಕಾನೂನು ಸುವ್ಯವಸ್ಥೆ, ಆಡಳಿತ ಹಾದಿ ತಪ್ಪಿದೆಯೇ ಅನ್ನುವ ಅನುಮಾನಗಳು ಕಾಡುತ್ತಿದೆ. ಅದಕ್ಕೆ ಕಾರಣವೂ ಇದೆ. ಒಂದೆಡೆ ರಾಜ್ಯದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ನಡೆಸಬೇಕಾಗಿದ್ದ ಅಧಿವೇಶನ ಸರಿಯಾಗಿ ನಡೆಯಲೇ ಇಲ್ಲ.
ಮತ್ತೊಂದು ಕಡೆ ಪೊಲೀಸ್ ಅಧಿಕಾರಿಗಳಿಂದ ಕಾಂಗ್ರೆಸ್ ಶಾಸಕರೇ ಲಂಚ ಕೇಳುತ್ತಿದ್ದಾರೆ ಅನ್ನೋ ಆರೋಪ. ಪೊಲೀಸರೊಬ್ಬರ ಆತ್ಮಹತ್ಯೆಯೂ ನಡೆದು ಹೋಗಿದೆ. ಪೊಲೀಸರ ಮೇಲೆ ಸಿಕ್ಕಾಪಟ್ಟೆ ಒತ್ತಡವಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಈ ನಡುವೆ ಮತ್ತೊಬ್ಬ ಕಾಂಗ್ರೆಸ್ ಶಾಸಕ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ನನಗೆ ಪೊಲೀಸರು ಕಿರುಕುಳ ನೀಡುತ್ತಿದ್ದು, ನಾನು ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ. ನನ್ನನ್ನು ಕಾಪಾಡಿ ಎಂದು ಸಾಗರದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಒಬ್ಬರು ಕರ್ನಾಟಕ ಹೈಕೋರ್ಟ್ ಮುಂದೆ ಮಂಗಳವಾರ ಕೈಮುಗಿದು ಅಂಗಲಾಚಿದ ಘಟನೆ ನಡೆದಿದೆ.
ಈ ದೃಶ್ಯಗಳನ್ನು ನೋಡಿದ್ರೆ ಚಲಚಿತ್ರಗಳಲ್ಲಿ ತೋರಿಸುವಂತೆ ಪೊಲೀಸರು ಇಷ್ಟೊಂದು ಕ್ರೂರಿಗಳೇ ಅನ್ನೋ ಪ್ರಶ್ನೆ ಹುಟ್ಟು ಹಾಕಿದ್ದು ಸತ್ಯ.
ಮಂಗಳವಾರ ಬೆಳಗಿನ ಕಲಾಪ ಮುಗಿಸಿ ಹೊರಡು ಸಿದ್ದರಾದ ಸಿದ್ಧರಾದ ನ್ಯಾಯಮೂರ್ತಿ ನಾಗಪ್ರಸನ್ನ ಮುಂದೆ ಕೈಮುಗಿದು ಹಾಜರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಶಾಂತಕುಮಾರ ಸ್ವಾಮಿ ಎಂ ಜಿ ಅವರು “ನನಗೆ ಮದುವೆ ನಿಶ್ಚಯವಾಗಿ ಬಳಿಕ ರದ್ದಾಗಿತ್ತು. ನಂತರ ಸುಳ್ಳು ಪ್ರಕರಣ ದಾಖಲಿಸಿ, ನನ್ನಿಂದ ಹಣ ಪೀಕಲು ಸ್ಥಳೀಯ ಕಾಂಗ್ರೆಸ್ ಶಾಸಕ (ಬೇಳೂರು ಗೋಪಾಲಕೃಷ್ಣ) ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟರು. ಇವೆಲ್ಲವನ್ನೂ ರೆಕಾರ್ಡ್ ಮಾಡಿ, ಲೋಕಾಯುಕ್ತಕ್ಕೆ ದೂರು ನೀಡಿದೆ. ಇದಾದ ನಂತರ ಲೋಕಾಯುಕ್ತಕ್ಕೆ ದೂರು ನೀಡ್ತಿಯಾ ಎಂದು ಸಾಗರದಲ್ಲಿ ಇರಲು ಬಿಡುತ್ತಿಲ್ಲ. ಹೀಗಾಗಿ ಬೆಂಗಳೂರಿಗೆ ವರ್ಗಾವಣೆಗೆ ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ ಅಂದರು.
ಸಹಾಯಕ ಎಂಜಿನಿಯರ್ ಆಗಿರುವ ಶಾಂತಕುಮಾರ ಸ್ವಾಮಿ ಅವರ ದೂರುಗಳ ಸರಮಾಲೆಯಿಂದ ಅಚ್ಚರಿಗೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಡಿವೈಎಸ್ಪಿಗೆ ತಿಳಿಸಿ, ಆರೋಪ ನಿಜವಾಗಿದ್ದರೆ ಅವರು ಪರಿಣಾಮ ಎದುರಿಸಬೇಕಾಗುತ್ತದೆ ಅಂತ. ಈ ವಿಚಾರವನ್ನು ಅಧಿಕಾರಿಗೆ ತಿಳಿಸುವಂತೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರಿಗೆ ತಿಳಿಸಿದರು.
ಇದೇ ವೇಳೆ ಮುಂದುವರಿದು ತನ್ನ ನೋವು ಹೊರ ಹಾಕಿದ ಶಾಂತಕುಮಾರ ಸ್ವಾಮಿ, ಕೋರ್ಟ್ ಪ್ರಕ್ರಿಯೆಗಳನ್ನು ಯೂಟ್ಯೂಬ್ನಲ್ಲಿನ ಲೈವ್ ಸ್ಟ್ರೀಮ್ ನಲ್ಲಿ ನೋಡಿದ ಬಳಿಕ ನನ್ನ ವಿರುದ್ದ ಸುಳ್ಳು ಗಾಂಜಾ ಪ್ರಕರಣ ದಾಖಲಿಸಿ ಬಂಧಿಸಿ ಶಿವಮೊಗ್ಗ ಜೈಲಿಗೆ ಅಟ್ಟಿದ್ದರು. ಸಾಗರದ ಡಿವೈಎಸ್ಪಿ ರಿವಾಲ್ವರ್ ಇಟ್ಟು ಎನ್ಕೌಂಟರ್ ಮಾಡಲಾಗುವುದು ಎಂದು ಬೆದರಿಸಿದ್ದಾರೆ ಎಂದು ಕಣ್ಣೀರು ಹಾಕಿದರು.
ಈ ವೇಳೆ ಸರ್ಕಾರಿ ವಕೀಲ ಜಗದೀಶ್ ಅವರಿಗೆ ಈ ಬಗ್ಗೆ ಗಮನಹರಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಬುಧವಾರ ಬೆಳಗ್ಗೆ ಪ್ರಕರಣ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.