ಬೆಂಗಳೂರಿನಲ್ಲಿ ಬೆಸ್ಟ್ ಫೋಟೋ ಶೂಟ್ ಲೋಕೇಷನ್ ಯಾವುದು ಎಂದು ಹುಡುಕಿದ್ರೆ ಕಬ್ಬನ್ ಪಾರ್ಕ್ ಹೆಸರು ಕೂಡಾ ಗೂಗಲ್ ನಲ್ಲಿ ಬರುತ್ತದೆ. ಆದರೆ ಇನ್ಮುಂದೆ ಕಬ್ಬನ್ ಪಾರ್ಕ್ ನಲ್ಲಿ ಪೋಟೋ ಶೂಟ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ.
ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಫೋಟೋ ಶೂಟ್ ಈಗಾಗಲೇ ನಿಷೇಧಗೊಂಡಿದೆ. ಆದರೂ ಇದಕ್ಕೆ ಸೊಪ್ಪು ಹಾಕುವವರು ಯಾರೂ ಇಲ್ಲ. ಪ್ರಿವೆಡ್ಡಿಂಗ್ , ಪೋಸ್ಟ್ ವೆಡ್ಡಿಂಗ್, ಮಕ್ಕಳ ಹುಟ್ಟಿ ಹಬ್ಬ, ಮಾಡೆಲ್ ಹೀಗೆ ನಾನಾ ರೀತಿಯ ಫೋಟೋ ಶೂಟ್ ನಡೆಯುತ್ತಿರುತ್ತದೆ. ಅಲ್ಲಿರುವ ಸೆಕ್ಯೂರಿಟಿ ಗಾರ್ಡ್ ಗಳ ಕೈ ಬಿಸಿ ಮಾಡಿದ್ರೆ ಸಾಕು. ಅದ್ಭುತವಾಗಿ ಫೋಟೋ ಶೂಟ್ ಮುಗಿಸಿಕೊಳ್ಳುತ್ತಾರೆ.
ಆದರೆ ಫೋಟೋ ಶೂಟ್ ನಡೆಸುವಾಗ ಎಲ್ಲೆಂದರಲ್ಲಿ ಬಟ್ಟೆ ಬದಲಾಯಿಸುತ್ತಾರೆ. ಇದರಿಂದ ವಾಯುವಿಹಾರಕ್ಕೆ ಬಂದವರಿಗೆ ಇರಿಸುಮುರಿಸಾಗುತ್ತಿದೆ ಅನ್ನುವ ದೂರುಗಳು ಹೆಚ್ಚಾದ ಹಿನ್ನಲೆಯಲ್ಲಿ ಫೋಟೋ ಶೂಟ್‍ಗೆ ಕ್ಯಾಮೆರಾ ತಂದರೆ ಕ್ಯಾಮೆರಾ ಸೀಜ್ ಜೊತೆಗೆ ದಂಡ ಹಾಕುವ ಹೊಸ ಕಾನೂನು ಜಾರಿಗೆ ತರಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.

ಹೈ ರೆಸ್ಯೂಲಷನ್ ಇರುವ ಕ್ಯಾಮೆರಾ ಬಳಕೆಯಿಂದ ಕಬ್ಬನ್ ಪಾರ್ಕ್‍ನ ಪಕ್ಷಿ ಸಂಕುಲಕ್ಕೂ ತೊಂದರೆಯಾಗಲಿದೆ ಅನ್ನುವ ದೂರುಗಳು ಕೇಳಿ ಬಂದಿತ್ತು.
ನಿರ್ಧಾರ ಚೆನ್ನಾಗಿದೆ. ಆದರೆ ಪಾರ್ಕ್ ಒಳಗಡೆ ಊಟ ತಿಂಡಿ ತಂದು ತಿಂದು ಗಬ್ಬು ಎಬ್ಬಿಸುವ ಮಂದಿಯ ಬಗ್ಗೆ ತೋಟಗಾರಿಕಾ ಇಲಾಖೆ ಕುರುಡಾಗಿದೆ. ಇನ್ನು ಪಾರ್ಕ್ ಒಳಗಡೆ ಅನಧಿಕೃತವಾಗಿ ಪ್ರವೇಶಿಸಿ ತಿಂಡಿ, ಬಿಸ್ಕೆಟ್, ಪಾನೀಯ ಮಾರುವ ಮಂದಿಯ ಆಟಾಟೋಪಗಳು ತೋಟಗಾರಿಕಾ ಅಧಿಕಾರಿಗಳ ಕಣ್ಣಿಗೆ ಬಿದ್ದ ಹಾಗಿಲ್ಲ.
Discussion about this post