ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು ಈಗಾಗಲೇ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಭಾರತದಂತಹ ದೊಡ್ಡ ರಾಷ್ಟ್ರಗಳಿಗೆ ಕೊರೋನಾ ಸೋಲಿಸುವುದು ದೊಡ್ಡ ಸಾಹಸವಾಗಿದೆ. ನಮ್ಮಲ್ಲಿ ಕಾನೂನುಗಳೇ ಇರುವುದು ಮುರಿಯಲಿಕ್ಕೆ ಅನ್ನುವ ಮನೋಭಾವನೆಯನ್ನು ಹೊಂದಿರುವ ಮಂದಿ ಸಾಕಷ್ಟಿದ್ದಾರೆ. ಜೊತೆಗೆ ವಿಜ್ಞಾನಿಗಳು ಸಂಶೋಧಿಸಿದ ಕೊರೋನಾ ಲಸಿಕೆಯನ್ನು ರಾಜಕೀಯಗೊಳಿಸಿದ ಬುದ್ಧಿಜೀವಿಗಳು ನಮ್ಮಲ್ಲಿದ್ದಾರೆ. ಕೊರೋನಾ ಲಸಿಕೆ ವಿಚಾರದಲ್ಲಿ ನೆಗೆಟಿವ್ ಚಿತ್ರ ಬರೆದು ಜನರ ದಾರಿ ತಪ್ಪಿಸಿದವರೇ ಇದೀಗ ಲಸಿಕೆ ಪಡೆದು ಸೇಫ್ ಝೋನ್ ಗೆ ಎಂಟ್ರಿಯಾಗಿದ್ದಾರೆ.
ಈ ನಡುವೆ ಕೊರೋನಾ ಸೋಂಕಿನ ಎರಡನೆ ಅಲೆಯಿಂದ ತತ್ತರಿಸಿರುವ ಭಾರತ ಕಂಗಲಾಗಿದೆ. ಕನಿಷ್ಟ ಪಕ್ಷ 45 ವರ್ಷ ಮೇಲ್ಪಟ್ಟ ಬಹುತೇಕರು ಲಸಿಕೆ ಪಡೆದಿರುತ್ತಿದ್ರೆ ಎರಡನೆ ಅಲೆ ಈ ಮಟ್ಟಿಗೆ ಅಬ್ಬರಿಸುತ್ತಿರಲಿಲ್ಲ. ಆದರೆ ಲಸಿಕೆ ಪಡೆಯುವ ವಿಚಾರದಲ್ಲಿ ವಾಟ್ಸಾಪ್ ಯೂನಿವರ್ಸಿಟಿಯ ವಾಟ್ಸಾಪ್ ಡಾಕ್ಟರ್ ಗಳನ್ನು ನಂಬಿ ಕೂತವರು, ಲಸಿಕೆ ವಿಚಾರದಲ್ಲಿ ಧರ್ಮ ತಂದವರು ಇದೀಗ ದೇಶಕ್ಕೆ ಕಂಟಕವಾಗಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಕೊರೋನಾ ರೂಪಾಂತರಿ ವೈರಸ್ ಮತ್ತೇನೂ ಹಾನಿ ಮಾಡುತ್ತದೋ ಗೊತ್ತಿಲ್ಲ. ಮೊದಲ ಅಲೆಯಲ್ಲಿ ಹಿರಿಯರು ಹಾಗೂ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದವರು ಪ್ರಾಣ ಕಳೆದುಕೊಂಡಿದ್ದರು. ಎರಡನೆ ಅಲೆಯಲ್ಲಿ ಗಟ್ಟಿ ಮುಟ್ಟಾಗಿರುವ ಯುವಕರೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮುಂದೆ ಬರಲಿರುವ ಮೂರನೇ ಅಲೆ ಅದ್ಯಾವ ಸಮಸ್ಯೆ ಸೃಷ್ಟಿಸುತ್ತದೋ ಗೊತ್ತಿಲ್ಲ. ವಿಜ್ಞಾನಿಗಳ ಪ್ರಕಾರ ಮುಂದಿನ ಅಲೆಗಳು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದೆ. ಹೀಗಾಗಿ ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಸಂಶೋಧನಾ ಸಂಸ್ಥೆಗಳು ಮುಂದೆ ಬಂದಿವೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ಲಿನಿಕಲ್ ಟ್ರಯಲ್ ನಡೆದಿದ್ದು ಕೆಲವೇ ತಿಂಗಳಲ್ಲಿ 12 ರಿಂದ 18 ವಯಸ್ಸಿನವರಿಗೆ ಲಸಿಕೆ ವಿತರಣೆ ಪ್ರಾರಂಭವಾಗುವ ಸಾಧ್ಯತೆಗಳಿದೆ. ಇದಕ್ಕೆ ಪೂರಕ ಅನ್ನುವಂತೆ 12 ರಿಂದ 15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್-ಬಯೊಎನ್ಟೆಕ್ ಕಂಪನಿಯು ಯುರೋಪ್ ಒಕ್ಕೂಟದ ಔಷಧ ನಿಯಂತ್ರಕರಿಗೆ ಮನವಿ ಮಾಡಿದೆ.
ಶಾಲೆಗೆ ಹೋಗುವ ಮಕ್ಕಳಿಗೆ, 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿರುವ ಫೈಜರ್ ಸಿಇಓ ಎರ್ಲಾಬ್ ಬೌರ್ಲಾ ಈ ಸಂಬಂಧ ಅನುಮೋದನೆಗಾಗಿ ಯುಎಸ್ಎಫ್ಡಿಎ, ಯುರೋಪಿಯನ್ ನಿಯಂತ್ರಕರಿಗೆ ವರದಿ ಸಲ್ಲಿಸಲಾಗಿದೆ ಅಂದಿದ್ದಾರೆ.
2,000ಕ್ಕೂ ಹೆಚ್ಚು ಮಂದಿ ಹದಿಹರೆಯದವರ ಮೇಲೆ ನಡೆಸಿದ ಅಧ್ಯಯನದಲ್ಲಿ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ಕಂಡು ಬಂದಿದೆ. ಲಸಿಕೆ ನೀಡಿಕೆಯಿಂದ ಮಕ್ಕಳಲ್ಲಿ ಎರಡು ವರ್ಷಗಳವರೆಗೆ ಕೊರೋನಾ ತಡೆಗಟ್ಟಲು ಸಾಧ್ಯವಾಗಲಿದೆ. ಮಾತ್ರವಲ್ಲದೆ ಈ ಲಸಿಕೆ 12-15 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ 100ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.
ಮತ್ತೊಂದು ಕಡೆ ಅಮೆರಿಕಾ ಕಂಪನಿ ಮಾಡರ್ನಾ ಕೂಡ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕುರಿತಂತೆ ಸಂಶೋಧನೆ ನಡೆಸುತ್ತಿದೆ. ಅಸ್ಟ್ರಾಜೆನಿಕಾ ಕೂಡಾ 6-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ತಯಾರಿಸಲು ಕಳೆದ ತಿಂಗಳು ಸಂಶೋಧನೆ ಆರಂಭಿಸಿದೆ.
ಅಷ್ಟು ಮಾತ್ರವಲ್ಲದೆ ದೇಶಿ ಕೊರೋನಾ ಲಸಿಕೆ ನಿರ್ಮಿಸಿದ ಖ್ಯಾತಿಗೆ ಪಾತ್ರವಾಗಿರುವ ಭಾರತ್ ಬಯೋ ಟೆಕ್ ಕೂಡಾ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕುರಿತಂತೆ ಸಂಶೋಧನೆ ನಡೆಸುತ್ತಿದೆ. ಈಗಾಗಲೇ ಸಂಶೋಧನೆ ಬಹುತೇಕ ಪೂರ್ಣಗೊಂಡಿದ್ದು ಅಂದುಕೊಂಡಂತೆ ನಡೆದರೆ ಕೋವ್ಯಾಕ್ಸಿನ್ ಮಕ್ಕಳಿಗೂ ದೊರೆಯಲಿದೆ.
Discussion about this post