ಆಗಸ್ಟ್ 20ಕ್ಕೆ ದರ್ಶನ್ ಮನೆಯೂಟ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಲಿದೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗುತ್ತಿವೆ. ಒಂದು ಕಡೆ ದರ್ಶನ್ ವಿರುದ್ಧ ಪೊಲೀಸರಿಗೆ ಮಹತ್ವದ ಸಾಕ್ಷಿಗಳು ಸಿಗುತ್ತಿದ್ದರೆ. ತನಿಖೆ ಅಳ ಅಗಲ ವಿಸ್ತಾರವಾಗುತ್ತಿದ್ದು, ಜೈಲೂಟ ಫಿಕ್ಸ್ ಅನ್ನುತ್ತಿದ್ದಾರೆ ಕಾನೂನು ತಜ್ಞರು. ಮತ್ತೊಂದು ಕಡೆ ದರ್ಶನ್ಗೆ ಜೈಲೂಟ ಸಾಕಾಗಿತ್ತು, ಮನೆಯೂಟಕ್ಕೆ ಬಯಸುತ್ತಿದ್ದಾರೆ. ಆದರೆ ಮನೆ ಊಟಕ್ಕಾಗಿ ಅದೆಷ್ಟು ಬೇಡಿಕೆ ಇಟ್ಟರೂ ನಿರಾಸೆಯ ಸುದ್ದಿಯೇ ಬರುತ್ತಿದೆ. ಹೀಗಾಗಿ ಜೈಲೂಟವನ್ನೇ ಸೇವಿಸಬೇಕಾಗಿದೆ.
ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಗೆ ಮನೆಯೂಟ ನೀಡಲು ಜೈಲಾಧಿಕಾರಿಗಳು ನಿರಾಕರಿಸಿದ್ದಾರೆ. ಮನೆಯೂಟ ನೀಡುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಕೊಲೆ ಆರೋಪ ಹೊತ್ತವರಿಗೆ ಮನೆಯೂಟಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲವೆಂದು ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ.
ಆಗಸ್ಟ್ 20ರಂದು ದರ್ಶನ್ ಮನೆಯೂಟ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಲಿದೆ. ಜೈಲಾಧಿಕಾರಿಗಳು ಈಗಾಗಲೇ ದರ್ಶನ್ಗೆ ಮನೆಯೂಟ ಕೊಡದೇ ಇರಲು ನಿರ್ಧಾರ ಮಾಡಿದ್ದು, ಈ ಬಗ್ಗೆ ಹೈಕೋರ್ಟ್ಗೆ ಮಾಹಿತಿ ಕೊಡಲು ವರದಿಯೂ ಸಿದ್ದವಾಗುತ್ತಿದೆ.
ಜೈಲಿನಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಬಂಧಿಗಳಿದ್ದಾರೆ. ಒಬ್ಬೊಬ್ಬರಿಗೂ ಮನೆಯೂಟಕ್ಕೆ ಅವಕಾಶ ನೀಡಿದರೆ, ಜೈಲಿನ ಊಟ ಮಾಡುವವರು ಇರೋದಿಲ್ಲ. ಈ ಪ್ರಕರಣದಲ್ಲಿ ಮನೆಯೂಟಕ್ಕೆ ಅನುಮತಿ ಕೊಟ್ಟರೆ ಎಲ್ಲರೂ ಮನೆ ಊಟ ಕೇಳೋ ಸ್ಥಿತಿ ಉದ್ಭವಾಗುತ್ತದೆ. ಹೀಗಾಗಿ ಮನೆ ಊಟ ನೀಡುವ ವಿಚಾರದಲ್ಲಿ ಮರು ಪರಿಶೀಲಿಸಲು ಕೋರ್ಟ್ಗೆ ಅಧಿಕಾರಿಗಳು ಮನವಿ ಮಾಡಲಿದ್ದಾರಂತೆ.