ಸೂಕ್ತ ವ್ಯಕ್ತಿಯೇ ಸಿಕ್ಕಿಲ್ಲ… ಇನ್ನೇಲ್ಲಿ ಉತ್ತರಾಧಿಕಾರಿ

ಶೀರೂರು ಮಠಕ್ಕೆ ಇನ್ನೊಂದಿಷ್ಟು ದಿನ ಉತ್ತರಾಧಿಕಾರಿ ನೇಮಕವಾಗುವ ಸಾಧ್ಯತೆಗಳಿಲ್ಲ. ಬದಲಾಗಿ ಕಾದು ನೋಡುವ ತಂತ್ರಕ್ಕೆ ಉತ್ತರಾಧಿಕಾರಿ ನೇಮಕದ ಜವಾಬ್ದಾರಿ ಹೊತ್ತಿರುವ ದ್ವಂದ ಮಠದ ವಿಶ್ವವಲ್ಲಭ ತೀರ್ಥರು ನಿರ್ಧರಿಸಿದ್ದಾರೆ.

ಈ ಮೊದಲು ಚಾತುರ್ಮಾಸ ಪ್ರಾರಂಭವಾಗುವುದರೊಳಗೆ ಉತ್ತರಾಧಿಕಾರಿ ನೇಮಕವಾಗುವ ನಿರೀಕ್ಷೆ ಇತ್ತು. ಆದರೆ ಶ್ರೀಗಳ ಸಾವಿನ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಅಡ್ಡಿಯಾಗಬಾರದು ಎಂದು ಉತ್ತರಾಧಿಕಾರಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.ಶೀರೂರು ಮೂಲ ಮಠ ಪೊಲೀಸರ ಸುಪರ್ದಿಯಲ್ಲಿರುವುದೇ ಇದಕ್ಕೆ ಕಾರಣ.

ಇನ್ನು ಪೊಲೀಸ್ ತನಿಖೆ ಮುಕ್ತಾಯವಾದ ನಂತರ ಹಾದಿ ತಪ್ಪಿರುವ ಶೀರೂರು ಮಠದ ಆಡಳಿತ ವ್ಯವಸ್ಥೆ ಮತ್ತು ಪೂಜೆಯನ್ನು ಸರಿ ದಾರಿಗೆ ತರಬೇಕಾಗಿದೆ. ಉತ್ತರಾಧಿಕಾರಿ ನೇಮಕವಾದರೆ ಇದು ಕಷ್ಟ. ಇದು ಕೂಡಾ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ವಿಳಂಭಕ್ಕೆ ಕಾರಣ ಎನ್ನಲಾಗಿದೆ.

ಇನ್ನು ಉತ್ತರಾಧಿಕಾರಿಯಾಗುವವರಿಗೆ 18 ವರ್ಷ ತುಂಬಿರಬೇಕು, ಜಾತಕ ಕೂಡಿಬರಬೇಕು. ಶಾಸ್ತ್ರಾಭ್ಯಾಸ ಮಾಡಿರಬೇಕು. ಅಂಥವರು ಸಿಕ್ಕ ಬಳಿಕ ಅವರ ಪೂರ್ವಾಪರಗಳನ್ನು ತಿಳಿಯಬೇಕು. ಅಂತಹ ಯಾವ ವ್ಯಕ್ತಿಗಳು ಸೋದೆ ಶ್ರೀಗಳ ಗಮನಕ್ಕೆ ಬಂದಿಲ್ಲ.

ಚಾರ್ತುಮಾಸ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಹುಡುಕಿಕೊಂಡು ಕೂರಲು ಅಷ್ಟ ಮಠಕ್ಕೆ ಸಮಯವಿಲ್ಲ. ಹೀಗಾಗಿ ಚಾರ್ತುಮಾಸ ಮುಗಿಯುವ ತನಕ ಉತ್ತರಾಧಿಕಾರಿ ನೇಮಕ ಪ್ರಸ್ತಾಪವಾಗುವುದಿಲ್ಲ.

ಚಾರ್ತುಮಾಸ ಮುಗಿದ ಮೇಲೂ ಸಾಕಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿದೆ. ಅಷ್ಟು ಹೊತ್ತಿಗೆ ಪೊಲೀಸ್ ತನಿಖೆ ಒಂದು ಹಂತಕ್ಕೆ ಬಂದಿರುತ್ತದೆ. ಮಠದೊಳಗಿನ ರಹಸ್ಯ, ಪಟ್ಟದರಸಿಯ ಕಾಟ, ಆಸ್ತಿ ಪಾಸ್ತಿಯಲ್ಲಿ ಕೈಯಾಡಿಸಿದವರ ವಿವರ ಬಹಿರಂಗವಾಗಿರುತ್ತದೆ.

ಇನ್ನು ಆ ತನಕ ಶಿರೂರು ಮಠ ಮತ್ತು ಮೂಲ ಮಠದ ಉಸ್ತುವಾರಿ ನೋಡಿಕೊಳ್ಳಲು 5 ಮಂದಿಯ ಸಮಿತಿ ನೇಮಕವಾಗಲಿದೆ. ಸಮಿತಿ ಶೀರೂರು ಮಠದಲ್ಲಿ ಇದ್ದ ಆಸ್ತಿ, ಕರಗಿದ ಆಸ್ತಿ, ಯಾರು ಏನೇನೂ ಮಾಡಿದರೂ ಅನ್ನುವ ಮಾಹಿತಿ ಕಲೆ ಹಾಕಲಿದೆ.

Advertisements

ದೇವೇಗೌಡರಿಗೆ ನಿರಾಶೆ – ಭಾರತದ ಮುಂದಿನ ಪ್ರಧಾನಿ ಮಮತಾ ಬ್ಯಾನರ್ಜಿ..!

ಬಿಜೆಪಿಯನ್ನು ಸೋಲಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ತ್ಯಾಗಮಯಿಯಾಗಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಿದಂತೆ, ಪ್ರಧಾನಿ ಹುದ್ದೆಯನ್ನು ಮಿತ್ರಪಕ್ಷಗಳಿಗೆ ನೀಡಲು ನಿರ್ಧರಿಸಿದೆ.

ರಾಹುಲ್ ಗಾಂಧಿ ಮೇಲೆ ಸಾಕಷ್ಟು ಆರೋಪಗಳಿರುವುದರಿಂದ ಮುಂದೆ ಇದು ಸಮಸ್ಯೆಯಾಗಬಹುದು ಅನ್ನುವ ಕಾರಣದಿಂದ ರಾಹುಲ್ ಗಾಂಧಿ ಮಿತ್ರ ಪಕ್ಷಗಳ ಪೈಕಿ ಯಾರಾದರೂ ಪ್ರಧಾನಿಯಾಗಲಿ, ಮೋದಿ ಮತ್ತೊಂದು ಅವಧಿ ಪ್ರಧಾನಿಯಾಗಬಾರದು ಅನ್ನುವ ಸಂದೇಶ ಕೊಟ್ಟಿದ್ದರು.

ಇದರ ಬೆನ್ನಲ್ಲೇ ಪದ್ಮನಾಭನಗರದಲ್ಲಿ ಕೂತಿದ್ದ ಮಾಜಿ ಪ್ರಧಾನಿಗಳ ಕಣ್ಣ ಮುಂದೆ ಕೆಂಪು ಕೋಟೆಯ ಚಿತ್ರ ಹಾದು ಹೋಗಿದ್ದು ಸುಳ್ಳಲ್ಲ.

ಈಗ ರಾಹುಲ್ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ಬರುವ ಲಕ್ಷಣ ಕಾಣಿಸುತ್ತಿದೆ. ಈ ಬಗ್ಗೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಸುಳಿವು ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಸಚಿವಾಲಯದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿರುವ ಓಮರ್ ಅಬ್ದುಲ್ಲಾ, “ನಾವು ಮಮತಾ ಬ್ಯಾನರ್ಜಿಯವರನ್ನು ರಾಷ್ಟ್ರ ರಾಜಧಾನಿಗೆ ಕರೆದುಕೊಂಡು ಹೋಗುತ್ತೇವೆ, ಆ ಮೂಲಕ ಮಮತಾ ಬ್ಯಾನರ್ಜಿಯವರು ಕೋಲ್ಕತ್ತಾದಲ್ಲಿ ಮಾಡಿರುವ ಕೆಲಸಗಳನ್ನು ಇಡೀ ದೇಶಕ್ಕೂ ಅಳವಡಿಸಬಹುದು ಎಂದು ಹೇಳಿದ್ದಾರೆ.

ಅಬ್ದುಲ್ಲಾ ಹೇಳಿಕೆ ಮಮತಾ ಪ್ರಧಾನಿ ಎಂಬ ಅರ್ಥ ಕೊಡ್ತೋ, ಓಮರ್ ಅಬ್ದುಲ್ಲಾ, 2019 ರ ಲೋಕಸಭಾ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಆದ್ದರಿಂದ ಪ್ರಧಾನಿ ಅಭ್ಯರ್ಥಿ ಬಗ್ಗೆ ಈಗಲೇ ಚರ್ಚೆ ಬೇಡ ಎಂದರು.

ಯುಪಿಎ ಮೈತ್ರಿ ಕೂಟದಲ್ಲಿ ಇನ್ನಷ್ಟು ಮಂದಿ ಮುಖಂಡರು ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಓಮರ್ ಅಬ್ದುಲ್ಲಾ ಕೇಳಿ ಮಾಯಾವತಿ ಕೆಲವೇ ದಿನಗಳಲ್ಲಿ ಕೆಮ್ಮುವ ಸಾಧ್ಯತೆಗಳಿದೆ ಕಾದು ನೋಡಿ.

ಸಹೋದರ ಸಾವಿಗೆ ನ್ಯಾಯ ಕೊಡಿ – ಸಾವಿರ ದಿನಕ್ಕೆ ಕಾಲಿಟ್ಟ ಕೇರಳ ಯುವಕನ ಹೋರಾಟ

ಗುರುವಾರ ಬೆಳಗ್ಗೆ ದಿನ ಪತ್ರಿಕೆ ನೋಡಿದವರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿತ್ತು. ನೋವಿನಲ್ಲೂ ನಿಟ್ಟುಸಿರು ಬಿಟ್ಟ ಸುದ್ದಿಯದು. ಮಗನ ಸಾವಿಗೆ ನ್ಯಾಯ ಕೊಡಿ ಎಂದು ಪದ್ಮಾವತಿ ಅಮ್ಮ ಹೋರಾಡಿದ ಸುದ್ದಿಯದು.

13 ವರ್ಷಗಳ ಕಾಲ ಹೋರಾಡಿದ 67ರ ಹರೆಯದ ಹಿರಿಯ ಜೀವವೊಂದು ಮಗನನ್ನು ಕೊಂದ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಈ ನಡುವೆ ಸಹೋದರ ಸಾವಿಗೆ ನ್ಯಾಯ ಬೇಕು,ಅಣ್ಣನನ್ನು ಕೊಂದ ಪೊಲೀಸರಿಗೆ ಶಿಕ್ಷೆಯಾಗಬೇಕು ಎಂದು ಯುವಕನೊಬ್ಬ ಕೇರಳ Secretariat ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಶ್ರೀಜಿತ್  ತನ್ನ ಸಹೋದರ ಶ್ರೀಜೀವ್ ಸಾವಿಗೆ ನ್ಯಾಯ ಕೇಳುತ್ತಿದ್ದು, ಪ್ರತಿಭಟನೆ 957ನೇ ದಿನಕ್ಕೆ ಕಾಲಿಟ್ಟಿದೆ.

ಶ್ರೀಜೀವ್ ಸಾವು ಹೇಗಾಯ್ತು..?

ಶ್ರೀಜಿತ್ ಸಹೋದರ ಶ್ರೀಜೀವ್ ನನ್ನು ಪರಶಾಲಾ ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಮಾರ್ಚ್ 2014 ರಂದು ಬಂಧಿಸಿದ ಕೆಲವೇ ದಿನಗಳಲ್ಲಿ ಶ್ರೀಜೀವ್ ಮೃತಪಟ್ಟಿದ್ದ. ಪೊಲೀಸರ ಪ್ರಕಾರ ವಿಷ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಕುಟುಂಬಸ್ಥರ ಪ್ರಕಾರ ಇದೊಂದು ಲಾಕಪ್ ಡೆತ್. ಪೊಲೀಸರೇ ಕೊಲೆಗಾರರು ಎಂದು ಆರೋಪಿಸಿರುವ ಕುಟುಂಬ ನ್ಯಾಯದ ನಿರೀಕ್ಷೆಯಲ್ಲಿದೆ.

ಇದಕ್ಕೆ ಪೂರಕ ಅನ್ನುವಂತೆ 2016 ರಲ್ಲಿ Police Complaint Authority ನಡೆಸಿದ ತನಿಖೆಯಲ್ಲಿ ಶ್ರೀಜೀವ್ ನದ್ದು ಲಾಕಪ್ ಡೆತ್ ಎಂದು ಬಯಲಾಗಿತ್ತು. ಜೊತೆಗೆ ಪೊಲೀಸರು ಹೇಳಿದ್ದು ಕಟ್ಟು ಕಥೆ ಎಂದು ಸಾರಿತ್ತು.

ಬಳಿಕ ನ್ಯಾಯಕ್ಕಾಗಿ ಮತ್ತೊಂದು ಸುತ್ತಿನ ಹೋರಾಟ ಪ್ರಾರಂಭವಾಯ್ತು. ಕೇರಳದ ಅನೇಕ ಮಂದಿ ಶ್ರೀಜಿತ್ ಹೋರಾಟಕ್ಕೆ ಕೈ ಜೋಡಿಸಿದರು. ಇದರಿಂದ ಒತ್ತಡಕ್ಕೆ ಮಣಿದ ಕೇರಳ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆ ಒಪ್ಪಿಸಿದೆ. ಇದೇ ವೇಳೆ ಕೇರಳ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿತ್ತು.

ಸಿಬಿಐ ಶ್ರೀಜೀವ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಜಿತ್ ನ ಹೇಳಿಕೆಯನ್ನು ಇದೇ ಜನವರಿಯಲ್ಲಿ ಪಡೆದುಕೊಂಡ ನಂತರ ಪ್ರತಿಭಟನೆ ನಿಲ್ಲಿಸಿದ್ದಾರೆ. ಅಷ್ಟು ಹೊತ್ತಿಗೆ ಪ್ರತಿಭಟನೆ 767 ದಿನಗಳನ್ನು ತಲಪಿತ್ತು. ಆದರೆ ಹೋರಾಟ ಮುಂದುವರಿದಿದೆ. ಉದಯ್ ಕುಮಾರ್ ಸಾವಿಗೆ ನ್ಯಾಯ ಸಿಕ್ಕಂತೆ ನನ್ನ ಸಹೋದರ ಸಾವಿಗೂ ಸಿಬಿಐ ತನಿಖೆಯಿಂದ ನ್ಯಾಯ ಸಿಗಲಿದೆ ಅನ್ನುವುದು ಇವರ ವಿಶ್ವಾಸ.

ಮದ್ಯ ಮಾನಿನಿಯ ಪ್ರೇಮಿ ಸ್ವಾಮೀಜಿಗೆ ವೃಂದಾವನ ಬೇಕಾ…?

ಶಿರೂರು ಮಠದ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ ಒಬ್ಬ ಭ್ರಷ್ಟ ಸನ್ಯಾಸಿ ಅವರು ಮಠಾಧೀಶರೇ ಅಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದರು.

ಜೊತೆಗೆ ಶೀರೂರು ಶ್ರೀಗಳ ಸಾವಿನ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಹೋಗಿರಲಿಲ್ಲ.ಮಠಾಧೀಶರಿಗೆ ಬೇರೆ ಮಠಾಧೀಶರು ನಿಧನರಾದ ವೇಳೆ ಮುಖ ದರ್ಶನ ಮಾಡಲು ಅವಕಾಶವಿದೆ. ಆದರೆ ಮಠಾಧೀಶರಲ್ಲದವರು ನಿಧನ ಹೊಂದಿದ್ದರೆ ಮುಖ ದರ್ಶನಕ್ಕೆ ಅವಕಾಶವಿಲ್ಲ.

ಪೇಜಾವರ ಶ್ರೀಗಳು ಶೀರೂರು ಸ್ವಾಮೀಗಳನ್ನು ಮಠಾಧೀಶರೇ ಅಲ್ಲ ಎಂದಿದ್ದರು. ಆದರೂ ಸಮಾಧಿ ಬಳಿಕ ಅಂತಿಮ ಗೌರವ ಸಲ್ಲಿಸಿದ್ದರು.

ಇದೀಗ ಶೀರೂರು ಶ್ರೀಗಳ ಬಂಗಾರದ ವ್ಯಾಮೋಹ, ರಿಯಲ್ ಎಸ್ಟೇಟ್ ಉದ್ಯಮ ಪ್ರೇಮ ಬಹಿರಂಗವಾಗಿದೆ. ಮಾತ್ರವಲ್ಲದೆ ಹೆಣ್ಣು, ಹೆಂಡದ ಸಹವಾಸ, ಮಾನಿನಿ, ಮದಿರೆಯೇ ಸಾವಿಗೆ ಕಾರಣ ಅನ್ನುವುದು ಬಹಿರಂಗವಾಗಿದೆ.

ಈ ನಡುವೆ ಶೀರೂರು ಶ್ರೀಗಳಿಗೆ ವೃಂದಾವನ ನಿರ್ಮಿಸಬೇಕಾ ಅನ್ನುವ ಪ್ರಶ್ನೆ ಎದ್ದಿದೆ.ಸಂಪ್ರದಾಯದಂತೆ ಸಮಾಧಿ ಮಾಡಿದ ಜಾಗದಲ್ಲಿ 12 ನೇ ದಿನ ಆರಾಧನೆ ನೆರವೇರಿಸಿ ಕಲ್ಲಿನ ವೃಂದಾವನ ನಿರ್ಮಿಸುವುದು ಸಂಪ್ರದಾಯ.

ಆದರೆ ಬ್ರಹ್ಮಚರ್ಯ ಕಳೆದುಕೊಂಡ, ಸನ್ಯಾಸಿಯೇ ಆಗಿರದ ಶೀರೂರು ಶ್ರೀಗಳಿಗೆ ಬೃಂದಾವನದ ಅಗತ್ಯವೇನಿದೆ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹೌದು ಶೀರೂರು ಶ್ರೀಗಳಿಗೆ ಮಠಾಧೀಶ, ಸ್ವಾಮೀಜಿ, ಸನ್ಯಾಸಿ ಅನ್ನುವ ಕಾರಣಕ್ಕೆ ಬೃಂದಾವನದ ಅಗತ್ಯವಿಲ್ಲ. ಬದಲಾಗಿ ಸಮಾಧಿಯೊಂದನ್ನು ನಿರ್ಮಿಸಿದರೆ ಸಾಕು. ಶ್ರೀಗಳು ಮಾಡಿದ ಒಳ್ಳೆಯ ಕಾರ್ಯಕ್ಕೆ ಸಮಾಧಿ ನಿರ್ಮಿಸಿ ಗೌರವ ಸಲ್ಲಿಸುವುದು ಉತ್ತಮ.

ಬೃಂದಾವನ ನಿರ್ಮಿಸಿ ಉಡುಪಿ ಅಷ್ಟ ಮಠಗಳ ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿ ಕಾಣಿಸಿಕೊಂಡ ಘಟನೆಯನ್ನು ಶಾಶ್ವತವಾಗಿಸುವುದರಲ್ಲಿ ಅರ್ಥವಿಲ್ಲ. ಬದಲಾಗಿ ಎಲ್ಲಾ ಶ್ರೀಗಳಿಗೆ ಬೃಂದಾವನ ಭಾಗ್ಯ ಸಿಕ್ಕರೆ, ಇವರಿಗೆ ಸಮಾಧಿ ಭಾಗ್ಯ ಸಿಕ್ತು ಇದಕ್ಕೆ ಕಾರಣ ಮದಿರೆ, ಮಾನಿನಿಯ ಸಹವಾಸ ಅನ್ನುವ ಸಂದೇಶವೊಂದು ಮುಂದಿನ ಪೀಳಿಗೆಗೆ ಹೋದರೆ ಸಾಕು, ಕನಿಷ್ಠ ಮುಂದಿನ ಪೀಳಿಗೆ ಶ್ರೀಗಳೆಂದರೆ ಹೀಗಿರಬೇಕು ಅಂದುಕೊಳ್ಳುತ್ತಾರೆ.

ಶೀರೂರು ಶ್ರೀಗಳು ಸನ್ಯಾಸತ್ವಕ್ಕೆ ಮಾತ್ರವಲ್ಲ, ಮಾನವೀಯತೆಗೂ ಅವಮಾನ ಮಾಡಿದ ವ್ಯಕ್ತಿ. ತಮಗೊಂದು ಮಗುವಿದೆ ಎಂದು ಹೇಳಿದವರು, ಆ ಮಗುವನ್ನು ಸಮಾಜದಿಂದ ದೂರವಿಟ್ಟಿದ್ದಾರೆ ಅಂದ ಮೇಲೆ ಇದು ಅಮಾನವೀಯತೆ ತಾನೇ. ಅಂತಹ ವ್ಯಕ್ತಿಗೆ ಬೃಂದಾವನ ಕಟ್ಟಿ ಆರಾಧಿಸುವುದರಲ್ಲಿ ಅರ್ಥವೇನಿದೆ.

ಶೀರೂರು ಗೆಳತಿಗೆ ದುಬೈ ಲಿಂಕ್ – ಸ್ವಾಮೀಜಿ ಸಾವಿನ ಸಿಕ್ರೇಟ್ ನೊಳಗೆ ಹೊಸ ಕ್ಯಾರೆಕ್ಟರ್ ಎಂಟ್ರಿ

ಶೀರೂರು ಶ್ರೀಗಳ ಖಾಸಗಿ ಕೋಣೆಗೆ ಎಂಟ್ರಿ ಹೊಡೆದಿದ್ದ ರಮ್ಯಾ ಶೆಟ್ಟಿ ಆಡಿದ ಖತರ್ ನಾಕ್ ವಿಷಯಗಳು ಈಗ ಬಯಲಾಗತೊಡಗಿದೆ. ಈ ನಡುವೆ ಶೀರೂರು ಶ್ರೀಗಳ ಸಾವಿನ ವಿಚಾರದಲ್ಲಿ ಹೊಸದೊಂದು ಕ್ಯಾರೆಕ್ಟರ್ ಎಂಟ್ರಿಯಾಗಿದೆ.

ಭಾನುವಾರ ಪರಾರಿಯಾಗಲು ಯತ್ನಿಸಿದ್ದ ರಮ್ಯಾಳನ್ನು ಕರೆದುಕೊಂಡು ಬಂದ ಉಡುಪಿ ಪೊಲೀಸರು ಕಾರಿನಲ್ಲಿದ್ದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ರಮ್ಯಾ ಶೆಟ್ಟಿ ಜೊತೆಗಿದ್ದ ಮೂರು ಮಂದಿ ಮುಸ್ಲಿಂ ಮಹಿಳೆಯರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಗೊತ್ತಾಗಿದ್ದು ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಆದರೆ ಕಾರು ಚಾಲಕನಾಗಿದ್ದ ಇಕ್ಭಾಲ್ ಪರಾರಿ ಯೋಚನೆಯ ರೂವಾರಿ ಅನ್ನುವುದು ಪೊಲೀಸರಿಗೆ ಗೊತ್ತಾಗಿದೆ. ಈ ಮೂಲಕ ಶೀರೂರು ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹೊಸದೊಂದು ವ್ಯಕ್ತಿಯನ್ನು ವಿಚಾರಣೆಗೆ ಕರೆಸಿದ್ದಾರೆ. ಹಾಗಂತ ಪೊಲೀಸರ ಬಲೆಗೆ ಬಿದ್ದಿರುವ ಇಕ್ಭಾಲ್ ಪೊಲೀಸರಿಗೆ ಹೊಸ ಪರಿಚಯವಲ್ಲ.ಶೀರೂರು ಸಾವಿನ ಕುರಿತು ತನಿಖೆ ನಡೆಸಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ದಿನವೇ

ಇಕ್ಭಾಲ್ ಕಾಪು ಮೂಲದ ವ್ಯಕ್ತಿಯಾಗಿದ್ದು, ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಈತ 6 ತಿಂಗಳ ಹಿಂದೆ ಊರಿಗೆ ಬಂದು ಸರ್ವೀಸ್ ಸೆಂಟರ್ ಒಂದನ್ನು ನಡೆಸುತ್ತಿದ್ದ. ರಮ್ಯಾ ಶೆಟ್ಟಿಗೂ ಈತನಿಗೂ ಹಲವು ವರ್ಷದಿಂದ ಆತ್ಮೀಯತೆ ಇತ್ತು.

ಶೀರೂರು ಶ್ರೀಗಳು ಆಸ್ಪತ್ರೆ ಸೇರಿದ ದಿನ ಇಕ್ಭಾಲ್ ಸಹಾಯ ಯಾಚಿಸಿದ್ದಳು. ಹೀಗಾಗಿ ಹಳೆಯ ಗೆಳತಿಗೆ ಸಹಾಯ ಮಾಡಲು ಮುಂದಾಗಿದ್ದ ಇಕ್ಭಾಲ್ ಕಾಪು ಬಳಿಯ ಕೊಂಬಗುಡ್ಡೆಯ ತನ್ನ ಮನೆಯಲ್ಲಿ ಆಶ್ರಯವನ್ನೂ ಕೊಟ್ಟಿದ್ದ.

ಪೊಲೀಸರು ಯಾವಾಗ ವಿಚಾರಣೆ ಮುಗಿಸಿ ರಮ್ಯಾಳನ್ನು ಕಳುಹಿಸಿಕೊಟ್ಟರೋ,ಪರಾರಿ ಪ್ಲಾನ್ ನೊಂದಿಗೆ ಫೀಲ್ಡಿಗಿಳಿದ ಇಕ್ಭಾಲ್ ತಮ್ಮ ಸಂಬಂಧಿಕರನ್ನು ಕಾರು ಹತ್ತಿಸಿ ಚಿಕ್ಕಮಗಳೂರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಜೊತೆಗೆ ರಮ್ಯಾಳಿಗೆ ಬುರ್ಖಾ ತೊಡಿಸಿ ಇವರು ನನ್ನ ಸಂಬಂಧಿಕರು ಎಂದು ಕಥೆ ಕಟ್ಟಿದ್ದ. ಹೀಗಾಗಿ ನಾನು ಕಾರು ತೆಗೆದುಕೊಂಡು ಹೋಗಿ ಬಿಟ್ಟು ಬರುತ್ತೇನೆ ಎಂದಿದ್ದ. ಆದರೆ ಕಾಲನ ಆಟ ಬೇರೆಯಾಗಿತ್ತು.

ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಮುಂದಾದವರಿಗೆ ಕೃಷ್ಣನ ಕಣ್ಣು ತಪ್ಪಿಸಲಾಗಲಿಲ್ಲ. ಸತ್ಯದೇವತೆ ಗುಡಿ ಮುಂದೇಯ ಟಯರ್ ಪಂಕ್ಚರ್ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರು.

ಈ ಎಲ್ಲದರ ನಡುವೆ ಶೀರೂರು ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ರಮ್ಯಾ ಮತ್ತು ಇಕ್ಭಾಲ್ ಮೇಲೆ ಅವರಿಗೆ ಅರಿವಿಲ್ಲದೆ ಕಣ್ಣಿಟ್ಟಿದ್ದರು. ಇಕ್ಬಾಲ್ ಓಡಾಡುತ್ತಿದ್ದ ಕಾರು ಹಾಗೂ ಆತ ಬಳಸುತ್ತಿದ್ದ ಮೊಬೈಲ್ ಮೇಲೆ ನಿಗಾ ಇಟ್ಟಿದ್ದರು. ಯಾವಾಗ ಇಕ್ಭಾಲ್ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಗೊತ್ತಾಯೋ, ದಕ್ಷಿಣ ಕನ್ನಡ ಪೊಲೀಸರ ಸಹಾಯ ಪಡೆದ ಉಡುಪಿ ಪೊಲೀಸರು ರಮ್ಯಾ ಶೆಟ್ಟಿಯನ್ನು ಹಿಂಬಾಲಿಸಿದ್ದರು.

ಇದಕ್ಕೂ ಮುನ್ನ ರಮ್ಯಾ ಶೆಟ್ಟಿ ಚಲನವನನ್ನು ಪೊಲೀಸರಿಗೆ ತಿಳಿದುಕೊಳ್ಳಬೇಕಿದ್ದು, ಹೀಗಾಗಿ ರಮ್ಯಾ ಶೆಟ್ಟಿಗೆ ಸಂಶಯ ಬಾರದಂತೆ ವಿಚಾರಣೆ ಮುಗಿಸಿ ಬಿಟ್ಟು ಕಳುಹಿಸಿದ್ದರು.ಸ್ವಾಮೀಜಿ ಹಾಗೂ ಶೆಟ್ಟಿ ನಡುವಿನ ಸಂಬಂಧವನ್ನು ಮತ್ತಷ್ಟು ಬಗೆಯಲು ಬಯಸಿದ ಪೊಲೀಸರು ರಮ್ಯಾಳನ್ನು ಬಂಧಿಸಿರಲಿಲ್ಲ. ಪೊಲೀಸರು ಯಾವಾಗ ಬಿಟ್ಟು ಕಳುಹಿಸಿದರೋ ನಾನು ಇನ್ನು ಎಸ್ಕೇಪ್ ಆಗಬಹುದು ಅನ್ನುವುದು ಆಕೆಯ ಲೆಕ್ಕಚಾರವಾಗಿತ್ತು. ಆದರೆ ಪೊಲೀಸರು ಸದ್ದಿಲ್ಲದೆ ರಮ್ಯ ಬೆನ್ನ ಹಿಂದೆ ಬಿದ್ದಿದ್ದರು.

ಇದೀಗ ಶೀರೂರು ಸಾವಿಗೆ ಇಕ್ಭಾಲ್ ಗೂ ಸಂಬಂಧ ಇದೆಯೇ ಎಂದು ತನಿಖೆ ನಡೆಯುತ್ತಿದೆ. ಸಂಬಂಧ ಇದೆಯೋ ಇಲ್ಲವೋ, ಶೀರೂರು ಶ್ರೀಗಳ ಪಟ್ಟದರಸಿಯಾಗಿ ಮೆರೆದವಳಿಗೆ ಇಕ್ಭಾಲ್ ಜೊತೆಗೆ ಅದೇನು ನಂಟು ಅನ್ನುವುದು ಕೆಲವೇ ದಿನಗಳಲ್ಲಿ ಬಯಲಾಗಲಿದೆ.

ಸುಳ್ಯ TO ಶಿರೂರು – ಪಟ್ಟದರಸಿಯ ಬಯೋಡೇಟಾ

ಶೀರೂರು ಶ್ರೀಯ ಸ್ತ್ರೀ ಸಹವಾಸ ಇದೀಗ ದೊಡ್ಡ ಸುದ್ದಿಯಾಗಿದೆ. ಶಿರೂರು ಸಾವಿನ ಸುದ್ದಿಯಲ್ಲಿ ಅಷ್ಠ ಮಠಗಳು ಸುದ್ದಿಯಾಗಬೇಕಿತ್ತು. ಆದರೆ ಸುದ್ದಿಯಾಗಿರುವುದು ಸಾವಿನ ರಹಸ್ಯ.

ಇದಕ್ಕೆ ಕಾರಣ ಸಡಿಲವಾದ ಸ್ವಾಮೀಜಿಯ ಪಂಚೆ. ಇಷ್ಟವಿಲ್ಲದೆ ಸನ್ಯಾಸ ಸ್ವೀಕಾರವಾಗಿದೆ ಅನ್ನುವುದಾದರೆ ಹಿಂದಿನವರು ಎದ್ದು ಹೋದಂತೆ ಹೋಗಬೇಕಿತ್ತು.

ಹಿರಿಯವಳು, ಕಿರಿಯವಳು ಎಂದು ಕಟ್ಟಿಕೊಂಡು ಬದುಕಬೇಕಾಗಿರಲಿಲ್ಲ. ಹಾಗಂತ ಈಗ ಸ್ವಾಮೀಜಿ ಬಗ್ಗೆ ಆಕ್ರೋಶದ ನುಡಿ ಬರೆದು ಪ್ರಯೋಜನವೇನು. ಸತ್ತು ಹೋದ ಸ್ವಾಮಿ ಮೇಲೆ ಓದುವುದಿಲ್ಲ.

ಈ ನಡುವೆ ಸಿಕ್ಕಾಪಟ್ಟೆ ಸುದ್ದಿಯಾದ ರಮ್ಯಾ ಶೆಟ್ಟಿಯ ಬಯೋಡೇಟಾ ಸಿಕ್ಕಿದೆ. ರಮ್ಯ ಶೆಟ್ಟಿ ಅಲ್ಲಿಯವಳು, ಇಲ್ಲಿಯವಳು ಅನ್ನುವ ಸುದ್ದಿ ಹರಿದಾಡಿತ್ತು. ಆದರೆ ಈಗ ಗೊತ್ತಾಗಿದೆ. ರಮ್ಯ ಶೆಟ್ಟಿಯ ಮೂಲ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೆರುವಾಜೆಯ ನಿವಾಸಿ. ಪುತ್ತೂರಿನಿಂದ ಸುಳ್ಯಕ್ಕೆ ಹೋಗುವ ದಾರಿಯಲ್ಲಿ ಪೆರುವಾಜೆ ಸಿಗುತ್ತದೆ. ಆಕೆಗೆ ಈಗ 42 ವಯಸ್ಸು. ಪ್ರೇಮನಾಥ ಶೆಟ್ಟಿ, ಇಂದಿರಾ ಶೆಟ್ಟಿ ಹೆತ್ತವರು. ರಮ್ಯಾ ಶೆಟ್ಟಿಗೊಬ್ಬಳು ಸಹೋದರಿಯಿದ್ದು, ನೆಮ್ಮದಿಯ ಸಂಸಾರ ಸಾಗಿಸುತ್ತಿದ್ದಾರೆ. ( ಈಗ ಶ್ರೀಗಳ ರಮ್ಯಾಯಾಣ ಅವರ ನೆಮ್ಮದಿ ಕೆಡಿಸಿದೆ)

ರಮ್ಯಾ ಶೆಟ್ಟಿಯನ್ನು ಉಡುಪಿ ಮೂಲದ ಪ್ರಸಾದ್ ಶೆಟ್ಟಿ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದುಬೈ ನಲ್ಲಿ ಕೆಲಸ ಮಾಡುತ್ತಿದ್ದ ಅವರೊಂದಿಗೆ ರಮ್ಯಾ ಶೆಟ್ಟಿಯೂ ದುಬೈಗೆ ಹೋಗಿದ್ದರು.ಅಲ್ಲಿ ಒಂದಿಷ್ಟು ಸ್ನೇಹಿತರನ್ನು ಕೂಡಾ ಅವರು ಸಂಪಾದಿಸಿದ್ದರು.ಆದರೆ ಅಕಾಲಿಕವಾಗಿ ಪ್ರಸಾದ್ ಶೆಟ್ಟಿ ನಿಧನ ಹೊಂದಿದ ಬಳಿಕ ಇದ್ದ ಮಗನೊಂದಿಗೆ ಅವರು ಜೀವನ ಸಾಗಿಸಬೇಕಾಗಿ ಬಂತು.

ಈ ವೇಳೆ ಉಡುಪಿ ಸೇರಿದ ರಮ್ಯಾ ಶೆಟ್ಟಿ ಪೋಷಕರು ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ. (ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ).

ಇದೇ ಸಂದರ್ಭದಲ್ಲಿ ಶೀರೂರು ಪರಿಚಯವಾಯ್ತು. ಪರಿಚಯ ಎಲ್ಲಿಗೆ ಕರೆದುಕೊಂಡು ಹೋಯ್ತು ಅನ್ನುವುದನ್ನು ಹೇಳಬೇಕಾಗಿಲ್ಲ.

ಸದ್ಯ ಪೆರುವಾಜೆ ಮನೆಗೆ ಬೀಗ ಜಡಿಯಲಾಗಿದೆ.

ಕರಾವಳಿ ಹುಡುಗಿ ಅನುಶ್ರೀ ಮೇಲೆ ಇದೀಗ ಕರಾವಳಿಗರಿಗೆ ಕೆಂಡದಂಥ ಕೋಪವೇಕೆ..?

ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ‘ಮುಕಾಬಲಾ’ ಸಿನಿಮಾ ಹಾಡಿಗೆ ತಂಡವೊಂದು ಯಕ್ಷಗಾನ ವೇಷ ಧರಿಸಿ ನೃತ್ಯ ಮಾಡಿದ್ದು ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಝೀ ಕನ್ನಡ ಪದೇ ಪದೇ ನಮ್ಮ ಸಹನೆ ಕೆಣಕುತ್ತಿದೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂತವರಿಗೂ ಕರಾವಳಿಯ ಭಾವನೆಗಳು ಅರ್ಥವಾಗದಿರುವುದು ದುರಂತ ಅನ್ನುವ ಟೀಕೆಗಳು ಕೇಳಿ ಬಂದಿದೆ.

ಯಕ್ಷಗಾನದ ಆರಾಧನಾ ಪರಂಪರೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕಲೆಗೆ ಅಪಚಾರ ಎಸಗಲಾಗಿದೆ. ಹೀಗಾಗಿ ಅನೇಕರು ವಾಹಿನಿ ಕಚೇರಿಗೂ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದಲೇ ‘ಯಕ್ಷಗಾನ ಕಲೆ ಸಂಕಷ್ಟದಲ್ಲಿದೆ. ಅದನ್ನು ಉಳಿಸಿ ಬೆಳೆಸಲು ಹರ ಸಾಹಸ ಪಡುತ್ತಿರುವ ಸಂದರ್ಭದಲ್ಲಿ ಅನ್ಯ ರಂಗದತ್ತ ಈ ಕಲೆಯನ್ನು ಕೊಂಡೊಯ್ಯುವುದು ಸರಿಯಲ್ಲ. ಇದರಿಂದ ವೀಕ್ಷಕರಿಗೆ ಯಕ್ಷಗಾನದ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ ಅನ್ನುವ ಆತಂಕ ಯಕ್ಷಗಾವ ಪ್ರಿಯರದ್ದು.

ಈ ನಡುವೆ ಯಕ್ಷಗಾನ ಪ್ರಿಯರ ಕೋಪ ಝೀ ಕನ್ನಡ ವಾಹಿನಿಯಿಂದ ನಿರೂಪಕಿ ಅನುಶ್ರೀಯತ್ತ ತಿರುಗಿದೆ. ಕರಾವಳಿಯವರಾದ ಅನುಶ್ರೀ ಅವರಿಗೆ ಯಕ್ಷಗಾನ ಕಲೆಯ ಬಗ್ಗೆ ಅರಿವಿದೆ.ಯಕ್ಷಗಾನ ಎಷ್ಟು ಪವಿತ್ರ ಕಲೆ ಅನ್ನುವುದು ಗೊತ್ತಿದೆ. ಕನಿಷ್ಠ ಪಕ್ಷ ಅವರು ಈ ಬಗ್ಗೆ ಮಾತನಾಡಬಹುದಿತ್ತು.

ಅಸಾಧ್ಯವಾಯ್ತು ಅಂದರೆ ಕಾರ್ಯಕ್ರಮ ಮುಗಿದ ಮೇಲಾದರೂ ಮಾತನಾಡಬಹುದಿತ್ತು ಎಂದು ಕೆಂಡ ಕಾರುತ್ತಿದ್ದಾರೆ.

ಒಂದು ನಿಟ್ಟಿನಲ್ಲಿ ಝೀ ಕನ್ನಡ ಬಹುಸಂಖ್ಯಾತರ ಸಹನೆ ಕೆಣಕುತ್ತಿದೆ. ಹಿಂದೊಮ್ಮೆ ಬ್ರಾಹ್ಮಣ ಸಮುದಾಯ ಆಕ್ರೋಶಕ್ಕೆ ಚಾನೆಲ್ ಗುರಿಯಾಗಿತ್ತು. ಜೊತೆಗೆ ಇದೇ ವಾಹಿನಿಯಲ್ಲಿ ಬರುತ್ತಿರುವ ಹಾಸ್ಯ ಕಾರ್ಯಕ್ರಮ ಅಶ್ಲೀಲತೆಯಿಂದ ಕೂಡಿದೆ ಅನ್ನುವುದು ಸತ್ಯ. ಆದರೆ TRP ಈ ಕಾರ್ಯಕ್ರಮಗಳಿಗೆ ಬರುತ್ತಿರುವುದರಿಂದ ಝೀ ಕನ್ನಡ ಮುಖ್ಯಸ್ಥರು ಇಂಥ ಆಕ್ರೋಶಗಳಿಗೆ ತಲೆ ಕೆಡಿಸಿಕೊಳ್ಳುವುದು ಅನ್ನುವುದು ನೆನಪಿರಲಿ.

ಹಾಡಿ ಹೊಗಳುವ ಕರಾವಳಿ ಮೂಲದ ನಿರೂಪಕಿಗೆ ಧಿಕ್ಕಾರವಿರಲಿ