Advertisements

ಸಂಧಾನಕಾರ ಸಿದ್ದು : ಯುಗಾದಿಯಂದು ಹೆಚ್ಡಿಕೆ ಚೆಲುವರಾಯಸ್ವಾಮಿ ಮುಖಾಮುಖಿ

ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರರ ಮತ್ತು ಜೆಡಿಎಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ನಿಖಿಲ್ ಕುಮಾರಸ್ವಾಮಿ ಗೆಲುವಿನ ಮೇಲೆ ಪರಿಣಾಮ ಬೀರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಸಹಕರಿಸುತ್ತಿಲ್ಲ ಎಂದು ದಳಪತಿಗಳು ಕಾಂಗ್ರೆಸ್ ಹೈಕಮಾಂಡ್ ಗೆ ಸುದ್ದಿ ಮುಟ್ಟಿಸಿದ್ದಾರೆ. ದಳಪತಿಗಳ ದೂರು ಸಲ್ಲಿಕೆಯಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿರುವ ಹೈಕಮಾಂಡ್ ಅದೇನೂ ಮಾಡ್ತೀರೋ ಗೊತ್ತಿಲ್ಲ, ಮೈತ್ರಿ ಸೂತ್ರದಂತೆ ಪ್ರಚಾರ ಕಾರ್ಯ ನಡೆಯಬೇಕು ಎಂದಿದೆ.

ಹೀಗಾಗಿ ಮಂಗಳವಾರ ತಡರಾತ್ರಿ ವರೆಗೂ ಈ ವಿಚಾರವಾಗಿ ಸಭೆ ನಡೆಸಿದ್ದ ಸಿದ್ದರಾಮಯ್ಯ, ಮಂಡ್ಯ ಕಾಂಗ್ರೆಸ್‌ನ ಅತೃಪ್ತರ ಬಣದ ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಗಣಿಗ ರವಿ ಸೇರಿ ಅನೇಕ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಆದರೆ ಸಿದ್ದರಾಮಯ್ಯ ಮೇಷ್ಟ್ರು ಕ್ಲಾಸ್ ತೆಗೆದುಕೊಂಡ್ರೆ ಸಭೆಯಲ್ಲಿದ್ದ ಅತೃಪ್ತರು, ಕುಮಾರಸ್ವಾಮಿಯೇ ಹೇಳಿದ್ದಾರೆ, ನಮ್ಮ ಅಗತ್ಯ ಇಲ್ಲ ಎಂದು. ಅಂದ ಮೇಲೆ ನಾವ್ಯಾಕೆ ಅವರ ಪರವಾಗಿ ಪ್ರಚಾರಕ್ಕೆ ಹೋಗೋಣ. ಜೆಡಿಎಸ್ ಸಚಿವರು ನಮ್ಮನ್ನು ಕ್ಯಾರೆ ಅನ್ನುತ್ತಿಲ್ಲ, ಇನ್ನು ಕಾರ್ಯಕರ್ತರು ಮಂಡ್ಯದಲ್ಲಿ ಸೀಟು ಬಿಟ್ಟಿಕೊಟ್ಟಿರುವುದರಿಂದ ಆಕ್ರೋಶಗೊಂಡಿದ್ದಾರೆ ಎಂದು ಕೈ ಚೆಲ್ಲಿದ್ದರು.

ಹೀಗಾಗಿ ಮಂಡ್ಯ ಭಿಕ್ಕಟ್ಟು ಪರಹರಿಸುವ ನಿಟ್ಟಿನಲ್ಲಿ ಮತ್ತೊಂದು ಸಭೆ ಕರೆದಿರುವ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿಗೂ ಆಹ್ವಾನ ಕೊಟ್ಟಿದ್ದಾರೆ. ಯುಗಾದಿ ದಿನದಂದು ಅಂದ್ರೆ ಇದೇ ಶನಿವಾರ ನಡೆಯಲಿರುವ ಸಭೆಯಲ್ಲಿ ಚಲುವರಾಯಸ್ವಾಮಿ ಕೂಡಾ ಪಾಲ್ಗೊಳ್ಳುವ ಸಾಧ್ಯತೆಗಳಿದ್ದು, ಒಂದು ಕಾಲದ ದೋಸ್ತ್ ಗಳು ಮತ್ತೆ ಮುಖಾಮುಖಿಯಾಗುವುದು ಗ್ಯಾರಂಟಿ.

ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಚೆಲುವರಾಯ ಸ್ವಾಮಿ, ಸಿದ್ದರಾಮಯ್ಯ ಅಶೀರ್ವಾದ ಪಡೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಂದಿನಿಂದ ಇಬ್ಬರ ಸಂಬಂಧ ಹಳಸಿತ್ತು.

ಆದರೆ ಯುಗಾದಿಯ ಸಭೆಯಲ್ಲೂ ಭಿಕ್ಕಟ್ಟು ಪರಿಹಾರವಾಗುವ ಸಾಧ್ಯತೆಗಳು ತೀರಾ ಕಡಿಮೆ, ಈಗಾಗಲೇ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಒಂದಲ್ಲ ನೂರು ಕಾಂಗ್ರೆಸ್ ಬಾವುಟದೊಂದಿಗೆ ಸುಮಲತಾ ಪರ ಪ್ರಚಾರಕ್ಕೆ ಹೋಗ್ತಿವಿ ಎಂದು ಘೋಷಿಸಿಯಾಗಿದೆ.

Advertisements

ನೀವು ಬರದಿದ್ದರೆ ನಿಖಿಲ್‌ಗೆ ವೋಟು ಮಾಡ್ತೀವಿ… ದರ್ಶನ್ ನನ್ನೇ ನಡುಗಿಸಿದ ಅಭಿಮಾನಿಗಳು

ಸುಮಲತಾ ಪರವಾಗಿ ಮಂಡ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ನಟ ದರ್ಶನ್ ಅವರನ್ನು ಅಭಿಮಾನಿಗಳು ಬೆದರಿಸಿದ ಘಟನೆ ನಡೆದಿದೆ.

ಅಭಿಮಾನಿಗಳ ಆಕ್ರೋಶ ಕಂಡ ನಟ ದರ್ಶನ್, ಪ್ರೀತಿಯ ಗದರಿಕೆಯನ್ನು ಮನ್ನಿಸಿ, ಅಭಿಮಾನಿಗಳ ಬೇಡಿಕೆಯನ್ನೂ ಕೂಡಾ ಇದೇ ವೇಳೆ ಪೂರೈಸಿದರು.

ಶ್ರೀರಂಗಪಟ್ಟಣದಲ್ಲಿ ನಟ ದರ್ಶನ್ ಸುಮಲತಾ ಪರ ಪ್ರಚಾರ ವೇಳೆ ಕೊಕ್ಕೊರೆಹುಂಡಿ ಗ್ರಾಮಕ್ಕೆ ತೆರಳಲು ನಿರಾಕರಿಸಿದ್ದರು. ಈ ವೇಳೆ ದರ್ಶನ್ ವಿರುದ್ಧವೇ ಗ್ರಾಮದ ಯುವಕರು ಘೋಷಣೆ ಕೂಗಿದ ಘಟನೆಯೂ ನಡೆಯಿತು. 

ನೀವು ಬರದಿದ್ದರೆ ನಿಖಿಲ್‌ಗೆ ವೋಟು ಮಾಡುತ್ತೇವೆ ಎಂದು ಬೆದರಿಸುತ್ತಿದ್ದಂತೆ ದರ್ಶನ್ ಕೊಕ್ಕೊರೆ ಹುಂಡಿ ಗ್ರಾಮಕ್ಕೆ ತೆರಳಿ ಎಲ್ಲರನ್ನೂ ಸಮಾಧಾನಪಡಿಸಿದರು.  ಗ್ರಾಮಕ್ಕೆ ತೆರಳಿ ಪ್ರಚಾರ ನಡೆಸುವ ಮೂಲಕ ಗ್ರಾಮದ ಯುವಕರು ಅಭಿಮಾನಿಗಳ ಕ್ಷಮೆ ಯಾಚಿಸಿ, ಸುಮಕ್ಕನ ಪರವಾಗಿ ಮತ ಚಲಾಯಿಸಿ, ಅಭ್ಯರ್ಥಿ ಸಂಖ್ಯೆ 20 ಮರೆಯಬೇಡಿ ಅಂದರು. ಸಮಯದ ಅಭಾವದಿಂದ ಗ್ರಾಮದೊಳಗೆ ಬರಲು ನಿರಾಕರಿಸಿದ್ದೆ ಹೊರತು ಬೇರೆ ಯಾವ ಕಾರಣವೂ ಇಲ್ಲ ಅನ್ನುತ್ತಿದ್ದಂತೆ, ಕೊಕ್ಕೊರೆಹುಂಡಿ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮಿನುಗಿತು.

ಇದಕ್ಕೂ ಮುನ್ನ ಶ್ರೀರಂಗಪಟ್ಟಣ ತಾಲೂಕಿ ಬೆಳವಾಡಿ ಗ್ರಾಮದಲ್ಲಿ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸಿದ ದರ್ಶನ್, ಮಧ್ಯಾಹ್ನದ ವೇಳೆಗೆ ಗ್ರಾಮದ ಹೊರವಲಯದಲ್ಲಿರುವ ಹೊಂಗೆ ಮರದ ಕೆಳಗೆ ಕುಳಿತು ಊಟ ಸವಿದರು.

ನಟ ದರ್ಶನ್ ಪ್ರಚಾರದ ವೇಳೆ ಪ್ರಯಾಣಿಸುತ್ತಿದ್ದ ವಾಹನದ ಟೈರು ಪಂಚರ್ ಆಗಿದ್ದರಿಂದ ಸಾಮಾನ್ಯರಂತೆ ನಡೆದು ಮರದ ಕೆಳಗೆ ಕುಳಿತು ಊಟ ಮಾಡಿದರು. 

ದರ್ಶನ್ ಭೇಟಿ ನೀಡಿದ ವೇಳೆ ಜನ ತೋರಿದ ಪ್ರೀತಿ ನೋಡಿದ್ರೆ, ಸುಮಲತಾ ಗೆಲುವು ತುಂಬಾ ಸುಲಭ ಅನ್ನಿಸುತ್ತಿದೆ.

ದೇವೇಗೌಡರ ಕುಟುಂಬಸ್ಥರು ಚುನಾವಣೆಗೆ ಸ್ಪರ್ಧಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ

ದೇವೇಗೌಡಜೀ, ನೀವು ದೇಶದ ಮಾಜಿ ಪ್ರಧಾನಿಗಳು. ನಿಮ್ಮ ಪುತ್ರ ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ದೇವೇಗೌಡರ ಕುಟುಂಬಸ್ಥರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತೆಲಂಗಾಣದ ಸಿಕಂದರಾಬಾದ್ ನಲ್ಲಿ ನಡೆದ ಬಿಜೆಪಿ ಸಮಾವೇಶದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು-ಕಾಶ್ಮೀರದಲ್ಲಿ ದೇಶ ಇಬ್ಭಾಗ ಮಾಡಲು ಪ್ರಯತ್ನಿಸುತ್ತಿರುವ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಅದೇ ಕಾಂಗ್ರೆಸ್ ಜೊತೆ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ದೇಶ ಇಬ್ಭಾಗದ ಮಾತನಾಡುತ್ತಿರುವವರ ಜೊತೆಗಿರುವ ಪಕ್ಷದೊಂದಿಗಿನ ನಿಮ್ಮ ಮೈತ್ರಿಯ ಪಕ್ಷದ ಬಗ್ಗೆ ನಿಮ್ಮ ನಿಲುವು ಏನು ಅನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ನಿಮ್ಮ ಮೈತ್ರಿ ಪಕ್ಷ ಎನ್‍ಸಿ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆಂದು ಹೇಳುತ್ತಿದೆ. ಈ ಬಗ್ಗೆ ದೇವೇಗೌಡರೇ ಚುನಾವಣೆ ಪ್ರಚಾರದ ವೇಳೆ ತಮ್ಮ ನಿಲುವು ಏನು ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡ ಮಹಾಘಟಬಂಧನ್ ಅನ್ನು ಕೂಡಾ ಮೋದಿ ಇದೇ ವೇಳೆ ತರಾಟೆಗೆ ತೆಗೆದುಕೊಂಡರು.

ಮಂಡ್ಯ ಉದ್ಧಾರವಾಗಿದ್ರೆ ಈ ಗತಿ ಬರುತ್ತಿರಲಿಲ್ಲ…! ಬಾಯಿ ಮಾತಿಗೆ ಸೀಮಿತವಾದ ಅಭಿವೃದ್ಧಿ

ಮಗನನ್ನು ಲೋಕಸಭೆಗೆ ಕಳುಹಿಸಲೇಬೇಕು ಎಂದು ಪಣತೊಟ್ಟಿರುವ ಕುಮಾರಸ್ವಾಮಿ ರಾತ್ರಿ ಹಗಲು ರಣತಂತ್ರ ರೂಪಿಸುತ್ತಿದ್ದಾರೆ.ಮಂಡ್ಯದ ಜೆಡಿಎಸ್ ನಾಯಕರೂ ಕೂಡಾ ನಿಖಿಲ್ ಅನ್ನು ಗೆಲ್ಲಿಸಲು ಇನ್ನಿಲ್ಲದಂತೆ ಹರ ಸಾಹಸ ಪಡುತ್ತಿದ್ದಾರೆ.

ಅದರಲ್ಲೂ ಜೆಡಿಎಸ್ ನಾಯಕರಂತು ಮಾತು ಎತ್ತಿದ್ರೆ, ಮಂಡ್ಯಕ್ಕೆ ಅಷ್ಟು ಕೋಟಿ ಬಂದಿದೆ, ಇಷ್ಟು ಕೋಟಿ ಬಂದಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮಂಡ್ಯವನ್ನು ಸಿಕ್ಕಾಪಟ್ಟೆ ಉದ್ಧಾರ ಮಾಡಿದೆ ಎಂದು ಭಾಷಣ ಬಿಗಿಯುತ್ತಿದ್ದಾರೆ.

ಆದರೆ ಅವೆಲ್ಲವೂ ಬಾಯಿ ಮಾತಿಗೆ ಸೀಮಿತ ಅನ್ನುವುದು ಇಂದು ಬಯಲಾಗಿದೆ.

ಇಂದು ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಸಾರಂಗಿಗೆ ಆಗಮಿಸಿದ್ದರು. ಈ ವೇಳೆ ನಿಖಿಲ್’ಗೆ ಎದುರಾದ ಮಹಿಳೆಯೊಬ್ಬರು, ನಿಮಗೆ ವೋಟ್ ಹಾಕಿ ಎಂದು ಕೇಳುವವರಲ್ಲಿ ನಾನೂ ಒಬ್ಬಳು. ಆದರೆ ನಮ್ಮ ಊರಿನ ಚರಂಡಿ, ರಸ್ತೆ ನೋಡಿ ಎಂದು ಮಂಗಳಾರತಿ ಎತ್ತಿದ್ದರು.

ಇದರಿಂದ ಪ್ರಚಾರಕ್ಕೆ ಹೋದ ಮೈತ್ರಿ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿ ನಿಖಿಲ್ ಬೆಂಬಲಿಗರು ಮುಜುಗರಕ್ಕೆ ಒಳಗಾಗ ಬೇಕಾಯ್ತು.

ಇಂದು ಈ ರಸ್ತೆ, ಚರಂಡಿ ನಾನು ಸ್ವಚ್ಛಗೊಳಿಸಿದ್ದೇನೆ. ನಮ್ಮ ಊರಿನ ಪರಿಸ್ಥಿತಿ ನಿಮಗೆ ತಿಳಿಯಬೇಕು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ಜೆಡಿಎಸ್ ನಾಯಕರು ಮಹಿಳೆಯನ್ನು ಸುಮ್ಮನಾಗಿಸಲು ಯತ್ನಿಸಿದರು.

ಈ ವೇಳೆ ನಿಖಿಲ್ ಸಮಸ್ಯೆಯನ್ನು ಹೇಳಲಿ ಬಿಡಿ ಎಂದು ಮುಖಂಡರನ್ನು ಸುಮ್ಮನಾಗಿಸಿದರು. ಸಮಸ್ಯೆ ಆಲಿಸಿ, ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಭರವಸೆ ಕೊಟ್ಟು ಮುಂದೆ ಸಾಗಿದರು.

ಒಂದು ವೇಳೆ ಮಂಡ್ಯ ಸಿಕ್ಕಾಪಟ್ಟೆ ಅಭಿವೃದ್ಧಿಯಾಗಿದ್ರೆ, ಮಹಿಳೆ ಇಂದು ಸಮಸ್ಯೆ ಹೇಳಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ.

ಕಾಂಗ್ರೆಸ್ ಗೆ ಶಾಕ್ : ಕೈ ಪಾಳಯಕ್ಕೆ ಸೇರಿದ 700 FB ಖಾತೆ ರದ್ದು

ಈ ಬಾರಿಯ ಲೋಕಸಭಾ ಚುನಾವಣೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮತದಾರರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದೆ.

ಆ ಸಲುವಾಗಿ ವಾರ್ ರೂಮ್ ಗಳನ್ನು ಸ್ಥಾಪಿಸಿಕೊಂಡಿರುವ ಪಕ್ಷಗಳು ಅನೇಕ ಖಾತೆಗಳನ್ನು ಇದಕ್ಕಾಗಿಯೇ ತೆರೆದಿದೆ. ಕೆಲವೊಂದು ಖಾತೆಗಳು ಪಕ್ಷದ ಸಾಧನೆಗಳನ್ನು ಪ್ರಚಾರ ಪಡಿಸಿದರೆ, ಮತ್ತೆ ಕೆಲವು ಖಾತೆಗಳು ಪ್ರತಿಪಕ್ಷಗಳನ್ನು ಹಣೆಯುವ ಕೆಲಸ ಮಾಡುತ್ತದೆ. ಮತ್ತೊಂದಿಷ್ಟು ಕೌಂಟರ್ ಸಲುವಾಗಿಯೇ ಇವೆ.

ಈ ನಡುವೆ ಕಾಂಗ್ರೆಸ್’ಗೆ ಫೇಸ್ ಬುಕ್ ಶಾಕಿಂಗ್ ಸುದ್ದಿ ಕೊಟ್ಟಿದ್ದು, FaceBook  ಕಾಂಗ್ರೆಸ್ ಪಕ್ಷದ 700 ಪೇಜ್ ಮತ್ತು ಖಾತೆಗಳನ್ನು ತೆಗೆದು ಹಾಕಿದೆ. 

ವಿಶೇಷ ಅಂದ್ರೆ ಈ ಎಲ್ಲವೂ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಜೊತೆಗೆ ಗುರುತಿಸಿಕೊಂಡಿತ್ತು.

ನಕಲಿ ಫೇಸ್’ಬುಕ್ ಖಾತೆಗಳ ವಿರುದ್ಧ ಸಾರಿರುವ ಸಮರದ ಅಂಗವಾಗಿ ಈ ಕಾರ್ಯ ನಡೆದಿದ್ದು, ಮತ್ತಷ್ಟು ಖಾತೆಗಳನ್ನು  FaceBook ಡಿಲೀಟ್ ಮಾಡೋ ಸಾಧ್ಯತೆಗಳಿದೆ.

ಇದರೊಂದಿಗೆ ಪಾಕಿಸ್ತಾನ ಮೂಲದ 103 ಪೇಜ್ ಹಾಗೂ ಗ್ರೂಪ್ ಗಳನ್ನೂ ಕೂಡಾ FaceBookನಿಂದ ತೆಗೆದುಹಾಕಲಾಗಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ , ಪಕ್ಷದ ಯಾವುದೇ ಅಧಿಕೃತ ಖಾತೆ ರದ್ದುಗೊಂಡಿಲ್ಲ ಅಂದಿದೆ.

ಇನ್ನು ಕಾಂಗ್ರೆಸ್ ಈ ಕುರಿತು ಸ್ಪಷ್ಟನೆ ನೀಡುತ್ತಿದ್ದಂತೆ, ಕೆಲವರು ಸಖತ್ ಆಗಿ ರೀ ಟ್ವೀಟ್ ಮಾಡಿದ್ದಾರೆ. ಕೆಲ ಮಂದಿ ಸಾಕ್ಷಿ ಕೇಳಿದ್ರೆ, ಮತ್ತೆ ಕೆಲವರು ಪಾಕಿಸ್ತಾನದ ಕಥೆ ಹೇಳಿದ್ದಾರೆ.

ವಂಶಪಾರಂಪರ್ಯ ರಾಜಕಾರಣ ಸರಿಯಲ್ಲ -ದೇವೇಗೌಡರಿಗೆ ಕುಟುಕಿದ ಎಸ್.ಎಂ.ಕೆ

ವಂಶಪಾರಂಪರ್ಯ ರಾಜಕಾರಣ ಸರಿಯಲ್ಲ. ಆಡಳಿತ ನಡೆಸಲು ಅರ್ಹತೆಯಿಲ್ಲದಿದ್ದರೂ ಆ ವಂಶದಲ್ಲಿ ಹುಟ್ಟಿದ್ದೇನೆ. ಹೀಗಾಗಿ ದೇಶ ಆಳುತ್ತೇನೆ ಅನ್ನುವುದನ್ನು ಒಪ್ಪಲು ಬರೋದಿಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ದೇವೇಗೌಡರನ್ನು ಮಾಜಿ ಸಿಎಂ ಎಸ್.ಎಂ.ಕೃಷ್ಣ ಟೀಕಿಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಪರ ಪ್ರಚಾರ ನಡೆಸಿದ ಅವರು ಇದು ಮಹತ್ವದ ಚುನಾವಣೆಯಾಗಿದೆ. ಕಳೆದ ಐದು ವರ್ಷದಲ್ಲಿ ದೇಶ ನಡೆದು ಬಂದಿರುವ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನ, ಸಂತೋಷ ತಂದು ಕೊಟ್ಟಿದೆ.

ಈ ರಾಷ್ಟ್ರಕ್ಕೆ ಒಬ್ಬ ಬಲಿಷ್ಠ ವ್ಯಕ್ತಿ ಪ್ರಧಾನಿ ಆಗಬೇಕು ಎಂದಾಗ ಗುಜರಾತ್ ನಿಂದ ನರೇಂದ್ರ ಮೋದಿ ಬಂದರು. ಅಲ್ಲಿಯವರೆಗೂ ಬಲಿಷ್ಠ ಪ್ರಧಾನಿ ಎಂದರೆ ಏನು ಎನ್ನುವುದು ದೇಶಕ್ಕೆ ತಿಳಿದಿರಲಿಲ್ಲ ಎಂದು ಹೇಳಿದರು.

ಅಕ್ರಮವೆಸಗಿಲ್ಲ ಅನ್ನುವುದಾದರೆ ಪ್ರತಿಭಟನೆಯ ಅಗತ್ಯವೇನಿತ್ತು ಕುಮಾರಸ್ವಾಮಿಯವರೇ..?

ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬೆವರ ತೊಡಗಿದ್ದಾರೆ.ಇದೊಂದು ರಾಜಕೀಯ ಪ್ರೇರಿತ ಅನ್ನುವ ಹೇಳಿಕೆ ಉಭಯ ನಾಯಕರದ್ದು. ರಾಜಕೀಯ ಪ್ರೇರಿತ ಹೌದು ಅನ್ನುವುದಕ್ಕೆ ಸಾಕ್ಷಿಗಳಿಲ್ಲ. ಆದರೆ ಅಕ್ರಮ ಅನ್ನುವುದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಅಂಟಿದ ಪಿಡುಗು.

ಎಣ್ಣೆ,ಹಣದ ಹೊಳೆ ಹರಿಸದಿದ್ದರೆ ಚುನಾವಣೆ ಗೆಲ್ಲಲಾಗುವುದಿಲ್ಲ ಅನ್ನುವುದು ಗೊತ್ತಿರುವ ಸತ್ಯ. ಹೀಗಾಗಿ ಅಕ್ರಮ ಅನ್ನುವುದನ್ನು  ರಾಜಕೀಯ ಪಕ್ಷಗಳು ಗುತ್ತಿಗೆ ಪಡೆದುಕೊಂಡಿವೆ. ಈಗ ಐಟಿ ದಾಳಿಯಾಗಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ. ಬಿಜೆಪಿಯ ಅದ್ಯಾವ ನಾಯಕನನ್ನೂ ಐಟಿ ಇಲಾಖೆ ಗುರಿ ಮಾಡಿಲ್ಲ. ಇದು ಸಣ್ಣದೊಂದು ಅನುಮಾನದ ವಾಸನೆ ಹುಟ್ಟಿಸಿದೆ.

ಆದರೆ ದಾಳಿಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೊಟ್ಟಿರುವ ಪ್ರತಿಕ್ರಿಯೆ, ಮಾಡೋ ಪ್ರತಿಭಟನೆ ನೋಡಿದ್ರೆ ಐಟಿ ದಾಳಿಗೆ ಸುಮ್ಮನೆ ನಡೆದಿಲ್ಲ ಅನ್ನುವುದನ್ನು ಸ್ಪಷ್ಟಪಡಿಸಿದೆ.

ಒಂದು ವೇಳೆ ಅಕ್ರಮ ನಡೆದಿಲ್ಲ ಅನ್ನುವುದೇ ಆಗಿದ್ದರೆ, ಸಿಎಂ ಕುಮಾರಸ್ವಾಮಿ ಮೈಸೂರಿನಿಂದ ಓಡಿ ಬಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಅವಶ್ಯಕತೆ ಇರಲಿಲ್ಲ. ಚುನಾವಣಾ ರಣತಂತ್ರ ಭಾಗ ಅನ್ನುವಂತೆ ದೊಡ್ಡ ಮೊತ್ತದ ಹಣಕಾಸು ವಹಿವಾಟು ವಾಸನೆ ಸಿಕ್ಕ ಬಳಿಕವೇ ಐಟಿ ದಾಳಿ ನಡೆಸಿದೆಯೇ ಅನ್ನುವ ಪ್ರಶ್ನೆಗೆ, ಈ ಪ್ರತಿಭಟನೆ ಉತ್ತರದಂತೆ ತೋರುತ್ತಿದೆ.

ಎಲ್ಲಾ ಹಣಕಾಸಿವ ವಹಿವಾಟುಗಳಿಗೆ ಲೆಕ್ಕ ಪತ್ರ ಸರಿಯಾಗಿ ಇದೆ ಅನ್ನುವುದೇ ಆಗಿದ್ದರೆ, ಕುಮಾರಸ್ವಾಮಿ, ಸಿದ್ದರಾಮಯ್ಯ,ಪರಮೇಶ್ವರ್ ಭಯ ಪಡುವ ಅಗತ್ಯವೇನಿದೆ. ದಾಖಲೆ ಪತ್ರಗಳು ಐಟಿ ಅಧಿಕಾರಿಗಳ ಮುಖಕ್ಕೆ ಎಸೆದು, ಅದೇನು ಅಕ್ರಮ ಮಾಡಿದ್ದೇವೆ ಸಾಬೀತು ಮಾಡಿ ಅಂದ್ರೆ ಮುಗಿಯಿತು. ಎಲ್ಲವೂ ಸರಿ ಇದೆ ಅಂದ ಮೇಲೆ ಬಂದ ದಾರಿಗೆ ಸುಂಕವಿಲ್ಲ ಅನ್ನುವಂತೆ ಅಧಿಕಾರಿಗಳು ಹಿಂತಿರುಗುತ್ತಾರೆ.  ಆಮೇಲೆ ನೀವೇ ಇದೊಂದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಬಹುದು.

ಆದರೆ ಐಟಿ ಅಧಿಕಾರಿಗಳ ಮುಂದೆ ಪ್ರಾಮಾಣಿಕರು ಎಂದು ಸಾಬೀತು ಮಾಡುವುದನ್ನು ಬಿಟ್ಟು ಪ್ರತಿಭಟನೆಗೆ ಇಳಿದುರುವುದನ್ನು ನೋಡಿದರೆ, ದೇಶ ಅಪಾಯದಲ್ಲಿದೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವುದರಲ್ಲಿ ಅರ್ಥವಿದೆ ಅನ್ನಿಸುತ್ತಿದೆ.

ಸಣ್ಣ ಕಾರಿಗೆ ಪ್ರತಿಸ್ಪರ್ಧಿ- ಬಜಾಜ್ ಕ್ಯೂಟ್ ಫಸ್ಟ್ ಡ್ರೈವ್ – ಟೆಸ್ಟ್ ಡ್ರೈವ್ : ದರವೆಷ್ಟು ಗೊತ್ತಾ..?

ಬಜಾಜ್ ಕಂಪನಿಯ ನೂತನ ಕ್ಯೂಟ್ ಇದೀಗ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.

ಇದರ ಬೆಲೆ ಕೂಡಾ ಇದೀಗ ಬಹಿರಂಗಗೊಂಡಿದೆ. ಸಣ್ಣ ಕಾರಿನ ರೂಪದಲ್ಲಿರುವ ಬಜಾಜ್ ಕ್ಯೂಟ್
2018ರ ನವೆಂಬರ್‌ನಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆದಿದ್ದು ಕಾರು ಬಿಡುಗಡೆಗೆ ಸಜ್ಜಾಗಿದೆ.

ಭಾರತದ 20 ರಾಜ್ಯಗಳಲ್ಲಿ ಬಜಾಜ್ ಕ್ಯೂಟ್ ಕಮರ್ಶಿಯಲ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. 15 ರಾಜ್ಯಗಳಲ್ಲಿ ಖಾಸಗಿ ಬಳಕೆಗೆ ಅನುಮತಿ ನೀಡಲಾಗಿದೆ.

ಬಜಾಜ್ ಕ್ಯೂಟ್ ನ ತೂಕ 425 kg. 216cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ DTSi ಎಂಜಿನ್ ಹೊಂದಿದೆ.

ನೂತನ ಬಜಾಜ್ ಕ್ಯೂಟ್ ಬೆಲೆ 2.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದರಲ್ಲಿ CNG ವೇರಿಯೆಂಟ್ ಕೂಡ ಲಭ್ಯವಿದೆ. ಇದರ ಬೆಲೆ 2.83 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇದು ಇಂಧನ ವೇರಿಯೆಂಟ್ ಕ್ಯೂಟ್ ಕಾರಿಗಿಂತ 20,000 ರೂಪಾಯಿ ಹೆಚ್ಚಾಗಲಿದೆ.

ಯಶ್ ದರ್ಶನ್ ಕಳ್ಳ ಎತ್ತುಗಳಂತೆ – ಇದು ಸಿಎಂ ಕುಮಾರಸ್ವಾಮಿ ಹೇಳಿಕೆ

ನಟ ದರ್ಶನ್, ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ, ನಟ ಯಶ್, ದರ್ಶನ್‌ರನ್ನು ‘ಕಳ್ಳ ಎತ್ತುಗಳು’ ಎಂದು ಜರಿದ ಸಿಎಂ ಕುಮಾರಸ್ವಾಮಿ ಓಹೋ..! ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ ಬೆಳೆದ ಪೈರನ್ನು ಅರ್ಧ ರಾತ್ರಿ ತಿನ್ನುವ ಎತ್ತುಗಳು, ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ರು ಇವರಿಬ್ಬರು? ಅಮ್ಮನನ್ನು ಉಳಿಸಲು ಬಂದಿದ್ದಾರಲ್ಲ, ಅವರು ನೀರಲ್ಲಿ ಬಿದ್ದ ಶವ ತೆಗೆಯಲು ಬಂದಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಸರಿ ಅವರು ಬಂದಿಲ್ಲ, ನಿಖಿಲ್ ಕುಮಾರಸ್ವಾಮಿ ಇಷ್ಟೆಲ್ಲಾ ದುರ್ಘಟನೆಗಳು ನಡೆಯುವಾಗ ಎಲ್ಲಿದ್ದರು. ಅವರು ಯಾಕೆ ಬಂದಿಲ್ಲ ಅನ್ನುವುದು ಯಶ್, ದರ್ಶನ್ ಅಭಿಮಾನಿಗಳ ಪ್ರಶ್ನೆ.

ಮೋದಿ‌…ಮೋದಿ‌ ಅನ್ನೋರ ದವಡೆಗೆ ಹೊಡೆಯಿರಿ : ಇದು JDS ನಾಯಕನ ಅಸಲಿ ಮುಖ

ಮೋದಿ‌…ಮೋದಿ‌ ಅನ್ನೋರಿಗೆ ಹೊಡೆಯಿರಿ …. ಹೀಗೆಂದು ‌ಕರೆ‌ ಕೊಟ್ಟವರೂ ಬೇರೆ ಯಾರೂ ಅಲ್ಲಾ ….ಸ್ವತಃ ‌ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ. ಈ ಒಂದು ಹೇಳಿಕೆ‌ ಹೀಗ ವೈರಲ್ ಆಗಿದೆ.

ಅವರು‌ ಭಾನುವಾರ ಅರಸೀಕೆರೆ‌ ಪಟ್ಟಣದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಈ ಹೇಳಿಕೆ ಕೊಟ್ಟಿದ್ದಾರೆ. ಇದೊಂದು ಪ್ರಚೋದನಕಾರಿ‌ ಹೇಳಿಕೆ ಅನ್ನುವ ಟೀಕೆ ಕೇಳಿ ಬಂದಿದ್ದು, ಮೋದಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ‌ ಸ್ಪಷ್ಟ ನೆ ನೀಡಿರುವ ಶಿವಲಿಂಗೆಗೌಡರು  ಸ್ವಿಸ್ ಬ್ಯಾಂಕ್ ಹಣತಂದು ಎಲ್ಲರ ಖಾತೆಗೆ ಹಣ ಹಾಕ್ತೀವಿ ಎಂದು ಮೋದಿ ಹೇಳಿದ್ದರು, ಯಾರದ್ದಾದರು ಖಾತೆಗೆ 15 ರೂಪಾಯಿ‌ ಹಣ ಬಂತಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಚುನಾವಣೆ‌ ಪ್ರಚಾರಕ್ಕೆ ಬಂದಾಗ ನೀವು ಕೇಳ್ಬೇಕು,ಏಯ್ ನಿಲ್ಸಯ್ಯಾ ಎಲ್ಲಯ್ಯಾ ಮೋದಿ‌ ಹೇಳಿದ ದುಡ್ಡು; ಎಲ್ಲಿ ನಿಮ್ಮ ಮೋದಿ ಯಾರ ಖಾತೆಗೆ ಹಣ ಹಾಕಿದ್ದಾರೆ ಎಂದು ಪ್ರಶ್ನಿಸಿ ಎಂದು ಕಾರ್ಯಕರ್ತರಿಗೆ ಹೇಳಿರುವುದಾಗಿ‌ ಗೌಡರು‌ ತಮ್ಮ‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶಿವಲಿಂಗೇಗೌಡ ಹೇಳಿಕೆಗೆ ಎಲ್ಲ ಕಡೆಗಳಿಂದ ಟೀಕೆಗಳು ವ್ಯಕ್ತವಾಗಿವೆ. ಬಿಜೆಪಿ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

ಪಾಪ ಶಿವಲಿಂಗೇಗೌಡರಾದರೂ ಏನು ಮಾಡಲು ಸಾಧ್ಯ. ಮೋದಿ ಹೆಸರನ್ನು ಘೋಷಣೆ ಕೂಗಿದಷ್ಟು ಕುಮಾರಸ್ವಾಮಿ, ದೇವೇಗೌಡರ ಹೆಸರನ್ನು ಕೂಗಿದ್ದಾರೆಯೇ.

ಇನ್ನು 15 ಲಕ್ಷದ ವಿಚಾರಕ್ಕೆ ಬಂದ್ರೆ, ಪ್ರಧಾನಿ ನರೇಂದ್ರ ಮೋದಿ ಎಲ್ಲೂ ಕೂಡಾ 15 ಲಕ್ಷ ಖಾತೆಗೆ ಹಾಕ್ತೀನಿ ಎಂದು ಹೇಳಿಲ್ಲ. ಶಿವಲಿಂಗೇಗೌಡರು 15 ಲಕ್ಷ ಪ್ರಸ್ತಾಪಿಸಿ ಮೋದಿ ಮಾಡಿದ ಭಾಷಣನ್ನು ನೋಡುವುದು ಬೆಟರ್.

ಕಾಂಗ್ರೆಸ್ ಸಿಟ್ಟಿಂಗ್ ಸಂಸದ ಸ್ಥಾನವನ್ನು ಕಸಿದುಕೊಂಡು ದೇವೇಗೌಡರು ಸ್ಪರ್ಧಿಸುವ ಮಟ್ಟಿಗೆ ಬಂದಿದ್ದಾರೆ ಅಂದ ಮೇಲೆ, ಮೋದಿ ಮೋದಿ ಅನ್ನುವ ಘೋಷಣೆ ಜೆಡಿಎಸ್ ನಾಯಕರಿಗೆ ಕಿರಿ ಕಿರಿ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ.

ಶಿವಲಿಂಗೆಗೌಡರೇ ಒಬ್ಬ ಜನಪ್ರತಿನಿಧಿಯಾಗಿ, ಲಾ ಮೇಕರ್ ಅನ್ನಿಸಿಕೊಂಡವರಾಗಿ ಮೋದಿ ಅಭಿಮಾನಿಗಳಿಗೆ ಹೊಡೆಯಬೇಕು ಅಂತೀರಲ್ಲ, ಏನು ಹೇಳೋಣ. ಮುಂದಿನ ಪೀಳಿಗೆಗೆ ನೀವು ಹೇಳಿಕೊಡುತ್ತಿರುವುದು ಏನನ್ನು ಅನ್ನುವುದಾದರೂ ನಿಮಗೆ ಅರಿವಿದೆಯೇ. ಮತ್ತೆ ಅಂತೀರಿ ಮಂಡ್ಯ, ಹಾಸನ, ತುಮಕೂರು ನಮ್ದೆ ಎಂದು.