Advertisements

2023 ರಲ್ಲಿ BSP ಅಧಿಕಾರಕ್ಕೆ : ಕರ್ನಾಟಕದ ಸಿಎಂ ಎನ್. ಮಹೇಶ್ : ಮಾಯಾವತಿ ಘೋಷಣೆ

ರಾಜ್ಯದಲ್ಲಿ ಬಿಎಸ್​ಪಿಯಿಂದ ಎನ್​.ಮಹೇಶ್​ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ನಮ್ಮ ಪಕ್ಷ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ. ಮಹೇಶ್​ ಸಚಿವರೂ ಆಗಿದ್ದರು. ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಬಿಎಸ್​ಪಿ ಅಧಿಕಾರಕ್ಕೆ ಬರುತ್ತದೆ. ಆಗ ಮಹೇಶ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಬಿಎಸ್​ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಎಸ್​ಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ನಿಮ್ಮೆಲ್ಲರ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದರೆ ನಾವು ದೆಹಲಿಯ ಗದ್ದುಗೆ ಏರಬೇಕು. ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳಿದ್ದು, ಅದರಲ್ಲಿ ಒಂದೂ ಕ್ಷೇತ್ರವನ್ನೂ ಬಿಜೆಪಿ ಈ ಬಾರಿ ಗೆಲ್ಲುವುದಿಲ್ಲ ಎಂದರು.

Advertisements

ಮತ್ತೊಂದು ಅವಧಿಗೆ ಮೋದಿ ಗೆದ್ದರೆ ರಾಜಕೀಯ ನಿವೃತ್ತಿಯಾಗ್ತಾರಂತೆ ರೇವಣ್ಣ

ಮತ್ತೊಂದು ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಘೋಷಿಸಿದ್ದಾರೆ. 

ಮಡಿಕೇರಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 22 ಕ್ಷೇತ್ರಗಳನ್ನು ಗೆಲ್ಲಲ್ಲಿದೆ ಎಂದರು

ಇದೇ ವೇಳೆ ಕಿಸಾನ್ ಸಮ್ಮಾನ್ ಯೋಜನೆ ಯಲ್ಲಿ ಹದಿನೈದು ಲಕ್ಷ ಹೆಸರು ಕಳುಹಿಸಿದ್ದೇವೆ ಎಂದು ಹೇಳಿದ ರೇವಣ್ಣ ಕಳುಹಿಸಲಿಲ್ಲ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂದಿದ್ದಾರೆ.

ಇದೇ ವೇಳೆ ಕುಟುಂಬ ರಾಜಕೀಯ ಕುರಿತಂತೆ ಮಾತನಾಡಿದ ರೇವಣ್ಣ, ನಮ್ಮದು ಕುಟುಂಬ ರಾಜಕೀಯ ಎಂದು ಅನ್ನುತ್ತಾರೆ ಹಾಗಾದರೆ ಜಗದೀಶ್ ಶೆಟ್ಟರ್ ತನ್ನ ಸಹೋದರನನ್ನು ಚುನಾವಣೆಗೆ ನಿಲ್ಲಿಸಲಿಲ್ಲವೇ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚುನಾವಣೆಗೆ ನಿಲ್ಲಿಸಿದ್ದು ಮಗನನ್ನು ತಾನೇ ಎಂದು ಪ್ರಶ್ನಿಸಿದರು.

ರೇವಣ್ಣ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ರೇವಣ್ಣ ಹೇಳಿದ ತಕ್ಷಣ ಗಾಬರಿಯಾಗಬೇಕಿಲ್ಲ. ನುಡಿದಂತೆ ನಡೆಯುವುದು ಅವರಿಗೆ ಸಾಧ್ಯವೇ ಇಲ್ಲ. ಬಹುಮತ ಬಾರದಿದ್ದರೆ ಮತ್ತೆ ಚುನಾವಣೆಗೆ ಹೋಗ್ತಿನಿ, ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡೋ ಮಾತೇ ಇಲ್ಲ ಬಾಂಡ್ ಪೇಪರ್ ನಲ್ಲಿ ಬರೆದುಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿರಲಿಲ್ಲವೇ.

ದು ನನ್ನ ಚುನಾವಣೆ ಎಂದು ದೇವೇಗೌಡರು ಎಷ್ಟು ಬಾರಿ ಹೇಳಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧಿಸುವುದು ಎಂದು ಹೇಳಿದ್ದು ಕುಮಾರಸ್ವಾಮಿ ತಾನೇ. ಹೀಗೆ ಪಟ್ಟಿ ಬೆಳೆಯುತ್ತದೆ.  

ಪ್ರಚಾರದ ವೇಳೆ ಬೆಂಗಳೂರಿನಲ್ಲಿ ಯುವಕನಿಗೆ ಖುಷ್ಬೂ ಕಪಾಳಮೋಕ್ಷ ಮಾಡಿದ್ಯಾಕೆ ಗೊತ್ತಾ..?

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಯುವಕನೊಬ್ಬ ನಟಿ ಹಾಗೂ ಕಾಂಗ್ರೆಸ್​ ನಾಯಕಿ ಖುಷ್ಬೂ ಜೊತೆ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ರಿಜ್ವಾನ್​ ಅರ್ಷದ್​ ಪರ ಹೊಯ್ಸಳ ನಗರದಲ್ಲಿ ನಟಿ ಖುಷ್ಬೂ ಅವರು ಮತಯಾಚನೆ ಮಾಡುತ್ತಿದ್ದ ವೇಳೆ ಯುವಕನೋರ್ವ ಅನುಚಿತ ವರ್ತನೆ ತೋರಿದ್ದಾನೆ. ಇದನ್ನು ಮನಗಂಡ ಖುಷ್ಬೂ ಅವರು ತಕ್ಷಣ ಯುವಕನಿಗೆ ಕಪಾಳಮೋಕ್ಷ ಮಾಡಿದರು.

ಸಾವಿರಾರು ಕಾಂಗ್ರೆಸ್​ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರಿಂದ ಈ ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಅಯ್ಯೋಯ್ಯೋ ಇದೊಂದು ಫೋಟೋ ವೈರಲ್ ಆಗ್ಲೇ ಬಾರದಿತ್ತು……

ಸಾಮಾಜಿಕ ಜಾಲತಾಣ ಅಂದ ಮೇಲೆ ಅದಕ್ಕೆ ಲಂಗಿಲ್ಲ ಲಗಾಮಿಲ್ಲ. ಅಸಲಿ ಯಾರು ನಕಲಿ ಯಾರು ಅನ್ನುವುದನ್ನು ತಿಳಿಯುವುದೇ ಕಷ್ಟ.

ಇನ್ನು ಯಾವ ಹೊತ್ತಿನಲ್ಲಿ ಸುನಾಮಿ ಎದ್ದೇಳುತ್ತದೆ ಅನ್ನುವುದೇ ಗೊತ್ತೇ ಆಗಲ್ಲ. ಬಿರು ಬೇಸಿಗೆಯಲ್ಲಿ ಮಳೆ ಸುರಿದಂತೆ ಹತ್ತಾರು ವರ್ಷಗಳ ಫೋಟೋ, ಸುದ್ದಿ ವೈರಲ್ ಆಗಿ ಬಿಡುತ್ತದೆ.

ನ್ಯೂಸ್ ಚಾನೆಲ್ ಗಳು ಬಿಗ್ ಬ್ರೇಕಿಂಗ್ ಎಂದು ಬಾಯಿ ಬಡಿದುಕೊಳ್ಳುವ ಮುಂಚೆ, ಸೋಷಿಯಲ್ ಮೀಡಿಯಾದಲ್ಲಿ ಅದು ಹಳೆಯದಾಗಿರುತ್ತದೆ.

ಇಷ್ಟೆಲ್ಲಾ ಕಥೆ ಯಾಕೆ ಅಂತೀರಾ. ಮಂಡ್ಯದಲ್ಲಿ ಸುಮಲತಾ ಅವರ ಕ್ರಮ ಸಂಖ್ಯೆ 20, ಕಹಳೆಯೂದುತ್ತಿರುವ ರೈತ  ಚಿಹ್ನೆ ಅನ್ನುವುದು ಎಲ್ಲರಿಗೆ ಗೊತ್ತಿದೆ.

ಸುಮಲತಾ ಅವರು ಕ್ರಮ ಸಂಖ್ಯೆ ಮತ್ತು ಚಿಹ್ನೆಯನ್ನು ಜನತೆಯ ಮನಸ್ಸಿನಲ್ಲಿ ಉಳಿಯುವಂತೆ ಮಾಡಲು ಹರ ಸಾಹಸ ಪಡುತ್ತಿದ್ದಾರೆ.

ಆದರೆ ಅವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿದ್ದು, ಮಂಡ್ಯದ ಮತದಾರರು ಚಿಹ್ನೆ ಮರೆಯಲೇಬಾರದು ಅನ್ನುವಂತ ಫೋಟೋ ಒಂದನ್ನು ಹೆಕ್ಕಿ ತಂದಿದ್ದಾರೆ.

ಅದ್ಯಾವುದೋ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಕಹಳೆ ಊದುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ.

ಕಾಕತಾಳೀಯ ಅನ್ನುವಂತೆ ಕುಮಾರಸ್ವಾಮಿ ಹೇಳುತ್ತಿದ್ದಾರೆ, ಮಂಡ್ಯದಲ್ಲಿ ನಿಖಿಲ್ ಸೋಲಿಸಲು ಕಾಂಗ್ರೆಸ್ ಕೂಡಾ ಕೈ ಜೋಡಿಸಿದೆ ಎಂದು. ಅವರು ಹೇಳ್ತಾ ಇರೋದು ಮಂಡ್ಯ ನಾಯಕರನ್ನು ಉದ್ದೇಶಿಸಿ, ಆದರೆ ಫೋಟೋ ನೋಡಿದ್ರೆ….

ಹಳೆಯ ಫೋಟೋ ಇದು ಆದ್ರೆ ವರ್ತಮಾನಕ್ಕೆ ಸಖತ್ ಆಗಿಯೇ ಹೊಂದಾಣಿಕೆಯಾಗುತ್ತಿದೆ.

ವಿಕಲಚೇತನ ಮಹಿಳಾ ಜಿಲ್ಲಾಧಿಕಾರಿ ವರ್ಗಾವಣೆ ಇವರ ಸಾಧನೆ : ಡಿಸಿ ವರ್ಗಾವಣೆಯಿಂದ ಇವರಿಗೇನು ನಷ್ಟ

ಮಂಡ್ಯ ಲೋಕಸಭಾ ಕ್ಷೇತ್ರ ಕುರುಕ್ಷೇತ್ರದಲ್ಲಿ ಮಾತಿನ ಚಕಮಕಿ ಜೋರಾಗಿದೆ. ಮೈತ್ರಿ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಯ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ.

ಮಂಗಳವಾರವಷ್ಟೇ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಮಂಜುಶ್ರೀ ವಿಷಯ ಬುಧವಾರವೂ ಮಂಡ್ಯದಲ್ಲಿ ಪ್ರತಿಧ್ವನಿಸಿತು.

ಮಗನ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಪಾಪ ವಿಕಲಚೇತನ ಮಹಿಳೆ ಜಿಲ್ಲಾಧಿಕಾರಿಯನ್ನು ಸುಮ್ಮನೆ ವರ್ಗಾವಣೆ ಮಾಡಿಸಿದರು. ಸುಳ್ಳು ಆಪಾದನೆ ಮಾಡಿ ಡಿಸಿ ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿಯ ಸಾಧನೆಯಾಗಿದೆ. ನನಗೆ ಯಾವ ಡಿಸಿ ಇದ್ದರೆ ಏನು. ನಾನು ಅಧಿಕಾರ ದುರುಪಯೋಗಪಡಿಸಿಕೊಂಡು ಮತ ಹಾಕಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು. 

ಇದಕ್ಕೆ ಟಾಂಗ್ ಕೊಟ್ಟಿರುವ ಸುಮಲತಾ ಅವರು, ಅಧಿಕಾರದಲ್ಲಿದ್ದಾಗ ಇವರು ಯಾರನ್ನು ವರ್ಗಾವಣೆ ಮಾಡಿಲ್ಲ. ಆದ್ದರಿಂದ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಂಡ್ಯ ಡಿಸಿ ಅವರನ್ನು ವರ್ಗಾಯಿಸಿದೆ. ಡಿಸಿ ವರ್ಗಾವಣೆಯಿಂದ ಇವರಿಗೇನು ನಷ್ಟ ಎಂದು ಮುಖ್ಯಮಂತ್ರಿಗೆ  ತಿರುಗೇಟು ನೀಡಿದರು. 

ನಾನು ಅಷ್ಟು ಸುಲಭವಾಗಿ ನೆಗೆದು ಬೀಳ್ತೀನಾ? ಈಶ್ವರಪ್ಪಗೆ ಕುಟುಕಿದ ಕುಮಾರಸ್ವಾಮಿ

ನನ್ನ ಆರೋಗ್ಯದ ಬಗ್ಗೆಯೂ ಲೇವಡಿ ಮಾಡುತ್ತಾ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ನಿಮ್ಮಂತವರ ಆಶೀರ್ವಾದ ನನ್ನ ಮೇಲಿದೆ. ಹೀಗಿರುವಾಗಿ ನಾನು ಅಷ್ಟು ಸುಲಭವಾಗಿ ನೆಗೆದು ಬೀಳ್ತೀನಾ ಎಂದು ಸಿಎಂ ಕುಮಾರಸ್ವಾಮಿ ಹಾಸ್ಯದಿಂದಲೇ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಾಲಹಳ್ಳಿ ಗ್ರಾಮದಲ್ಲಿ ಬುಧವಾರ ರೋಡ್ ಶೋ ವೇಳೆ ಮಾತನಾಡಿದ ಅವರು ಸಿಎಂ ಇವತ್ತಿನ ಜನರ ಅಭಿಮಾನವನ್ನು ಯಾರು ಬೇಕಾದರೂ ಮನಗಾಣಬಹುದು. ನಮ್ಮ ಕುಟುಂಬ ಜೊತೆ ವಿಶೇಷವಾಗಿ ನನ್ನ ಮೇಲೆ ಇಟ್ಟಿರುವ ಪ್ರೀತಿ ಎಂದಿಗೂ ಬೆಲೆ ಕಟ್ಟೋಕೆ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು. 

ಇತ್ತೀಚೆಗೆ ಈಶ್ವರಪ್ಪ ಕುಮಾರಸ್ವಾಮಿ ನೆಗೆದು ಬೀಳ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು.

ಯುವಕರು, ತಾಯಂದಿರುವ ಉತ್ಸಾಹ ನೋಡಿದ್ರೆ ನಿಖಿಲ್ ಸೋಲಿಸಲು ಸೃಷ್ಟಿಯಾಗಿರುವ ವ್ಯೂಹಗಳಲ್ಲಿ ಯಾವುದು ಯಶಸ್ವಿಯಾಗುವುದಿಲ್ಲ. ಈಗಾಗಲೇ ನಿಖಿಲ್‌ಗೆ ಜಯ ಕೊಡಬೇಕೆಂಬ ತೀರ್ಮಾನವನ್ನು ಇಲ್ಲಿನ ಜನ ಮಾಡಿಯಾಗಿದೆ. ದೊಡ್ಡ ಅಂತರದಲ್ಲೇ ನಿಖಿಲ್ ಗೆಲ್ಲಲಿದ್ದಾನೆ, ಸಣ್ಣಪುಟ್ಟ ಅಂತರವೇನೂ ಇಲ್ಲ, ಎಂದು ಇದೇ ವೇಳೆ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸುಮಲತಾ ಬೆಂಬಲಿಸುವಂತೆ ಪ್ರಧಾನಿ ಮೋದಿ  ಕರೆ ನೀಡಿರುವ ವಿಚಾರ ಪ್ರಸ್ತಾಪಿಸಿ, ನನ್ನ ಬಜೆಟನ್ನು ಮಂಡ್ಯದ ಬಜೆಟ್ ಅಂತಾ ಬಿಜೆಪಿಯವರು ಆರೋಪ ಮಾಡಿದ್ದಾರೆ. ನರೇಂದ್ರ ಮೋದಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಕರೆ ಕೊಟ್ಟಿದ್ದಾರೆ. ಬಹುಶಃ ಪಕ್ಷೇತರ ಅಭ್ಯರ್ಥಿಯೇ ಅವರ ಪಕ್ಷದ ಅಭ್ಯರ್ಥಿಯೇ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಚುನಾವಣೆ ಮುಗಿದ ಬೆನ್ನಲ್ಲೇ ಸೆಟ್ಟೇರಲಿದೆ ಅಂಬಿ ಪುತ್ರನ ಮತ್ತೊಂದು ಸಿನಿಮಾ

ರೆಬಲ್ ಸ್ಟಾರ್ ಅಂಬರೀಷ್ ಮಗ, ನಟ ಅಭಿಷೇಕ್ ಅಂಬರೀಶ್, ಚಿತ್ರರಂಗದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮೀರಿಸುವ ಲಕ್ಷಣ ಗೋಚರಿಸುತ್ತಿದೆ. ನಿಖಿಲ್ ಮಾಡಿರುವುದು ಎರಡೇ ಸಿನಿಮಾ, ಮುಂದೆ ಅವರ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಮಂಡ್ಯ ಫಲಿತಾಂಶದ ಮೇಲೆ ಅವರ ಚಂದನವನದ ಭವಿಷ್ಯ ನಿರ್ಧಾರವಾಗಲಿದೆ.

ಆದರೆ ಅಭಿಷೇಕ್ ಅವರ ಚೊಚ್ಚಲ ಚಿತ್ರ ‘ಅಮರ್’ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಅವರು ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

ನಿರ್ದೇಶಕ ಮಹೇಶ್ ರಾವ್ ಅಭಿಷೇಕ್ ಅವರ ಎರಡನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರಂತೆ. ಈ ಹಿಂದೆ ಮಹೇಶ್ ರಾವ್ ಅವರು ಯಶ್ ನಟನೆಯ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಈ ಮೊದಲು ‘ಅಂಬಿ’ ಸಿನಿಮಾ ಮಾಡಿ ಚಂದನವನದ ಗಮನ ಸೆಳೆದಿದ್ದ ನಿರ್ದೇಶಕ ಗುರುದತ್ ಗಾಣಿಗ, ಅಭಿ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡುತ್ತಿತ್ತು.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸದ್ಯಕ್ಕೆ ಈ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲವಂತೆ. ಚುನಾವಣೆ ನಂತ್ರ ಈ ಸಿನಿಮಾದ ಕೆಲಸ ಶುರುವಾಗಲಿದೆ.

ಎನಿ ಟೈಮ್‌,ಎನಿ ವೇರ್ ಚರ್ಚೆ ಬನ್ನಿ… ಇದು ಸುಮಲತಾ ಸವಾಲು

ಎನಿ ಟೈಮ್‌, ಎನಿ ವೇರ್ ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾನು ಸಿದ್ದಳಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಸವಾಲು ಹಾಕಿದ್ದಾರೆ. 

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕುಂಬಾರಕೊಪ್ಪಲು ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು ಜೆಡಿಎಸ್‌ ಟೀಕೆಗಳನ್ನು ಮಾಡುವಾಗ ಮಂಡ್ಯ ಅಭಿವೃದ್ಧಿ ನೆನಪಾಗಲಿಲ್ವ ಎಂದು ಪ್ರಶ್ನಿಸಿದರು.

ಮಂಡ್ಯ ಅಭಿವೃದ್ಧಿ ಬಗ್ಗೆ ಈಗ ಮಾತನಾಡುತ್ತಾರೆ. ಜೆಡಿಎಸ್‌ ನಾಯಕರ ಹೇಳಿಕೆಗಳನ್ನ ಜನ ಕೇಳಿದ್ದಾರೆ. ಈಗ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಜನ ನಂಬಲ್ಲ ಎಂದರು.

ಇದೇ ವೇಳೆ ದರ್ಶನ್ ಅಭಿಮಾನಿಗಳ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಕುರಿತಂತೆ ಮಾತನಾಡಿದ ಸುಮಲತಾ ದರ್ಶನ್‌, ಯಶ್‌ಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ. ದರ್ಶನ್‌ ಅಭಿಮಾನಿಗಳು ಈಗ ಜೆಡಿಎಸ್‌ ಸೇರಿದ್ದಾರೆಂದರೆ ಇದರ ಹಿಂದೆ ಏನಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಸುಮಲತಾ ಸೂಚ್ಯವಾಗಿ ತಿಳಿಸಿದರು. 

ಒಟ್ಟಿನಲ್ಲಿ ಮಂಡ್ಯದ ಪರಿಸ್ಥಿತಿ ನೋಡಿದ್ರೆ ಸುಮಲತಾ ಗೆದ್ರೆ ಅದು ಮಂಡ್ಯದ ಸ್ವಾಭಿಮಾನದ ಗೆಲುವು, ನಿಖಿಲ್ ಗೆದ್ರೆ ಅದು ಮಂಡ್ಯ ಜೆಡಿಎಸ್ ಶಾಸಕರ ಗೆಲುವು ಅನ್ನುವಂತಿದೆ.

ಹತಾಶರಾದ್ರ ಸಿಎಂ : ಮೋದಿ ವಿರುದ್ಧ ಏಕವಚನದ ವಾಗ್ದಾಳಿ ಬೇಕಾ ಕುಮಾರಸ್ವಾಮಿಯವರೇ

ರಾಜ್ಯದ ರಾಜಕೀಯ ಎತ್ತ ಹೋಗುತ್ತಿದೆ ಅನ್ನುವುದೇ ಅರ್ಥವಾಗುತ್ತಿಲ್ಲ. ಜನರಿಗೆ ನೀತಿ ಪಾಠ ಹೇಳಬೇಕಾದವರು. ಕಾನೂನು ರೂಪಿಸುವ ಜನಪ್ರತಿನಿಧಿಗಳು ಮುಂದಿನ ತಲೆ ಮಾರಿಗೆ ಅದ್ಯಾವ ನೀತಿ ಪಾಠ ಮಾಡುತ್ತಿದ್ದಾರೋ ಗೊತ್ತಿಲ್ಲ.

ಇದೀಗ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಮಾತನಾಡುವವರ ಸಂಖ್ಯೆ ವಿಪರೀತವಾಗತೊಡಗಿದೆ. ಖರ್ಗೆ ಬಳಿಕ ಇದೀಗ ಸಿಎಂ ಕುಮಾರಸ್ವಾಮಿ ಮೋದಿ ಮೇಲೆ ಏಕವಚನ ಪ್ರಯೋಗಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಪರ ನಗರದ ವಿದ್ಯಾಪೀಠ ಸರ್ಕಲ್ ನಲ್ಲಿ ಬಹಿರಂಗ ಪ್ರಚಾರ ಸಭೆ ಉದ್ದೇಶಿ ಮಾತನಾಡಿದ ಸಿಎಂ, ಮೋದಿ ಹಿಟ್ಲರ್ ಆಗಿದ್ದು ದೇಶವನ್ನ ಹಾಳು ಮಾಡುತ್ತಿದ್ದಾನೆ. ಡಿಕ್ಟೇಟರ್ ಕ್ಕಿಂತ ಕೆಟ್ಟವನು ಎಂದು ಪ್ರಧಾನಿ ಮೋದಿ ವಿರುದ್ಧವೂ ಏಕವಚನ ದಲ್ಲಿ ಸಿಎಂ ವಾಗ್ದಾಳಿ ನಡೆಸಿ, ಮಂಡ್ಯ, ಹಾಸನದಲ್ಲಿ ಮಾತ್ರ ಗುತ್ತಿಗೆದಾರರು ಇದ್ದರಾ? ಬೇರೆ ಎಲ್ಲೂ ಗುತ್ತಿಗೆದಾರರು ಇಲ್ಲವಾ? ಇದಕ್ಕೆಲ್ಲ ನಾನು ಭಯಪಡಲ್ಲ. ಎಲ್ಲವನ್ನು ಹೋರಾಟ ಮಾಡಿ ಗೆಲ್ಲುತ್ತೇವೆ. ಮೋದಿ ಆಟ ಇನ್ನು ನಡೆಯುವುದು 15 ದಿನ ಮಾತ್ರ ಎಂದರು.

ಇಷ್ಟಕ್ಕೆ ನಿಲ್ಲಿಸದೆ ಆದಾಯ ತೆರಿಗೆ ಇಲಾಖೆ ಮುಖ್ಯಸ್ಥರ ವಿರುದ್ಧವೂ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿಎಂ, ನಮ್ಮ ಜೊತೆ ಚೆಲ್ಲಾಟ ಆಡಬೇಡಿ, ಮಂಡ್ಯಗೆ 300 ಜನ ಕಳಿಸಿದೆ ರೇಡ್ ಮಾಡಿಸುತ್ತೀಯಾ? ಎಲ್ಲಿದ್ದೀಯಾಪ್ಪಾ ಬಾಲಕೃಷ್ಣ. ಬಾಲಕೃಷ್ಣನ್ನ ರಾಜ್ಯಪಾಲ ಮಾಡುತ್ತಾರೆ, ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾನೆ ದೂರಿದರು.

ಇದನ್ನು ದುರಂತ ಅನ್ನದೆ ವಿಧಿಯಿಲ್ಲ. ನರೇಂದ್ರ ಮೋದಿ ದೇಶದ ಪ್ರಧಾನಿ ಅನ್ನುವುದನ್ನು ಯಾರೊಬ್ಬರೂ ಮರೆಯುವಂತಿಲ್ಲ.ರಾಜಕೀಯವಾಗಿ ನಿಮಗೆ ಪ್ರಧಾನಿಯವರ ಮೇಲೆ ಕೋಪವಿರಬಹುದು. ಒಬ್ಬ ಸಿಎಂ ಆಗಿರುವವರು ರಾಜ್ಯದ ಜನತೆಗೆ ಮೇಲ್ಪಂಕ್ತಿ ಹಾಕಿಕೊಡಬೇಕು. ನಾಡಿನ ದೊರೆ ಅನ್ನಿಸಿಕೊಂಡವರು ಮಾದರಿಯಾಗಿರಬೇಕು. ಆದರ್ಶವಾಗಿರಬೇಕು. ಅದನ್ನು ಬಿಟ್ಟು ದೇಶದ ಪ್ರಧಾನಿಗೆ ಗೌರವ ಕೊಡಲ್ಲ ಅಂದ ಮೇಲೆ ನಿಮ್ಮಿಂದ ರಾಜ್ಯದ ಪ್ರಜೆಗಳು ಕಲಿಯುವುದೇನಿದೆ.

ಇಂದು ಪ್ರಧಾನಿಯನ್ನು ಕುಮಾರಸ್ವಾಮಿ ಏಕವಚನದಲ್ಲೇ ಜಾಡಿಸಿದರು. ನಾಳೆ ಮುಖ್ಯಮಂತ್ರಿಗಳನ್ನು, ಸಂಪುಟದ ಮಂತ್ರಿಗಳನ್ನು ಇತರರು ಏಕವಚನದಲ್ಲೇ ಟೀಕಿಸುತ್ತಾರೆ. ಅಲ್ಲಿಗೆ ನಾವು ಎಲ್ಲಿಗೆ ಹೋಗಿ ತಲುಪುತ್ತೇವೆ ಯೋಚಿಸಿ. ಮತ್ತೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅನ್ನುವುದು ಸುಳ್ಳಲ್ಲ.

ಹಾಗಾದ್ರೆ ಕುಮಾರಸ್ವಾಮಿಯವರಿಗೆ ಮೋದಿಯವರ ಮೇಲೆ ಸಿಟ್ಯಾಕೆ ಗೊತ್ತಾ…. ಅದಕ್ಕೆ ಕಾರಣ ಇಲ್ಲಿದೆ.

ಗುತ್ತಿಗೆದಾರರ ಮೇಲೆ ದಾಳಿ ಮಾಡಿದ್ರೆ ಸಿಎಂಗ್ಯಾಕೆ ಉರಿ : ಚುನಾವಣಾ ಆಯೋಗದ ಕದ ತಟ್ಟಿದ IT

ಅಂಬರೀಷಣ್ಣನಿಗೆ ಇರುವುದು ಒಬ್ಬರೇ ಹೆಂಡ್ತಿ…


ಅಂಬರೀಷಣ್ಣನಿಗೆ ಇರುವುದು ಒಬ್ಬರೇ ಹೆಂಡ್ತಿ. ಎಷ್ಟು ಜನ ಸುಮಲತಾ ನಿಂತರೂ ಜನರಿಗೆ ಗೊಂದಲ ಉಂಟಾಗುವುದಿಲ್ಲ ಎಂದು ನಟ ಯಶ್ ಹೇಳಿದ್ದಾರೆ.

ಮದ್ದೂರು ತಾಲೂಕಿನ ಅಂಬರಹಳ್ಳಿ ಗ್ರಾಮದಲ್ಲಿ ಸುಮಲತಾ ಪರ ಪ್ರಚಾರ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಮಲತಾ ಬಗ್ಗೆ ಜನರಿಗೆ ಗೊತ್ತಿದೆ. ಯಾವುದೇ ಗೊಂದಲಕ್ಕೆ ಒಳಗಾಗದೇ ಮತ ಹಾಕುತ್ತಾರೆ.

ಕೆಲವರು ಜನರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚಿಸುವುದು ಬಿಟ್ಟು, ಬೇರೆ ವಿಷಯಗಳ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಮಲತಾ ಅವರು ಸುಮ್ಮನೆ ಹಿಂಗೆ ಬಂದು ಹಿಂಗೆ ಹೋಗುವವರು ಅಲ್ಲ. ಬಹಳಷ್ಟು ದಿನ ಉಳಿಯುತ್ತಾರೆ. ಇಲ್ಲಿ ಕೆಲಸಗಳನ್ನು ಮಾಡುತ್ತಾರೆ. ಜನರ ಪ್ರೀತಿ ಗಳಿಸೋದಕ್ಕೆ ಅಂತಾನೇ ಅವರು ಬಂದಿದ್ದಾರೆ. ಅಮೆರಿಕದಂತೆ ಇಲ್ಲಿಯೂ ಅಭ್ಯರ್ಥಿಗಳಿಬ್ಬರನ್ನು ನಿಲ್ಲಿಸಿ ಒಂದು ವೇದಿಕೆ ಕ್ರಿಯೇಟ್ ಮಾಡಿ. ಆವಾಗ ಯಾರು ಏನೇನು ಯೋಜನೆಗಳನ್ನಿಟ್ಟುಕೊಂಡಿದ್ದಾರೆ. ಯಾರು ಎಷ್ಟು ಯೋಜನೆಗಳನ್ನು ಇಟ್ಟುಕೊಂಡು ಅದರ ಬಗ್ಗೆ ಆಸಕ್ತಿ, ಶಕ್ತಿ, ಜ್ಞಾನ ಇದೆ ಎಂಬುದು ಗೊತ್ತಾಗುತ್ತೆ ಎಂದು ಸಲಹೆ ನೀಡಿದರು.