Advertisements

7 ದೆವ್ವಗಳನ್ನು ಬಂಧಿಸಿದ ಯಶವಂತಪುರ ಪೊಲೀಸರು…!

ಅಯೋಧ್ಯೆ ತೀರ್ಪು, ಈದ್ ಮಿಲಾದ್ ಹೀಗೆ ಸಾಲು ಸಾಲು ಕಾರಣಗಳಿಂದ ಭದ್ರತೆ ಕಾರ್ಯದಲ್ಲಿ ನಿರತರಾಗಿದ್ದ ಬೆಂಗಳೂರು ಪೊಲೀಸರು ಸುಸ್ತಾಗಿ ಹೋಗಿದ್ದರು. ಅಬ್ಬಾ ಎಲ್ಲವೂ ಶಾಂತಿಯುತವಾಗಿ ಮುಗಿಯಿತು ಎಂದು ಖಾಕಿಗಳು ನಿಟ್ಟುಸಿರು ಬಿಡುವ ಹೊತ್ತಿಗೆ ಬಂದ ಕರೆ ಬೆಚ್ಚಿ ಬೇಳಿಸಿತ್ತು.

ಯಶವಂತಪುರ ಪ್ರದೇಶದಲ್ಲಿ ದೆವ್ವಗಳು ಓಡಾಡುತ್ತಿದೆ. ಜನರಿಗೆ ಬೆದರಿಸುತ್ತಿದೆ ಅನ್ನುವ ಸುದ್ದಿ ಕೇಳಿದ ಪೊಲೀಸರು ಇದೇನಪ್ಪ ಹೊಸ ಕಾಟ ಅಂದುಕೊಂಡಿದ್ದಾರೆ. ವಿವರಿಸಿ ಕೇಳಿದ್ರೆ ಕೆಲ ಯುವಕರು ದೆವ್ವದ ಹೆಸರು ಹೇಳಿ ವಾಹನ ಸವಾರರು ಮತ್ತು ಸಾರ್ವಜನಿಕರನ್ನು ನಡು ರಾತ್ರಿಯಲ್ಲಿ ಹೆದರಿಸುತ್ತಿದ್ದಾರೆ ಅನ್ನುವುದು ಗೊತ್ತಾಗಿದೆ.

ತಕ್ಷಣ ಸ್ಥಳೀಯ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೆ ಬಿಳಿ ಬಟ್ಟೆಗೆ ರಕ್ತದ ಬಣ್ಣ ಬಳಿದುಕೊಂಡಿದ್ದ ಯುವಕರು ದೆವ್ವದ ವೇಷ ಧರಿಸಿ ಜನರನ್ನು ಹೆದರಿಸುತ್ತಿದ್ದರು. ಹೀಗಾಗಿ ಯುವಕರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ರೆ ಇದೊಂದು ಪ್ರಾಂಕ್ ಮಾಡುವ ಆಟ ಎಂದು ಗೊತ್ತಾಗಿದೆ. ಯೂ ಟ್ಯೂಬ್ ಮತ್ತು ಟಿಕ್ ಟಾಕ್ ಸಲುವಾಗಿ ನಡುರಾತ್ರಿಯಲ್ಲಿ ಇವರು ಹೀಗೆ ಮಾಡುತ್ತಿದ್ದರು ಎಂದು ವಿವರಿಸಿದ್ದಾರೆ.

ಹಾಗಂತ ಜನರೊಂದಿಗೆ ಚೆಲ್ಲಾಟವಾಡೋದು ತಪ್ಪು ತಾನೇ ಎಂದು ಯುವಕರಿಗೆ ಬುದ್ದಿ ಮಾತು ಹೇಳಿರುವ ಪೊಲೀಸರು ಯುವಕರ ಭವಿಷ್ಯ ದೃಷ್ಟಿಯಿಂದ ಪೋಷಕರನ್ನು ಕರೆಸಿ ಠಾಣಾ ಬೇಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

Advertisements

ಈ ವಾರ ಮಹಾಮನೆಯಿಂದ ಹೊರ ಬಿದ್ದರಲ್ಲ ಬುದ್ದಿಜೀವಿ…!

ಸುದೀಪ್ ನಡೆಸಿಕೊಡುತ್ತಿರುವ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ರಿಂದ ಈಗಾಗಲೇ ಮೊದಲ ವಾರ ಗುರುಲಿಂಗ ಸ್ವಾಮಿ ಹೊರ ಬಂದಿದ್ದಾರೆ. ಎರಡನೇ ವಾರ ಜಂಭದ ಕೋಳಿ, ಎಡವಟ್ಟ್ ರಾಣಿ ಚೈತ್ರಾ ವಾಸುದೇವನ್ ಹೊರ ಬಂದಿದ್ದರು.ಮೂರನೇ ವಾರದಲ್ಲಿ ದುನಿಯಾ ರಶ್ಮಿ ಮನೆಯಿಂದ ಹೊರ ಬಿದ್ದಿದ್ದರು.

ಇದೀಗ ನಾಲ್ಕನೇ ವಾರದಲ್ಲಿ ಚೈತ್ರಾ ಕೊಟ್ಟೂರು ಮನೆಯಿಂದ ಹೊರ ಬಿದ್ದಿದ್ದಾರೆ. ಮೈ ಮೇಲೆ ಎಳೆದುಕೊಂಡ ವಿವಾದವೊಂದು ಅವರನ್ನು ಮನೆಯಿಂದ ಹೊರ ಬರುವಂತೆ ಮಾಡಿದ್ದು ಸ್ಪಷ್ಟವಾಗಿದೆ. ದಲಿತ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿರುವ ಚೈತ್ರಾ ಕ್ಷಮೆ ಕೇಳಿದ ನಂತರವೂ ಪ್ರತಿಭಟನೆ ಮುಂದುವರಿದಿದೆ.

ಮಾತ್ರವಲ್ಲದೆ ಚೈತ್ರಾ ಅವರು ಬಿಗ್ ಬಾಸ್ ಮನೆಯಲ್ಲಿ ರಂಜಿಸುವಲ್ಲಿ ವಿಫಲರಾಗಿದ್ದಾರೆ. ಒಂದಿಷ್ಟು ದಿನ ಶೈನ್ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡರೂ ಅದು ತುಂಬಾ ದಿನ ನಡೆಯಲಿಲ್ಲ. ಹೀಗಾಗಿ ಜನ ಮನರಂಜನೆ ಇರದ ಕ್ಯಾರೆಕ್ಟರ್ ಅಲ್ಯಾಕೆ ಎಂದು ಹುಟ್ಟು ಹಬ್ಬದ ಮರು ದಿನವೇ ಶಾಕಿಂಗ್ ಗಿಫ್ಟ್ ಕೊಟ್ಟಿದ್ದಾರೆ.

ಇನ್ನು ಳಿದಂತೆ ಪ್ರಿಯಾಂಕ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ಚಂದನ್ ಆಚಾರ್, ರಾಜು ತಾಳಿಕೋಟೆ ಸೇಫ್ ಆಗಿದ್ದಾರೆ.

ಹಾಗೇ ನೋಡಿದರೆ ರಾಜು ತಾಳಿಕೋಟೆ ಕೂಡಾ ಬಿಗ್ ಬಾಸ್ ಮನೆಯಲ್ಲಿರುವುದು ವ್ಯರ್ಥವೇ ಸರಿ. ಇನ್ನು ಸುಜಾತ ಕೂಡಾ ಯಾವುದೇ ಟಾಸ್ಕ್ ಗಳನ್ನು ಮಾಡದ ಸ್ಥಿತಿಯಲ್ಲಿದ್ದಾರೆ. ಕುಂಟುತ್ತಾ ಸಾಗುವುದನ್ನು ನೋಡಲು ನಾವು ಕೇಬಲ್ ಬಿಲ್ ಕಟ್ಟಿದಂತಾಗಿದೆ. ಹೀಗಾಗಿ ಮುಂದಿನ ವಾರ ಈ ಬಗ್ಗೆ ವೀಕ್ಷಕರು ಸೂಕ್ತ ನಿರ್ಧಾರ ಕೈಗೊಳ್ಳುವುದು ಖಚಿತ.

ಅಯೋಧ್ಯೆ ತೀರ್ಪಿಗಿದೆ ಕರಾವಳಿ ಜೊತೆಗೆ ನಂಟು…!

ಐತಿಹಾಸಿಕ ಅಯೋಧ್ಯೆ ತೀರ್ಪು ಹೊರ ಬಿದ್ದಿದೆ. ಇಡೀ ರಾಷ್ಟ್ರವೇ ಸರ್ವ ಸಮ್ಮತವಾಗಿ ತೀರ್ಪನ್ನು ಒಪ್ಪಿಕೊಂಡಿದ್ದು, ದೇಶದ ಪರಮೋಚ್ಛ ನ್ಯಾಯಾಲಯ ನೀಡಿರುವು ತೀರ್ಪನ್ನು ಭಾರತೀಯರು ತಲೆ ಬಾಗಿ ಗೌರವಿಸಿದ್ದಾರೆ.

ಈ ನಡುವೆ ಈ ತೀರ್ಪಿಗೂ ಕರಾವಳಿಗೂ ನಂಟಿದೆ ಅನ್ನುವ ಅಂಶ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬ್ರಿ ಮಸೀದಿ ಪರ ವಾದ ನಡೆಸಿದ ವಕೀಲರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಕೂಡಾ ಸೇರಿದ್ದಾರೆ.

ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ದಿ. ಇಸುಬು ಬ್ಯಾರಿ ಹಾಗೂ ಆಮಿನಮ್ಮ ದಂಪತಿಗಳ ಪುತ್ರ ಅಬ್ದುಲ್ ರಹಿಮಾನ್‌. ಇವರು ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದರು. ಆ ಬಳಿಕ ಸರ್ವೋಚ್ಛ ನ್ಯಾಯಾಲಯದ ವಕೀಲರಾಗಿ ಸೇವೆ ಅರಂಭಿಸಿದ್ದರು.

ಬಾಬರಿ ಮಸೀದಿ ಪರ ಹಕ್ಕು ಪ್ರತಿಪಾದಿಸಿದ್ದ ಸುನ್ನಿ ವಕ್ಫ್ ಮಂಡಳಿ ತನ್ನ ಪರ ವಾದ ಮಾಡುವ ಸಲುವಾಗಿ ಘಟಾನುಘಟಿ ವಕೀಲರ ತಂಡವನ್ನು ಆಯ್ಕೆಮಾಡಿತ್ತು. ಈ ಪೈಕಿ ಉಪ್ಪಿನಂಗಡಿಯ ಅಬ್ದುಲ್‌ ರಹಿಮಾನ್ ಕೂಡಾ ಸೇರಿದ್ದರು.

ಪಂಚಪೀಠದ ಸದಸ್ಯರಲ್ಲಿ ಒಬ್ಬರಾಗಿರುವ ನ್ಯಾ. ಅಬ್ದುಲ್ ನಜೀರ್ ಕರಾವಳಿಯವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಸಮೀಪದ ಬೆಳುವಾಯಿ ಅವರ ಹುಟ್ಟೂರು. ಜ. 5, 1958ರಲ್ಲಿ ಹುಟ್ಟಿದ ಇವರು ಪ್ರಾಥಮಿಕ ಶಿಕ್ಷಣ ಮುಗಿಸಿ ಆ ಬಳಿಕ ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು. ಆ ಬಳಿಕ ನಂತರ ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಅಭ್ಯಾಸಿಸಿದ್ದರು.

1983ರಲ್ಲಿ ಅಬ್ದುಲ್ ನಜೀರ್ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ತಮ್ಮ ವಕೀಲಗಾರಿಕೆಯ ಅಭ್ಯಾಸ ಆರಂಭಿಸಿದರು. 2003ರವರೆಗೆ ಕರ್ನಾಟಕದ ಹೈಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 2003ರಲ್ಲಿ ಹೈಕೋರ್ಟ್ ನ ನ್ಯಾಯಾಧೀಶರಾಗಿ ಆಯ್ಕೆಯಾದ ಇವರು 2017ರಲ್ಲಿ ಸುಪ್ರೀಂ ಕೋರ್ಟ್ ಜಡ್ಜ್ ಆಗಿ ನೇಮಕವಾಗಿದ್ದರು.

ಅಂದ ಹಾಗೇ ಐತಿಹಾಸಿಕ ತ್ರಿವಳಿ ತಲಾಖ್ ಪ್ರಕರಣದ ಪಂಚ ಸದಸ್ಯ ಪೀಠದಲ್ಲೂ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.

ವಿಡಿಯೋ: ಮೆಟ್ರೋ ರೈಲಿನಲ್ಲೇ ಕಿಸ್ಸಿಂಗು!

ಆ ಪ್ರೇಮಿಗಳಿಗೆ ಜಗತ್ತೇ ಕಾಣದಾಗಿತ್ತು! ಮೆಟ್ರೋ ರೈಲಿನಲ್ಲಿ ಕುಳಿತಿದ್ದ ಆ ಜೋಡಿ, ಚುಂಬನದಲ್ಲೇ ಮುಳುಗಿಹೋಗಿದ್ವು.

ಪಕ್ಕದಲ್ಲೇ ಪ್ರಯಾಣಿಕರಿದ್ದರೂ, ಪ್ರಯಾಣಿಕರಿಗೆ ಮುಜುಗರ ಆಗುತ್ತಿದ್ದರೂ ಆ ಜೋಡಿ ಹಕ್ಕಿ ತಲೆಕೆಡಿಸಿಕೊಳ್ಳಲೇ ಇಲ್ಲ.

ಎದುರು ಕೂತಿದ್ದ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿಕೊಳ್ತಿದ್ರೂ ಆ ಜೋಡಿಗೆ ಗೊತ್ತಾಗಿರಲಿಲ್ಲ. ಮೆಟ್ರೋ ರೈಲಿನ ಈ ಪ್ರೇಮ ಕಾವ್ಯ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ನಡುವೆ ಇವರ ವರ್ತನೆಗೆ ಶ್ಲಾಘನೆ ಮತ್ತು ಖಂಡನೆ ಎರಡೂ ಬಂದಿದೆ. ಒಬ್ಬರಂತು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡುವುದು ತಪ್ಪಲ್ಲ ಅಂದ ಮೇಲೆ ಮುತ್ತುಕೊಡುವುದರಲ್ಲಿ ತಪ್ಪೇನಿದೆ. ಮೂತ್ರ ಮಾಡುವಷ್ಟು ದೊಡ್ಡ ತಪ್ಪು ಮತ್ತು ಮುಜುಗರ ಮುತ್ತು ಕೊಡುವುದಲ್ಲ ಅಂದಿದ್ದಾರೆ.

ಜಗನ್ ನಿವಾಸದ ಕಿಟಕಿ ಬಾಗಿಲಿಗೆ ಬೇಕಂತೆ 73 ಲಕ್ಷ….!

ಗುಂಟೂರಿನಲ್ಲಿರುವ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ನಿವಾಸದ ಕೇವಲ ಕಿಟಕಿ ಮತ್ತು ಬಾಗಿಲಿನ ವಿನ್ಯಾಸಕ್ಕೆ ಸರ್ಕಾರ 73 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದಯಂತೆ. ಈ ಕಾರ್ಯ ಮುಗಿಯುವಷ್ಟು ಹೊತ್ತಿಗೆ ಇದು ಕೋಟಿಯ ಗಡಿ ದಾಟಿದರೂ ಆಚ್ಚರಿ ಇಲ್ಲ. ಆದೇಶ ಹೊರಡಿಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಟ್ವಿಟರ್​ ಖಾತೆಯಲ್ಲಿ ಸರ್ಕಾರದ ಆದೇಶದ ಪ್ರತಿಯನ್ನು ಪೋಸ್ಟ್​ ಮಾಡಿ ಟೀಕಿಸಿದ್ದಾರೆ. ಸಿಎಂ ನಿವಾಸಕ್ಕೆ ಬಾಗಿಲು ಮತ್ತು ಕಿಟಕಿಯನ್ನು ಅಳವಡಿಸಲು ಸರ್ಕಾರ 73 ಲಕ್ಷ ರೂ. ಅನುದಾನ ನೀಡಿದೆ. ಈ ದುಬಾರಿ ಮೊತ್ತವು ರಾಜ್ಯದ ಖಜಾನೆ ಮೇಲೆಯೇ ಬೀಳಲಿದೆ ಸಿಎಂ ಜಗನ್ ಮನೆಯ ಕಿಟಕಿ ಮತ್ತು ಬಾಗಿಲು ವಿನ್ಯಾಸ ಯೋಜನೆ​ ರೂಪಿಸಿರುವುದು ದುರದೃಷ್ಟಕರ ಸಂಗತಿ ಎಂದು ನಾಯ್ಡು ಕಿಡಿಕಾರಿದ್ದಾರೆ.

ಇನ್ನು ಜಗನ್​ ದುಂದುವೆಚ್ಚ ಮಾಡುತ್ತಿರುವುದು ಇದೇ ಮೊದಲೇನಲ್ಲ. ಸಿಎಂ ಆದ ತಕ್ಷಣವೇ ತಮ್ಮ ಮನೆಯ ಮುಂಭಾಗದ ರಸ್ತೆಗೆ 5 ಕೋಟಿ ರೂ. ಖರ್ಚು ಮಾಡಿದ್ದರು. ತಮ್ಮ ಮನೆಯ ಆವರಣದಲ್ಲಿ ಹೆಲಿಪ್ಯಾಡ್​ ನಿರ್ಮಾಣ ಮತ್ತು ಭದ್ರತಾ ವ್ಯವಸ್ಥೆಗಾಗಿ 1.89 ಕೋಟಿ ರೂ. ಸುರಿದಿದ್ದರು ಎನ್ನಲಾಗಿದೆ.

ರಾಜಕಾರಣದ ಚಕ್ರ ತಿರುಗಿಸುತ್ತಾರಂತೆ ಡಿಕೆಶಿ…!

ರಾಜಕಾರಣದ ಚಕ್ರವನ್ನು ಹೇಗೆ ತಿರುಗಿಸಬೇಕೆಂಬುದು ನನಗೂ ಗೊತ್ತಿದೆ. ಅಂಥ ಸಮಯ ಬರಲಿದ್ದು, ಆಗ ಚಕ್ರ ತಿರುಗಿಸೋಣ. ಯಾರೂ ಶಾಶ್ವತ ಅಲ್ಲ’ ಎಂದು ಶಾಸಕ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಗುರುವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಸಿಗಬೇಕಿದ್ದ ವೈದ್ಯಕೀಯ ಕಾಲೇಜನ್ನೇ ಕಿತ್ತುಕೊಂಡಿದ್ದಾರೆ. ಇನ್ನು ಇತರ ಶಾಸಕರ ಅನುದಾನ ಕಿತ್ತುಕೊಂಡಿರುವುದು ಯಾವ ಲೆಕ್ಕ?’ ಎಂದರು.

ಸಿದ್ದಗಂಗಾ ಶ್ರೀಗಳ ಹುಟ್ಟೂರಲ್ಲಿ ತಲೆ ಎತ್ತಲಿದೆ 111 ಅಡಿ ಎತ್ತರದ ಮೂರ್ತಿ

ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟೂರಾದ ವೀರಾಪುರದ ಗ್ರಾಮವನ್ನು ಪಾರಂಪರಿಕ ಹಾಗೂ ವಿಶ್ವದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈಗಾಗಲೇ ₹ 25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶ್ರೀಗಳು 111 ವರ್ಷ ಜೀವಿಸಿ ಸಮಾಜದ ಒಳಿತಿಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು. ಅದರ ಸವಿನೆನಪಿಗಾಗಿ ಇಲ್ಲಿ ಶ್ರೀಗಳ 111 ಅಡಿ ಎತ್ತರದ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗುತ್ತಿದೆ. ಇದರೊಟ್ಟಿಗೆ ಗ್ರಾಮದಲ್ಲಿ ಇನ್ನೂ ಹತ್ತು ಹಲವು ಯೋಜನೆಗಳಿಗೆ ಇದೇ ಸಂದರ್ಭ ಚಾಲನೆ ದೊರೆಯಲಿದೆ.

ಶಿವಗಂಗೆ ಬೆಟ್ಟವು ಶಿವಕುಮಾರ ಶ್ರೀಗಳ ನೆಚ್ಚಿನ ತಾಣ. ಅದಕ್ಕೆ ಅಭಿಮುಖವಾಗಿಯೇ ಅವರು ತಪಸ್ಸು ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಹೀಗಾಗಿ ಬೆಟ್ಟಕ್ಕೆ ಅಭಿಮುಖವಾಗಿಯೇ ಶ್ರೀಗಳ ಪ್ರತಿಮೆ ತಲೆ ಎತ್ತಲಿದೆ. ಇಲ್ಲಿ ನಿರ್ಮಾಣ ಆಗಲಿರುವ 111 ಅಡಿ ಎತ್ತರದ ಪ್ರತಿಮೆಯು ರಾಜ್ಯದಲ್ಲಿಯೇ ಎರಡನೇ ಅತಿ ಎತ್ತರದ ಪ್ರತಿಮೆ ಆಗಲಿದೆ. ಗದಗದ ಭೀಷ್ಮ ಕೆರೆ ಅಂಗಳದಲ್ಲಿ ಬಸವೇಶ್ವರರ 116 ಅಡಿ ಎತ್ತರದ ಪ್ರತಿಮೆ ಈಗಾಗಲೇ ನಿರ್ಮಾಣ ಆಗಿದೆ.

ವೀರಾಪುರದಲ್ಲಿ ನಿರ್ಮಾಣ ಆಗಲಿರುವ ಪ್ರತಿಮೆಗೆ 30 ಅಡಿ ಎತ್ತರದ ಬಂಡೆಯಾಕಾರದ ತಳಪಾಯ ಕಟ್ಟಲಾಗುತ್ತದೆ. ಅದರ ಮೇಲೆ ಊರುಗೋಲು ಹಿಡಿದುಕೊಂಡಿರುವ ಕಾವಿದಾರಿ ಶ್ರೀಗಳ ಬೃಹತ್ ಪ್ರತಿಮೆ ಇರಲಿದೆ. ತಳಪಾಯದಲ್ಲಿ ಸಭಾಭವನ, ವಸ್ತು ಸಂಗ್ರಹಾಲಯ, ಧ್ಯಾನ ಕೊಠಡಿ ಇರಲಿವೆ.

ವಸ್ತು ಸಂಗ್ರಹಾಲಯದಲ್ಲಿ ಶ್ರೀಗಳ ಜೀವನವನ್ನು ತೋರಿಸುವ ಧ್ವನಿ ಬೆಳಕಿನ ಪ್ರಚಾರ ಇರಲಿದೆ. ಭಕ್ತರ ವಿಶ್ರಾಂತಿಗೆ ಆಸನಗಳು ಇರಲಿವೆ.

ಸಂಪೂರ್ಣವಾಗಿ ಕಾಂಕ್ರೀಟ್‌ ನಿರ್ಮಿತವಾಗಲಿರುವ ಪ್ರತಿಮೆಯು ಮಳೆ, ಬಿರುಗಾಳಿ, ಭೂಕಂಪನದಂತಹ ಪ್ರಕೃತಿ ವಿಕೋಪ ತಾಳಿಕೊಳ್ಳುವ ಶಕ್ತಿ ಹೊಂದಿದೆ. ಶ್ರೀಗಳ ಪ್ರತಿಮೆ ನಿರ್ಮಾಣ ಜವಾಬ್ದಾರಿಯನ್ನು ಪಿಎಸ್‍ಎಪಿ ಆರ್ಕಿಟೆಕ್ಟ್ ಕಂಪನಿಗೆ ನೀಡಲಾಗಿದೆ. ಈ ಸಂಸ್ಥೆಯು ಹಿಂದೆ ಗದಗದಲ್ಲಿ ಬಸವೇಶ್ವರರ ಪ್ರತಿಮೆ ಹಾಗೂ ಮಹದೇಶ್ವರ ಬೆಟ್ಟದಲ್ಲಿನ ಮಹದೇಶ್ವರ ಪ್ರತಿಮೆ ನಿರ್ಮಾಣ ಮಾಡಿದ ಅನುಭವ ಹೊಂದಿದೆ. ಎರಡೂವರೆ ವರ್ಷದ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ವೀರಾಪುರ ಗ್ರಾಮದಲ್ಲಿ ಶ್ರೀಗಳ ಪೂರ್ವಾಶ್ರಮದ ತಂದೆ ಮತ್ತು ತಾಯಿ ಸಮಾಧಿ ಇದ್ದು, ಇದರ ಬಳಿಯೇ ಶ್ರೀಗಳ ದೇವಾಲಯ ಸಹ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ಮತ್ತೆ 2 ದೇಗುಲ ತಲೆ ಎತ್ತಲಿವೆ.

ವೈದ್ಯರ ಪ್ರತಿಭಟನೆಗೆ ಬೆದರಿದ ಕರವೇ…ಪೊಲೀಸರ ಮುಂದೆ ಶರಣಾಗತಿಗೆ ನಿರ್ಧಾರ

ಮಿಂಟೋ ಆಸ್ಪತ್ರೆಯಲ್ಲಿ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ವೈದ್ಯರ ಮೇಲೆ ನಡೆಸಿದ್ದಾರೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ದೊಡ್ಡದೊಂದು ಟ್ವಿಸ್ಟ್ ಸಿಕ್ಕಿದೆ.

ಹಲ್ಲೆ ನಡೆಸಿದ ಅಶ್ವಿನಿ ಗೌಡ ಸೇರಿದಂತೆ ಕರವೇ ಕಾರ್ಯಕರ್ತರನ್ನು ಬಂಧಿಸಿ ಎಂದು ವೈದ್ಯರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಮ್ಮ ಬೇಡಿಕೆಗೆ ಪೊಲೀಸರು ಸಕಾರತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿರುವ ವೈದ್ಯರು ನಾಳೆ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.

ಮಿಂಟೋ ಆಸ್ಪತ್ರೆಯ ವಿವಾದ ರಾಜ್ಯಾದ್ಯಂತ ವ್ಯಾಪಿಸುತ್ತಿರುವುದನ್ನು ಗಮನಿಸಿದ ಕರವೇ ಮುಖಂಡ ನಾರಾಯಣ ಗೌಡ ಎಚ್ಚೆತ್ತುಕೊಂಡು ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಶರಣಾಗತಿ ಮಾಡುವುದಾಗಿ ಘೋಷಿಸಿರುವ ಅವರು ಶುಕ್ರವಾರ 11 ಗಂಟೆಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಶ್ವಿನಿ ಗೌಡ ಸೇರಿದಂತೆ ಎಲ್ಲರೂ ಶರಣಾಗಲಿದ್ದಾರೆ ಎಂದು ಘೋಷಿಸಿದ್ದಾರೆ. ಜೊತೆಗೆ ವೈದ್ಯರು ತಮ್ಮ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಲಿ ಎಂದು ಮನವಿ ಮಾಡಿದ್ದಾರೆ.

ನಾವು ವೈದ್ಯರ ಪ್ರತಿಭಟನೆಗೆ ಹೆದರಿ ಶರಣಾಗತಿಯಾಗುತ್ತಿಲ್ಲ. ಒಪಿಡಿ ಬಂದ್ ಆದರೆ ಜನರಿಗೆ ತೊಂದರೆಯಾಗುತ್ತದೆ, ಬಡ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಶರಣಾಗತಿ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ಶರಣಾಗತಿಯೇನೋ ಒಳ್ಳೆಯ ನಿರ್ಧಾರ. ಆದರೆ ತಡರಾತ್ರಿ ಶರಣಾಗತಿ ನಿರ್ಧಾರ ಘೋಷಿಸಿದ್ರೆ ಹೇಗೆ. ಶುಕ್ರವಾರ 6 ಗಂಟೆಗೆಯಿಂದ ವೈದ್ಯರ ಪ್ರತಿಭಟನೆ ಪ್ರಾರಂಭವಾಗಲಿದೆ. ಆದರೆ ಬದಲಾಗಿ ಗುರುವಾರ ರಾತ್ರಿಯೇ ಎಲ್ಲರೂ ಪೊಲೀಸರು ಮುಂದೆ ಶರಣಾಗತಿಯಾಗಿದ್ರೆ ವೈದ್ಯರು ಕೂಡಾ ಪ್ರತಿಭಟನೆ ಹಿಂದಕ್ಕೆ ಪಡೆಯುತ್ತಿದ್ದರು. ಮೊದಲೇ ಪ್ರತಿಭಟನೆ ನಡೆಸುತ್ತಿರುವ ಪೊಲೀಸರು ಕರವೇ ಮಂದಿಯನ್ನು ನಂಬಲು ಸಿದ್ದವಿಲ್ಲ. ನಾಳೆ ಶರಣಾಗತಿಯಾದ ಮೇಲೆ ನಾವು ನಿರ್ಧಾರ ಕೈಗೊಳ್ಳುವುದು ವೈದ್ಯರು ಹೇಳಿದ್ರೆ, ಜನ ಸಂಕಷ್ಟದಿಂದ ಮುಕ್ತರಾಗುತ್ತಾರೆಯೇ..?

ಬಿಗ್ ಬಾಸ್ ಮನೆಯಲ್ಲಿ ಲಿಪ್ ಲಾಕ್ ಮಾಡಿಕೊಂಡ ದೀಪಿಕಾ ಮತ್ತು ಭೂಮಿ

ಈ ಸುದ್ದಿಯನ್ನು ಓದಿ ಅಯ್ಯೋ ಹೀಗಾ ಎಂದು ಗಾಬರಿಯಾಗಬೇಡಿ. ಯಾಕಂದ್ರೆ ಈ ಸುದ್ದಿ ನಿಜ ಅನ್ನುವುದು ಗೊತ್ತಾಗಬೇಕಾದ್ರೆ ನೀವು ವೂಟ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

ವಿಷಯ ಏನು ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ನಟಿಯರಾದ ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ದೀಪಿಕಾ ಹಾಗೂ ಭೂಮಿ ಬೆಳಗ್ಗೆ ಎದ್ದ ತಕ್ಷಣ ಪರಸ್ಪರ ಲಿಪ್ ಕಿಸ್ ಮಾಡಿಕೊಳ್ಳುತ್ತಿದ್ದರು. ಇದರ ದರ್ಶನವಾಗಿದ್ದು ಆಗಷ್ಟೇ ಕಣ್ಣುಜ್ಜಿಕೊಂಡು ಬರುತ್ತಿದ್ದ ವಾಸುಕಿ ಅವರಿಗೆ. ಹುಡುಗಿಯರಿಬ್ಬರ ಚುಂಬನ ದೃಶ್ಯ ನೋಡಿದ ವಾಸುಕಿಗೆ ಬೆಳ್ಳಂ ಬೆಳಗ್ಗೆ ಮಾಡುವುದೇನು ಎಂದು ಗೊತ್ತಾಗದೆ ಶಾಕ್ ಆಗಿದ್ದಾರೆ.  

ಇನ್ನು ತಾನು ಕಂಡ ದೃಶ್ಯದ ಕುರಿತಂತೆ ವಾಸುಕಿ, ಹರೀಶ್ ಅವರ ಬಳಿ ಹೋಗಿ, ಇವರಿಬ್ಬರು ಸರಿಯಿಲ್ಲ. ನಾನು ಬೆಳಗ್ಗೆ ನಿದ್ದೆ ಕಣ್ಣಿನಲ್ಲಿ ನಿಂತಿದ್ದೆ. ಆ ವೇಳೆ ಅವರಿಬ್ಬರು ಲಿಪ್ ಲಾಕ್ ಮಾಡುತ್ತಿದ್ದಾರೆ ಅಂದಿದ್ದಾರೆ.

ಆಗ ಅಯ್ಯೋ ನನಗೆ ಮಿಸ್ ಆಯ್ತಲ್ಲ ಅನ್ನುವಂತೆ ನೋಡಿದ. ಹರೀಶ್ ಹೌದಾ ಅಂದಿದ್ದಾರೆ. ಆಗ ಅಲ್ಲೇ ಇದ್ದ ದೀಪಿಕಾ ನಿದ್ದೆ ಕಣ್ಣಿನಲ್ಲಿ ಎನೋ ನೋಡಿದ್ದಾರೆ ಅನ್ನವಷ್ಟರಲ್ಲಿ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿ ಈಗ ಕೊಡ್ತೀವಿ ನೋಡಿ ಎಂದು ಹರೀಶ್ ಮತ್ತು ವಾಸುಕಿ ಮುಂದೆಯೇ ಚುಂಬಿಸಿಕೊಂಡಿದ್ದಾರೆ.

ಅಂದ ಹಾಗೇ ದೀಪಿಕಾ ಹಾಗೂ ಭೂಮಿ ಲಿಪ್ ಲಾಕ್ ಮಾಡಿದ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿಲ್ಲ. ಈ ದೃಶ್ಯವನ್ನು ವೂಟ್‌ನಲ್ಲಿ ಮಾತ್ರ ನೋಡಬಹುದಾಗಿದೆ.

ಸಾಸ್ ಜೊತೆ ಟಿಕ್ ಟಾಕ್ ಮಾಡಲು ಹೋದವನಿಗೆ ಬಿದ್ದಿದ್ಯಾಕೆ ಧರ್ಮದೇಟು…?

ಟಿಕ್ ಟಾಕ್ ಅನ್ನುವ ಹುಚ್ಚು ಯುವ ಜನತೆಯನ್ನು ದಾರಿ ತಪ್ಪಿಸಿದೆ. ಕೆಲವರು ಇದನ್ನು ತಮ್ಮ ಪ್ರತಿಭೆಯ ಅನಾವರಣಕ್ಕೆ ಬಳಸಿಕೊಂಡರೆ, ಮತ್ತೆ ಕೆಲವರಿಗೆ ಇದು ಗೀಳಾಗಿ ಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮುಂದೊಂದು ದಿನ ಇದು ಮಾನಸಿಕ ಸಮಸ್ಯೆಯನ್ನು ತಂದೊಟ್ಟರು ಅಚ್ಚರಿ ಇಲ್ಲ.

ಇದೀಗ ತಾಯಿಯ ಭಾವನೆ ಜೊತೆ ಆಟವಾಡಲು ಹೋದ ಟಿಕ್ ಟಾಕ್ ಪ್ರಿಯನೊಬ್ಬನಿಗೆ ಧರ್ಮದೇಟು ಬಿದ್ದ ವಿಡಿಯೋ ವೈರಲ್ ಆಗುತ್ತಿದೆ.

ನೆಲದ ಮೇಲೆ ಕೆಂಪು ಸಾಸ್ ಚೆಲ್ಲಿ,  ತಾನೂ ಮಲಗಿ ರಕ್ತ ಚೆಲ್ಲಿದಂತೆ ನಾಟಕವಾಡಲು ಯುವಕ ಹೋಗಿದ್ದಾನೆ. ಮನೆಯವರನ್ನು ಗಾಬರಿ ಪಡಿಸಲು ಗೊಬ್ಬೆ ಹೊಡೆದಿದ್ದಾನೆ. ಈ ವೇಳೆ ಗಾಬರಿಗೊಂಡ ಮನೆಯವರು ಓಡಿ ಬಂದಿದ್ದಾರೆ. ಮಗನ ಪರಿಸ್ಥಿತಿ ಕಂಡು ತಾಯಿ ಆತಂಕಗೊಂಡಿದ್ದಾರೆ. ಮನೆಯವರು ಗಾಬರಿಗೊಳ್ಳುತ್ತಿದ್ದಂತೆ ಯುವಕ ನಕ್ಕು ಎದ್ದು ಕುಳಿತಿದ್ದಾನೆ.

ಇದರಿಂದ ಆಕ್ರೋಶಗೊಂಡ ತಾಯಿ ಮಗನಿಗೆ ಹೊಡೆದಿದ್ದಾರೆ.