ಸಚಿವ ಡಾ.ಕೆ. ಸುಧಾಕರ್ ಮನೆಯ ನಾಲ್ವರು ಸದಸ್ಯರಿಗೆ ಕೊರೋನಾ ಸೋಂಕು

ಬೆಂಗಳೂರು : ಸೂರ್ಯಗ್ರಹಣದ ಬೆನ್ನಲ್ಲೇ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಶಾಕ್ ಸುದ್ದಿ ಬಂದಿದೆ.

ನಿನ್ನೆಯಷ್ಚೇ ಸುಧಾಕರ್ ಮನೆಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ತಗುಲಿದೆ ಎಂದು ಸುದ್ದಿಯಾಗಿತ್ತು. ಇದಾದ ಬಳಿಕ ಅವರ ತಂದೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು.

ಇಂದು ಬೆಳಗ್ಗೆ ಡಾ. ಕೆ. ಸುಧಾಕರ್ ಅವರ ಪತ್ನಿ ಮತ್ತು ಮಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದನ್ನು ಸಚಿವರೇ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಶುಭ ಪೂಂಜಾಗೆ ಕಂಕಣ ಭಾಗ್ಯ – ಜಯಕರ್ನಾಟಕ ಸಂಘಟನೆ ನಾಯಕನ ಕೈ ಹಿಡಿಯಲಿರುವ ನಟಿ

ಬೆಂಗಳೂರು : ನಟಿ ಶುಭ ಪೂಂಜಾ ಅವರು ಗೃಹಸ್ಥಾಶ್ರಮ ಪ್ರವೇಶಿಸಲು ಸಜ್ಜಾಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಶುಭ ಪೂಂಜಾ ಸುಮಂತ್ ಮಹಾಬಲ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು ಒಂದು ವರ್ಷದ ಹಿಂದೆ ಇವರಿಬ್ಬರ ಪರಿಚಯವಾಗಿತ್ತು. ಬಳಿಕ ಶುಭ ಅವರ ತಾಯಿ ಮಾತನಾಡಿ ಮದುವೆಯನ್ನು ನಿಗದಿಗೊಳಿಸಿದ್ದಾರೆ.

ಸುಮಂತ್ ಹಾಗೂ ಶುಭ ಮಂಗಳೂರಿನವರಾಗಿರುವ ಕಾರಣದಿಂದ ಮದುವೆ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಲಿದೆ. ಇನ್ನುಳಿದಂತೆ ಇಬ್ಬರೂ ಬೆಂಗಳೂರಿನಲ್ಲೇ ಹೆಚ್ಚು ಆತ್ಮೀಯರನ್ನು ಹೊಂದಿರುವ ಕಾರಣ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ.

ಸುಮಂತ್ ಜಯ ಕರ್ನಾಟಕ ಸಂಘಟನೆಯೊಂದಿಗೆ ತೊಡಗಿಕೊಂಡಿದ್ದು, ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಶುಭ ಪೂಂಜಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

ಕರಾವಳಿ ಜಿಲ್ಲೆಯ ಶಾಲೆ ಒಂದು ವರ್ಷ ಬಂದ್


ದಕ್ಷಿಣ ಕನ್ನಡ : ಕೊರೋನಾ ಆತಂಕದ ನಡುವೆ ಶಾಲೆ ಪ್ರಾರಂಭಿಸುವ ಕುರಿತಂತೆ ಚಿಂತನೆಗಳು, ಚರ್ಚೆ ನಡೆಯುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ವರ್ಕಿಂಗ್ ದಂಪತಿಗಳು ಶಾಲೆ ಶುರುವಾದ್ರೆ ಅನುಕೂಲ ಅನ್ನುವ ವಾದವನ್ನೂ ಮಂಡಿಸಿದ್ದಾರೆ.

ಈ ನಡುವೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾಲಯದ ವಸತಿ ನಿಯ ವಿದ್ಯಾ ಸಂಸ್ಥೆಯನ್ನು ಒಂದು ವರ್ಷಗಳ ಕಾಲ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.

ಇಲ್ಲಿ LKG ಯಿಂದ SSLC ವರೆಗೆ ಆಂಗ್ಲಮಾಧ್ಯಮದಲ್ಲಿ ಉಚಿತ ಶಿಕ್ಷಣವನ್ನು ರಾಜ್ಯ ಪಠ್ಯ ಕ್ರಮದಂತೆ ನೀಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿದ್ದಾರೆ.

ಕೊರೋನಾ ಕಾರಣದಿಂದ ಶಾಲೆಗೆ ಬೀಗ ಹಾಕಿ ಮೂರು ತಿಂಗಳಾಗಿದೆ. ಪರಿಸ್ಥಿತಿ ಯಥಾ ಸ್ಥಿತಿಯಲ್ಲಿರುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಕ್ಷಣ ನೀಡುವುದು ಅಸಾಧ್ಯ. ಹೀಗಾಗಿ ತಾತ್ಕಾಲಿಕವಾಗಿ ಶಿಕ್ಷಣ ಸಂಸ್ಥೆ ಮುಚ್ಚಲು ತೀರ್ಮಾನಿಸಲಾಗಿದೆ.

ಮಕ್ಕಳ ಆರೋಗ್ಯ ದೃಷ್ಟಿ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿದ್ದು, ವಿದ್ಯಾಭ್ಯಾಸ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ ಕೊಡಲಾಗಿದೆ. ಉಳಿದವರು ಒಂದು ವರ್ಷ ಬೇರೆ ಶಾಲೆಯಲ್ಲಿ ಕಲಿತು ಮುಂದಿನ ವರ್ಷ ಇಲ್ಲಿಗೆ ಬಂದು ಸೇರಲು ಅವಕಾಶ ನೀಡಲಾಗಿದೆ.

ಯಡಿಯೂರಪ್ಪ ಅವರಿಗಾಗಿ ಕುರಿ, ಕೋಳಿ ಹರಕೆ ಕೊಟ್ಟ ಶಾಸಕ

ಚಿಕ್ಕಮಗಳೂರು : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಚೌಡೇಶ್ವರಿ ದೇವಿಗೆ ಹರಕೆ ಸಲ್ಲಿಸುವುದಾಗಿ ಎಂಪಿ ಕುಮಾರಸ್ವಾಮಿ ಕೇಳಿಕೊಂಡಿದ್ದರಂತೆ.

ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ರಾಜ್ಯ ಅತಿ ವೃಷ್ಟಿ ಉಂಟಾಯ್ತು, ಬಳಿಕ ಕೊರೋನಾ ಅಬ್ಬರ ಶುರುವಾಯ್ತು ಹೀಗಾಗಿ ಕುಮಾರಸ್ವಾಮಿಯವರಿಗೆ ಹರಕೆ ತೀರಿಸಲು ಆಗಿರಲಿಲ್ಲವಂತೆ.

ಇದೀಗ ಮೂರು ತಿಂಗಳ ಬಳಿಕ ಶಾಸಕರು ಭೈರಾಪುರದ ಶ್ರೀಚೌಡೇಶ್ವರಿ ಜೇವಾಲಯಕ್ಕೆ ಕಾರ್ಯಕರ್ತರೊಂದಿಗೆ ತೆರಳಿ ಕುರಿ ಕೋಳಿ ಕೊಟ್ಟು ಹರಕೆ ತೀರಿಸಿದ್ದಾರಂತೆ.

ಬೆಂಗಳೂರಿನ ಇಬ್ಬರು sslc ಮಕ್ಕಳಿಗೆ ಕೊರೋನಾ ಸೋಂಕು

ಬೆಂಗಳೂರು : ಒಂದೆಡೆ ರಾಜ್ಯ ಸರ್ಕಾರ SSLC ಪರೀಕ್ಷೆ ನಡೆಸಲು ಸಿದ್ದತೆ ನಡೆಸುತ್ತಿದೆ. ಮಕ್ಕಳು ಕೂಡಾ ಶೈಕ್ಷಣಿಕ ಹಂತದ ಪ್ರಮುಖ ಘಟ್ಚ ಅನ್ನಿಸಿರುವ sslc  ಪರೀಕ್ಷೆ ಸಜ್ಜಾಗುತ್ತಿದ್ದಾರೆ.

ಈ ನಡುವೆ ಜೂನ್ 25ರಿಂದ ಪರೀಕ್ಷೆ ಬರೆಯಬೇಕಾಗಿರುವ ಬೆಂಗಳೂರಿನ ಇಬ್ಬರು SSLC ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದೆ. ಹೀಗಾಗಿ ಪರೀಕ್ಷೆ ಬರೆಯಲು ಸಿದ್ದವಾಗುತ್ತಿರುವ ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ.

ಬೆಂಗಳೂರು ಕಲಾಸಿಪಾಳ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮೃತರಾಗಿದ್ದ ಮಹಿಳೆ ಸಂಪಕ್ತದಲ್ಲಿದ್ದ 2 SSLC ವಿದ್ಯಾರ್ಥಿನಿಯರಿಗೆ ಸೋಂಕು ತಗುಲಿದೆ. ಇಬ್ಬರನ್ನೂ ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸಂಪರ್ಕದಲ್ಲಿದ್ದ 5 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಕೊರೋನಾ ಆತಂಕದ ನಡುವೆಯೇ ಕನ್ನಡ ಸಿನಿಮಾ ಶೂಟಿಂಗ್ ಪ್ರಾರಂಭ

ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಹಲವು ಕ್ಷೇತ್ರಗಳು ಈಗಾಗಲೇ ಕೆಲಸ ಪ್ರಾರಂಭಿಸಿದೆ.ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಧಾರಾವಾಹಿ ಶೂಟಿಂಗ್ ಗೆ ಅನುಮತಿ ಕೊಟ್ಟಿದ್ದು, ಹೊಸ ಸಂಚಿಕೆಗಳ ಪ್ರಸಾರ ಕೂಡಾ ಪ್ರಾರಂಭವಾಗಿದೆ.

ಆದರೆ ಚಲನಚಿತ್ರಗಳ ಶೂಟಿಂಗ್ ಗೆ ರಾಜ್ಯ ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ರಾಜ್ಯದಲ್ಲಿ ಜುಲೈ ಆಗಸ್ಟ್ ಹೊತ್ತಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಬಹುದು ಅನ್ನುವ ಕಾರಣದಿಂದ ತಕ್ಷಣಕ್ಕೆ ಚಲನಚಿತ್ರ ಶೂಟಿಂಗ್ ಗೆ ಅನುಮತಿ ಕೊಟ್ಟಿಲ್ಲ.

ಈ ನಡುವೆ ಆಂಧ್ರ ಮತ್ತು ತೆಲಂಗಾಣದಲ್ಲಿ ಚಲನಚಿತ್ರ ಶೂಟಿಂಗ್ ಗೆ ಅನುಮತಿ ಸಿಕ್ಕಿರುವ ಹಿನ್ನಲೆಯಲ್ಲಿ, ಕನ್ನಡ ಚಿತ್ರರಂಗವೀಗ ನೆರೆ ರಾಜ್ಯಗಳಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದೆ.

ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರ ಜುಲೈ 1 ರಿಂದ ಹೈದರಾಬಾದ್ ನಲ್ಲಿ ಶೂಟಿಂಗ್ ಪ್ರಾರಂಭಿಸಲಿದೆ. ಜಾಕ್ ಮಂಜು ಹಣ ಹೂಡಿರುವ ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಶೂಟಿಂಗ್ ಸಲುವಾಗಿ ಹೈದ್ರಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗುತ್ತಿದೆ.

ಇನ್ನುಳಿದಂತೆ ಅರ್ಧ ಶೂಟಿಂಗ್ ಮುಗಿಸಿರುವ ಚಿತ್ರಗಳು ಕೂಡಾ ಇದೀಗ ಆಂಧ್ರ ತೆಲಂಗಾಣದತ್ತ ಮುಖ ಮಾಡಿದೆ. ಲಾಕ್ ಡೌನ್ ಗಿಂತ ಮುಂಚೆ ರಾಬರ್ಟ್ ಟೀಂ ವಾರಣಾಸಿಯಲ್ಲಿತ್ತು, ಪೊಗರು ತಂಡ ರಾಮೋಜಿ ಫಿಲ್ಮಂ ಸಿಟಿ, ಕೆಜಿಎಫ್ 2 ಹೈದ್ರರಬಾದ್ ನಲ್ಲಿತ್ತು.

ಯಾವುದೇ ಕ್ಷಣದಲ್ಲಿ ಮಲ್ಯ ಭಾರತಕ್ಕೆ ಗಡೀಪಾರು….. ಈ ಸುದ್ದಿಯೇ ಸುಳ್ಳು

ನವದೆಹಲಿ : ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯ ಯಾವುದೇ ಕ್ಷಣದಲ್ಲಿ ಭಾರತಕ್ಕೆ ಗಡೀಪಾರು ಆಗುವ ಸಂಭವ ಇದೆ ಅನ್ನುವ ಸುದ್ದಿ ಹರಿದಾಡುತ್ತಿದೆ.

ಈ ಸುದ್ದಿ ಪಕ್ಕಾ ಸುಳ್ಳು ಅನ್ನುವುದು ಇದೀಗ ಗೊತ್ತಾಗಿದೆ. ಮಲ್ಯ ಗಡೀಪಾರಿಗೆ ವೇದಿಕೆ ಸಿದ್ಧವಾಗಿದೆ. ಆದರೆ ಅದು ಜಾರಿಯಾಗಬೇಕಾದರೆ ಇನ್ನಷ್ಟು ದಿನಗಳು ಹಿಡಿಯಬಹುದು. ಯಾವುದೇ ಕ್ಷಣದಲ್ಲಿ ಅದು ಸಾಧ್ಯವಿಲ್ಲ.

ಈ ಬಗ್ಗೆ TOI ಪತ್ರಿಕೆ ಮಲ್ಯ ಪರ ವಕೀಲರು ಹಾಗೂ ಇತರೆ ಅಧಿಕಾರಿಗಳನ್ನು ಮಾತನಾಡಿಸಿದ್ದು, ಮಾಧ್ಯಮಗಳ ವರದಿ ನೋಡಿದ್ರೆ ಇಂದು ರಾತ್ರಿಯೇ ಮಲ್ಯ ಭಾರತಕ್ಕೆ ಆಗಮಿಸುತ್ತಾರೆ ಅನ್ನುವಂತಿದೆ.

ಆದರೆ ಅಂತಹ ಯಾವುದೇ ಸಾಧ್ಯತೆಗಳಿಲ್ಲ. ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಮಲ್ಯ ಭಾರತಕ್ಕೆ ಬರಲು ಮತ್ತಷ್ಚು ದಿನಗಳು ಬೇಕಾಗಬಹುದು ಎನ್ನಲಾಗಿದೆ.

ಶಾಲೆ ಆರಂಭದ ಬಳಿಕ ವಿದೇಶಗಳಲ್ಲಿ ಮಕ್ಕಳಿಗೆ ತಗುಲಿದೆ ಕೊರೋನಾ….

ಬೆಂಗಳೂರು :  ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಮಂದಿಗೆ ಸಹಾಯ ಹಸ್ತ ಚಾಚಬೇಕಾಗಿರುವಲ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಲು ಅದೇನು ತರಾತುರಿಯೋ ಗೊತ್ತಿಲ್ಲ. ಸೂಕ್ಷ್ಮ ವ್ಯಕ್ತಿ ಎಂದೇ ಕರೆಸಿಕೊಂಡಿರುವ ಶಿಕ್ಷಣ ಸಚಿವರ ಸುರೇಶ್ ಕುಮಾರ್ ಅವರೇ ಎಡವಟ್ಟು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಪೋಷಕರ ಅಭಿಪ್ರಾಯ ಪಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲ, ಅದರೊಂದಿಗೆ ಶಾಲೆ ಪ್ರಾರಂಭದ ವೇಳಾ ಪಟ್ಟಿಯನ್ನೂ ಸಿದ್ದಪಡಿಸಿರುವುದು ಯಾಕೆ ಅನ್ನುವುದು ಈಗಿರುವ ಪ್ರಶ್ನೆ. ಶಾಲೆ ಪ್ರಾರಂಭಿಸಲು ದಿನಾಂಕಗಳನ್ನು ಪ್ರಸ್ತಾಪಿಸಿರುವುದನ್ನು ನೋಡಿ, ಇದೊಂದು ಟೆಸ್ಟ್ ಡೋಸ್ ಅನ್ನುವಂತೆ ಕಾಣಿಸುತ್ತಿದೆ. ರಿಯಾಕ್ಷನ್ ನೋಡಿಕೊಂಡು ಮುಂದುವರಿಯುವುದು.

ರಾಜ್ಯದಲ್ಲಿ ಶಾಲೆ ಪ್ರಾರಂಭಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಶಾಲೆ ತೆರೆದ ವಿದೇಶಗಳ ಪರಿಸ್ಥಿತಿ ಅರ್ಥ ಮಾಡಿಕೊಂಡ್ರೆ ಯಾರು  ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ.

ಬ್ರಿಟನ್, ಫ್ರಾನ್ಸ್, ಇಸ್ರೇಲ್ ಹಾಗೂ ಹಲವು ರಾಷ್ಟ್ರಗಳಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಸೋಂಕು ತಗುಲಿದೆ.

ಬ್ರಿಟನ್ ಡರ್ಬಿಯ ಪ್ರಾಥಮಿಕ ಶಾಲೆಯೊಂದರ ಏಳು ಮಂದಿ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಬ್ರಿಟನ್ ನ ಶಾಲೆಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶಿಸಲಾಗಿದೆ.

ಇನ್ನು ಫ್ರಾನ್ಸ್ ನಲ್ಲೂ ಕಳೆದ ವಾರ ಶಾಲೆಗಳು ಪ್ರಾರಂಭವಾಗಿದೆ. ಇದರ ಬೆನ್ನಲ್ಲೇ ವಿವಿಧ ಶಾಲೆಗಳ 70 ಮಕ್ಕಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇಸ್ರೇಲ್ ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಹೀಗೆ ವಿವಿಧ ದೇಶ ಇತ್ತೀಚಿನ ಪತ್ರಿಕೆಗಳನ್ನು ತೆರೆದು ನೋಡಿದ್ರೆ ಶಾಲೆ ಪ್ರಾರಂಭವಾದ ನಂತರದ ಅನಾಹುತಗಳು ಕಾಣಿಸಿಕೊಳ್ಳುತ್ತಿದೆ.

ಆದರೆ ನಮ್ಮಲ್ಲಿ ಮಾತ್ರ ಅದ್ಯಾವುದು ಲೆಕ್ಕಕ್ಕೇ ಇಲ್ಲ. ಶಾಲೆ ತೆರೆಯಬೇಕು ಅಷ್ಟೇ.

ಪೊಲೀಸರೊಂದಿಗೆ ಬೈಕ್ ನಲ್ಲಿ ತೆರಳಿದವನು ಪೊಲೀಸರ ಬೈಕಲ್ಲೇ ಪರಾರಿ

ಮಂಗಳೂರು : ಕೊಲೆ ಯತ್ನ ಪ್ರಕರಣದ ಆರೋಪಿ ಕೆಲ ತಿಂಗಳಿನಿಂದ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ. ರಂಜಾನ್ ಹಬ್ಬಕ್ಕೆಂದು ಉಳ್ಳಾಲಕ್ಕೆ ಆರೋಪಿ ಬಂದಿದ್ದಾನೆ ಎಂದು ಮಾಹಿತಿ ಪಡೆದ ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಪ್ರಕರಣದ ಮತ್ತೊಬ್ಬ ವ್ಯಕ್ತಿ ಇದ್ದಾನೆ ಎಂದು ಆರೋಪಿ ಹೇಳದ್ದಾನೆ. ಹೀಗಾಗಿ ಅವನನ್ನು ತೋರಿಸುವಂತೆ ಪೊಲೀಸರು ಹೇಳಿದ್ದಾರೆ. ಜೊತೆಗೆ ಕರೆದೊಯ್ದರೆ ತೋರಿಸುತ್ತೇನೆ ಎಂದು ಆರೋಪಿ ಹೇಳಿದ ಹಿನ್ನಲೆಯಲ್ಲಿ ಭಾನುವಾರ ಈತನನ್ನು ಒಂದೇ ಬೈಕ್ ನಲ್ಲಿ  ಮಧ್ಯೆ ಕುಳ್ಳಿರಿಸಿ ಆರೋಪಿ ಹೇಳಿದ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ.

ಈ ವೇಳೆ ವ್ಯಕ್ತಿಯೊಬ್ಬನನ್ನು ಆರೋಪಿ ತೋರಿಸುತ್ತಿದ್ದಂತೆ ಪೊಲೀಸರು ಆತನನ್ನು ಹಿಡಿಯಲು ಬೈಕ್ ಬಿಟ್ಟು ಓಡಿದ್ದಾರೆ. ಅತ್ತ ಪೊಲೀಸರು ಓಡುತ್ತಿದ್ದಂತೆ ಇತ್ತ ಆರೋಪಿ ಪೊಲೀಸರ ಬೈಕ್ ನೊಂದಿಗೆ ಪರಾರಿಯಾಗಿದ್ದಾನೆ.

ಇನ್ನು ಆರೋಪಿ ತೋರಿಸಿದ ವ್ಯಕ್ತಿಗೂ ಈ ಹಲ್ಲೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಗೊತ್ತಾಗಿದೆ.

ಪ್ಯಾಟೆ ಹುಡುಗಿ ಹಳ್ಳಿ ಲೈಫ್ ಖ್ಯಾತಿಯ ಮೆಬೀನಾ ಮೈಕಲ್ ದುರ್ಮರಣ

ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫ್​’ ರಿಯಾಲಿಟಿ ಖ್ಯಾತಿಯ ಮೆಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್​ಗೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಮೆಬೀನಾ ಅವರು ಪ್ಯಾಟೆ ಹುಡ್ಗೀರು ಹಳ್ಳಿ ಲೈಫ್ ರಿಯಾಲಿಟಿ ಶೋ 4ರ ವಿನ್ನರ್ ಆಗಿದ್ದರು. ಮಾಡೆಲ್ ಆಗಿಯೂ ಮೆಬೀನಾ ಖ್ಯಾತಿ ಗಳಿಸಿದ್ದರು.

ದುರ್ಘಟನೆ ನಡೆದ ಕಾರಿನಲ್ಲಿ ಮೆಬಿನಾ ಸೇರಿ ಮೂವರು ಇದ್ದರು. ಇನ್ನಿಬ್ಬರ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್​ಗೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ.