ಸುಮಲತಾ ಪರ ಪ್ರಚಾರಕ್ಕೆ ಹೋಗಲ್ಲ… ದರ್ಶನ್ ಇದ್ದಾರೆ ಸಾಕು ಬಿಡಿ

ಮಂಡ್ಯ ಚುನಾವಣಾ ಕಣ ರಂಗೇರುತ್ತಿದೆ. ಸುಮಲತಾ ಪರ ಇಡೀ ಚಂದನವನ ನಿಲ್ಲುತ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ಸುದೀಪ್ ನಾನು ಪ್ರಚಾರ ಹೋಗುವುದಿಲ್ಲ ಅಂದಿದ್ದಾರೆ. ದರ್ಶನ್ ಇರುವಾಗ‌ ಅಲ್ಲಿ ನಾನ್ಯಾಕೆ‌, ಸುಮಲತಾ‌ ಅಂಬರೀಶ್ ರಾಜಕೀಯ ಎಂಟ್ರಿ‌ ಬಗ್ಗೆ ಕಿಚ್ಚ‌ ಸುದೀಪ್ ಅಚ್ಚರಿಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನನಗೆ ರಾಜಕೀಯ ಆಗಿ ಬರಲ್ಲ, ನಾನು ರಾಜಕೀಯದಿಂದ ದೂರ ಅನ್ನುವ ಮಾತುಗಳನ್ನು ಹೇಳುವ ಮೂಲಕ ಸುಮಲತಾ ಪರ ಪ್ರಚಾರಕ್ಕೆ ಹೋಗುವುದಿಲ್ಲ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ಸುದೀಪ್ ಸುಮಲತಾ ಪರ ಪ್ರಚಾರದಿಂದ ದೂರು ಸರಿಯಲು ಕಾರಣವೇನು ಅನ್ನುವುದನ್ನು ಹುಡುಕುತ್ತಾ ಹೋದರೆ ಸಿಕ್ಕಿದ್ದು ನೂರಾರು ಕಾರಣ. ( ಪ್ರಚಾರ ಹೋಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಮತ್ತು ಅವರ ಸ್ವಾತ್ರಂತ್ರ್ಯ ಕೂಡಾ ಹೌದು.)

ದರ್ಶನ್ ಮತ್ತು ಸುದೀಪ್ ನಡುವೆ ಹಿಂದಿನ ಸಂಬಂಧ ಉಳಿದುಕೊಂಡಿಲ್ಲ. ಅವರಿಬ್ಬರೂ ತಮ್ಮ ನಡುವೆ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಹೀಗಾಗಿ ದರ್ಶನ್ ಹೋಗೋ ನಾನ್ಯಾಕೆ ಎಂದು ಅವರು ನಿರ್ಧರಿಸಿರುವ ಸಾಧ್ಯತೆಗಳಿದೆ.

ಕುಮಾರಸ್ವಾಮಿ ಮತ್ತು ಸುದೀಪ್ ಕುಟುಂಬದ ನಡುವೆ ಸಾಕಷ್ಟು ಒಳ್ಳೆಯ ನಂಟಿದೆ. ಸುಮಲತಾ ಪ್ರಚಾರಕ್ಕೆ ಹೋದರೆ ಈ ನಂಟಿಗೆ ಧಕ್ಕೆಯಾಗಬಹುದು ಅನ್ನುವುದು ಮತ್ತೊಂದು ಕಾರಣವಿರಬಹುದು.

ಮತ್ತೊಂದು ಗಮನಾರ್ಹ ಅಂಶ ಅಂದರೆ, ಸುಮಲತಾ ಅವರು ದರ್ಶನ್ ಬಗ್ಗೆ ಹೊಗಳಿ ಸಾಕಷ್ಟು ಸಲ ಮಾತನಾಡಿದ್ದಾರೆ. ಅವರು ನನ್ನ ದೊಡ್ಡ ಮಗ ಎಂದೇ ಕರೆದಿದ್ದಾರೆ. ಆದರೆ ಸುದೀಪ್ ಬಗ್ಗೆ ಸುಮಲತಾ ಈ ಆತ್ಮೀಯತೆ ತೋರಿಸಿದ್ದನ್ನು ನೋಡಿಲ್ಲ.

ಹಾಗಾದರೆ ಸುದೀಪ್ ಸುಮಲತಾ ಪರ ಪ್ರಚಾರಕ್ಕೆ ಹೋಗಬೇಕಿತ್ತಾ, ಓದುಗರಾದ ನೀವೇ ಹೇಳಬೇಕು.

ಹಿಂದೊಮ್ಮೆ ದರ್ಶನ್ ಸುದೀಪ್ ನಡುವಿನ ವೈಮನಸ್ಸು ಮೂಡಿದ ಸಮಯದಲ್ಲಿ ಸುಮಲತಾ ಕೊಟ್ಟ ಹೇಳಿಕೆಯನ್ನು ಈ ವೇಳೆ ನೆನಪಿಸಿಕೊಳ್ಳಬೇಕಿದೆ.

ನಟ ದರ್ಶನ್ ಹಾಗೂ ನಟ ಸುದೀಪ್ ಅವರ ನಡುವಿನ ಸಂಘರ್ಷವನ್ನು ಬಗೆಹರಿಸುವಂತೆ ಅಂಬರೀಷ್ ಅವರಿಗೆ ಹೇಳಿ ಎಂದು ಅಭಿಮಾನಿಯೊಬ್ಬ ಮಾಡಿದ್ದ ಟ್ವೀಟ್ ಗೆ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಅದೇ ಧಾಟಿಯಲ್ಲೇ ಉತ್ತರಿಸಿದ್ದರು.

ದರ್ಶನ್ ಮತ್ತು ಸುದೀಪ್ ಅವರ ಜಗಳದಲ್ಲಿ ತಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದ ಅವರು, ಅವರಿಬ್ಬರೂ ತಮ್ಮ ತಮ್ಮ ನಿರ್ಧಾರಗಳನ್ನು ಸ್ವಂತವಾಗಿಯೇ ತೆಗೆದುಕೊಳ್ಳುವಷ್ಟು ಪ್ರಬುದ್ಧರು. ಹೀಗಾಗಿ ಅವರ ನಿರ್ಧಾರಗಳನ್ನು ನಾವು ಗೌರವಿಸಬೇಕು ಎಂದು ಟ್ವೀಟ್ ಮಾಡಿದ್ದರು.

Advertisements

ವೋಕ್ಸ್ ವ್ಯಾಗನ್ ಮಹಾ ದೋಖಾ ಬಯಲಾಗಿದ್ದು ಹೇಗೆ..?

ಭಾರತದಲ್ಲಿ ವೋಕ್ಸ್ ವ್ಯಾಗನ್ ನಡೆಸಿದ ಮಹಾದೋಖಾಕ್ಕೆ ಇಂದು 500 ಕೋಟಿ ದಂಡ ವಿಧಿಸಲಾಗಿದೆ.

ಆದರೆ ಅಮೆರಿಕಾದಲ್ಲಿ 2015ರಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿತ್ತು. ಅಂದ್ರೆ ಮೂರು ನಾಲ್ಕು ವರ್ಷದ ನಂತ್ರ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಗೆ ನಾಲ್ಕೈದು ವರ್ಷದಲ್ಲಿ ಈ ದುಬಾರಿ ಕಾರುಗಳು ಪರಿಸರಕ್ಕೆ ಮಾಡಿದ ಹಾನಿಯನ್ನು ಊಹಿಸಲು ಸಾಧ್ಯವೇ.

ಹಾಗಾದ್ರೆ ಅಂದೇನಾಗಿತ್ತು ಅನ್ನುವುದರ ಕುರಿತ ವರದಿ ಇಲ್ಲಿದೆ.

ಜಗತ್ತಿನ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ವೋಕ್ಸ್ ವ್ಯಾಗನ್ ಗ್ರೂಪ್ ನ ಅಧೀನದಲ್ಲಿರುವ ವೋಕ್ಸ್‌ವ್ಯಾಗನ್ ಬ್ರಾಂಡ್ ನ ಕಾರುಗಳು ಅತಿ ದೊಡ್ಡ ಮಾಲಿನ್ಯ ಮೋಸ  ಮಾಡಿರುವುದು ಬಯಲಿಗೆ ಬಂದಿತ್ತು.

ಪ್ರಕರಣ ಮೊದಲು ಬೆಳಕಿಗೆ ಬಂದಿದ್ದು ಅಮೆರಿಕದಲ್ಲಿ. ಸಾಮಾನ್ಯವಾಗಿ ಜಗತ್ತಿನ ಎಲ್ಲ ದೇಶಗಳು ತಮ್ಮದೇ ಆದ ಮಾಲಿನ್ಯ ಪ್ರಮಾಣ ಮಿತಿಯನ್ನು ಆಳವಡಿಸಿಕೊಂಡಿರುತ್ತವೆ. ಪ್ರತಿಯೊಂದು ವಾಹನ ತಯಾರಿಕಾ  ಸಂಸ್ಥೆಗಳು ಈ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗಿದೆ. ಆದರೆ ಈ ಮಾನದಂಡವನ್ನು ಮೀರಿದ ವೋಕ್ಸ್ ವ್ಯಾಗನ್ ಸಂಸ್ಥೆ ಅಮೆರಿಕ ಮಾಲಿನ್ಯ ತಪಾಸಣೆಯ ಮಾನದಂಡ (ಎಮಿಷನ್ ಟೆಸ್ಟ್)  ಮರೆಮಾಚಲು ವಿಶೇಷ ರೀತಿಯ ಸಾಫ್ಟ್‌ವೇರ್ ವೊಂದನ್ನು ಅಭಿವೃದ್ಧಿ ಪಡಿಸಿ ಬಳಕೆ ಮಾಡಿತ್ತು.

ಇದರಿಂದ ಇಂಧನ ವಿಸರ್ಜನೆ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದುತ್ತಿದ್ದವು. ನೈಜ ಪರಿಸ್ಥಿತಿಯಲ್ಲಿ  ಪ್ರಯೋಗಾಲಯದಲ್ಲಿ ಕೊಡುವ ಇಂಧನ ಕ್ಷಮತೆಗೂ, ರಸ್ತೆಯ ಮೇಲೆ ಬಂದಾಗ ತೋರಿಸುವ ಕ್ಷಮತೆಗೂ ಭಾರಿ ವ್ಯತ್ಯಾಸಗಳು ಕಂಡುಬಂದಿತ್ತು.

ಈ ವಿಚಾರವನ್ನು ಅರಿತ ಅಮೆರಿಕನ್ ಸಂಶೋಧಕರು ವೋಕ್ಸ್ ವ್ಯಾಗನ್ ಸಂಸ್ಥೆಯ ಮಹಾ ಮೋಸವನ್ನು ಬಯಲಿಗೆಳೆಯುವಲ್ಲಿ ಅಂತಿಮವಾಗಿ ಯಶಸ್ವಿಯಾದರು. ವಿಶೇಷವೆಂದರೆ ಭಾರತೀಯ ಮೂಲದ ಸಂಶೋಧಕ  ಅರವಿಂದ ತಿರುವೆಂಗಡಮ್ (32) ಕೂಡ ಈ ಸಂಶೋಧಕ ತಂಡದಲ್ಲಿದ್ದರು.

ಇದನ್ನು ಕಳೆದ 78 ವರ್ಷಗಳ ಆಟೋ ಕ್ಷೇತ್ರದ ಇತಿಹಾಸದಲ್ಲೇ ಇದು ಅತಿ ದೊಡ್ಡ ಮೋಸದ ಪ್ರಕರಣ ಎಂದು ಹೇಳಲಾಗಿದೆ.

ಮಾತ್ರವಲ್ಲದೆ ಸಂಸ್ಥೆ 1.17 ಲಕ್ಷ ಕೋಟಿ ದಂಡ  ಕಟ್ಟಬೇಕಾದ ಭೀತಿ ಎದುರಿಸುತ್ತಿದೆ.

ಪ್ರಕರಣ ಬೆಳಕಿಗೆ ಬಂದು ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿರುವ ವೋಕ್ಸ್ ವ್ಯಾಗನ್ ಸಂಸ್ಥೆ ಅಂತಿಮವಾಗಿ ತನ್ನ ತಪ್ಪೊಪ್ಪಿಕೊಂಡಿದ್ದು, ತನ್ನ ನಷ್ಟವನ್ನು ಸರಿದೂಗಿಸಲು 46,200 ಕೋಟಿ ರುಪಾಯಿಗಳನ್ನು  ಮೀಸಲಿಟ್ಟಿದೆ.

ಮತ್ತೊಂದು ಮಹತ್ತರ ಬೆಳವಣಿಗೆಯಲ್ಲಿ ವೋಕ್ಸ್‌ವ್ಯಾಗನ್ ಸಿಇಒ ಮಾರ್ಟಿನ್ ವಿಂಟರ್‌ಕಾರ್ನ್ ತಮ್ಮ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೆರಳಿದ್ದರು,

ಈ ನಡುವೆ ವೋಕ್ಸ್ ವ್ಯಾಗನ್ ಸಂಸ್ಥೆಯ ಅಧೀನದಲ್ಲಿರುವ ಆಡಿ, ಬೆಂಟ್ಲಿ, ಬುಗಾಟಿ, ಲ್ಯಾಂಬೋರ್ಗಿನಿ, ಪಾರ್ಷ್, ಸಿಯೆಟ್, ಸ್ಕೋಡಾ ಮುಂತಾದ ಬ್ರ್ಯಾಂಡ್ ನ ಕಾರುಗಳಲ್ಲೂ ಮೋಸ ನಡೆದಿರಬಹುದೇ ಎಂಬ ಶಂಕೆ  ವ್ಯಕ್ತವಾಗುತ್ತಿದೆ.

ಈ ಪೈಕಿ ಆಡಿ ಎ3 ಕಾರಿನಲ್ಲಿ ಇದಕ್ಕೆ ಸಮಾನವಾದ ಪ್ರಕರಣ ಬಯಲಾಗಿದೆ ಎಂದು ಹೇಳಲಾಗಿದೆ.

ಅಮೆರಿಕ ಪರಿಸರ ಸಂರಕ್ಷಣಾ ಏಜೆನ್ಸಿ (ಇಪಿಎ) ನೀಡಿರುವ ಮಾಹಿತಿಗಳ ಪ್ರಕಾರ  ಜನಪ್ರಿಯ ಪಸ್ಸಾಟ್, ಜೆಟ್ಟಾ, ಬೀಟೆಲ್, ಗಾಲ್ಫ್ ಹಾಗೂ ಆಡಿ ಎ3 ಸೇರಿದಂತೆ ಸರಿ ಸುಮಾರು 1.10 ಕೋಟಿ ಡೀಸೆಲ್ ಕಾರುಗಳಲ್ಲಿ ಮಾಲಿನ್ಯ ಮೋಸ ನಡೆದಿದೆ ಎಂದು ತಿಳಿದುಬಂದಿದೆ.

ವಾಯು ಮಾಲಿನ್ಯ ತಪಾಸಣೆ ವೇಳೆ ದೋಖಾ : ವೋಕ್ಸ್​ ವ್ಯಾಗನ್​ ಕಂಪನಿಗೆ 500 ಕೋಟಿ ರೂ ದಂಡ

ತನ್ನ ಕಂಪನಿಯ ಕಾರಿನಲ್ಲಿ ವಾಯುಮಾಲಿನ್ಯ ತಪಾಸಣೆ  ವೇಳೆ ಮಾಲಿನ್ಯದ ಮಟ್ಟ ಗೊತ್ತಾಗದಂತೆ ಮೋಸ ಮಾಡಿದ್ದಕ್ಕಾಗಿ ವೋಕ್ಸ್ ವ್ಯಾಗನ್ ​ ಕಂಪನಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬರೋಬ್ಬರಿ 500 ಕೋಟಿ ರೂ. ದಂಡ ವಿಧಿಸಿದೆ.

ಮಾಡಿರುವ ತಪ್ಪಿಗೆ ಎರಡು ತಿಂಗಳ ಒಳಗಾಗಿ 500 ಕೋಟಿ ಹಣವನ್ನು ಕಾರು ನಿರ್ಮಾಣ ಸಂಸ್ಥೆ ಡೆಪಾಸಿಟ್ ಮಾಡಬೇಕು ಎಂದು NGT ಯ ಜಸ್ಟೀಲ್ ಆದರ್ಶ್ ಗೋಯಲ್ ಆದೇಶಿಸಿದ್ದಾರೆ.

ಕಾರು ಚಲಾಯಿಸುವಾಗ ಅದರಿಂದ ಎಷ್ಟು ಪ್ರಮಾಣದಲ್ಲಿ ಹೊಗೆ ಹೊರಹೋಗುತ್ತದೆ ಎಂದು ಪರಿಶೀಲಿಸಲು ವಾಯುಮಾಲಿನ್ಯದ ತಪಾಸಣೆ ನಡೆಸಲಾಗುತ್ತದೆ. ಆದರೆ, ವೋಕ್ಸ್ ವ್ಯಾಗನ್ ​ ಕಾರಿನಲ್ಲಿ ಈ ಬಗ್ಗೆ ನಿಖರ ಮಾಹಿತಿ ಗೊತ್ತಾಗದಂತೆ ಉಪಕರಣವೊಂದನ್ನು ಅಳವಡಿಸಲಾಗಿತ್ತು. ಇದರಿಂದಾಗಿ ಎಮಿಷನ್​ ಟೆಸ್ಟ್​ ವೇಳೆ ಖಚಿತವಾದ ಮಾಹಿತಿ ಸಿಗುತ್ತಿರಲಿಲ್ಲ.

2018ರ ನವೆಂಬರ್ 16 ರಂದು ‘cheat device’  ಅಳವಡಿಸಿದ್ದ ಕರ್ಮಕಾಂಡಕ್ಕೆ ಕಿಡಿ ಕಾರಿದ್ದ ಹಸಿರು ಪೀಠ 100 ಕೋಟಿ ದಂಡವನ್ನು ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 24 ಗಂಟೆಯೊಳಗೆ ಕಟ್ಟಿ ಎಂದು ಆದೇಶಿಸಿತ್ತು.

ಇದರ ಮುಂದುವರಿದ ವಿಚಾರಣೆ ವೇಳೆ ಇದೀಗ 500 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ವೋಕ್ಸ್ ವ್ಯಾಗನ್ ​ ಕಂಪನಿಯು ಭಾರತದ ಡೀಸೆಲ್​ ಕಾರುಗಳಲ್ಲಿ ಮೋಸದ ಉಪಕರಣ ಅಳವಡಿಸಿರುವುದರಿಂದ ಪರಿಸರಕ್ಕೆ ಆಗಿರುವ ಹಾನಿಯ ಕುರಿತಂತೆ ತನಿಖೆ ನಡೆಸಿದ್ದ ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿ,  ಬೃಹತ್ ಕೈಗಾರಿಕಾ ಸಚಿವಾಲಯ,  Automotive Research Association of India (ARAI) ಮತ್ತು National Environmental Engineering Research Institute ನ ತಜ್ಞರನ್ನು ಒಳಗೊಂಡ ಸಮಿತಿ,  ದೆಹಲಿಯ ಮಾಲಿನ್ಯಕ್ಕೆ ಕೊಡುಗೆ ಮತ್ತು ಜನರ ಆರೋಗ್ಯದ ಮೇಲೆ ಬೀರಿದ ದುಷ್ಪಾರಿಣಾಮಕ್ಕೆ ದಂಡವಾಗಿ 171.34 ಕೋಟಿ ದಂಡ ವಿಧಿಸುವಂತೆ ಶಿಫಾರಸ್ಸು ಮಾಡಿತ್ತು.

ಶಾಲಾ ಶಿಕ್ಷಕಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಹಸಿರು ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ ಅನ್ನುವುದು ಗಮನಾರ್ಹ.

ಕರಾವಳಿ ಕೈ ನಾಯಕರನ್ನು ಸೈಲೆಂಟ್ ಆಗಿ ಸೈಡಿಗೆ ಸರಿಸಿದ ಕೆಪಿಸಿಸಿ

ಕರಾವಳಿ ಅಂದರೆ ಮಂಗಳೂರು ಭಾಗದಲ್ಲಿ ಅನೇಕ ಕಾಂಗ್ರೆಸ್ ನಾಯಕರು ಉದಯಿಸಿದ್ದಾರೆ. ದುರಂತ ಅಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದ ನಾಯಕರನ್ನು ಹೊಸ ತಲೆಮಾರಿನ ನಾಯಕರು ಮರೆಯುತ್ತಿದ್ದಾರೆ.

ಇದಕ್ಕೆ ಸಾಕ್ಷಿಯಾಗಿದ್ದು ಮಂಗಳೂರಿನಲ್ಲಿ ಇಂದು ನಡೆದ ಪರಿವರ್ತನಾ ಯಾತ್ರೆ. ವೇದಿಕೆಯಲ್ಲಿ ಹಾಕಿದ್ದ ಬ್ಯಾನರ್ . ಈ ಬ್ಯಾನರ್ ನಲ್ಲಿ ಕರಾವಳಿಯ ಹೈಕಮಾಂಡ್ ಎಂದೇ ಕರೆಸಿಕೊಂಡಿರುವ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿ, ಎಐಸಿಸಿಯಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ ಆಸ್ಕರ್ ಫರ್ನಾಂಡಿಸ್ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಫೋಟೋಗಳೇ ಇರಲಿಲ್ಲ.

ಇವರೆಲ್ಲರನ್ನೂ ಸಲೀಸಾಗಿ ಸೈಡಿಗೆ ಸರಿಸಿದ ಕಾಂಗ್ರೆಸ್ಸಿಗರು, ಕರಾವಳಿ ಭಾಗಕ್ಕೆ ಗೊತ್ತು ಪರಿಚಯ ಇಲ್ಲದ ನಾಯಕರ ಫೋಟೋಗಳನ್ನು ಮುದ್ರಿಸಿದ್ದರು.

ಇದಕ್ಕೆ ಮತ್ತೊಂದು ಕಾರಣ ಕರಾವಳಿ ಕಾಂಗ್ರೆಸ್ ನಲ್ಲಿ ಎಲ್ಲರೂ ನಾಯಕರಾಗಿರುವುದು, ಕಾರ್ಯಕರ್ತರ ಕೊರತೆ ಇರುವ ಕಾರಣದಿಂದ ಎಲ್ಲರಿಗೂ ಬ್ಯಾನರ್ ಗಳಲ್ಲಿ ಮುಖ ತೋರಿಸುವ ಆಸೆ.

ಕರಾವಳಿ ಕಾಂಗ್ರೆಸ್ ನ ಹಿರಿಯ ಮುಖಗಳನ್ನು ಮರೆತ ಕಾರಣದಿಂದಲೇ, ಕರಾವಳಿಯಲ್ಲಿ ಕಾಂಗ್ರೆಸ್ ಸುನಾಮಿಗೆ ಸಿಕ್ಕ ಹಡಗಿನಂತಾಗಿದೆ. ಬಿಜೆಪಿಯ ಬಿರುಗಾಳಿ ಬೀಸಬೇಕಾಗಿಲ್ಲ, ಸಣ್ಣಗೊಂದು ಚಳಿಗಾಳಿ ಬೀಸಿದರೆ ಸಾಕು, ಹಾಗಾಗಿದೆ.

ಕರಾವಳಿಯಲ್ಲಿ ಇಂದಿಗೂ ಕಾಂಗ್ರೆಸ್ ಅನ್ನು ಪ್ರೀತಿಸುವ ಅನೇಕ ಹಿರಿಯ ಮತದಾರರಿದ್ದಾರೆ. ಅವರೆಲ್ಲರೂ ಪೂಜಾರಿ ಸಾಲ ಮೇಳ, ಆಸ್ಕರ್ ಅವರ ಆತ್ಮೀಯತೆಯ ಮಾತು, ಮೊಯ್ಲಿಯವರ ಸರಳತೆ ಮೆಚ್ಚಿ ಕಾಂಗ್ರೆಸ್ ಗೆ ಮತ ಹಾಕುತ್ತಾರೆ.

ಆಗಿನ ನಾಯಕರು ಮನೆ ಮನೆಗೆ, ಗ್ರಾಮ ಗ್ರಾಮಕ್ಕೆ ಭೇಟಿ ಕೊಡುತ್ತಿದ್ದರು. ಈಗ ಖಾದರ್ ಒಬ್ಬರನ್ನು ಬಿಟ್ಟರೆ ಮತ್ಯಾರಿಗೂ ಮತದಾರನ ಸಂಪರ್ಕವೇ ಇಲ್ಲ. ಎಲ್ಲವನ್ನೂ ತುಂಡು ನಾಯಕರು ನಿಭಾಯಿಸುತ್ತಿದ್ದಾರೆ. ಅದರೊಂದಿಗೆ ಹಿರಿಯ ನಾಯಕರ ಫೋಟೋ ಮಾಯವಾಯ್ತು ಅಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ನ ಮಾನ ಉಳಿಸಲು ಖಾದರ್ ಒಬ್ಬರೇ ಗತಿ.

ಇನ್ನಾದರೂ ಕರಾವಳಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹಿರಿಯ ನಾಯಕರ, ಜಿಲ್ಲಾ ಮುಖಂಡರ ಫೋಟೋ ಗಳನ್ನು ಹಾಕುವುದನ್ನು ಕಾಂಗ್ರೆಸ್ ಮಂದಿ ಕಲಿತರೆ ಒಳಿತು. ಇಲ್ಲವಾದರೆ ನಳಿನಿ ಹಠಾವೋ ಅನ್ನುವ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಹೋರಾಟದಲ್ಲಿ ಕಾಂಗ್ರೆಸ್ ಕೂಡಾ ಮಾಯವಾಗುತ್ತದೆ.

ಕುಂಕುಮ ನಾಮ, ಕಾವಿ ಹಾಕಿಕೊಂಡವರನ್ನ ಸಂಶಯದಿಂದ ನೋಡಲು ಬಿಜೆಪಿಯೇ ಕಾರಣ

ಕುಂಕಮಧಾರಿಯನ್ನು ನೋಡಿದಾಗ ಜನರಿಗೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ತಾವು ಮಂಗಳವಾರ ನೀಡಿದ ಹೇಳಿಕೆ ವೈರಲ್ ಆದ ಹಿನ್ನಲೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ, ಬಿಜೆಪಿಯಯವರು ಕುಂಕುಮ ನಾಮ, ಕಾವಿ ಬಟ್ಟೆಗಳನ್ನು ದುರಪಯೋಗ ಮಾಡಿಕೊಂಡಿದ್ದರಿಂದ ಸಾಮಾನ್ಯ ಜನರು ಕುಂಕುಮಧಾರಿಯನ್ನು ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಟ್ಟಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಹೌದು, ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತೆ ಎಂದು ಹೇಳಿರುವುದು ನಿಜ. ಬಹಳಷ್ಟು ಕ್ರಿಮಿನಲ್ ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಿದ್ದಾರೆ. ಇವರು ಧರ್ಮದ್ರೋಹಿಗಳು ಮಾತ್ರವಲ್ಲ, ಸಮಾಜ ದ್ರೋಹಿಗಳು ಕೂಡಾ. ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದು. ಏನಿವಾಗ? ಅಂದಿರುವ ಸಿದ್ದರಾಮಯ್ಯ, ಉತ್ತರ ಪ್ರದೇಶ ಸಿಎಂ ಯೋಗಿಯವರ ನಾಮ,ಬಟ್ಟೆ ವಿಚಾರಕ್ಕೂ ಕೈ ಹಾಕಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೇಕಿತ್ತಾ ಇದು… ನಾಮದ ವಿಷಯ ಕೆದಕಿ ಕಂಗಲಾದ ಸಿದ್ದರಾಮಯ್ಯ

ಮಂಗಳವಾರ ಬಾದಾಮಿ ವಿಧಾನಸಭಾ ಕ್ಷೇತ್ರದ ಕೆಂದೂರು ಕೆರೆಗೆ ನೀರು ತುಂಬಿಸುವ ಯೋಜನೆ ಚಾಲನೆ ನೀಡಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಯಾಕೋ ಗೊತ್ತಿಲ್ಲ ನನಗೆ ಹಣೆಗೆ ಉದ್ದ ನಾಮ (ತಿಲಕ) ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಕಿಚಾಯಿಸಿದ್ದರು.

ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಸಿದ್ದರಾಮಯ್ಯ ವಿರುದ್ಧ ಆಸ್ತಿಕರು ತಿರುಗಿ ಬಿದ್ದಿದ್ದಾರೆ. #SelfieWithTilak ಅನ್ನುವ ಅಭಿಯಾನ ಪ್ರಾರಂಭವಾಗಿದ್ದು, ಸಾಮಾಜಿಕ ಜಾಲತಾಣಗಳು ಸೆಲ್ಪಿಗಳಿಂದ ತುಂಬಿ ತುಳುಕುತ್ತಿದೆ.

ಕೆಲವರು ರಾಹುಲ್ ಗಾಂಧಿ ನಾಮ ಇಟ್ಟುಕೊಂಡಿರುವ ಫೋಟೋವನ್ನು ಟ್ವೀಟ್ ಮಾಡಿದ್ದು, ಬಿಜೆಪಿಯನ್ನು ಕಿಚಾಯಿಸಿದ್ದ ಸಿದ್ದರಾಮಯ್ಯ ಪ್ರತಿ ಕಿಚಾಯಿಸಿದ್ದಾರೆ.

ನಿಜಕ್ಕೂ ಸಿದ್ದರಾಮಯ್ಯ ಅವರದ್ದು ಇದು ಎಡವಟ್ಟಿನ ಹೇಳಿಕೆ. ಪ್ರತಿಯೊಬ್ಬ ಆಸ್ತಿಕನೂ ನಾಮ ಇಟ್ಟುಕೊಳ್ಳುತ್ತಾನೆ. ಹಾಗಂತ ನಾಮ ಇಟ್ಟುಕೊಂಡವರೆಲ್ಲಾ ಕ್ರಿಮಿನಲ್ ಗಳು ಅಲ್ಲ ಅನ್ನುವುದನ್ನು ಸಿದ್ದರಾಮಯ್ಯ ಅರಿತುಕೊಳ್ಳಬೇಕಿತ್ತು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಕೊಟ್ಟ ಹೇಳಿಕೆ, ಕಾಂಗ್ರೆಸ್ ಗೆ ದೊಡ್ಡ ಏಟು ಕೊಡುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಬಿಜೆಪಿ ನಾಮದ ವಿಷಯವನ್ನು ಭಾವನಾತ್ಮಕವಾಗಿ ಎತ್ತಿಕೊಂಡಿದೆ. ಮತ ಗಳಿಸುವ ನಿಟ್ಟಿನಲ್ಲಿ ನಾಮದ ವಿಷಯ ಸಹಾಯವಾಗುವುದರಲ್ಲಿ ಎರಡು ಮಾತಿಲ್ಲ.

ಜಯಲಲಿತಾ ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರ ಮರೆತು ಹೋಯ್ತೇ ಮೋದಿ ಸಾಹೇಬ್ರೆ….?

ಅಮ್ಮ ಜಯಲಲಿತಾ ಅವರ ಕನಸಿನಂತೆ ರಾಜ್ಯವನ್ನು ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮಿಳನಾಡು ಜನತೆಗೆ ಭರವಸೆ ನೀಡಿದ್ದಾರೆ.

ಕರ್ನಾಟಕದ ಕಲಬುರಗಿಯಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ತಮಿಳುನಾಡಿನ ಕಾಂಚಿಪುರಂಗೆ ತೆರಳಿದ ಪ್ರಧಾನಿ ಮೋದಿ ಅಲ್ಲಿ ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕಿ ಮಾತನಾಡಿದರು.

ಚೆನ್ನೈನ ಕೇಂದ್ರ ನಿಲ್ದಾಣವನ್ನು ಎಂ.ಜಿ. ರಾಮಚಂದ್ರನ್​ ನಿಲ್ದಾಣ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಿದ ಅವರು ತಮಿಳುನಾಡಿನಿಂದ ಹೊರಡುವ ಹಾಗೂ ಆಗಮಿಸುವ ವಿಮಾನಗಳಲ್ಲಿ ತಮಿಳು ಭಾಷೆಯಲ್ಲೇ ಪ್ರಕಟಣೆ ಹೊರಡಿಸುವ ಅವಕಾಶ ನೀಡುವ ಕುರಿತು ನಾವು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಮೋದಿಯವರ ಮಾತು ಕೇಳಿ ನಿಜಕ್ಕೂ ಅಚ್ಚರಿಯಾಯ್ತು..ಕರ್ನಾಟಕದ ಕಲಬುರಗಿಯಲ್ಲಿ ನಿಂತು, ಕರ್ನಾಟಕದಿಂದ ಹೊರಡುವ ಹಾಗೂ ಆಗಮಿಸುವ ವಿಮಾನಗಳಲ್ಲಿ ಕನ್ನಡ ಭಾಷೆಯಲ್ಲೇ ಪ್ರಕಟಣೆ ಹೊರಡಿಸುವ ಅವಕಾಶ ನೀಡುವ ಕುರಿತು ನಾವು ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಲಿಲ್ಲ. ಆದರೆ ತಮಿಳುನಾಡಿನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅಂದ್ರೆ… ತಮಿಳುರು ಭಾಷೆ ಅಂದ್ರೆ ಪ್ರಾಣ ಬಿಡುತ್ತಾರೆ… ಕನ್ನಡಿಗರು ಹೇಗಿದ್ದರೂ Adjust ಮಾಡಿಕೊಳ್ಳುತ್ತಾರೆ ಅಂದುಕೊಂಡಿರಬೇಕು ದೇಶ ಪ್ರಧಾನಿಗಳು.

Top India politician Jayalalitha jailed for corruption

ಇನ್ನು ಅಮ್ಮ ಜಯಲಲಿತಾ ಅವರ ಕನಸಿನಂತೆ ತಮಿಳುನಾಡ ಅಭಿವೃದ್ಧಿ ಮಾಡ್ತಾರಂತೆ. ಜಯಲಲಿತಾ ಕಂಡ ಕನಸೇನು ಅನ್ನುವುದನ್ನು ಒಂದಿಷ್ಟು ಹೇಳಿದ್ದರೆ ಚೆನ್ನಾಗಿತ್ತು. ಕಾವೇರಿ ವಿಷಯದಲ್ಲಿ ಕರ್ನಾಟಕದ ಕುತ್ತಿಗೆ ಹಿಡಿದು ಸಾಯಿಸಲು ಹೊರಟಿದ್ದೇ..? ಕಾವೇರಿ ವಿಚಾರದಲ್ಲಿ ಬೆನ್ನು ಬಿಡದ ಬೇತಾಳನಂತೆ ಕಾಡಿದ್ದೇ..?

Jayalalithaa’s 10,500 saris, 750 slippers, 500 wine glasses ..

ಚುನಾವಣೆ ಬಂದಾಗ ಟಿಮಿ, ಮಿಕ್ಸಿ ಮೊಬೈಲ್ ಅನ್ನುವ ಆಫರ್ ಗಳನ್ನು ಘೋಷಿಸುವುದರಲ್ಲಿ ಜಯಲಲಿತಾ ಎತ್ತಿದ ಕೈ ಹೊಂದಿದ್ದರು. ಹೋಗ್ಲಿ ಬಿಡಿ ಜಯಲಲಿತಾ ಮೇಲಿದ್ದ ಭ್ರಷ್ಟಚಾರದ ಆರೋಪಗಳನ್ನು ಪ್ರಧಾನಿ ಮರೆತು ಹೋದರೆ… ಜಯಲಲಿತಾ ಮನೆ ಮೇಲೆ ದಾಳಿಯಾದ ವೇಳೆ ಸಿಕ್ಕ ಚಪ್ಪಲಿಗಳೆಷ್ಟು, ಸೀರೆಗಳೆಷ್ಟು. ಕೊನೆಗೆ ಭ್ರಷ್ಟಚಾರದ ಕಾರಣಕ್ಕೆ ಜಯಲಲಿತಾ ಗೆಳತಿ, ಮನ್ನಾರ್ ಗುಡಿ ಮಾಫಿಯಾದ ನಾಯಕಿ ಜೈಲು ಸೇರಿದ್ದು ಈಗ ಇತಿಹಾಸ. ಜಯಲಲಿತಾ ಬದುಕಿದ್ದರೆ ಅವರಿಗೂ ಜೈಲು ಶಿಕ್ಷೆಯಾಗುತ್ತಿತ್ತು. ಈಗ ಜಯಲಲಿತಾ ಕನಸುಗಳನ್ನು ಈಡೇರಿಸುತ್ತಾರಂತೆ.

Amma’s 10,500 Saris, 750 Slippers and 500 Wine Glasses Placed In Karnataka Custody

ಮೋದಿಯವರೇ ನಿಮ್ಮಿಂದ ಈ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ.