Advertisements

ಸೆಲ್ಯೂಟ್ ಸರ್ – ನೀರಿನಲ್ಲಿ ಮುಳುಗಬೇಕಿದ್ದ ಗರ್ಭಿಣಿಯನ್ನು ರಕ್ಷಿಸಿದ ನೌಕಾದಳದ ಯೋಧರು

ದೇವರನಾಡಿನಲ್ಲಿ ವರುಣದೇವ ಮತ್ತು ಜಲದೇವತೆಯ ಆಟ ನಡೆಯುತ್ತಿದೆ. ನಾವೇನು ಮಾಡಿದೆವು ಎಂದು ಜನ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಕಾಪಾಡಬೇಕಾದ ದೇವರೇ ಸೈಲೆಂಟ್ ಆಗಿದ್ದಾನೆಯೇ ಖಂಡಿತಾ ಇಲ್ಲ.

ದೇವರ ಸ್ವರೂಪ ಅನ್ನುವಂತೆ ನಮ್ಮ ದೇಶದ ಯೋಧರು ಜನತೆ ರಕ್ಷಣೆಯಲ್ಲಿ ತೊಡಗಿದ್ದಾರೆ. ಜನರನ್ನು ರಕ್ಷಿಸಬೇಕಾದ ಎಲ್ಲಾ ವ್ಯವಸ್ಥೆಗಳು ಯೋಧರ ಕೈಯಲ್ಲಿದೆ, ಸಮಯವೊಂದನ್ನು ಬಿಟ್ಟು. ಸಂಕಷ್ಟದಲ್ಲಿರುವ ಜನತೆಯ ಕರೆ ನೆರೆಯಂತೆ ನುಗ್ಗಿ ಬರುತ್ತಿದೆ. ರಾತ್ರಿ ಹಗಲು ಅಲ್ಲದೆ ಹೆಲಿಕಾಫ್ಟರ್ ನಲ್ಲಿ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಅದರಲ್ಲೂ ಗರ್ಭಿಣಿಯೊಬ್ಬಳನ್ನು ರಕ್ಷಿಸಿದ ಕಥೆ ಮೈ ರೋಮಾಂಚನಗೊಳಿಸುತ್ತದೆ.

ಶುಕ್ರವಾರ ಮುಂಜಾನೆ ಕಮಾಂಡರ್ ವಿಜಯ್ ವರ್ಮ ಅವರಿಗೆ ಬಂದ ಕರೆಯೊಂದಕ್ಕೆ ತುರ್ತಾಗಿ ಸ್ಪಂದಿಸಬೇಕು ಅನ್ನಿಸಿತು. ಯಾಕೆಂದರೆ ನೀರಿನಲ್ಲಿ ಸಿಲುಕಿದ್ದು ತುಂಬು ಗರ್ಭಿಣಿ. ಹೀಗಾಗಿ ತಡ ಮಾಡಲಿಲ್ಲ. ತನ್ನ ಸಹೋದ್ಯೋಗಿಗಳೊಂದಿಗೆ ಗರ್ಭಿಣಿ ಇದ್ದ ಎರ್ನಾಕುಲಂ ಜಿಲ್ಲೆಯ ‘ಅಲ್ವ’ ಅನ್ನುವ ಗ್ರಾಮಕ್ಕೆ ತಲುಪಿದರು. ಸ್ಥಳಕ್ಕೆ 8 ಗಂಟೆಯ ಹೊತ್ತಿಗೆ ತಲುಪಿದರೂ ಪರಿಸ್ಥಿತಿ ಏರ್ ಲಿಫ್ಟ್ ಮಾಡುವುದಕ್ಕೆ ಪೂರಕವಾಗಿರಲಿಲ್ಲ. ಹೀಗಾಗಿ ಒಂದಿಷ್ಟು ಹೊತ್ತು ಕಾದರು.

ಹೆಲಿಕಾಫ್ಟರ್ ನಲ್ಲಿದ್ದ ನೌಕಾ ದಳದ ವೈದ್ಯರು ಕೆಳಗಿಳಿದು 25 ವರ್ಷದ ಗರ್ಭಿಣಿ ಸಜಿತಾ ಜಬೀಲ್ ಆರೋಗ್ಯ ತಪಾಸಣೆ ನಡೆಸಿದರು. ತುಂಬಾ ಹೊತ್ತುವುದು ಸರಿಯಲ್ಲ ಎಂದು ವಿಜಯ್ ವರ್ಮ ಅವರಿಗೆ ತಿಳಿಸಿದರು.

ತಕ್ಷಣ ಏರ್ ಲಿಫ್ಟ್ ಗೆ ವ್ಯವಸ್ಥೆ ಮಾಡಿದ ತಕ್ಷಣ ಅವರನ್ನು ಮೇಲಕ್ಕೆ ಎಳೆದುಕೊಳ್ಳಲಾಯ್ತು. ತಡ ಮಾಡದೆ ಕೊಚ್ಚಿಯಲ್ಲಿರುವ INHS Sanjivani ಆಸ್ಪತ್ರೆಗೆ ದಾಖಲಿಸಲಾಯ್ತು.

ಸಜಿತಾ ಜಬೀಲ್ ಅವರನ್ನು ಆಸ್ಪತ್ರೆ ಸೇರಿಸಿದ ಕಮಾಂಡರ್ ವಿಜಯ್ ವರ್ಮ ತಂಡ ಮತ್ತೆ ರಕ್ಷಣಾ ಕಾರ್ಯಾಚರಣೆಗೆ ಹಿಂತಿರುಗಿತ್ತು. ಆದರೆ 2 ಗಂಟೆಯ ಹೊತ್ತಿಗೆ ಸಜಿತಾ ಜಬೀಲ್ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.

ವಿಜಯ್ ವರ್ಮ ಸಕಾಲಕ್ಕೆ ರಕ್ಷಣಾ ಕಾರ್ಯಾಚರಣೆಗೆ ತೆರಳದಿದ್ದರೆ ಏನಾಗುತ್ತಿತ್ತು ಊಹಿಸಲು ಅಸಾಧ್ಯ.

ಸೈನಿಕರು ಸೇನೆಗೆ ಸೇರುವುದು ದೇಶಪ್ರೇಮದಿಂದ ಅಲ್ಲ ಬಡತನದಿಂದಾಗಿ ಎಂದು ಯಾವನೋ ಒಬ್ಬ ಹಿಂದೆ ಹೇಳಿದ್ದ ಮಾತು ನೆನಪಿಗೆ ಬಂತು. ಹಾಗೇ ಹೇಳಿದ ಪುಣ್ಯಾತ್ಮನಿಗೆ ಈ ಸುದ್ದಿ ತಲುಪುವಂತೆ ಮಾಡಿ.

Advertisements

ಆತನೊಂದಿಗೆ ಹೆಚ್ಚು ಡೇಟಿಂಗ್ ಮಾಡಿಲ್ಲ – ನಟಿ ರಶ್ಮಿಕಾ

ತೆಲುಗಿಗೆ ಹಾರಿ ಹೋದ ಕಿರಿಕ್ ಪಾರ್ಟಿ ಹುಡುಗಿ ತೆರೆಯ ಮೇಲಿಗಿಂತ ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವ ಮೂಲಕ ರಶ್ಮಿಕಾ ಗಾಸಿಪ್ ಗಳ ರಾಣಿಯಾಗಿ ಹೋಗಿದ್ದಾರೆ.

ಕಿಸ್ಸಿಂಗ್ ವಿಡಿಯೋ ಲೀಕ್…… ಗೀತಾ ಗೋವಿಂದಂ ನಲ್ಲಿ ರಶ್ಮಿಕಾ ಲಿಪ್ ಲಾಕ್ ..?

ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬಿರುಕಂತೆ, ಅವರಿಬ್ಬರು ಮದುವೆಯಾಗಲ್ವಂತೆ ಹೀಗೆ ಅಂತೆ ಕಂತೆಗಳು. ಈ ಎಲ್ಲಾ ವಿಷಯಗಳನ್ನು ಅವರು ತಳ್ಳಿ ಹಾಕಿ ಸಾಕಷ್ಟು ದಿನಗಳೇ ಕಳೆದಿದೆ.

ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​…..

ಇದೀಗ ಈ ಸಂಬಂಧ ಕನ್ನಡ ಪ್ರಭ ವೆಬ್ ಸೈಟ್ ವರದಿಯೊಂದನ್ನು ಪ್ರಕಟಿಸಿದೆ.
ಅದರಲ್ಲಿ “ ರಶ್ಮಿಕಾ ಮಂದಣ್ಣ ಅವರು, ನಾವು ಬೇರೆ ಬೇರೆಯಾಗುತ್ತಿದ್ದೇವೆ ಎಂಬ ವದಂತಿ ಕೇಳಿದ್ದ ರಕ್ಷಿತ್ ಗೆ ನಗು ತಡೆಯಲು ಆಗಲಿಲ್ಲ. ನಿಶ್ಚಿತಾರ್ಥಕ್ಕೂ ಮುಂಚೆ ನಮಗೆ ಜೊತೆಯಾಗಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಡೇಟಿಂಗ್ ಕೂಡ ಮಾಡಿರಲಿಲ್ಲ. ನಿಶ್ಚಿತಾರ್ಥದ ನಂತರ ನಾವು ಪ್ರೀತಿಯನ್ನು ತುಂಬಾ ಆನಂದಿಸುತ್ತಿದ್ದೇವೆ. ನಾವು ಮದುವೆ ಆಗೋದು ಪಕ್ಕಾ. ಆದರೆ ಅದು ಯಾವಾಗ ನಡೆಯುತ್ತೆ ಎಂಬುದು ಗೊತ್ತಿಲ್ಲ” ಎಂದಿದೆ.

ಆದರೆ ರಶ್ಮಿಕಾ ಮತ್ತು ರಕ್ಷಿತ್ ಸ್ಪಷ್ಟಮೆ ಕೊಟ್ಟು ಸಾಕಷ್ಟು ದಿನಗಳೇ ಕಳೆದಿದೆ. ಮತ್ಯಾಕೆ ಕನ್ನಡ ಪ್ರಭ ಈಗ ಈ ಸುದ್ದಿಯನ್ನು ಹಾಕಿತೋ ಗೊತ್ತಿಲ್ಲ. ಹೋಗ್ಲಿ ಅವರು ಎಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಅನ್ನುವುದನ್ನು ತಿಳಿಸಿಲ್ಲ.

ರಶ್ಮಿಕಾ V/S ಅಭಿಮಾನಿಗಳು –  ಅತೀಯಾದ ರೋಮಾನ್ಸ್ ಅಪಾಯಕಾರಿ

ಗುರು ಶಿಷ್ಯರ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದ ಪ್ರಧಾನಿ ನರೇಂದ್ರ ಮೋದಿ

ರಾಷ್ಟ್ರೀಯ ಸ್ಮೃತಿ ಸ್ಥಳದತ್ತ ಮಾಜಿ ಪ್ರಧಾನಿ ವಾಜಪೇಯಿ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದ್ದರೆ, ವಾಹನ ಹಿಂದೆ ಪ್ರಧಾನಿ ನರೇಂದ್ರಮೋದಿ   ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆದು ಕೊಂಡು ಸಾಗಿದರು. ಏನಿಲ್ಲ ಅಂದರೂ ಬಿಜೆಪಿ ಕಚೇರಿಯಿಂದ ಅಲ್ಲಿಗೆ 9 ಕಿಲೋ ಮೀಟರ್ ದೂರವಿದೆ.

ಅಂತಿಮ ಯಾತ್ರೆಯಲ್ಲಿ ಕಾಲ್ನಡಿಗೆಯಲ್ಲೇ  ಲಕ್ಷಾಂತರ ಜನರ ಮಧ್ಯೆ ಪ್ರಧಾನಿ ಎಂಬ ಹುದ್ದೆಯನ್ನು ಪಕ್ಕಕ್ಕಿಟ್ಟು ನೆಚ್ಚಿನ ಗುರುವಿನ ಅಂತಿಮ ಯಾತ್ರೆಯಲ್ಲಿ ನಡೆದು ಸಾಗುವ ಮೂಲಕ  ಗುರು- ಶಿಷ್ಯರ ನಡುವಿನ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದರು.

ಪಾರ್ಥಿವ ಶರೀರದ ವಾಹನದ ಹಿಂದೆ ಪ್ರಧಾನಿ ನರೇಂದ್ರಮೋದಿ ಜೊತೆಗೆ ಅಮಿತ್ ಶಾ ಸೇರಿದಂತೆ ಸಂಪುಟ ಸಚಿವರು, ಬಿಜೆಪಿ ಪಕ್ಷದ ಹಿರಿಯ ನಾಯಕರು ಸಾಗಿದರು.

ಅಂದು ವಾಜಪೇಯಿ ಎಲ್ಲೋ ಇದ್ದ ಮೋದಿಯನ್ನು ಕರೆದು ಗುಜರಾತ್ ಸಿಎಂ ಆಗು ಎಂದು ಹರಸಿ ಹಾರೈಸಿ ಕಳುಹಿಸದೇ ಇದ್ದರೆ ಎಂದು ಮೋದಿ ಪ್ರಧಾನಿಯೇ ಆಗುತ್ತಿರಲಿಲ್ಲ ಅನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

 

ವಾಜಪೇಯಿಯನ್ನು ದೇಶ ದ್ರೋಹಿ ಅಂದಿದ್ದರು ಸೋನಿಯಾ….!

ಅಟಲ್ ಬಿಹಾರಿ ವಾಜಪೇಯಿ ಅಜಾತ ಶತ್ರು, ಯಾವ ರಾಜಕಾರಣಿಯೂ ವಾಜಪೇಯಿ ಅವರನ್ನು ಕಠಿಣ ಶಬ್ಧಗಳಲ್ಲಿ ಟೀಕಿಸಿದ ಉದಾಹರಣೆ ಇಲ್ಲ. ವಾಜಪೇಯಿ ಅವರನ್ನು ಟೀಕಿಸಲೇ ಬೇಕು ಅನ್ನುವ ಪರಿಸ್ಥಿತಿ ಬಂದಾಗ Right Man in Wrong Party ಅನ್ನುತ್ತಿದ್ದರು.

ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಿದ್ದರು. ಆದರೆ ಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಮಾತ್ರ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು.

1999 ರಲ್ಲಿ ಉಜ್ಜೈನ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸೋನಿಯಾ ಗಾಂಧಿ ಅಂದಿನ ಪ್ರಧಾನಿ ವಾಜಪೇಯಿ ಅವರನ್ನು ಗದ್ದಾರ್ (ದೇಶದ್ರೋಹಿ) ಎಂದು ಹೇಳಿದ್ದರು. ಸೋನಿಯಾ ಗಾಂಧಿ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದ ಬಿಜೆಪಿ ಸೋನಿಯಾ ಗಾಂಧಿ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದರು.

ವಾಜಪೇಯಿ ಇನ್ನಿಲ್ಲ. ಈ ಸಂದರ್ಭದಲ್ಲಿ ಆದರೂ ಸೋನಿಯಾಗಾಂಧಿ ತಮ್ಮ ಮಾತಿಗೆ ಕ್ಷಮೆಯಾಚಿಸಬಹುದಿತ್ತು. ಆದರೆ ಆ ಕೆಲಸವನ್ನು ಸೋನಿಯಾಗಾಂಧಿ ಮಾಡಿಯೇ ಇಲ್ಲ. ಹೋಗ್ಲಿ ಅವರು ದೇಶದ್ರೋಹಿ ಅನ್ನುವ ಹೇಳಿಕೆಗೆ ಸೋನಿಯಾ ಬದ್ಧರಾಗಿರುವುದಾದರೆ ಯಾವ ಕಾರಣಕ್ಕಾಗಿ ಅವರು ದೇಶ ದ್ರೋಹಿ ಅನ್ನುವುದನ್ನು ಸ್ಪಷ್ಟಪಡಿಸಬೇಕಿತ್ತು.

ಇನ್ನು ರಾಹುಲ್ ಗಾಂಧಿ ಪ್ರಧಾನಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ತಾಯಿ ವಾಜಪೇಯಿ ಅವರನ್ನು ಕರೆದ ಮಾತುಗಳು ಮುಂದೊಂದು ದಿನ ಅವರಿಗೆ ಕಂಟಕವಾಗುವುದರಲ್ಲಿ ಸಂಶಯವೇ ಇಲ್ಲ.

( Image Courtesy -Yajna acharya)

ಅವತ್ತು ಮನಮೋಹನ್ ಸಿಂಗ್ ರಾಜೀನಾಮೆ ತಡೆದವರೇ ವಾಜಪೇಯಿ

ಅದು 90 ರ ದಶಕ. ನರಸಿಂಹ ರಾವ್ ಕೇಂದ್ರದಲ್ಲಿ ಪ್ರಧಾನಿ ಹುದ್ದೆಯಲ್ಲಿದ್ದರು. ರಾವ್ ಸಂಪುಟದಲ್ಲಿ ಮನಮೋಹನ್ ಸಿಂಗ್ ಹಣಕಾಸು ಸಚಿವರು. ಮನಮೋಹನ್ ಅದ್ಭುತ ಆರ್ಥಿಕ ತಜ್ಞರಾಗಿದ್ದರು. ಆದ್ರೆ ಬೆಸ್ಟ್ ಹಣಕಾಸು ಸಚಿವರಾಗಿರಲಿಲ್ಲ ಅನ್ನುವ ಟೀಕೆ ಕೇಳಿ ಬಂದಿತ್ತು.

ಈ ವೇಳೆ ಲೋಕಸಭೆಯಲ್ಲಿ ಮನಮೋಹನ್ ಸಿಂಗ್ ಆರ್ಥಿಕ ನೀತಿಗಳನ್ನು ತೀವ್ರವಾಗಿ ಖಂಡಿಸಿದ್ದ ವಾಜಪೇಯಿಯವರು, ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಇದರಿಂದ ತೀವ್ರವಾಗಿ ಮನನೊಂದುಕೊಂಡ ಮನಮೋಹನ್ ಸಿಂಗ್ ನೇರವಾಗಿ ಪಿವಿ ನರಸಿಂಹ ರಾವ್ ಬಳಿ ತೆರಳಿದರು. ತಾವು ರಾಜೀನಾಮೆ ಕೊಡುತ್ತಿರುವುದಾಗಿ ತಿಳಿಸಿದರು.

ಬಳಿಕ ನರಸಿಂಹ ರಾವ್ ವಾಜಪೇಯಿ ಅವರನ್ನು ಸಂಪರ್ಕಿಸಿ  “ತಮ್ಮ ಮಾತಿನಿಂದ ನೊಂದುಕೊಂಡ ಮನಮೋಹನ್ ಸಿಂಗ್ ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ಹೀಗಾಗಿ ಅವರಿಗೆ ಸಾಂತ್ವನ ಹೇಳಿ, ಮನವೊಲಿಸಿ ಎಂದು ಮನವಿ ಮಾಡಿದರು.

ನರಸಿಂಹ ರಾವ್ ಮನವಿಗೆ ಇಲ್ಲ ಅಲ್ಲದ ವಾಜಪೇಯಿ,ಮನಮೋಹನ್ ಸಿಂಗ್ ಜೊತೆ ಮಾತನಾಡಿ ಸಾಂತ್ವನ ಹೇಳಿದರು. ಆ ದಿನದಿಂದ ಮನಮೋಹನ್ ಸಿಂಗ್ ಅವರಿಗೆ ವಾಜಪೇಯಿ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತಂತೆ.

ಇಂತಹ ನೂರಾರು ಘಟನೆಗಳಿದೆ. ಈಗಿನ ಕಾಲದ ರಾಜಕಾರಣಿಗಳಾಗಿದ್ದರೆ, ಅಯ್ಯೋ ರಾಜೀನಾಮೆ ತಾನೇ ಕೊಡಲಿ ಅನ್ನುತ್ತಿದ್ದರೇನೋ. ಇದಕ್ಕೆ ಅವರು ಅಜಾತ ಶತ್ರು ಅನ್ನಿಸಿಕೊಂಡಿರುವುದು.

ವಾಜಪೇಯಿಗೆ ತಡವಾಗಿ ಭಾರತ ರತ್ನ ಸಿಕ್ಕಲು ಕಾರಣರಾಗಿದ್ದರೆ ಸೋನಿಯಾ..?

ವಾಜಪೇಯಿ ಅವರಿಗೆ ಭಾರತ ರತ್ನ ಎಂದೋ ಬರಬೇಕಾಗಿತ್ತು. ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೇ ಅವರು ಭಾರತ ರತ್ನ ಪಡೆಯಬಹುದಿತ್ತು, ಆದರೆ ಅವರಿಗೆ ಭಾರತ ರತ್ನ ಪ್ರಶಸ್ತಿ ಪಡೆಯಲು ಒಂದಿಂಚು ಮನಸ್ಸು ಇರಲಿಲ್ಲ.

ಕಾರ್ಗಿಲ್ ಯುದ್ಧದ ಗೆಲುವಿನ ನಂತರ ಭಾರತ ರತ್ನ ಪಡೆಯಲೇಬೇಕು ಅನ್ನುವ ಒತ್ತಡ ಅವರ ಮೇಲೆ ಸತತವಾಗಿತ್ತು. ಬಿಜೆಪಿಯಲ್ಲೇ ಈ ಬಗ್ಗೆ ಮಾತುಕತೆಗಳು ನಡೆದಿತ್ತು. ಕ್ಯಾಬಿನೆಟ್ ಸಹೋದ್ಯೋಗಿಗಳು ಅನೇಕರ ವಾಜಪೇಯಿ ಬಳಿ ಈ ಪ್ರಸ್ತಾವನೆಯನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆ ನೆಹರೂ ಮತ್ತು ಇಂದಿರಾಗಾಂಧಿ  ಸ್ವತ ಭಾರತ ರತ್ನ ಕೊಟ್ಟುಕೊಂಡ ಬಗ್ಗೆ ಉದಾಹರಿಸಿ ಪ್ರತಿ ಬಾರಿಯೂ ವಾಜಪೇಯಿಯವರು ಕ್ಯಾಬಿನೆಟ್ ಸಹೋದ್ಯೋಗಿಗಳ ಪ್ರಸ್ತಾಪವನ್ನು ತಳ್ಳಿ ಹಾಕುತ್ತ ಬಂದಿದ್ದರು.

ಬಳಿಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ವಾಜಪೇಯಿ ಅವರಿಗೆ ಭಾರತ ರತ್ನ ನೀಡಬೇಕೆಂದು ಲಾಲ್ ಕೃಷ್ಣ ಅಡ್ವಾಣಿ ಪತ್ರ ಬರೆದು ಮನವಿ ಮಾಡಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಭಾರತ ರತ್ನ ನೀಡಲು ಸಿದ್ದರಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಈ ವಿಷಯದ ಪರವಾಗಿರಲಿಲ್ಲವಂತೆ. ಇಂತಹುದೊಂದು ಅಂಶ ಪತ್ರಕರ್ತ ವಿಜಯ್ ತ್ರಿವೇದಿ ಬರೆದ HAAR NAHI MANOONGA  ಪುಸ್ತಕದಲ್ಲಿ ಉಲ್ಲೇಖಗೊಂಡಿದೆ.

Vijaya trivedi book

ಆದರೆ ಬಳಿಕ ಮೋದಿ ಸರ್ಕಾರ ವಾಜಪೇಯಿ ಅವರಿಗೆ ಭಾರತ ರತ್ನ ನೀಡಲು ನಿರ್ಧರಿಸಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಸ್ವಾಗತಿಸಿದ್ದರು ಅನ್ನುವುದು ಗಮನಾರ್ಹ ಅಂಶ.

ಅಚಲ ಮನಸ್ಸಿನ ಗುರಿಕಾರ – ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿದ ವೀರ

ಮೊದಲ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕವಿ ಹೃದಯದ ವಾಜಪೇಯಿ ಅವರಲ್ಲಿ ಕನಸುಗಳು ಸಾಕಷ್ಟಿತ್ತು. ವಿಶ್ವದ ಮುಂದೆ ಭಾರತ ತಲೆ ಎತ್ತಿ ನಡೆಯುವಂತೆ ಮಾಡಬೇಕು ಅನ್ನುವ ಹುಮ್ಮಸ್ಸಿತ್ತು. ಹೀಗಾಗಿಯೇ  ವಿಜ್ಞಾನಿಗಳನ್ನು ಕರೆದ ವಾಜಪೇಯಿ ಕೇಳಿದ್ದು ಒಂದೇ ಮಾತು,”ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ” ಎಂದು. ಮುಂದೆ ಕೂತಿದ್ದ ವಿಜ್ಞಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತಮ್ಮ ಸಾಹಸಕ್ಕೆ ಬೆನ್ನೆಲುಬಿನಂತೆ ನಿಲ್ಲಬಲ್ಲ ವ್ಯಕ್ತಿಯೊಬ್ಬನಿದ್ದಾನೆ ಎಂದು ಅವರು ಮಂದಹಾಸ ಸೂಚಿಸಿದರು.

ಕೆಲಸವೇನೋ ಶುರುವಾಯ್ತು, ಆದರೆ 13 ದಿನಕ್ಕೆ ಸರ್ಕಾರ ಪತನಗೊಂಡಿತು. ಹೀಗಾಗಿ ಹೊಸ ಉತ್ಸಾಹದಿಂದ ಅಣು ಪರೀಕ್ಷೆಯ ಸಿದ್ದತೆ ಮಾಡಿಕೊಂಡಿದ್ದ ವಿಜ್ಞಾನಿಗಳು ನಿರಾಶೆಗೊಂಡರು. ಆದರೂ ಪಟ್ಟು ಬಿಡದೆ ಬಳಿಕ ಪ್ರಧಾನಿ ಪಟ್ಟಕ್ಕೇರಿದ ದೇವೇಗೌಡ, ಐಕೆ ಗುಜ್ರಾಲ್ ಮುಂದೆ ಅಣು ಪರೀಕ್ಷೆಯ ಕಡತವಿಟ್ಟರು. ಆದರೆ ಇಚ್ಛಾಶಕ್ತಿಯ ಕೊರತೆ ವಿಜ್ಞಾನಿಗಳ ಕನಸಿಗೆ ತಣ್ಣೀರು ಎರಚಿತು.

ಹಾಗಂತ ವಿಜ್ಞಾನಿಗಳು ನಿರಾಸೆಗೊಂಡಿರಲಿಲ್ಲ.ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಬಲ್ಲ ಧೀರನೊಬ್ಬ ಬಂದೇ ಬರುತ್ತಾನೆ, ವೀರತ್ವ ತೋರಿಸಿಯೇ ತೋರುತ್ತಾನೆ ಎಂದು ಅವರು ಕಾದಿದ್ದರು.

ಹಾಗೇ ಆಯ್ತು ದೈವದ ಇಚ್ಛೆ ಅನ್ನುವಂತೆ 1998ರ ಮಾರ್ಚ್ ತಿಂಗಳಲ್ಲಿ ದೇಶದ ಆಡಳಿತ ಚುಕ್ಕಾಣಿಯನ್ನು ವಾಜಪೇಯಿ ಹಿಡಿದರು. ಆಗ ಅವರು ಕೈಗೆತ್ತಿಕೊಂಡಿದ್ದು ಅಪರೇಷನ್ ಶಕ್ತಿ ಹೆಸರಿನ ಅಣು ಪರೀಕ್ಷೆ ಯೋಜನೆ. 1974ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಅಣು ಪರೀಕ್ಷೆ ಮಾಡಿ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದರು. ಆದರೆ ಬಳಿಕ ಭಾರತ ತನ್ನ ಸಾಮರ್ಥ್ಯ ತೋರಿಸಿರಲಿಲ್ಲ.

ಆದರೆ ವಾಜಪೇಯಿಯವರು ಭಾರತದ ತಾಕತ್ತನ್ನು ವಿಶ್ವದ ಮುಂದೆ ಪ್ರದರ್ಶಿಸಲೇಬೇಕು ಎಂದು ದೃಢ ಸಂಕಲ್ಪ ಮಾಡಿದ್ದರು. ಹೀಗಾಗಿಯೇ ಅಣು ಪರೀಕ್ಷೆಯ ನಡೆಸುವ ನಿರ್ಧಾರಕ್ಕೆ ಬಂದರು. ಸರ್ಕಾರ ಎಷ್ಟು ದಿನ ಇರುತ್ತದೆ ಅನ್ನುವುದು ಅವರಿಗೆ ಗೊತ್ತಿರಲಿಲ್ಲ. ಜೊತೆಗೆ ಅಣ್ವಸ್ತ್ರ ಪರೀಕ್ಷೆಯಿಂದ ಬರುವ ವಿಶ್ವದ ವಿರೋಧವನ್ನು ಎದುರಿಸಲು ಸಜ್ಜಾಗಬೇಕಿತ್ತು.  ಹೀಗಾಗಿ ಅಬ್ದುಲ್ ಕಲಾಂ ,ಡಾ. ಆರ್ ಚಿದಂಬರಂರನ್ನು ಕರೆದು ಯೋಜನೆ ಜಾರಿಗೊಳಿಸಲು ಸಾಧ್ಯವೇ ಎಂದು ಕೇಳಿದರು.

ನೀವು ಅಧಿಕಾರದಿಂದ ಕೆಳಗಿಳಿದ ನಂತರವೂ, ನಮ್ಮ ಸಂಶೋಧನೆ ನಿಂತಿರಲಿಲ್ಲ. ಹೀಗಾಗಿ ಅಣ್ವಸ್ತ್ರ ಯಾಕೆ, ಹೈಡ್ರೋಜನ್ ಬಾಂಬ್ ಸಿಡಿಸಲು ಅನುಮತಿ ಕೊಡಿ ಎಂದರು. ದೇಶದ ಪರಮೋಚ್ಛ ನಾಯಕ ಹಸಿರು ನಿಶಾನೆ ತೋರಿದರು. ಆದರೆ ಜಾರಿ ಅಷ್ಟು ಸುಲಭವಿರಲಿಲ್ಲ. ಅಮೆರಿಕಾ ಉಪಗ್ರಹಗಳು ಭಾರತದ ನೆಲವನ್ನು ಅಂಗುಲ ಬಿಡದಂತೆ ಸ್ಕ್ಯಾನಿಂಗ್ ಮಾಡುತ್ತಿತ್ತು. ಅಮೆರಿಕಾ ಹಾಗೂ ಪಾಕಿಸ್ತಾನದ ಗೂಢಚಾರರು ಭಾರತದ ನೆಲದಲ್ಲಿ ಓಡಾಡುತ್ತಿದ್ದರು. ಆದರೂ ವಿಜ್ಞಾನಿಗಳು ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ.

ಉಪಗ್ರಹ ಮತ್ತು ಗೂಢಚಾರರ ಕಣ್ಣಿಗೆ ಮಣ್ಣೆರಚಿ ಮಾಡಬೇಕಾದ ಕೆಲಸದ ನೀಲ ನಕ್ಷೆ ರಚನೆಯಾಯ್ತು. ನೀರಾವರಿ ಕಾಮಗಾರಿ ಹೆಸರಿನಲ್ಲಿ ಪೋಖ್ರಾನ್ ನೆಲದಲ್ಲಿ ದೇಶದ ವೀರ ಸೈನಿಕರು ಗುಂಡಿ ಅಗೆದರು. ಯಾರೊಬ್ಬರಿಗೂ ತಾವು ಏನು ಮಾಡುತ್ತಿದ್ದೇವೆ ಎಂದು ಗೊತ್ತಿರಲಿಲ್ಲ. ಕಲಾಂ, ಚಿದಂಬರಂ , ವಾಜಪೇಯಿ ಹಾಗೂ ಅವರ ಕಾರ್ಯದರ್ಶಿ ಬ್ರಿಜೇಶ್ ಮಿಶ್ರಾರಿಗೆ ಅವರಿಗೆ ಮಾತ್ರ ಏನಾಗುತ್ತಿದೆ ಅನ್ನುವುದು ಗೊತ್ತಿತ್ತು.

ರಕ್ಷಣಾ ಸಚಿವ ಹಾಗೂ ಗೃಹ ಸಚಿವರಿಗೆ ಇಂತಹುದೊಂದು ಕೆಲಸ ನಡೆದಿದೆ ಎಂದು ಗೊತ್ತಾಗಿದ್ದು ಮೇ 10ರ ಸಂಜೆ.

ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸೈನಿಕರು ರಾತ್ರಿ ಹೊತ್ತಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದರು. ಯಾರಿಗೂ ಅನುಮಾನ ಬಾರದಿರಲಿ ಎಂದು ಎಲ್ಲರೂ ಸೈನಿಕರ ಸಮವಸ್ತ್ರ ಧರಿಸಿದ್ದರು.

ಅಣು ಪರೀಕ್ಷೆಗೆ ಬೇಕಾದ ಎಲ್ಲಾ ಕೆಲಸಗಳು ಮುಕ್ತಾಯವಾಯ್ತು. ಇನ್ನೇನು ಕೆಲವೇ ಹೊತ್ತಿನಲ್ಲಿ ಇಡೀ ವಿಶ್ವ ಭಾರತದತ್ತ ತಿರುಗುತ್ತದೆ. ದೆಹಲಿಯ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್ ಜೀ, ಅಡ್ವಾಣಿ ಮತ್ತು ಜಾರ್ಜ್ ಹಾಗೂ ಬ್ರಿಜೇಶ್ ಮಿಶ್ರಾ ಆತಂಕದಲ್ಲಿ ಕೂತಿದ್ದರು.

ಆದರೆ ಮೇ 10ಕ್ಕೆ ಆಕಾಶ ಬಿರಿಯುವಂತಹ ಮಳೆ ಮರುಭೂಮಿಯಲ್ಲಿ ಸುರಿಯಿತು.ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ

ನೂಕಿತು. ಈ ನಡುವೆ ಯೋಜನೆಯ ಮಹತ್ವದ ಕೊಂಡಿಯಾಗಿದ್ದ ವಿಜ್ಞಾನಿ ಕಾಕೋಡ್ಕರ್ ರ ತಂದೆ ತೀರಿಕೊಂಡ ಸುದ್ದಿ ಬಂತು. ಊರಿಗೆ ಧಾವಿಸಿದ ಕಾಕೋಡ್ಕರ್ ತಂದೆಯ ಅಂತ್ಯ ಸಂಸ್ಕಾರ ಮುಗಿಸಿ , ಮುಂದಿನ ಕೆಲಸಗಳಿಗೆ ಕಾಯದೇ ವಾಪಾಸ್ ಬಂದಿದ್ದರು.

ಮರುದಿನದ ವೇಳೆಗೆ ಮೋಡಗಳೂ ತಿಳಿಯಾದವು. ಬಿರುಬಿಸಿಲೂ ಬಂತು. ಇನ್ನೇನು ಪರೀಕ್ಷೆ ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ ಎದ್ದಿತು. ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ ಮುಂದೆ ಹೋಯ್ತು. ವಿಜ್ಞಾನಿಗಳ ಮುಖದಲ್ಲಿ ಆತಂಕದ ಗೆರೆಗಳು ಮೂಡಿತ್ತು.

ಆದರೆ ಅದೃಷ್ಟ ವಿಜ್ಞಾನಿಗಳ ಕಡೆಗಿತ್ತು. ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು. ಮರಳು ಶಾಂತವಾಯ್ತು. ಒಂದು ಎರಡು ಮೂರು ಎಂದು ವಿಜ್ಞಾನಿಗಳು ಕೌಂಟ್ ಡೌನ್ ಎಣಿಸುತ್ತಿದ್ದಂತೆ ದೊಡ್ಡದೊಂದು ಸದ್ದು ಅಮೆರಿಕಾದ ವೈಟ್ ಹೌಸ್ ಕಿವಿಗೆ ತಟ್ಟಿತು. ಡೆಲ್ಲಿ ನಕ್ಕರೆ, ವಿಜ್ಞಾನಿಗಳು ಕುಣಿದರು, ದೇಶದ ಜನ ಭೇಷ್ ಅಂದರು. ನಂತರ ಎಲ್ಲವೂ ಇತಿಹಾಸ.

ದಿ ವಿಲನ್ ಆಡಿಯೋ ಲಾಂಚ್ ಪಾಸ್ ಬೇಕಾ…?

ಪ್ರೇಮ್ ನಿರ್ದೇಶನದ, ಶಿವಣ್ಣ ಮತ್ತು ಕಿಚ್ಚ ಅಭಿನಯದ ದಿ ವಿಲನ್ ತೆರೆ ಮೇಲೆ ಯಾವಾಗ ಬರುತ್ತದೆ ಅನ್ನುವ ಕಾತುರ ಎಲ್ಲರಿಗಿದೆ. ಅದಕ್ಕೂ ಮುಂಚೆಯೇ ಯೂ ಟ್ಯೂಬ್ ನಲ್ಲಿ ಬಿಟ್ಟಿರುವ ಹಾಡುಗಳು ಚಿಂದಿ ಉಡಾಯಿಸಿವೆ. ಇನ್ನಷ್ಟು ಹಾಡುಗಳು ಪ್ರೇಮ್ ಬತ್ತಳಿಕೆಯಲ್ಲಿದ್ದು, ಅವುಗಳ ಬಿಡುಗಡೆಗೂ ಮುಹೂರ್ತ ಫಿಕ್ಸ್ ಆಗಿದೆ.

ಇದೇ ಭಾನುವಾರ ಆಗಸ್ಟ್ 19 ರಂದು ಮಾನ್ಯತಾ ಟೆಕ್ ಪಾರ್ಕ್ ಒಳಗಿರುವ ವೈಟ್ ಆರ್ಕೀಡ್ ನಲ್ಲಿ ಅದ್ದೂರಿಯಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ.

ಈ ಆಡಿಯೋ ಲಾಂಚ್ ಕಾರ್ಯಕ್ರಮದ ಎಲ್ಲಾ ರೈಟ್ಸ್ ಗಳನ್ನು ಝೀ ಕನ್ನಡ ವಾಹಿನಿ ಪಡೆದುಕೊಂಡಿದ್ದು, ಸಮಾರಂಭಗ ರೂಪುರೇಷೆಗಳನ್ನು ವಾಹಿನಿಯೇ ನಿರ್ಧರಿಸಲಿದೆ.

ಹೀಗಾಗಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು ಅನ್ನುವ ಕಾರಣದಿಂದ ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಇಂದೇ ಪಾಸ್ ಪಡೆಯರಿ, ಆಗಸ್ಟ್ 19 ರ ಕಾರ್ಯಕ್ರಮವನ್ನು ಲೈವ್ ಆಗಿ ಎಂಜಾಯ್ ಮಾಡಿ.

ಯಾಕಮ್ಮ ಲೇಟು..? ನೀವು ಬೇಗ ಬಂದ್ರೆ ಡಿಸಿನೂ ಬರಬೇಕಾ…?

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಾಸನ ಉಸ್ತುವಾರಿ ಸಚಿವ ರೇವಣ್ಣ ಗರಂ ಆದ ಘಟನೆ ನಡೆದಿದೆ.ಹಾಸನ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭ 9 ಗಂಟೆಗೆ ಆಯೋಜಿತವಾಗಿತ್ತು. ಪ್ರತೀ ಸಲ ಲೇಟಾಗಿ, ಅಥವಾ ಕಾರ್ಯಕ್ರಮ ಶುರುವಾಗಲು ಇನ್ನೊಂದಿಷ್ಟು ನಿಮಿಷ ಇರುತ್ತದೆ ಅನ್ನುವಾಗ ಬರುವಾಗ ರೇವಣ್ಣ ಇಂದು 20 ನಿಮಿಷ ಮುಂಚೆಯೇ ಸ್ಥಳಕ್ಕೆ ಬಂದಿದ್ದರು.

ಆದರೆ ಸಚಿವರು ಲೇಟಾಗಿ ಬರ್ತಾರೆ ಎಂದು ಡಿಸಿ ಮೇಡಂ ಕೂಡಾ ನಿಧಾನವಾಗಿಯೇ ಬಂದಿದ್ದಾರೆ. ಆದರೆ ಸಚಿವರು ಬಂದ್ರೂ ಡಿಸಿ ಬಂದಿಲ್ಲ ಅಂದ್ರೆ ಏನರ್ಥ ಎಂದು ರೇವಣ್ಣ ಪಿತ್ತ ನೆತ್ತಿಗೇರಿದೆ.

ಹೀಗಾಗಿ 9 ಗಂಟೆ ದಾಟುತ್ತಿದ್ದಂತೆ ಸ್ಥಳಕ್ಕೆ ಬಂದ ಸಿಂಧೂರಿಯವರನ್ನು ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆಲ್ಲಾ ಮಾಡಿದ್ರೆ ಆಗಲ್ಲ ಎಂದು ಲೈಟಾಗಿ ಗದರಿದ್ದಾರೆ.

ಇನ್ನು ಡಿಸಿ ಮೇಲಿನ ಸಿಟ್ಟು ಕೆಲ ಹೊತ್ತು ಹಾಗೇ ಇತ್ತು. ಹೀಗಾಗಿ ಡಿಸಿಯವರನ್ನು ಮಾತನಾಡಿಸುವ ಗೋಜಿಗೆ ರೇವಣ್ಣ ಹೋಗಲಿಲ್ಲ. ಒಂದಿಷ್ಟು ಹೊತ್ತಾದ ಮೇಲೆ ಸಿಟ್ಟು ತಣಿದ ರೇವಣ್ಣ ಕೂಲ್ ಆಗಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಜಾನಕಿಯನ್ನು ಮಗಳೆಂದು ಕಂಡು ಹಿಡಿಯುತ್ತಾರೆಯೇ CSP

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಗಳು ಜಾನಕಿ ಕುತೂಹಲಕರ ಘಟ್ಟ ತಲುಪಿದೆ. ಮನೆಯಿಂದ ಓಡಿ ಬಂದಿರುವ ಜಾನಕಿಯನ್ನು ಭಾರ್ಗಿ ಮತ್ತು ರಶ್ಮಿ ಬೆನ್ನು ಹತ್ತಿದ್ದಾರೆ. ಮತ್ತೊಂದು ಕಡೆ ಲಕ್ಷ್ಮಿ ಸಹಾಯದಿಂದ ಜಾನಕಿ ಮತ್ತು ಆನಂದ್ ಸಿಎಸ್ಪಿ ಮನೆಗೆ ಬಂದು ತಲುಪಿಯಾಗಿದೆ.

ಆನಂದ್ ಮತ್ತು ಜಾನಕಿ ಮದುವೆಯನ್ನು ಮಾಡಿಸುವುದಾಗಿ CSP ಒಪ್ಪಿಕೊಂಡಿರುವುದೇ ಇಡೀ ಧಾರಾವಾಹಿಯ ಟ್ವಿಸ್ಟಿಂಗ್ ಪಾಯಿಂಟ್ ಅನ್ನಿಸಿಕೊಂಡಿದೆ.

ಜಾನಕಿಯನ್ನು ನೋಡಿದ CSP ಇವಳು ನನ್ನ ಮಗಳಂತೆ ಅನ್ನಿಸುತ್ತಿದೆ ಅನ್ನುವಂತೆ ದಿಟ್ಟಿಸಿ ನೋಡಿದ್ದಾರೆ. ಆದರೆ ಜಾನಕಿ ಹೆಸರು ಚಾರುಲತ ಎಂದು ಗೊತ್ತಾಗುತ್ತಿರುವಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಜಾನಕಿ ಹೆಸರನ್ನು ಸುಳ್ಳು ಹೇಳುತ್ತಿದ್ದಾಳೆ ಅನ್ನುವ ಸಂಶಯ CSP ಗೆ ಬಂದಿದೆ.

ಹಾಗಾದರೆ CSP ಜಾನಕಿಯನ್ನು ಗುರುತು ಹಿಡಿಯುತ್ತಾರೋ, ಅಥವಾ ತನಗೆ ಗೊತ್ತಿಲ್ಲದಂತೆ ಮಗಳನ್ನು ಧಾರೆಯೆರೆದು ಕೊಡ್ತಾರೋ..

ಇವೆಲ್ಲವನ್ನೂ ಹೊರತುಪಡಿಸಿ ನಿರಂಜನ್ ಎಂಟ್ರಿ ಹೊಡೆದು, ಊಹೆಗಳನ್ನು ಉಲ್ಟಾ ಪಲ್ಟಾ ಮಾಡಿ, ತಾನೊಬ್ಬ ನಕಲಿ ಐಎಎಸ್ ಅಧಿಕಾರಿ ಅನ್ನುವುದು ಬಹಿರಂಗವಾಗುತ್ತದೋ…ಅದರೆ ಇವೆರಡೂ ಸಾಧ್ಯತೆಗಳು ತುಂಬಾ ಕಡಿಮೆ.

ಏನಿವೇ ನೀವು ಈ ಧಾರಾವಾಹಿಯನ್ನು ಇಷ್ಟಪಡುತ್ತಿದ್ದರೆ… ಕಥೆಯನ್ನು ಮುಂದುವರಿಸಿ ಏನಾಗುತ್ತದೆ ಅನ್ನುವುದನ್ನು ಗುರುವಾರ ರಾತ್ರಿ 9.30ಕ್ಕೆ ನೋಡೋಣ.