Advertisements

ರಮ್ಯರನ್ನು ಕೆಲಸದಿಂದ ಕಿತ್ತು ಹಾಕಿದ್ರಂತೆ ರಾಹುಲ್…!

ನೀವು Observe ಮಾಡಿದ್ರೋ..ಇಲ್ವೋ ಗೊತ್ತಿಲ್ಲ, ಇತ್ತೀಚೆಗೆ ಚಂದನವನದ ಮೋಹಕ ತಾರೆ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ರಮ್ಯ ಸೈಲೆಂಟ್ ಆಗಿದ್ದಾರೆ. ಒಂದಲ್ಲ ಒಂದು ಟ್ವೀಟ್ ಮೂಲಕ ಸುದ್ದಿಯಾಗುತ್ತಿದ್ದ ದಿವ್ಯ ಸ್ಪಂದನ ಟ್ವೀಟ್ ಗಳ ದೂರವುಳಿದಿದ್ದಾರೆ. ಏನಿದ್ದರೂ ಅವರೀಗ ರೀ ಟ್ವೀಟ್ ಮಾಡುವುದಕ್ಕೆ ಸೀಮಿತರಾಗಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ರಮ್ಯ ಅವರು ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ಅನ್ನುವ ಹುದ್ದೆಯಿಂದ ಕೆಳಗಿಳಿದಿದ್ದಾರಂತೆ..ಅಲ್ಲ ಕೆಳಗಿಳಿಸಿದ್ದಾರಂತೆ. ಹೀಗಾಗಿಯೇ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ಬಳಿಕ ಸುಂಟರಗಾಳಿಯಂತೆ ಟ್ವೀಟ್ ಗಳನ್ನು ಮಾಡುತ್ತಿದ್ದ ಮಾಜಿ ಸಂಸದೆ, ನಟಿ ಹಾಗೂ ರಾಜಕಾರಣಿ ರಮ್ಯಾ ರೀ ಟ್ವೀಟ್ ಕೆಲಸಕ್ಕೆ ಕೂತಿದ್ದಾರೆ.

ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ವೇಳೆ ಅನಗತ್ಯವಾಗಿ ಟ್ವೀಟ್ ಮಾಡಬಾರದು ಹಾಗೂ ರಾಹುಲ್ ಗಾಂಧಿಗೆ ಸಂಬಂಧಪಟ್ಟ ಸುದ್ದಿಗಳನ್ನು ಟ್ವೀಟ್ ಮಾಡದಂತೆ ಸೂಚ ನೀಡಲಾಗಿತ್ತು. ಆದರೆ ರಮ್ಯಾ ಇದನ್ನು ಪಾಲಿಸಿರಲಿಲ್ಲ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟ್ವೀಟ್ ಮಾಡಿ ಬಹಳಷ್ಟು ಬಾರಿ ಎಡವಟ್ಟು ಮಾಡಿಕೊಂಡಿದ್ದರು. ಇದು ಕಾಂಗ್ರೆಸ್ ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ ರಮ್ಯ ಕೆಲಸದ ಬಗ್ಗೆ ಮುನಿಸಿಕೊಂಡಿರುವ ನಾಯಕರು ರಮ್ಯಾಗೆ ಅಂಕುಶ ಹಾಕುವಂತೆ ಸಲಹೆ ನೀಡಿದ್ದರು.

ಜಯಲಲಿತಾ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕರಾವಳಿ ಕುವರಿ ಯಾರು..?

ರಮ್ಯಾ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವಂತೆ ಸಲಹೆ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದರಿಂದಾಗಿ ರಮ್ಯ ಬದಲಿಗೆ ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿಖಿಲ್ ಜೆ ಆಳ್ವಾ ಅವರಿಗೆ ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ವಹಿಸಲಾಗಿದೆಯಂತೆ. ನಿಖಿಲ್ ಮಾಧ್ಯಮಕ್ಕೆ ಸಂಬಂಧಿಸಿದ ಸಂಸ್ಥೆಯನ್ನು ಮುನ್ನಡೆಸಿದ ಅನುಭವ ಹೊಂದಿದ ವ್ಯಕ್ತಿ ಅನ್ನುವುದು ಇಲ್ಲಿ ಗಮನಾರ್ಹ.

ಹೀಗಾಗಿ ರಮ್ಯ ಮೇಡಂ ಕೆಲಸವಿಲ್ಲದೆ ಕೂರುವಂತಾಗಿದೆ.

Ramya2Ramya4

Advertisements

ಜಯಲಲಿತಾ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕರಾವಳಿ ಕುವರಿ ಯಾರು..?

ಆದಿತ್ಯ ಭಾರಧ್ವಾಜ್‌ ನಿರ್ಮಾಣದ ಜಯಲಲಿತಾ ಬಯೋಪಿಕ್ ಗಾಗಿ ಭರದ ಸಿದ್ದತೆಗಳು ನಡೆಯುತ್ತಿದೆ. ಈಗಾಗಲೇ ಕಥೆ ಸಿದ್ದವಾಗಿದೆ. ತಾಂತ್ರಿಕ ತಂಡವೂ ತಯಾರಿದೆ. ಆದರೆ ಬಯೋಪಿಕ್‌ನಲ್ಲಿ ಜಯಲಲಿತಾ ಪಾತ್ರವನ್ನು ಯಾರು ಮಾಡುತ್ತಾರೆ ಅನ್ನುವುದೇ ಈಗಿನ ಕುತೂಹಲ.

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಥವಾ ಬಾಲಿವುಡ್‌ ತಾರೆ ಐಶ್ವರ್ಯಾ ರೈ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.ಹೀಗಾಗಿ ಇಬ್ಬರ ಜೊತೆಯೂ ಮಾತುಕತೆ ನಡೆಯುತ್ತಿದ್ದು, ಯಾರು ಒಪ್ಪಿಕೊಳ್ಳುತ್ತಾರೆ ಅನ್ನುವುದು ಗೊತ್ತಿಲ್ಲ.

ಅಂದ ಹಾಗೇ  ಅಮ್ಮ-ಪುರಚ್ಚಿ ತಲೈವಿ ಹೆಸರಿನ ಈ ಬಯೋಪಿಕ್‌ ಅನ್ನು ಭಾರತಿರಾಜ ನಿರ್ದೇಶಿಸಲಿದ್ದು, ಇಳಯರಾಜ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ಎಂಜಿಆರ್‌ ಪಾತ್ರವನ್ನು ಕಮಲ್‌ ಹಾಸನ್‌ ಅಥವಾ ಮೋಹನ್‌ಲಾಲ್‌ ಮಾಡುವ ಸಾಧ್ಯತೆಗಳಿದೆ.  ಈ ನಡುವೆ ವಿಜಯ್‌ ನಿರ್ದೇಶನದಲ್ಲಿಯೂ ಜಯಲಲಿತಾ ಬಯೋಪಿಕ್‌ ಬರುತ್ತಿದ್ದು, ಇದರಲ್ಲಿ ಜಯಲಲಿತಾ ಪಾತ್ರಕ್ಕೆ ವಿದ್ಯಾ ಬಾಲನ್‌ ಹೆಸರು ಕೇಳಿಬರುತ್ತಿದೆ.

ಮಳೆ ನಿಲ್ಲಿಸಲು ಯಾಗದ ಮೊರೆ – ಮತ್ತೆ ಅನುರಣಿಸಿದ 70 ವರ್ಷದ ಹಿಂದೆ ಬಳಸಿದ ವೇದ – ಮಂತ್ರ

ಮಳೆಗಾಗಿ ಹೋಮ ಯಾಗ ನಡೆಸಿದ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಇದೀಗ ಮಳೆ ನಿಲ್ಲಿಸಲು ಯಾಗ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಅತಿವೃಷ್ಟಿ, ಜಲಪ್ರಳಯ, ಭೂ ಕುಸಿತ ಸೇರಿದಂತೆ ಅನೇಕ ಜಲಗಂಡಾಂತರ ನಿವಾರಣೆಗಾಗಿ ಸುಳ್ಯದ ಚೆನ್ನಕೇಶವ ದೇವಾಲಯದಲ್ಲಿ ವರುಣ ಮಹಾಯಾಗ ನಡೆಯಿತು.

ಮಳೆಗಾಗಿ ಪರ್ಜನ್ಯ ಯಾಗ ನಡೆಸಿ ಫಲ ಕಂಡಿರುವ ಸುಳ್ಯ ಕೇಶವ ಕೃಪಾ ವೇದ ಶಾಲೆಯ ಬ್ರಹ್ಮಶ್ರೀ ಪುರೋಹಿತ ನಾಗರಾಜ್ ಭಟ್ ನೇತೃತ್ವದಲ್ಲಿ ಜಲಗಂಡಾಂತರ ನಿವರಣಾ ಯಾಗಗಳು ನಡೆದಿದ್ದು, ಶೀಘ್ರದಲ್ಲೇ ವರುಣ ದೇವ ವಿರಾಮ ನೀಡುವ ಸಾಧ್ಯತೆಗಳಿದೆಯಂತೆ.

ವಿಶೇಷ ಅಂದರೆ ಇಂತಹುದೊಂದು ಯಾಗ ನಡೆದು 70 ವರ್ಷಗಳು ಕಳೆದು ಹೋಗಿದೆ. 70 ವರ್ಷಗಳ ಹಿಂದೆ  ತಮಿಳುನಾಡಿನಲ್ಲಿ ಇದೇ ತರಹದ ಯಾಗ ನಡೆದಿತ್ತು. ಅಲ್ಲಿ ಅತಿವೃಷ್ಟಿಯಾದ ಸಂದರ್ಭದಲ್ಲಿ ಚಂದ್ರಶೇಖರಾನಂದ ಸರಸ್ವತಿ ಸ್ವಾಮೀಜಿ ಇಂತಹುದೊಂದು ಯಾಗ ಫಲ ಕಂಡಿದ್ದರಂತೆ. ಹೀಗಾಗಿ ಅಲ್ಲಿ ಬಳಸಿದ ವೇದ ಮಂತ್ರಗಳನ್ನು ಸುಳ್ಯದಲ್ಲೂ ಬಳಸಲಾಗಿದೆ ಎಂದು ನಾಗರಾಜ್ ಭಟ್ ಹೇಳಿದ್ದಾರೆ.

ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…

ಕೊಡಗಿನಲ್ಲಿ ಅಬ್ಬರಿಸಿದ ಮಳೆ ಮಾಡಿದ ಹಾನಿಗೆ ಲೆಕ್ಕವಿಲ್ಲ. ತೋಟ, ಸೂರು ಎಲ್ಲವನ್ನೂ ನೆರೆ ನುಂಗಿ ಹಾಕಿದೆ. ಬಡವ ಶ್ರೀಮಂತ, ಜಾತಿ ಧರ್ಮ ಅನ್ನುವ ಬೇಧ ತೋರದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.

ಕೊಡಗು ಮತ್ತೆ ಸಹಜ ಸ್ಥಿತಿಗೆ ಬರಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.ಆದರೆ ಇದೀಗ ಸುರಿದಿರುವ ಮಳೆ, ಮದುವೆ ಕನಸನ್ನು ನುಚ್ಚು ನೂರು ಮಾಡಿದೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ರಾಟೆಮನೆ ಪೈಸಾರಿಯ ಬೇಬಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು.ದುಡಿದು ಕೂಡಿಟ್ಟ ಹಣದಲ್ಲಿ ಮಗಳು ಮಂಜುಳಾ ಮದುವೆ ನಡೆಸಲು ಅವರು ನಿರ್ಧರಿಸಿದ್ದರು ಕೇರಳದ ಹುಡುಗನೊಂದಿಗೆ ಮದುವೆ ಕೂಡಾ ನಿಗದಿಯಾಗಿತ್ತು. ಆಗಸ್ಟ್ 26ರಂದು ಮಕ್ಕಂದೂರಿನ ಹಾಲ್ ಕೂಡಾ ಬುಕ್ ಆಗಿತ್ತು.ಆಹ್ವಾನ ಪತ್ರಿಕೆ ಹಂಚಿಯಾಗಿದೆ.

ಆದರೆ ಸುರಿದಿರುವ ಮಳೆ ಮದುವೆ ಮಂಟಪವನ್ನು ನುಂಗಿದೆ. ಒಂದೆರೆಡು ದಿನದಲ್ಲಿ ಪರಿಸ್ಥಿತಿ ನೋಡಿ ಹೇಳುತ್ತೇವೆ ಎಂದು ಕೇರಳದ ಹುಡುಗರ ಮನೆಯವರಿಗೆ ತಿಳಿಸಲಾಗಿದೆ.

ಆದರೆ ಮಳೆ ಬಂತು ಎಂದು ಉಟ್ಟ ಬಟ್ಟೆಯಲ್ಲಿ ಬೇಬಿ ಮತ್ತು ಮಂಜುಳಾ ಹೊರ ಬಂದಿದ್ದಾರೆ. ಕೂಲಿ ಮಾಡಿ, ಸಾಲ ಮಾಡಿ ತೆಗೆದಿದ್ದ ಚಿನ್ನ, ಬಟ್ಟೆ ಬರೆ ಮನೆಯೊಳಗೆ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.ಗಂಜಿ ಕೇಂದ್ರದಿಂದ ಮನೆಯತ್ತ ಹೋಗಿ ನೋಡಿದ ಮೇಲಷ್ಟೇ ಪರಿಸ್ಥಿತಿ ಗೊತ್ತಾಗಲಿದೆ ಅನ್ನುತ್ತಾರೆ ಬೇಬಿ.

ಇನ್ನು ಸರ್ಕಾರ ಸಹಾಯ ಮಾಡದಿದ್ದರೆ ಮದುವೆ ಮಾಡುವುದು ಕಷ್ಟ ಅನ್ನುವು ಬೇಬಿಗೆ ದನಿಗೂಡಿಸಿರುವ ಮಂಜುಳಾ ಪರಿಸ್ಥಿತಿ ನೋಡಿದರೆ ಮದುವೆಯೇ ಬೇಡ ಅನ್ನುತ್ತಾರೆ ಮಂಜುಳಾ.

ಇದು ಅವರ ಕಥೆಯಾದರೆ ಇದೇ ಊರಿನ ಸುಮಿತ್ರಾ ತಮ್ಮ ಮಗಳು ರಂಜಿತಾಳ ಮದುವೆಯನ್ನು ಸೆಪ್ಟಂಬರ್ 2 ರಂದು ನಿಶ್ಚಯ ಮಾಡಿದ್ದಾರೆ.

ಮಗಳ ಮದುವೆಗಾಗಿ ಕಾಫಿ ತೋಟದ ಮಾಲೀಕರಿಂದ ಸಾಲವನ್ನೂ ಕೂಡಾ ಪಡೆದಿದ್ದಾರೆ. ಆದರೆ ಇದೀಗ ಮಾಲೀಕರ ಕಾಫಿ ತೋಟ ಕೊಚ್ಚಿ ಹೋಗಿದೆ.

ಪ್ರವಾಹದೊಂದಿಗೆ ಮದುವೆಗೆ ಮಾಡಿಟ್ಟ ಚಿನ್ನಾಭರಣ, ಬಟ್ಟೆ ಬರೆ ಕೊಚ್ಚಿ ಕೊಂಡು ಹೋಗಿದೆ. ಮದುವೆಗಾಗಿ ಲಕ್ಷಗಟ್ಟಲೆ ಸಾಲ ಮಾಡಿರುವ ಕುಟುಂಬ ಈಗ ನೋಡಿರುವ ಕೇರ ಹುಡುಗ ಕೈ ಕೊಟ್ಟರೆ ಅನ್ನುವ ಆತಂಕದಲ್ಲಿದೆ. ಸರ್ಕಾರ ಸಹಾಯ ಹಸ್ತ ಚಾಚದಿದ್ದರೆ ಇವರ ಬದುಕು ಏನಾಗುತ್ತದೋ ಗೊತ್ತಿಲ್ಲ.

ಏಕಕಾಲದಲ್ಲಿ ಗರ್ಭಿಣಿಯರಾದ  ಒಂದೇ ಆಸ್ಪತ್ರೆಯ 16 ನರ್ಸ್ ಗಳು..!

ಅಮೆರಿಕಾದ ಅರಿಜೋನಾ ರಾಜ್ಯದ ಮೆಸ್ಸಾದಲ್ಲಿರುವ ಬ್ಯಾನರ್ ಡೆಸರ್ಟ್ ಆಸ್ಪತ್ರೆಯಲ್ಲಿ ಇದೀಗ ಹಬ್ಬದ ಸಂಭ್ರಮ. ಪ್ರತೀ ಸಲವೂ ಆಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಆರೈಕೆ ಮಾಡುತ್ತಿದ್ದ ದಾದಿಯರೇ ಇದೀಗ ಗರ್ಭಿಣಿಯರಾಗಿದ್ದಾರೆ.

ಅದರಲ್ಲಿ ಏನು ವಿಶೇಷ ಅಂತೀರಾ.ವಿಶೇಷವಿದೆ. ಬ್ಯಾನರ್ ಡೆಸರ್ಟ್ ಆಸ್ಪತ್ರೆಯ 16 ದಾದಿಯರು ಏಕ ಕಾಲದಲ್ಲೇ ಗರ್ಭಿಣಿಯರಾಗಿದ್ದಾರೆ. ಈ 16 ಮಂದಿಯ ಗರ್ಭಕ್ಕೆ 5 ತಿಂಗಳ ವ್ಯತ್ಯಾಸ.

nurses3

ಫೇಸ್ ಬುಕ್ ಗ್ರೂಫ್ ನಲ್ಲಿ ಚಾಟ್ ಮಾಡುತ್ತಿದ್ದ ಈ ದಾದಿಯರು ಪ್ರಸ್ತುತ ಮಗು ಹೊಂದಲು ಯಾರೆಲ್ಲ ಸಿದ್ದರಿದ್ದಾರೆ ಎಂದು ಚರ್ಚೆ ನಡೆಸಿದ್ದರು.

ಆಗ್ಲೇ ಕೆಲವೊಬ್ಬರು ಗರ್ಭವತಿಯಾಗಿದ್ದರು. ಹೀಗಾಗಿ ಉಳಿದವರು ಕೂಡಾ ತಾಯಿಯಾಗುವ ಬಯಕೆ ವ್ಯಕ್ತಪಡಿಸಿದರು. ಮತ್ಯಾಕೆ ತಡ ಎಂದು ಒಂದೇ ಅವಧಿಯಲ್ಲಿ ಗರ್ಭವತಿಯಾದರು.

nurses-babies-arizonajpg

ಸಪ್ಟಂಬರ್ ತಿಂಗಳಿನಿಂದ 2019ರ ತನಕ ಒಬ್ಬರಾದ ಮೇಲೆ ಒಬ್ಬರು ಮಗುವಿಗೆ ಜನ್ಮ ನೀಡಲಿದ್ದಾರೆ.ಮುಂದಿನ ತಿಂಗಳು ಇದೇ ಆಸ್ಪತ್ರೆಯಲ್ಲಿ ಸಂಭ್ರಮ ಹಾಗೂ ಸಡಗರದಿಂದ ಸೀಮಂತ ಕಾರ್ಯಕ್ರಮ ಕೂಡಾ ನಡೆಯಲಿದೆ.

ಒಂದೇ ಆಸ್ಪತ್ರೆಯ 6 ಮಂದಿ ದಾದಿಯರು ಗರ್ಭಿಣಿಯರಾದ ಸುದ್ದಿ ಕೆಲ ತಿಂಗಳ ಹಿಂದೆ ಬಂದಿತ್ತು. ಅಮೆರಿಕಾದ Wake Forest Baptist Health ಮೆಡಿಕಲ್ ಸೆಂಟರ್ ದಾದಿಯರು ಇದೇ ಕಾರಣಕ್ಕೆ ವೈರಲ್ ಆಗಿದ್ದರು.

6 nurse

ಬಳಿಕ Salem Hospital ನಲ್ಲಿ 9 ಮಂದಿ ದಾದಿಯರು ಗರ್ಭಿಣಿಯರಾದ ಸುದ್ದಿ ಬಂದಿತ್ತು. ಈ ಪೈಕಿ ಒಬ್ಬರು ಈಗಾಗಲೇ ಮಗುವಿಗೆ ಜನ್ಮ ನೀಡಿದ್ದಾರೆ.

9 nurse

ಆದರೆ ಇದೀಗ ಅವರನ್ನು ಮೀರಿಸುವ ತಾಯಂದಿರು ಬಂದಿದ್ದಾರೆ.

ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಹಿರೋ ಉಪ್ಪಳದ ಶೆಟ್ಟಿ… ಯಾಕೆ ಗೊತ್ತಾ…?

ಇವತ್ತು ಸಾಮಾಜಿಕ ಜಾಲ ತಾಣವನ್ನು ಆಳಿದ್ದು ಬಿಟಿವಿಯ ರಾಧಕ್ಕನ್ನೂ ಅಲ್ವ, ಪಬ್ಲಿಕ್ ಟಿವಿಯ ರಂಗಣ್ಣನೂ ಅಲ್ಲ. ಸುವರ್ಣ ಟಿವಿಯ ಜಯಪ್ರಕಾಶ್ ಶೆಟ್ಟಿ.

ತನ್ನದೇ ವಾಹಿನಿಯನ್ನು ಬೋಗಸ್ ಅಂದ್ರು ಬಿಟ್ರು ರಂಗಣ್ಣ….!

ನಿಜಕ್ಕೂ ಇವತ್ತು ಜಯಪ್ರಕಾಶ್ ಶೆಟ್ಟಿ ಮಾಡಿದ ಕೆಲಸವನ್ನು ಮೆಚ್ಚಲೇಬೇಕು. ನೆರೆಯಿಂದ ತತ್ತರಿಸಿದ ಮಂದಿಗೆ ಬಿಸ್ಕೆಟ್ ಹಾಕಿದ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಪರಿ ಇದೆಯಲ್ಲ ಅದ್ಭುತ. ನಿಜಕ್ಕೂ ಹೌದು ರೇವಣ್ಣ ಅವರನ್ನು ಹಿಗ್ಗಾ ಮುಗ್ಗಾ ಜಾಡಿಸಿದ ಶೆಟ್ಟಿಯವರನ್ನು ಅಭಿನಂದಿಸಲೇಬೇಕು.

ಯಾರಾದ್ರೂ ನಾಳೆ ಸುವರ್ಣ ಕಚೇರಿಗೆ ಹೋಗಿ ಶೆಟ್ಟಿ  ಶಾಲು ಹಾಕಿ ಬನ್ನಿ. ರೇವಣ್ಣ ಅವರು ಎಲ್ಲಾದರೂ ಕಾಣ ಸಿಕ್ಕರೆ ಬಿಸ್ಕೆಟ್ ಕೊಡಿ ಪರವಾಗಿಲ್ಲ.

ಕರ್ನಾಟಕ ಏಳು ನದಿಗಳಲ್ಲಿ ಅಟಲ್ ಅಸ್ತಿ ವಿಸರ್ಜನೆ

ಹಾಗಾದ್ರೆ ಶೆಟ್ಟಿ ಯಾಕೆ ಇಂದು ವೈರಲ್ ಆದ್ರೂ ಗೊತ್ತಾ ಇಲ್ಲಿದೆ ವಿಡಿಯೋ…

ರಾಷ್ಟ್ರೀಯ ಮಟ್ಟದಲ್ಲಿ ಸಿಎಂ ಮಾನ ಹರಾಜು ಹಾಕಿದ ಸೂಪರ್ ಸಿಂ

ನಿಮಗೆ ಆಗದವರು ಯಾರಾದರೂ ಇದ್ದಾರೆ ರಾಜಕಾರಣಿಗಳಿಗೆ ಹೇಳಿ…ಅದ್ಭುತವಾಗಿ ನಿಮ್ಮ ಶತ್ರುವಿನ ಮಾನ ಹರಾಜು ಹಾಕುತ್ತಾರೆ. ಎಲ್ಲಿ ಹೇಗಿರಬೇಕು ಅನ್ನುವ ಜ್ಞಾನವಿಲ್ಲದೆ ವರ್ತಿಸುವ ಇವರು, ದರ್ಪ, ದೌಲತ್ತುಗಳಲ್ಲೇ ಮುಳುಗಿ ಹೋಗಿರುತ್ತಾರೆ.
ನಿನ್ನೆ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ, ರಾಜ್ಯದ ಸಿಎಂ ಅವರ ಸಹೋದರ, ಲೋಕೋಪಯೋಗಿ ಸಚಿವರೂ ಆಗಿರುವ ಹೆಚ್.ಡಿ. ರೇವಣ್ಣ ಆಡಿದ್ದು ಕೂಡಾ ಹೀಗೆ.

ನೆರೆಯಿಂದ ಸಂತ್ರಸ್ಥರಾಗಿರುವ ಜನರಿಗೆ ಸಾಂತ್ವಾನ ಹೇಳುವ ಬದಲು ಅವರನ್ನು ಪ್ರಾಣಿಗಿಂತ ಕಡೆಯಾಗಿ ನೋಡಿದ್ದಾರೆ. ನಾಯಿಗಳಿಗೆ ಬಿಸ್ಕೆಟ್ ಎಸೆಯುವಂತೆ ಮತದಾರರಿಗೂ ಬಿಸ್ಕೆಟ್ ಪ್ಯಾಕೇಟ್ ಎಸೆದಿದ್ದಾರೆ.

ಕೊಡಗಿನ ಹಾರಂಗಿ ಜಲಾಶಯದಿಂದ ನೀರು ಬಿಟ್ಟ ಪರಿಣಾಮ, ಹಾಸನ ಅರಕಲಗೂಡಿನ ರಾಮನಾಥಪುರ ಹಳ್ಳಿಯ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಅವರಿಗೆ ಸಮೀಪದ ಶಾಲೆಯೊಂದರಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು.

ನಿನ್ನೆ ರಾತ್ರಿ ಶಾಸಕ ಎಟಿ ರಾಮಸ್ವಾಮಿ ಜೊತೆ ಗಂಜಿ ಕೇಂದ್ರಕ್ಕೆ ತೆರಳಿದ ರೇವಣ್ಣ ತನ್ನ ದರ್ಪ ದೌಲತ್ತು ತೋರಿದ್ದಾರೆ. ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಸಚಿವರು ನಿರಾಶ್ರಿತರ ಮುಖಕ್ಕೆ ಬಿಸ್ಕೆಟ್ ಪ್ಯಾಕೇಟ್ ಎಸೆದಿದ್ದಾರೆ.

ಹಾಸನ ಕೆಎಂಎಫ್ನಿಂದ ಉಚಿತವಾಗಿ ಸಾವಿರಾರು ಲೀಟರ್ ಹಾಲು ಮತ್ತು ಬಿಸ್ಕೆಟ್ ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದ ರೇವಣ್ಣ ಅವರು, ಭಾನುವಾರ ಜಿಲ್ಲೆಯ ರಾಮನಾಥಪುರದಲ್ಲಿನ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಪ್ರಾಣಿಗಳಂತೆ ಉಪಚರಿಸಿರುವುದು ಮಾತ್ರ ದುರಂತ.

ಸಂತ್ರಸ್ಥರ ಸಂಕಷ್ಟವೇನು ಅನ್ನುವುದು ರೇವಣ್ಣ ಅವರಿಗೆ ಗೊತ್ತಿಲ್ಲ. ಮಳೆ ಬಂದು ನೆರೆ ಉಕ್ಕಿ ರೇವಣ್ಣ ಆಸ್ತಿಯೂ ಮುಳುಗಿದರೆ ಮಾತ್ರ ಅವರಿಗೆ ಅರಿವಾಗಲು ಸಾಧ್ಯ.


ಆದರೆ ಇದೀಗ ರೇವಣ್ಣ ಎಸೆದಿರುವ ಬಿಸ್ಕೆಟ್ ಪ್ಯಾಕೇಟ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಾಳೆ ಅಂತರ್ ರಾಷ್ಟ್ರೀಯ ಮಾಧ್ಯಮಗಳಲ್ಲೂ ರೇವಣ್ಣ ಸುದ್ದಿಯಾದರೆ ಅಚ್ಚರಿಯಿಲ್ಲ.
ಅಲ್ಲಿಗೆ ಸಿಎಂ ಕುಮಾರಸ್ವಾಮಿಯವರ ಹೆಸರು ರಾರಾಜಿಸುತ್ತದೆ. ಅದಕ್ಕೆ ಕಾರಣ ರೇವಣ್ಣ ಅನ್ನುವುದನ್ನು ಮರೆಯಬೇಡಿ. ಇಂಥ ಸಚಿವರನ್ನೂ ಇನ್ನೂ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿರುವುದು ಯಾವ ಕರ್ಮಕ್ಕೆ. ದೇವೇಗೌಡರಾದರೂ ದೊಡ್ಡ ಮನಸ್ಸು ಮಾಡಿ ರಾಜೀನಾಮೆ ಪಡೆಯುವುದು ಒಳಿತು.

ದರ್ಪ, ದೌಲತ್ತಿನ ರೇವಣ್ಣ ಅವರನ್ನು ಜನ ಎಲ್ಲಿ ತನಕ ಸೋಲಿಸುವುದಿಲ್ಲವೋ ಅಲ್ಲಿ ತನಕ ಬುದ್ದಿ ಬರುವುದಿಲ್ಲ. ಬುದ್ದಿ ಬರಬೇಕಾದರೆ ರೇವಣ್ಣ ಹಾಸನ ಬಿಟ್ಟು ಬೇರೆ ಕಡೆ ಬರಬೇಕು. ಅವರ ಕ್ಷೇತ್ರ ಬಿಟ್ಟು ಮತ್ಯಾವುದೋ ಕ್ಷೇತ್ರದಲ್ಲಿ ಸ್ಪರ್ಧಿಸುವಷ್ಟು ಧೈರ್ಯ ಅವರಿಗೆಲ್ಲಿದೆ.

30 ರ ಅಸುಪಾಸಿನ ಸೀಟು ಪಡೆದ ರೇವಣ್ಣ ಹೀಗೆ..ಇನ್ನು ರಾಜ್ಯದ ಜನತೆ ಬಹುಮತ ಕೊಟ್ಟಿದ್ದರೆ ಇನ್ನೇನು ಎಸೆಯುತ್ತಿದ್ದರು ರೇವಣ್ಣ.

ಕೇರಳಕ್ಕೆ ಹರಿದು ಬಂದ ಸಹಾಯವೆಷ್ಟು ಗೊತ್ತಾ…?

ದೇವರನಾಡು ಕೇರಳ ಪ್ರವಾಹದೊಂದಿಗೆ ಸೆಣಸಾಡುತ್ತಿದೆ.ಶತಮಾನದಲ್ಲಿ ಕಂಡರಿಯದ ಮಳೆ ಕೇರಳವನ್ನು ಜರ್ಜರಿತವನ್ನಾಗಿ ಮಾಡಿದೆ.ಈಗಿನ ಅಂದಾಜಿನ ಪ್ರಕಾರ 19,512 ಕೋಟಿ ನಷ್ಟ ಅಂದಾಜಿಸಲಾಗಿದೆ.ಆದರೆ ಈ ಮೊತ್ತ ಮತ್ತಷ್ಟು ಏರಿಕೆಯಾಗಲಿದೆ.ಯಾಕೆಂದರೆ ಇದು ಪ್ರಾಥಮಿಕ ಅಂದಾಜು ಪಟ್ಟಿ.

ಈ ನಡುವೆ ಕೇರಳಕ್ಕೆ ಸಹಾಯ ಕೂಡಾ ಮಹಾ ಪ್ರವಾಹದಂತೆ ಹರಿದು ಬರುತ್ತದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ್ದಾರೆ.ಜೊತೆಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಕೇರಳವನ್ನು ಮತ್ತೆ ಕಟ್ಟಲು ಸಹಾಯ ಮಾಡಲಿದೆ.

ಇದರೊಂದಿಗೆ ಕೇರಳಕ್ಕೆ ಹರಿದು ಬಂದ ನೆರವಿನ ಒಂದು ನೋಟ ಇಲ್ಲಿದೆ.ಇದು ಪರಿಪೂರ್ಣವಲ್ಲ.ಇಲ್ಲಿ ಸಂಘ ಸಂಸ್ಥೆಗಳ ಮೊತ್ತವನ್ನೂ ನಮೂದಿಸಿಲ್ಲ.

 1. ಗೃಹ ಸಚಿವ ರಾಜ್ ನಾಥ್ ಸಿಂಗ್ ತಕ್ಷಣದ ಪರಿಹಾರ ಕಾರ್ಯಗಳಿಗಾಗಿ 100 ಕೋಟಿ ಸಹಾಯ ನೀಡಿದ್ದಾರೆ.
 2. ದೆಹಲಿ ಸರ್ಕಾರ 10 ಲಕ್ಷ ರೂಪಾಯಿ ಸಹಾಯ ನೀಡುವುದರೊಂದಿಗೆ AAP ಶಾಸಕರು ಹಾಗೂ ಸಂಸದರು ಒಂದು ತಿಂಗಳ ಸಂಬಳವನ್ನು ನೀಡಿದ್ದಾರೆ.
 3. ಒಡಿಸ್ಸಾ ರಾಜ್ಯ ಸರ್ಕಾರ 10 ಕೋಟಿ ಸಹಾಯದೊಂದಿಗೆ 245 ಅಗ್ನಿಶಾಮಕದಳದ ಸಿಬ್ಬಂದಿಗಳನ್ನು ದೋಣಿಯೊಂದಿಗೆ ಕಳುಹಿಸಿಕೊಟ್ಟಿದೆ.
 4. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಹಾಗೂ ಸಂಸದರು ಒಂದು ತಿಂಗಳ ಸಂಬಳವನ್ನು ಕೇರಳಕ್ಕೆ ನೀಡಲಿದ್ದಾರೆ.

ಇದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಕೂಡಾ ಕೇರಳಕ್ಕೆ ಸಹಾಯ ಹಸ್ತ ಚಾಚಿವೆ.

fund

 1. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒಂದು ತಿಂಗಳ ಸಂಬಳ ಕೇರಳ ಸಿಎಂ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ತಮಿಳುನಾಡು ಐಎಎಸ್ ಅಧಿಕಾರಿಗಳು ಒಂದು ದಿನದ ಸಂಬಳ ಹಾಗೂ The Islamic Centre of India ಸಂಘಟನೆ ಈ ಬಾರಿಯ ಈದ್ ಹಬ್ಬದ ವೆಚ್ಚದಲ್ಲಿ ಶೇ10 ರಷ್ಟನ್ನು ಕೇರಳಕ್ಕೆ ದಾನ ಮಾಡುವಂತೆ ಕೋರಿ ಕೊಂಡಿದೆ.
 2. ವಿವಿಧ ಉದ್ಯಮಿಗಳು ಕೂಡಾ ಜನತೆಯ ಸಹಾಯಕ್ಕೆ ಧಾವಿಸಿದ್ದಾರೆ. NRI ಉದ್ಯಮಿ ಎಂ.ಎ. ಯೂಸೂಫ್ 5 ಕೋಟಿ, ಇತ್ತೀಚೆಗೆ ಮೀನು ಮಾರಾಟ ಮೂಲಕ ವೈರಲ್ ಆಗಿದ್ದ ವಿದ್ಯಾರ್ಥಿನಿ ಹನನ್ 1.5 ಲಕ್ಷ, ತಮಿಳುನಾಡಿನ ಡಿಎಂಕೆ 1 ಕೋಟಿ, ಬಿಜೆಪಿ ಸಂಸದ ವರುಣ್ ಗಾಂಧಿ 2 ಲಕ್ಷ ಸಹಾಯ ನೀಡಿದ್ದಾರೆ.
 3. ದೇಶದ ನಾನಾ ಭಾಗದ ಚಿತ್ರ ನಟರು ಲಕ್ಷ ಲಕ್ಷ ಲೆಕ್ಕದಲ್ಲಿ ಸಹಾಯ ಚಾಚಿದ್ದಾರೆ
 4. ಇನ್ನು ಟಿವಿ ವಾಹಿನಿ ಸಂಸ್ಥೆಗಳಾದ ಸ್ಟಾರ್ ಇಂಡಿಯಾ 2 ಕೋಟಿ, ಸನ್ ಟಿವಿ ನೆಟ್ ವರ್ಕ್ 1 ಕೋಟಿ, ಏಷ್ಯಾನೆಟ್ ಸಿಬ್ಬಂದಿಗಳು 25 ಲಕ್ಷ ನೀಡಲು ಸಮ್ಮತಿಸಿದ್ದಾರೆ
 5. ಕೆಲ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಕಡಿತಗೊಳಿಸಿ ಕೇರಳಕ್ಕೆ ಸಹಾಯ ಮಾಡಿದೆ. ಜೊತೆಗೆ ಒಂದು ನಿಗದಿತ ಮೊತ್ತವನ್ನು ನೀಡುವುದಾಗಿ ಹೇಳಿದೆ.
 6. ಕರ್ನಾಟಕದ ಕೊಲ್ಲೂರು, ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಭಾರತದ ಅನೇಕ ದೇವಾಲಯಗಳಿಂದ ಸಹಾಯ ಸಿಕ್ಕಿದೆ
 7. ಕತಾರ್ ಸರ್ಕಾರ 35 ಕೋಟಿ ಮೊತ್ತದ ಸಹಾಯ ಮಾಡುವುದಾಗಿ ಹೇಳಿದೆ.
 8. ಮಾತಾ ಅಮೃತಾನಂದಮಯಿ ಮಠ 10 ಕೋಟಿ ಸಹಾಯ ಮಾಡುತ್ತಿರುವುದಾಗಿ ಹೇಳಿದೆ.

ಇದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈ ವರದಿ ತಯಾರಿಸುವ ಹೊತ್ತಿಗೆ ಬಂದ ಮೊತ್ತಗಳಿಗೆ ಲೆಕ್ಕವಿಲ್ಲ. ಕೇರಳ ಸರ್ಕಾರ ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಜನ ಸಾಮಾನ್ಯರು 100 ರೂಪಾಯಿಂದ ಹಿಡಿದು ಸಹಾಯ ಮಾಡಿದ್ದಾರೆ.

ಕೊಡಗಿನಲ್ಲಿ ಮಳೆಯಬ್ಬರ – ಮಗನ ಕಣ್ಣೇದುರೇ ಕೊಚ್ಚಿ ಹೋದ ತಾಯಿ

ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ಲೆಕ್ಕಕ್ಕೇ ಸಿಕ್ಕಿಲ್ಲ.

ಈ ನಡುವೆ ಮಗನ ಕಣ್ಣ ಮುಂದೆಯೇ ತಾಯಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೆಬ್ಬಟ್ಟಗೇರಿಯಲ್ಲಿ ಮಿಟ್ಟು ಗಣಪತಿ ತನ್ನ ತಾಯಿ , ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ರೈತ ನಾಗಿರುವ ಗಣಪತಿ 6 ತಿಂಗಳ ಹಿಂದೆ ಹೊಸ ಮನೆ ಕಟ್ಟಿಸಿ ಅದರಲ್ಲೇ ಹೊಸ ಜೀವನ ಪ್ರಾರಂಭಿಸಿದ್ದರು. ಆದರೆ ಇವರ ಸಂತಸವನ್ನು ಕಂಡ ವಿಧಿ ಹೊಟ್ಟೆ ಕಿಚ್ಚು ಪಟ್ಟುಕೊಂಡಿತ್ತು. ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿದ್ದ ಇವರ ವಿಧಿ ಲಿಖಿತವೇ ಬೇರೆಯಾಗಿತ್ತು.

ಅದು ಆಗಸ್ಟ್ 15ರ ಮುಂಜಾನೆ. ಗಣಪತಿ ಕುಟುಂಬ ಸಮೇತರಾಗಿ ಉಪಹಾರ ಸೇವಿಸುತ್ತಿದ್ದರು. ಆ ವೇಳೆ ವ್ಯಕ್ತಿಯೊಬ್ಬರು ಬಂದು ಮಡಿಕೇರಿಗೆ ಹೋಗುವ ದಾರಿ ತೋರಿಸಿ ಎಂದು ಗಣಪತಿ ಅವರಿಗೆ ಕೇಳಿದ್ದಾನೆ. ಈ ವೇಳೆ ದೊಡ್ಡ ಶಬ್ದ ಕೇಳಿಸಿದೆ. ಕ್ಷಣ ಮಾತ್ರದಲ್ಲಿ ದೂರದಲ್ಲಿ ಮರವೊಂದು ಬೀಳುತ್ತಿರುವುದು ಕಾಣಿಸಿದೆ. ಅಷ್ಟೇ ಭೂಕುಸಿತ ಪ್ರಾರಂಭವಾಯ್ತು. ಮುಂದೆ ಹೆಜ್ಜೆ ಇಡದಂತ ಪರಿಸ್ಥಿತಿ. ಗಣಪತಿ ಅವರ ತಾಯಿ ಮಿನ್ನಂಡ ಉಮ್ಮವ್ವ ಕೆಳಗಿನ ಮನೆಯಲ್ಲಿದ್ದರು. ಭೂಕುಸಿತ ಕ್ಷಣ ಮಾತ್ರದಲ್ಲಿ ಆಕೆಯನ್ನು ಎಳೆದುಕೊಂಡಿತು. ಎರಡು ಕೈಗಳನ್ನು ಮೇಲೆತ್ತಿ ಮಗ ಕಾಪಾಡು ಎಂದು ಕರೆದರು.ಗಣಪತಿ ತಾಯಿ ರಕ್ಷಣೆಗೆ ಧಾವಿಸುವಷ್ಟರ ಹೊತ್ತಿಗೆ ಭೂ ಕುಸಿತದ ಮಣ್ಣಿನ ಜೊತೆ ಕೊಚ್ಚಿ ಹೋಗಾಗಿತ್ತು.

ತಾಯಿಯನ್ನು ಕಳೆದುಕೊಂಡಿರುವ ಕುರಿತಂತೆ ಮಾತನಾಡಿರುವ ಗಣಪತಿ ಭೂಕುಸಿತದ ಅವಶೇಷಗಳಡಿ ಸಿಲುಕಿದ ಆಕೆ ಸಹಾಯ ಮಾಡುವಂತೆ ಕೈ ಬೀಸುತ್ತಿದ್ದಳು, ಆಕೆ ನನ್ನ ಕಣ್ಣುಮುಂದೆ ಕೊಚ್ಚಿಹೋಗುತ್ತಿದ್ದರೂ ನಾನು ಏನು ಮಾಡಲಾಗದ ಅಸಹಾಯಕನಾಗಿದ್ದೆ. ಈಗ್ಲೂ ತಾಯಿ ಕೈ ಎತ್ತಿ ಕಾಪಾಡು ಎಂದು ಕೇಳಿದ ದೃಶ್ಯ ಕಣ್ಣ ಮುಂದಿದೆ ಎಂದು ಕಣ್ಣೀರು ಹಾಕಿದರು.

ಕರ್ನಾಟಕ ಏಳು ನದಿಗಳಲ್ಲಿ ಅಟಲ್ ಅಸ್ತಿ ವಿಸರ್ಜನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಗಳನ್ನು ದೇಶದ ಪ್ರಮುಖ 100 ನದಿಗಳಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಚಿತಾಭಸ್ಮವನ್ನು ಇಂದು ಕುಟುಂಬಸ್ಥರು ಸಂಗ್ರಹಿಸಿದ್ದಾರೆ.

ದೆಹಲಿಯ ಸ್ಮೃತಿ ಶಾಲಾಗೆ ಭೇಟಿ ನೀಡಿದ್ದ ವಾಜಪೇಯಿ ಪುತ್ರಿ ನಮಿತಾ ಹಾಗೂ ಮೊಮ್ಮಗಳು ನಿಹಾರಿಕಾ ಧಾರ್ಮಿಕ ವಿಧಿ ವಿಧಾನಗಳ ನಂತರ ಹರಿದ್ವಾರದಲ್ಲಿರುವ ಗಂಗಾ ನದಿಗೆ ಅಸ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದಾರೆ.

ABV

ಮುಂದಿನ ದಿನಗಳಲ್ಲಿ ಎಬಿ ವಾಜಪೇಯಿ ಅಸ್ತಿಯನ್ನು ದೇಶದ ನೂರು ಪವಿತ್ರ ನದಿಗಳಲ್ಲಿ ಬಿಡಲು ನಿರ್ಧರಿಸಲಾಗಿದೆ. ಅದರಲ್ಲಿ ಕರ್ನಾಟಕದ ಆರು ನದಿಗಳೂ ಸೇರಿದೆ. ಬೆಂಗಳೂರಿನ ವೃಷಭಾವತಿ, ನೇತ್ರಾವತಿ ಹಾಗೂ ಗುರುಪುರ (ದಕ್ಷಿಣಕನ್ನಡ), ಶಿವಮೊಗ್ಗದ ತುಂಗಾ, ಭದ್ರಾವತಿಯ ಭದ್ರ, ಹೊಸಪೇಟೆಯ ತುಂಗಭದ್ರಾ, ಕಾರವಾರದ ಕಾಳಿ ಹಾಗೂ ಬಾಗಲಕೋಟೆಯ ಘಟಪ್ರಭಾ ನದಿಗಳು ಇದರಲ್ಲಿ ಸೇರಿವೆ.

ಇಂದು ನಡೆದ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮದಲ್ಲಿ ವಾಜಪೇಯಿ ಕುಟುಂಬಸ್ಥರಿಗೆ ಗೃಹ ಸಚಿವ ರಾಜ್ ನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ಈ ನಡುವೆ ವಾಜಪೇಯಿ ಹೆಸರಿನಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದ್ದು, ಮುಂದಿನ ವಾರದಿಂದ ಈ ಕಾರ್ಯಕ್ರಮ ಸರಣಿ ಪ್ರಾರಂಭವಾಗಲಿದೆ. ಈಗಾಗಲೇ ಕಾರ್ಯಕ್ರಮದ ರೂಪುರೇಷೆ ಸಿದ್ದವಾಗಿದ್ದು, ಮಾಹಿತಿ ನಿರೀಕ್ಷಿಸಲಾಗುತ್ತಿದೆ.