Advertisements

ಕಾಂಗ್ರೆಸ್ ನ ಕೆಸಿ ವೇಣುಗೋಪಾಲ್ ಗೆ ಯಾರಾದ್ರು ರಿಷಬ್ ಶೆಟ್ಟಿ ಫಿಲ್ಮಂ ತೋರಿಸಿ

ಕೆಸಿ ವೇಣುಗೋಪಾಲ್, ಮಾಡಿದ ಕೆಲಸಕ್ಕಿಂತ ಸುದ್ದಿಯಾಗಿದ್ದು ಹೆಚ್ಚು. ಹೆಗಲಿಗೆ ಸುತ್ತಿಕೊಂಡ ಪ್ರಕರಣಗಳ ಜಾಡು ಹಿಡಿದು ಹೊರಟರೆ ವೇಣುಗೋಪಾಲ್ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಅವೆಲ್ಲವೂ ವಿಚಾರಣೆ ಹಂತದಲ್ಲಿರುವುದರಿಂದ ಮಾತನಾಡುವುದು ತಪ್ಪಾಗುತ್ತದೆ.

ಕೇರಳದ ಸಂಸದರಾಗಿರುವ ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾದ ನಂತರ ರಾಜ್ಯ ಕಾಂಗ್ರೆಸ್ ಒಂದಿಷ್ಟು ಚೇತರಿಸಿಕೊಂಡಿದೆ ಅನ್ನುವುದು ಸುಳ್ಳಲ್ಲ.ಆದರೆ ಇದೀಗ ಇದೇ ವೇಣುಗೋಪಾಲ್ ಕರ್ನಾಟಕದ ಕಾಸನ್ನು ಕೇರಳಕ್ಕೆ ಒಯ್ಯುವ ಪ್ಲಾನ್ ಮಾಡಿಕೊಂಡಿದ್ದಾರೆ.

ಭಾನುವಾರ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ವೇಣುಗೋಪಾಲ್ ಕೇರಳದಲ್ಲಿ ಆಗಿರುವ ಅನಾಹುತದ ಬಗ್ಗೆ ವಿವರಿಸಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ 20 ಸಾವಿರ ಕೋಟಿ ನಷ್ಟವಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಮತ್ತಷ್ಟು ನೆರವು ಬೇಕು ಎಂದು ಕೋರಿದ್ದಾರೆ.

ವೇಣುಗೋಪಾಲ್ ತನ್ನ ರಾಜ್ಯಕ್ಕಾಗಿ ಸಹಾಯ ಕೋರಿರುವುದರಲ್ಲಿ ಖಂಡಿತಾ ತಪ್ಪಿಲ್ಲ. ಅವರ ರಾಜ್ಯದ ಜನತೆಯ ಸಹಾಯ ಮಾಡುವುದು ಅವರ ಧರ್ಮ. ಆದರೆ ಕರ್ನಾಟಕದ ಪರಿಸ್ಥಿತಿ ಹೇಗಿದೆ ಅನ್ನುವುದನ್ನು ಒಂದಿಷ್ಟು ಅರಿತುಕೊಳ್ಳಬೇಕಿತ್ತು. ಕೊಡಗಿನ ನೋವಿನಿಂದ ಜನ ಇನ್ನೂ ಹೊರ ಬಂದಿಲ್ಲ. ಕೊಡಗು,ಮಂಗಳೂರು ಸೇರಿದಂತೆ ಆ ಭಾಗದಲ್ಲಿ ರಾಜ್ಯ ಸರ್ಕಾರ ಪರಿಹಾರ ಕಾರ್ಯ ಕೈಗೊಳ್ಳಬೇಕಾಗಿದೆ. ಅದಕ್ಕೆ ಸಾಕಷ್ಟು ಹಣ ಬೇಕಾಗಿದೆ. ಕೇಂದ್ರ ನೆರವು ಇನ್ನೂ ರಾಜ್ಯದ ಕೈ ಸೇರಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಮತ್ತೆ ಬೇಡಿಕೆ ಇಟ್ಟಿರುವುದು ಯಾವ ನ್ಯಾಯ. ಕುಮಾರಸ್ವಾಮಿ ಸಾಲಮನ್ನಾ ಸೇರಿದಂತೆ ಹಲವು ಯೋಜನೆಗಳಿಗೆ ಹಣ ಹೊಂದಿಸಬೇಕಾದ ಒತ್ತಡದಲ್ಲಿದ್ದಾರೆ ಅನ್ನುವುದು ವೇಣುಗೋಪಾಲ್ ಗೆ ಮರೆತು ಹೋಯ್ತೇ.

ಈಗಾಗಲೇ ರಾಜ್ಯ ಸರ್ಕಾರ ಕೇರಳಕ್ಕೆ 10 ಕೋಟಿ ಘೋಷಿಸಿದೆ.ರಾಜ್ಯದ ಜನ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕೇರಳಕ್ಕೆ ಸ್ಪಂದಿಸಿದ್ದಾರೆ.ಮತ್ತಷ್ಟು ಸ್ಪಂದಿಸಬೇಕು ಅನ್ನುವಷ್ಟರಲ್ಲಿ ಕೊಡಗು ಬರಸಿಡಿಲಿನಂತೆ ಬಡಿಯಿತು. ಕೊಡಗಿನಲ್ಲಿ ಅನಾಹುತ ಆಗಿರದೇ ಇದ್ದರೆ ಇಡೀ ಕೇರಳಕ್ಕೆ ಕರ್ನಾಟಕ ಸ್ಪಂದಿಸುವ ರೀತಿಯೇ ಬೇರೆ.

ಆದರೆ ಇವೆಲ್ಲಾ ವೇಣುಗೋಪಾಲ್ ಗೆ ಅರ್ಥವಾದ ಹಾಗೇ ಕಾಣಿಸುತ್ತಿಲ್ಲ. ಅರ್ಥವಾಗಬೇಕಾದರೆ ರಿಷಬ್ ಶೆಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರವನ್ನು ವೇಣುಗೋಪಾಲ್ ಅವರಿಗೆ ತೋರಿಸುವುದು ಬೆಟರ್.

Advertisements

ಆಕಾಶದಲ್ಲೇ ವಿಮಾನದ ಇಂಜಿನ್ ಆಫ್ – ಜೀವ ಕೈಯಲ್ಲಿ ಹಿಡಿದ 169 ಪ್ರಯಾಣಿಕರು

ಬೆಂಗಳೂರಿನಿಂದ ಪುಣೆಯತ್ತ 169 ಪ್ರಯಾಣಿಕರನ್ನು ಹೊತ್ತು ನಭಕ್ಕೆ ನೆಗೆದಿದ್ದ ಗೋ ಏರ್ ಸಂಸ್ಥೆಗೆ ಸೇರಿದ ವಿಮಾನದ ಇಂಜಿನ್ ಏಕಾಏಕಿ ಆಫ್ ಆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಶನಿವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಎಂಜಿನ್ ಆಫ್ ಆಗಿದೆ. ತಾಂತ್ರಿಕ ಸಮಸ್ಯೆಗೆ ತುತ್ತಾಗುತ್ತಿದ್ದಂತೆ ಇನ್ನೊಂದು ಇಂಜಿನ್ ಕಾರ್ಯ ಪ್ರಾರಂಭಿಸಿತು. ಹೀಗಾಗಿ ಯಾವುದೇ ದುರ್ಘಟನೆ ಸಂಭವಿಸಲಿಲ್ಲ.

ತಕ್ಷಣ ಎಚ್ಚೆತ್ತುಕೊಂಡ ಪೈಲೆಟ್ ಗಳು ತಕ್ಷಣವೇ ಮರಳಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ.

ಗೋ ಏರ್ ಸಂಸ್ಥೆಯ ವಿಮಾನ ಹೀಗೆ ಕೈ ಕೊಡುತ್ತಿರುವುದು ಇದು ಮೊದಲಲ್ಲ. ಕಳೆದ ಕೆಲ ದಿನಗಳಲ್ಲಿ ತಾಂತ್ರಿಕ ಕಾರಣಗಳಿಂದ ಗೋ ಏರ್ ಸಂಸ್ಥೆಯ 2 ವಿಮಾನಗಳ ಹಾರಾಟ ರದ್ದುಗೊಂಡಿತ್ತು. ಜೊತೆಗೆ ಇಂಡಿಗೋ ಸಂಸ್ಥೆಯ 7 ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ಇದೀಗ ಗೋ ಏರ್ ಎಡವಟ್ಟು ಕುರಿತಂತೆ ವಿಮಾನಯಾನ ಸಚಿವಾಲಯ ಗೋ ಏರ್ ನಿಂದ ವರದಿ ಕೇಳಿದೆ.

ತಿರುಪತಿ ತಿಮ್ಮಪ್ಪನಿಗೆ ಕೃಷ್ಣ ದೇವರಾಯ ನೀಡಿದ ಅಭರಣ ಕಳುವಾಗಿದೆಯೇ…?

16 ನೇ ಶತಮಾನದಲ್ಲಿ ಕೃಷ್ಣದೇವರಾಯ ತಿರುಪತಿ ದೇವಸ್ಥಾನಕ್ಕೆ ಆಭರಣಗಳನ್ನು ನೀಡಿದ್ದ ಎಂದು ಹಲವಾರು ಕಥೆಗಳು ಹೇಳುತ್ತಿವೆ. ಆದರೆ ಆ ಚಿನ್ನಾಭರಣಗಳು ಯಾವುದು ಅನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.

ಇದೀಗ ಈ ವಿಷಯ ಕೇಂದ್ರಿಯ ಮಾಹಿತಿ ಆಯೋಗದ ಮೆಟ್ಟಿಲೇರಿದ್ದು, ಆಗಿನ ಚಿನ್ನಾಭರಣಗಳು ಎಲ್ಲಿದೆ ಅನ್ನುವ ಯಕ್ಷ ಪ್ರಶ್ನೆ ಹುಟ್ಟಿಕೊಂಡಿದೆ.

ಕೆಲವು ತಿಂಗಳ ಹಿಂದೆ ಟಿಟಿಡಿಗೆ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದ್ದ  ಬಿ.ಕೆ.ಆರ್.ಎಸ್ ಅಯ್ಯಂಗಾರ್ ಅನ್ನುವವರು  ಕೃಷ್ಣ ದೇವರಾಯನು ತಿರುಪತಿ ದೇವಸ್ಥಾನಕ್ಕೆ ಆಭರಣಗಳನ್ನು ನೀಡಿದ್ದ ಎಂದು ದೇವಾಲಯದ ಕಲ್ಲಿನ ಮೇಲೆ ಕೆತ್ತನೆಗಳಿವೆ. ಹಾಗಾದರೆ ಕೃಷ್ಣ ದೇವರಾಯ ಕೊಟ್ಟ ಆಭರಣಗಳ ವಿವರ ಕೊಡಿ ಎಂದು ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಉತ್ತರಿಸಿದ ಟಿಟಿಡಿ 1952ಕ್ಕಿಂತ ಮುಂಚೆ ದೇವಸ್ಥಾನಕ್ಕೆ ಬಂದ ಕೊಡುಗೆಯ ಬಗ್ಗೆ ನೋಂದಣಿ ಪುಸ್ತಕದಲ್ಲಿ ಉಲ್ಲೇಖವಿಲ್ಲ. ಜೊತೆಗೆ ದೇಗುಲದಲ್ಲಿನ ಅಭರಣಗಳನ್ನು ಯಾವ ರಾಜ ಉಡುಗೊರೆಯಾಗಿ ಕೊಟ್ಟ ಎಂದು ಅರಿಯಲು ಪುರಾತತ್ವ ಇಲಾಖೆಯ ತಜ್ಞರ ಸಮಿತಿ ನೇಮಿಸಲಾಗಿತ್ತು. ಆದರೆ ತಜ್ಞರು ದೇವಸ್ಥಾನದ ಕಂಬ ಮತ್ತು ಲಭ್ಯ ಚಿನ್ನಾಭರಣಗಳನ್ನು ತಾಳೆ ಮಾಡಿ ನೋಡಿದ್ದಾರೆ. ಆಗ ಅವು ಕೃಷ್ಣ ದೇವರಾಯ ಕೊಟ್ಟ ಆಭರಣಗಳು ಎಂದು ಸಾಬೀತಾಗಿಲ್ಲ.

ಹೀಗಾಗಿ ಈ ಆಭರಣ ಕಳುವಾಗಿರಬಹುದು ಅಥವಾ ಮೂಲ ಸ್ವರೂಪದಲ್ಲಿ ಇಲ್ಲದಿರಬಹುದು ಎಂದು ಪುರಾತತ್ವ ಇಲಾಖೆ ತಿಳಿಸಿತ್ತು ಎಂದು ಉತ್ತರಿಸಿದೆ.

ಇದರಿಂದ ತೃಪ್ತರಾಗದ ಅಯ್ಯಂಗಾರ್ ಕೇಂದ್ರಿಯ ಮಾಹಿತಿ ಆಯೋಗದ ಮೆಟ್ಟಿಲು ಹತ್ತಿದ್ದು, ಟಿಟಿಡಿ ತೃಪ್ತಿಕರ ಉತ್ತರ ಕೊಟ್ಟಿ ಎಂದು ದೂರಿದ್ದಾರೆ.

ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ,ಕೇಂದ್ರ ಸಾಸಂಸ್ಕೃತಿ ಸಚಿವಾಲಯ, ಆಂಧ್ರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

ಮೋದಿಗಾಗಿ ದೇನಾ ಬ್ಯಾಂಕ್ ಹುಡುಕಿದ್ದು ಬರೋಬ್ಬರಿ 32 ವರ್ಷ

ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳಿಗಾಗಿ ಕಾಸು ಕೊಟ್ಟ ಬ್ಯಾಂಕುಗಳು ಹುಡುಕುವ ಪರಿಸ್ಥಿತಿ ಬಂದಿದೆ. ಕಾಸು ಕೊಡಲು ಉದ್ಯಮಿಗಳ ಮನೆ ಬಾಗಿಲಿಗೆ ಹೋಗುವ ಬ್ಯಾಂಕುಗಳು ಬಳಿಕ ಕಾಸು ವಸೂಲಿಗೆ ಮನೆ ಬಾಗಿಲಿಗೆ ಹೋಗುತ್ತದೆ.

ಆದರೆ ಮೋದಿಗಾಗಿ ದೇನಾ ಬ್ಯಾಂಕ್ 32 ವರ್ಷ ಹುಡುಕಾಡಿದೆ ಅಂದರೆ ನಂಬ್ತೀರಾ. ನಂಬಲೇಬೇಕು. ಇದನ್ನು ಮೋದಿಯೇ ಬಹಿರಂಗ ಪಡಿಸಿದ್ದಾರೆ.

ಅದು ಮೋದಿಯವರ ಶಾಲಾ ದಿನಗಳಾಗಿತ್ತು. ದೇನಾ ಬ್ಯಾಂಕ್ ನಲ್ಲಿ ಅವರು ಪಿಗ್ಗಿ ಬ್ಯಾಂಕ್ ಖಾತೆಯೊಂದನ್ನು ತೆರೆದಿದ್ದರು. ಆದರೆ ಆ ಖಾತೆಯಲ್ಲಿ ಹಣವೇ ಇರಲಿಲ್ಲ. ಬಳಿಕ ಮೋದಿಯವರು ಕೂಡಾ ಖಾತೆಯೊಂದು ಇದೆ ಅನ್ನುವುದನ್ನು ಮರೆತು ಹೋಗಿದ್ದರು. ಬಳಿಕ ಮೋದಿ ಊರು ಬಿಟ್ಟರು.

ಆದರೆ ಬ್ಯಾಂಕ್ ಅಧಿಕಾರಿಗಳು ನರೇಂದ್ರ ಮೋದಿಯವರ ಬೆನ್ನು ಹತ್ತಿದ್ದರು. ಒಂದಲ್ಲ ಎರಡಲ್ಲ ಬರೋಬ್ಬರಿ 32 ವರ್ಷಗಳ ಕಾಲ ಬ್ಯಾಂಕ್ ಅಧಿಕಾರಿಗಳು ಪಿಗ್ಗಿ ಬ್ಯಾಂಕ್ ಖಾತೆಯನ್ನು ಮುಚ್ಚಿಸಲು ಹುಡುಕಾಡಿದ್ದರು.

ಕೊನೆಗೆ 32 ವರ್ಷಗಳ ನಂತರ ಬ್ಯಾಂಕ್ ಅಧಿಕಾರಿಗಳು ಮೋದಿಯವರನ್ನು ಪತ್ತೆ ಹಚ್ಚಿ ಸಹಿ ಪಡೆದು ಖಾತೆಯನ್ನು ಮುಕ್ತಾಯಗೊಳಿಸಿದರು.

ನಂತರ ಮೋದಿ ಬ್ಯಾಂಕ್ ಖಾತೆ ತೆರೆದದ್ದು ಗುಜರಾತಿನ ಶಾಸಕನಾದ ಬಳಿಕ. ವೇತನ ಪಡೆಯುವ ಸಲುವಾಗಿ ಬ್ಯಾಂಕ್ ಖಾತೆ ಅನಿವಾರ್ಯವಾಯ್ತು. ಹೀಗಾಗಿ ಎರಡನೇ ಬಾರಿ ಮೋದಿ ಬ್ಯಾಂಕ್ ಖಾತೆ ತೆರೆದರು.

ಈಗ ಮೋದಿ ದೇಶದ ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿದ್ದಾರೆ.

ವೈರಲ್ ಆಯ್ತು ಮೀಸಲಾತಿ ಕುರಿತಂತೆ ಸೂಲಿಬೆಲೆ ಕೊಟ್ಟ ಹೇಳಿಕೆ…

ದೇಶದಲ್ಲಿ ಇದೀಗ ಬಹುತೇಕ ಯುವ ಜನತೆಯನ್ನು ಆಕ್ರೋಶಕ್ಕೆ ಗುರಿ ಮಾಡಿರುವುದು ಮೀಸಲಾತಿ ಅನ್ನುವ ಅವಕಾಶ. ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಮೀಸಲಾತಿ ಇಷ್ಟು ವರ್ಷಗಳವರೆಗೆ ಇದ್ದರೆ ಸಾಕು ಎಂದು ಹೇಳಲಾಗಿತ್ತು. ಆದರೆ ಸಂವಿಧಾನದ ಮೇಲೆ ಮಾತು ಕೊಟ್ಟು ಅಧಿಕಾರಕ್ಕೆ ಬಂದ ರಾಜಕೀಯ ನಾಯಕರು ಅಂಬೇಡ್ಕರ್ ಕನಸುಗಳನ್ನು ಸಾಕಾರಗೊಳಿಸಲೇ ಇಲ್ಲ. ಸಂವಿಧಾನ ಬರೆಯುವ ಹೊತ್ತಿಗೆ ಅವರೊಂದು ಗುರಿ ಇಟ್ಟುಕೊಂಡಿದ್ದರು. ಕೆಳ ವರ್ಗದ ಮಂದಿಯನ್ನು ಇಂತಿಷ್ಟು ವರ್ಷದೊಳಗೆ ಮೇಲೆ ಎತ್ತಲೇ ಬೇಕು. ಸಮಾಜದ ಕಟ್ಟ ಕಡೆಯ ಮನುಷ್ಯ ತುತ್ತ ತುದಿಗೆ ಏರಲೇಬೇಕು. ಅದಕ್ಕಾಗಿ ಅವರು ಮೀಸಲಾತಿ ಅವಕಾಶ ಕೊಟ್ಟಿದ್ದರು.

ಆದರೆ ನಮ್ಮ ರಾಜಕಾರಣಿಗಳು ಕಟ್ಟ ಕಡೆಯ ಮನುಷ್ಯನ ಕಡೆಗೆ ನೋಟವನ್ನೇ ಹರಿಸಲೇ ಇಲ್ಲ. ಇದೀಗ ಕಟ್ಟ ಕಡೆಯ ಮನುಷ್ಯನೇ ಸಿಡಿದೆದ್ದು ಅಭಿವೃದ್ಧಿ ಪಥದ ಕಡೆ ಹೆಜ್ಜೆ ಹಾಕುತ್ತಿದ್ದಾನೆ.

ಆದರೆ ಮೀಸಲಾತಿ ಹಲವು ವರ್ಗದ ಮಂದಿಗೆ ಮುಳ್ಳಾಗಿದೆ ಅನ್ನುವುದು ಸುಳ್ಳಲ್ಲ. ಹೀಗಾಗಿ ಯುವ ಜನತೆ ನಿಧಾನವಾಗಿ ಮೀಸಲಾತಿ ಬಗ್ಗೆ ಸಿಡಿದೇಳುವ ಪರಿಸ್ಥಿತಿ ಬಂದಿದೆ. ಪ್ರತಿಭಾನ್ವಿತರು ಮೀಸಲಾತಿ ಕಾರಣದಿಂದ ಅವಕಾಶ ವಂಚನೆಗೆ ಒಳಗಾಗುತ್ತಿದ್ದಾರೆ. ಹಾಗಾದರೆ ಮೀಸಲಾತಿ ನಿಲ್ಲಿಸಬೇಕಾ……

ಈ ವಿಡಿಯೋ ನೋಡಿ…ಮೀಸಲಾತಿಯ ಅಗತ್ಯ ಮತ್ತು ಅನಿವಾರ್ಯತೆ ಅರ್ಥವಾಗುತ್ತದೆ.

ಸಮೀರ್ ಆಚಾರ್ಯರಿಗೆ ಟ್ರೋಲ್ ಅನ್ನು ಸಹಿಸಿಕೊಳ್ಳುವ ಶಕ್ತಿಯೇ ಇಲ್ಲ….

ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಸಮೀರ್ ಆಚಾರ್ಯ ಮಾಡಿಕೊಂಡ ಎಡವಟ್ಟು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಎಲ್ಲಿಯ ಮಟ್ಟಿಗೆ ಅಂದರೆ ಸಮೀರ್ ಅವರ ನಿದ್ದೆಗೆಡಿಸಿದೆ. ಮಾತ್ರವಲ್ಲದೆ ಅವರಲ್ಲಿ ತಾನು ಸಿಕ್ಕಾಪಟ್ಟೆ ಅವಮಾನಕ್ಕೆ ಒಳಗಾದೆ ಅನ್ನುವ ಭಾವನೆ ಬಂದು ಬಿಟ್ಟಿದೆ.

ಇದಕ್ಕೆ ಸಾಕ್ಷಿಯಾಗಿದ್ದು ಅವರೇ ಹಾಕಿದ ವಿಡಿಯೋ… ತಮ್ಮನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ವಿಡಿಯೋ ಹಾಕಿದ್ದು ಅದು ಮತ್ತೆ ನೆಗೆಟಿವ್ ಇಂಪ್ರೆಸನ್ ಕ್ರಿಯೇಟ್ ಮಾಡಿದೆ.

ಹೆಂಡತಿಯನ್ನು ಸಾರ್ವಜನಿಕವಾಗಿ ಬೈಯಲು ತಾಕತ್ತು ಇರಬೇಕು, ಹಾಗೇ ಹೀಗೆ ಎಂದು ಎನೇನೋ ಮಾತನಾಡಲು ಹೋಗಿ ಇನ್ನೇನು ಮಾಡ ಹೋಗಿದ್ದಾರೆ.

ಅವರಿಗೆ ನೋವಾಗಿರುವುದು ನಾನು ಮಾಡಿದ ಅಷ್ಟೊಂದು ಕೆಲಸಗಳು ವೈರಲ್ ಆಗಲಿಲ್ಲ, ಜನ ಶೇರ್ ಮಾಡಲಿಲ್ಲ. ಆದರೆ ಇದೊಂದು ತಪ್ಪನ್ನು ಮಹಾ ಅಪರಾಧ ಅನ್ನುವಂತೆ ಬಿಂಬಿಸಿದರಲ್ಲ ಅನ್ನುವುದೇ ಅವರ ಕೊರಗು.

ತಪ್ಪು ಉತ್ತರ ಕೊಟ್ಟರೂ ಪರವಾಗಿಲ್ಲ, ಅದೊಂದು ಮಾತು ಹೇಳಬಾರದಿತ್ತು

ಆದರೆ ಸಮೀರ್ ಒಂದು ಅರ್ಥ ಮಾಡಿಕೊಳ್ಳಬೇಕು. ಸೆಲೆಬ್ರೆಟಿ ಪಟ್ಟ ಲಕ್ ಅನ್ನುವಂತೆ ಬಂದು ಬಿಡುತ್ತದೆ. ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಇದೆಯಲ್ಲ ಅದು ದೊಡ್ಡ ಚಾಲೆಂಜ್.

ಅಂತಹುದೊಂದು ಪಟ್ಟವನ್ನು ಚೆನ್ನಾಗಿ ನಿಭಾಯಿಸಿದವನು ಪ್ರಥಮ್ ಮಾತ್ರ. ಉಳಿದವರೆಲ್ಲಾ ಮಾಡಿಕೊಂಡಿದ್ದು ಎಡವಟ್ಟು. ಇನ್ನುಳಿದ ಹಲವರು ಸಮಾಜ ಗುರುತಿಸಿದ ಮೇಲೆಯೇ ಬಿಗ್ ಬಾಸ್ ಮನೆಗೆ ಹೋದ ಕಾರಣ ಸಮಸ್ಯೆಯಾಗಲಿಲ್ಲ.

ಸಮೀರ್ ಅವರೇ ನೆಟ್ಟಿಗರ ಮೇಲೆ ತಿರುಗಿ ಬೀಳಬೇಡಿ. ಅದಕ್ಕಿಂತ ಮೊದಲು ನೀವು ಜನ ಸಾಮಾನ್ಯರೋ, ಸೆಲೆಬ್ರೆಟಿಯೋ ಅನ್ನುವುದನ್ನು ತೀರ್ಮಾನಿಸಿಕೊಳ್ಳಿ.

62 ಹುದ್ದೆಗೆ 93 ಸಾವಿರ ಅರ್ಜಿ -5ನೇ ತರಗತಿ ವಿದ್ಯಾರ್ಹತೆ ಹುದ್ದೆಗೆ Phd ಮಾಡಿದೋರು ಅರ್ಜಿ ಹಾಕುವಂತಾಯ್ತು…

ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕರೆಯಲಾಗಿರುವ ಟೆಲಿಕಾಂ ಮೆಸೆಂಜರ್ ಹುದ್ದೆಗೆ 93 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ.

ಇದರಲ್ಲಿ 50 ಸಾವಿರಕ್ಕೂ ಅಧಿಕ ಪದವೀಧರರು, 28 ಸಾವಿರ ಸ್ನಾತಕೋತ್ತರ ಪದವೀಧರು ಮತ್ತು 3700 ಪಿಎಚ್‌ಡಿ ಪದವೀಧರರು ಸೇರಿದ್ದಾರೆ. ಮಾತ್ರವಲ್ಲದೆ ಇದರಲ್ಲಿ ಎಂಬಿಎ ಹಾಗೂ ಎಂಟೆಕ್ ಪದವೀಧರರು ಒಳಗೊಂಡಿದ್ದಾರೆ.

93 ಸಾವಿರ ಅಭ್ಯರ್ಥಿಗಳ ಪೈಕಿ 7400 ಅಭ್ಯರ್ಥಿಗಳು ಮಾತ್ರ 5 ರಿಂದ 7 ತರಗತಿ ವ್ಯಾಸಂಗ ಮಾಡಿದವರಾಗಿದ್ದಾರೆ.

12 ವರ್ಷಗಳ ಬಳಿಕ ಪಿಯೋನ್-ಮೆಸೆಂಜರ್‌ ವಿಭಾಗದ 62 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು  ಯುಪಿ ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಇತ್ತೀಚೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕನಿಷ್ಠ ವಿದ್ಯಾರ್ಹತೆಯುಳ್ಳ ಈ ಹುದ್ದೆಗೆ ಸ್ನಾತಕೋತ್ತರ ಪದವೀಧರರೂ ಅರ್ಜಿ ಸಲ್ಲಿಸಿರುವುದು ಅಧಿಕಾರಿಗಳ ತಲೆ ಕೆಡಿಸಿದೆ. ಹೀಗಾಗಿ ಆಯ್ಕೆ ನೇಮಕಾತಿ ಪ್ರಕ್ರಿಯೆ ಮುಂದೂಡಲು ನಿರ್ಧರಿಸಿದ್ದಾರೆ

ಅಂದ ಹಾಗೆ  ಟೆಲಿಕಾಂ ಮೆಸೆಂಜರ್ ಹುದ್ದೆಗೆ ನಿಗದಿ ಮಾಡಿರುವುದು ಕನಿಷ್ಠ 5ನೇ ತರಗತಿ ವಿದ್ಯಾರ್ಹತೆ.

ಮೇಲ್ನೋಟಕ್ಕೆ ಅಚ್ಚರಿಯೇನು ಅನ್ನಬಹುದು. ಆದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಇದೊಂದು ಘಟನೆ ಹಿಡಿದ ಕೈಗನ್ನಡಿ.

ಮಗನಿಗೆ ಆ ಸಂಬಂಧ ಬೇಡ – ವಿಜಯವಾಡ ಸಂಬಂಧ ಕುರಿತಂತೆ ಅನಿತಾ ಮಾತು

ಆಗಸ್ಟ್ 30ಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆ. ಮಾಧ್ಯಮಗಳಲ್ಲಿ ಬ್ರೇಕಿಂಗ್ ಮೇಲೆ ಬ್ರೇಕಿಂಗ್ ಕೂಡಾ ಬಂದಿತ್ತು.

ಇನ್ನೇನು ಮದುವೆಯೇ ಆಗಿ ಹೋಯ್ತು ಅನ್ನುವಷ್ಟರ ಮಟ್ಟಿಗೆ ಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ ಬೋಡೆಪುಡಿ ಶಿವಕೊಟೇಶ್ವರ ರಾವ್ ಮಗಳು ಸಹಜ ಜೊತೆ ನಿಖಿಲ್ ಮದುವೆ ನಡೆಯುತ್ತಿಲ್ಲ ಅನ್ನುವ ಸುದ್ದಿ ಬಂದಿದೆ.

ಸಹಜಗಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಅನಿತಾ ಹಿಂದೇಟು ಹಾಕಿದ್ದಾರೆ ಅನ್ನುವ ಸುದ್ದಿ ಬಂದಿದೆ.ಪಬ್ಲಿಕ್ ಟಿವಿ ವರದಿಯ ಒಳನೋಟವನ್ನು ಗಮನಿಸಿದರೆ, ಅನ್ಯ ರಾಜ್ಯ ಮತ್ತು ಅನ್ಯ ಭಾಷೆಯ ಹುಡುಗಿಯನ್ನು ಕರೆ ತಂದರೆ ನಾಳೆ ನಿಖಿಲ್ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗಬಹುದು ಅನ್ನುವುದನ್ನು ಅನಿತಾ ದೂರಾಲೋಚನೆ ಮಾಡಿದಂತೆ ಕಾಣಿಸುತ್ತಿದೆ.

ಹೀಗಾಗಿ ನಮಗೆ ಈ ಸಂಬಂಧ ಬೇಡ ಎಂದು ಅನಿತಾ ಹೇಳಿದ್ದಾರೆ ಎನ್ನಲಾಗಿದೆ. ಹಾಗಿದ್ದ ಮೇಲೆ ಹೋಗಿದ್ಯಾಕೆ. ಕುಮಾರಸ್ವಾಮಿಯವರಿಗೆ ಈ ಮಗನಿಗೆ ಹೆಣ್ಣು ಕೊಡುವ ಪ್ರಸ್ತಾಪ ಬಂದಾಗ ಮನೆಗೆ ಬರುತ್ತೇವೆ ಎಂದು ಮಾತು ಕೊಟ್ಟಿದ್ದರು. ಹೀಗಾಗಿ ಮಾತು ಕೊಟ್ಟ ಮೇಲೆ ಹೋಗದೇ ಇರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ದಂಪತಿ ಶಿವಕೊಟೇಶ್ವರ ರಾವ್ ಮನೆಗೆ ಭೇಟಿ ಕೊಟ್ಟು ಬಂದಿದ್ದಾರೆ.

ಇನ್ನು ನಿಖಿಲ್ ಗೂ ಕೂಡಾ ತನಗೆ ಹುಡುಗಿ ನೋಡಲು ಹೋಗುತ್ತಿದ್ದಾರೆ ಅನ್ನುವುದು ಗೊತ್ತೇ ಇರಲಿಲ್ಲ. ಮಾಧ್ಯಮದ ಮಂದಿ ಪದೇ ಪದೇ ಫೋನ್ ಮಾಡಿ ವಿಚಾರಿಸಿದಾಗಲೇ ನಿಖಿಲ್ ಗೆ ಈ ವಿಷಯ ಗೊತ್ತಾಗಿದೆ. ಹೀಗಾಗಿ ತಾಯಿ ಜೊತೆ ಮಾತನಾಡಿದ ನಿಖಿಲ್ ಬೆಳವಣಿಗೆ ಕುರಿತಂತೆ ವಿಚಾರಿಸಿದ್ದಾರೆ. ಈ ವೇಳೆ ಅನ್ಯ ರಾಜ್ಯ ಮತ್ತು ಅನ್ಯ ಭಾಷೆ ಹುಡುಗಿಯನ್ನು ತರುವುದಿಲ್ಲ. ಮಾತ್ರವಲ್ಲದೆ ಕನ್ನಡದ ಹುಡುಗಿಯನ್ನೇ ಸೊಸೆಯನ್ನಾಗಿ ಮಾಡುವುದಾಗಿ ಅನಿತಾ ಮಗನಿಗೆ ಭರವಸೆ ಕೊಟ್ಟಿದ್ದಾರೆ.

ಮತ್ತೊಂದು ಗಮನಾರ್ಹ ಅಂಶ ಅಂದರೆ ನಿಖಿಲ್ ಈಗಾಗಲೇ ತಂದೆ ತಾಯಿ ನೋಡುವ ಹುಡುಗಿಯನ್ನೇ ಮದುವೆಯಾಗುವುದಾಗಿ ಸ್ಪಷ್ಟ ಪಡಿಸಿದ್ದಾರೆ. ಹಿಂದೊಮ್ಮೆ ಆಗಿರುವ ತಪ್ಪು ಮತ್ತೆ ಮರುಕಳಿಸಬಾರದು ಎಂದು ತಮ್ಮ ಮದುವೆ ಜವಾಬ್ದಾರಿಯನ್ನು ಸಂಪೂರ್ಣ ತಾಯಿಗೆ ವಹಿಸಿದ್ದಾರೆ.

ಜೊತೆಗೆ ಇನ್ನು ನಾಲ್ಕೈದು ವರ್ಷ ಮದುವೆ ವಿಚಾರವಿಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಕ್ಷೇತ್ರದ ಬಗ್ಗೆ ಅವರು ಸಾಕಷ್ಟು ಆಸಕ್ತಿ ವಹಿಸಿದ್ದು, ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರಲು ಅವರು ಬಯಸಿದ್ದಾರೆ.

143 ಜನ ಕೂರಬಹುದಾದ ರೈಲಿನಲ್ಲಿ ಸಾಗಿದ್ದು ಇಬ್ಬರು – ಹನಿಮೂನ್ ಗಾಗಿ ಇಡೀ ರೈಲು ಬುಕ್ ಮಾಡಿದ ದಂಪತಿ

ಮದುವೆಯಾದರೆ ಎಂದಿಗೂ ಮರೆಯದಂತಿರಬೇಕು ಎಂದು ಅನೇಕರು ವಿಶಿಷ್ಟವಾಗಿ ಮದುವೆಯಾಗುತ್ತಾರೆ. ವಿಮಾನದಲ್ಲಿ, ನೀರಿನಡಿ ಹೀಗೆ ಸಿಕ್ಕಾಪಟ್ಟೆ ಕ್ರಿಯೆಟಿವಿಟಿ ತೋರಿಸುವ ಮಂದಿ ಹೆಚ್ಚಾಗಿದ್ದಾರೆ.

ಆದರೆ ಮಧುಚಂದ್ರವೂ ಮರೆಯಲಾಗದ ಅನುಭವವಾಗಬೇಕು ಎಂದು ಬ್ರಿಟನ್ ದಂಪತಿ ಭಾರತದಲ್ಲಿ ಹನಿಮೂನ್ ಮಾಡಿ ಸಂಭ್ರಮಿಸಿದ್ದಾರೆ. ಅದು ಕೂಡಾ ರೈಲಿನಲ್ಲಿ ಅನ್ನುವುದು ವಿಶೇಷ .

ಭಾರತದ ಬಗ್ಗೆ ವಿಶೇಷ ಒಲವುಳ್ಳ ಬ್ರಿಟನ್‌ ಮೂಲದ ಗ್ರಹಾಮ್‌ ವಿಲಿಯಮ್‌ ಲಿನ್‌ ಹಾಗೂ ಸಿಲ್ವಿಯಾ ಪ್ಲಾಸಿಕ್‌ ಇದೀಗ ಹಳಿಗಳ ಮೇಲೆ ಹನಿಮೂನ್‌ ಮಾಡಿ ಗಮನ ಸೆಳೆದಿದ್ದಾರೆ.ಇದಕ್ಕಾಗಿ ಅವರು ಇಡೀ ರೈಲನ್ನು ಬುಕ್ ಮಾಡಿದ್ದರು ಅನ್ನುವುದು ವಿಶೇಷ.

ಇತ್ತೀಚೆಗಷ್ಟೇ ದಕ್ಷಿಣ ರೈಲ್ವೆಯ ಸೇಲಂ ವಿಭಾಗದ ನೀಲಗಿರಿ ಮೌಂಟೇನ್‌ ರೈಲ್ವೇಸ್‌ ‘ಚಾರ್ಟರ್ಡ್‌ ಸೇವೆ’ ಆರಂಭಿಸಿತ್ತು. ಇದು ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಟಾಯ್‌ ಟ್ರೇನ್‌ (ಉಗಿ ಬಂಡಿ).

ನೀಲಗಿರಿ ಮೌಂಟನ್‌ ರೈಲ್ವೆಯನ್ನು ಮತ್ತಷ್ಟು ಪ್ರಚಾರ ಮಾಡುವ ಉದ್ದೇಶದಿಂದ ಖಾಸಗಿ (ಚಾರ್ಟರ್ಡ್‌) ಸೇವೆಗೆ ಇತ್ತೀಚೆಗೆ ಮರು ಚಾಲನೆ ನೀಡಲಾಗಿತ್ತು. 1997ರಿಂದ 2000ನೇ ಇಸವಿ ಮಧ್ಯೆ ಕೂಡ ಚಾರ್ಟರ್ಡ್‌ ಸೇವೆ ಒದಗಿಸಲಾಗುತ್ತಿತ್ತು. ಕೆಲ ವರ್ಷ ನಿಂತು ಹೋಗಿದ್ದ ಸೇವೆ ನಂತರ 2002 ಮತ್ತು 2004ರ ಮಧ್ಯೆ ರಾತ್ರಿ ವೇಳೆ ಮೂರು ಬೋಗಿಗಳನ್ನು ಹೊಂದಿರುವ ಚಾರ್ಟರ್ಡ್‌ ರೈಲು ಸಂಚಾರ ಮಾಡುತ್ತಿತ್ತು. ನಂತರ 2018ರಲ್ಲಿ ಮತ್ತೆ ಚಾಲನೆ ಸಿಕ್ಕಿದೆ.

ಇದೇ ರೈಲಿನ ಇಡೀ ಮೂರು ಬೋಗಿಗಳನ್ನು ಹನಿಮೂನ್‌ ಉದ್ದೇಶಕ್ಕಾಗಿ ಬುಕ್‌ ಮಾಡಿ, ಪ್ರಯಾಣ ಮಾಡುವ ಮೂಲಕ ಜೋಡಿ ಮಧುಚಂದ್ರವನ್ನು ವಿಶೇಷವಾಗಿ ಆಚರಿಸಿದೆ. ಇದಕ್ಕಾಗಿ ಬರೋಬ್ಬರಿ 2.85 ಲಕ್ಷ ರೂ. ಪಾವತಿಸಿರುವ ದಂಪತಿ ಶುಕ್ರವಾರ ಮೆಟ್ಟುಪಾಳ್ಯಂನಿಂದ ಬೆಳಗ್ಗೆ 9.10ಕ್ಕೆ ಹೊರಟು 2.20ಕ್ಕೆ ಊಟಿ ತಲುಪಿದರು.

ooty-for-honeymoon

5 ಗಂಟೆಗಳ ಪ್ರಯಾಣ ಕಾಲದಲ್ಲಿ 13 ಸುರಂಗಗಳು, ಹಚ್ಚ ಹಸಿರಿನ ಕಾಫಿತೋಟ, ನೀಲಗಿರಿ ಬೆಟ್ಟಗಳ ಸೌಂದರ್ಯವನ್ನು ಸವಿಯುವ ಅವಕಾಶವಿದೆ.

ಬೆಂಗಳೂರು – ಮಂಗಳೂರು ರೈಲು ರದ್ದು…!

ಸಕಲೇಶಪುರದಿಂದ ಸುಬ್ರಹ್ಮಣ್ಯ ರಸ್ತೆ ನಿಲ್ದಾಣ ನಡುವೆ ಶಿರಾಡಿ ಘಾಟ್ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಬಿದ್ದಿರುವ ಮಣ್ಣಿನ ಪ್ರಮಾಣ ಜಾಸ್ತಿ ಹೆಚ್ಚಾಗಿರುವ ಕಾರಣ ಮಂಗಳೂರು ಬೆಂಗಳೂರು ನಡುವೆ ರೈಲು ಸಂಚಾರವನ್ನು ಸೆಪ್ಟಂಬರ್ 15ರ ತನಕ ರೈಲ್ವೆ ಇಲಾಖೆ ರದ್ದುಗೊಳಿಸಿದೆ.

ಫಾಟ್ ಪ್ರದೇಶದ 56 ಕಿಮೀ ಮಾರ್ಗದಲ್ಲಿ ಒಟ್ಟು 68 ಕಡೆ ಭೂಕುಸಿತವಾಗಿ ಹಳಿ ಮೇಲೆ  ಮಣ್ಣು ತುಂಬಿಕೊಂಡಿದೆ. ಮಾತ್ರವಲ್ಲದೆ ಹಲವು ಕಡೆ ಹಳಿಗಳಿಗೂ ಹಾನಿಯಾಗಿದೆ.

ಈ ಹಿಂದೆ ಆಗಸ್ಟ್ 31 ರ ತನಕ ರೈಲು ಸಂಚಾರ ರದ್ದುಗೊಳಿಸಲಾಗಿತ್ತು, ಇದೀಗ ಸೆಪ್ಟಂಬರ್ 15ಕ್ಕೆ ವಿಸ್ತರಿಸಲಾಗಿದೆ.

ಈಗಾಗಲೇ 40 ಪ್ರದೇಶದಲ್ಲಿ ಮಣ್ಣು ತೆರವು ಮಾಡಲಾಗಿದೆ. ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ.ಯ ಆದರೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ ಕೆಲಸಕ್ಕೆ ಅಡ್ಡಿ ಮಾಡುತ್ತಿದೆ.
ಈ ಕಾರ್ಯ ಮುಗಿಯಲು ಇನ್ನು 15 ರಿಂದ 20 ದಿನ ಬೇಕು.

ಈ ಕಾರಣದಿಂದ ಬೆಂಗಳೂರು – ಕಣ್ಣೂರು/ಕಾರವಾರ, ಮಂಗಳೂರು – ಯಶವಂತಪುರ ಸೇರಿದಂತೆ ಎರಡು ಮಹಾನಗರಗಳ ನಡುವಿನ ರೈಲ್ವೆ ಸಂಪರ್ಕ ಕೆಲ ದಿನಗಳ ಕಾಲ ಕಡಿದು ಹೋಗಲಿದೆ.