Advertisements

ವಂಚಕರಿದ್ದಾರೆ – ಯಶೋಮಾರ್ಗ ಹೆಸರಲ್ಲಿ ದುಡ್ಡು ಕೇಳಿದ್ರೆ ಕೊಡ್ಲೇಬೇಡಿ….

ಮಳೆ ನೆರೆ ಬಂದರೆ ಸಾಕು ಕಾಸು ಮಾಡುವ ಮಂದಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೆ. ಎಲ್ಲಿಯ ಮಟ್ಟಿಗೆ ಅಂದರೆ ನಿಜವಾಗಿಯೂ ಸಹಾಯ ಮನೋಭಾವನೆ ಹೊಂದಿರುವ ಮಂದಿಯನ್ನು ಸಂಶಯದಿಂದ ನೋಡಿಕೊಳ್ಳುವಷ್ಟರ ಮಟ್ಟಿಗೆ ಇವರು ಬೆಳೆದಿರುತ್ತಾರೆ.

ಕೊಡಗು ಕೇರಳ ನೆರೆ ವಿಷಯದಲ್ಲೂ ಹೀಗೆ ಆಗಿದೆ. ದೇವರನಾಡಿನಲ್ಲಿ ನೆರೆ ಬಂದಿದೆ, ಕೊಡಗು ಮುಳುಗಿ ಹೋಗಿದೆ ಸಹಾಯ ಮಾಡಿ ಎಂದು ನೂರಾರು ಮಂದಿ ಚಂದಾ ಎತ್ತುತ್ತಿದ್ದಾರೆ. ಆದರೆ ನಿಜವಾಗಿಯೂ ಇವರು ಸಹಾಯ ಮಾಡುವ ಮಂದಿಯೇ ಎಂದು ಅನುಮಾನದಿಂದ ನೋಡುವಂತ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಯಾವ ಸಂಘಟನೆಯವರನ್ನು ನಂಬಲಿ, ಯಾರಿಗೆ ಕೊಟ್ಟರೆ ಸಂತ್ರಸ್ಥರಿಗೆ ತಲುಪುತ್ತದೆ ಅನ್ನುವುದೇ ಗೊತ್ತಾಗುತ್ತಿಲ್ಲ.

ಗರ್ಭಿಣಿ ರಾಧಿಕಾ ಫೋಟೋ ವೈರಲ್

ಇದಕ್ಕೆ ಕಾರಣವಾಗಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕೊಟ್ಟ ಹೇಳಿಕೆ. ಸಂತ್ರಸ್ಥರ ಹೆಸರಿನಲ್ಲಿ ಚಂದಾ ಎತ್ತುವ ನಕಲಿ ಮಂದಿ ಹುಟ್ಟಿಕೊಂಡಿದ್ದಾರೆ. ದಯವಿಟ್ಟು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಾಸು ಕೊಡಿ ಎಂದು ಅವರು ಸಾಕಷ್ಟು ದಿನಗಳ ಹಿಂದೆ ಹೇಳಿದ್ದರು.

ಇದಕ್ಕೆ ಪುಷ್ಟಿ ನೀಡುವಂತೆ ನಟ ಯಶ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

ಯಶೋಮಾರ್ಗ ಸಂಸ್ಥೆಯ ಹೆಸರು ಹೇಳಿಕೊಂಡು ಕೊಡಗು ಮಹಾಮಳೆಯ ಸಂತ್ರಸ್ಥರಿಗೆ ಕೆಲವರು ಅಕ್ರಮವಾಗಿ ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇದು ನಟ ಯಶ್ ಗಮನಕ್ಕೂ ಬಂದಿದ್ದು, “ಯಶೋಮಾರ್ಗದ ಹೆಸರು ಹೇಳಿಕೊಂಡು ಬರುವವರಿಗೆ ದೇಣಿಗೆ ಕೊಡಬೇಡಿ” ಎಂದು ಅವರೇ ಮನವಿ ಮಾಡಿದ್ದಾರೆ.

‘ಯಶೋಮಾರ್ಗ’ ಸಂಸ್ಥೆಯ ಮೂಲಕ ನನ್ನ ಸ್ವಂತ ಸಂಪಾದನೆಯ ಹಣದಲ್ಲಿ ನನ್ನ ಆತ್ಮ ತೃಪ್ತಿಗಾಗಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇದಕ್ಕಾಗಿ ಯಾವುದೇ ದೇಣಿಗೆ/ವಂತಿಗೆಯನ್ನು ಜನರಿಂದ ಸ್ವೀಕರಿಸುತ್ತಿಲ್ಲ.
ಆದರೆ, ಇತ್ತೀಚೆಗೆ ಭಾರಿ ಮಳೆಯಿಂದಾಗಿ ನಿರಾಶ್ರಿತರಾದ ಕೊಡಗಿನ ಜನರಿಗೆ ಪರಿಹಾರ ನೀಡುವ ನೆಪದಲ್ಲಿ ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಇದಕ್ಕಾಗಿ ಯಶೋಮಾರ್ಗದ ಹೆಸರನ್ನು ಬಳಸಬಾರದೆಂದು ವಿನಂತಿಸುತ್ತೇನೆ.

ಸಾರ್ವಜನಿಕರ ನೆರವು ಯಶೋಮಾರ್ಗಕ್ಕೆ ಅವಶ್ಯವೆನಿಸುವ ಸಂದರ್ಭದಲ್ಲಿ ನಾನೇ ಖುದ್ದು ನಿಮ್ಮ ಮುಂದೆ ಬರುತ್ತೇನೆ. ಸಧ್ಯಕ್ಕೆ ಯಶೋಮಾರ್ಗದ ಹೆಸರಿನಲ್ಲಿ ದೇಣಿಗೆ ಕೇಳಲು ಬಂದವರಿಗೆ ದೇಣಿಗೆ ನೀಡಬೇಡಿ ಎಂದು ನಾನು ಈ ಸಂದರ್ಭದಲ್ಲಿ ತಿಳಿಸಬಯಸುತ್ತೇನೆ.

ಅಲ್ಲಿಗೆ ಯಶ್ ಮತ್ತು ಕೊಡಗು ಹೆಸರಿನಲ್ಲಿ ದುಷ್ಕರ್ಮಿಗಳು ಭರ್ಜರಿ ಫಸಲು ಮಾಡುತ್ತಿದ್ದಾರೆ ಅಂದಾಯ್ತು. ನಿಮಗೇನಾದರೂ ಯಶ್ ಹೆಸರಿನಲ್ಲಿ ಚಂದಾ ಎತ್ತುವವರು ಕಂಡು ಬಂದರೆ ಕತ್ತಿನ ಪಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿ.

Advertisements

ಕೇರಳಕ್ಕೆ ಐದು ಬಾಕ್ಸ್ ಪೇರಳೆ ಕೊಟ್ಟ ಬೀದಿ ವ್ಯಾಪಾರಿ ಹೇಳಿದ್ದೇನು..?

ಕೇರಳಕ್ಕೆ ಸಹಾಯ ಹಸ್ತ ಚಾಚಿದವರ ಕಥೆಗಳನ್ನು ಕೆದಕುತ್ತಾ ಹೋದರೆ ಸಿಗುವುದು ಅಚ್ಚರಿಯ ವಿಷಯ. ಕೈ ತುಂಬಾ ಕಾಸು ಇದ್ದವರು ಸಹಾಯ ಮಾಡಿದ ಮೇಲೆ ಪಡೆದ ಪ್ರಚಾರಕ್ಕೆ ಕಡಿಮೆ ಇಲ್ಲ. ಆದರೆ ಒಂದೊಂದು ರೂಪಾಯಿ ಕೊಟ್ರಲ್ಲ ಅವರು ಪ್ರಚಾರ ಪಡೆಯಲೂ ಇಲ್ಲ, ಮಾಧ್ಯಮಗಳು ಪ್ರಚಾರ ಕೊಡಲೂ ಇಲ್ಲ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಕೇರಳದ ಬಗ್ಗೆ ಕೆದಕುತ್ತಿದ್ದಾಗ ಸಿಕ್ಕಿದ ಕಥೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ,
ಬೆಂಗಳೂರಿನಲ್ಲಿ ಯುವಕರ ತಂಡವೊಂದು ಕೇರಳಕ್ಕೆ ಹಣ, ವಸ್ತು ಸಂಗ್ರಹ ಮಾಡುತ್ತಿತ್ತು. ಈ ವೇಳೆ ಧರ್ಮಪುರಿಯ ನಿವಾಸಿ ರಮೇಶ್ ತಂಡಕ್ಕೆ ಎದುರಾಗಿದ್ದಾರೆ. ಸೀಬೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುವ ರಮೇಶ್ ಗೆ ಜೀವನಕ್ಕೆ ಅಂದಿನ ಆದಾಯವೇ ಆಧಾರ. ಆ ದಿನ ದುಡಿದದ್ದು ಆ ದಿನದ ಖರ್ಚಿಗೆ.

ಆದರೆ ಸಹಾಯ ಎಂದು ಹೋದವರಿಗೆ ರಮೇಶ್ ನಿರಾಶೆ ಮಾಡಲಿಲ್ಲ. ಬದಲಿಗೆ 5 ಬಾಕ್ಸ್ ಪೇರಳೆ ಹಣ್ಣುಗಳನ್ನು ತಂಡದ ಕೈಗಿಟ್ಟರು.ಸಂಜೆ ಹೊತ್ತಿನಲ್ಲಿ ವ್ಯಾಪಾರಕ್ಕೆ ಎಂದು ತಂದ ಹಣ್ಣನ್ನು ದಾನ ಮಾಡುವುದನ್ನು ಕಂಡ ಕಾರ್ಯಕರ್ತರು ನಿಮ್ಮ ಆದಾಯಕ್ಕೆ ತೊಂದರೆಯಾಗುವುದಿಲ್ಲವೇ ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ರಮೇಶ್ ಹೇಳಿದ್ದು “Panam naleikku venalum sambadhikkalam” – ನಾನು ಕಾಸು ನಾಳೆಯೂ ಸಂಪಾದಿಸಬಲ್ಲೇ ಎಂದು. ಸಿಕ್ಕಿರುವ ಮಾಹಿತಿ ಪ್ರಕಾರ ಇವರು ಕಗ್ಗದಾಸಪುರದಲ್ಲಿ ವ್ಯಾಪಾರ ಮಾಡುತ್ತಾರಂತೆ.

ಯಾರಿಗಾದರೂ ಈ ವ್ಯಕ್ತಿ ಸಿಕ್ಕರೆ ಒಂದು Thanks ಹೇಳಿ ಬನ್ನಿ.

Ramesh2Ramesh3

ಸೈಕಲ್ ಖರೀದಿಗೆಂದು ಕೂಡಿಟ್ಟ ಹಣವನ್ನು ಕೇರಳ ಸಂತ್ರಸ್ಥರಿಗೆ ಕೊಟ್ಟ ಹುಡುಗಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ..?

ಕೇರಳದಲ್ಲಿ ಹರಿದ ಪ್ರವಾಹ ಕಣ್ಣೀರು ತರಿಸಿದರೆ, ಜನ ಚಾಚುತ್ತಿರುವ ಸಹಾಯ ಹಸ್ತ ನೋಡಿ ಆನಂದ ಭಾಷ್ಪ ಸುರಿಯುತ್ತದೆ. ಒಂದೆಡೆ ವೀರ ಸೈನಿಕರ ರಕ್ಷಣಾ ಕಾರ್ಯಾಚರಣೆ, ಮತ್ತೊಂದು ಕಡೆ ಊಹೆಗೂ ನಿಲುಕದ ಸಹಾಯ ಮನೋಭಾವನೆ.

ಸಹಾಯ ಹಸ್ತ ಚಾಚಿದವರ ಒಂದೊಂದು ಕಥೆಯೂ ಭಿನ್ನ. ಇದರಲ್ಲಿ ತಮಿಳುನಾಡಿನ 8 ವರ್ಷದ ಹುಡುಗಿಯ ತ್ಯಾಗ ಮನೋಭಾವಕ್ಕೊಂದು ಸೆಲ್ಯೂಟ್ ಹೇಳಲೇಬೇಕು.

 ತಮಿಳುನಾಡು ವಿಲ್ಲುಪುರಂನ 8 ವರ್ಷದ ಹುಡುಗಿ ಅನುಪ್ರಿಯ ಸೈಕಲ್ ಖರೀದಿಸಬೇಕು ಎಂದು ಸಾಕಷ್ಟು ದಿನಗಳಿಂದ ಕನಸು ಕಂಡಿದ್ದಳು. ಇದಕ್ಕಾಗಿ ಆಕೆ ಹಲವು ದಿನಗಳಿಂದ ಕಾಸು ಸಂಗ್ರಹಿಸಿಕೊಂಡು ಬಂದಿದ್ದಳು. ಆದರೆ ಕೇರಳದಲ್ಲಿ ನೆರೆ ಬಂದಿರುವ ಸುದ್ದಿ ಪುಟ್ಟ ಬಾಲಕಿಯ ಮನಸ್ಸಿಗೆ ತಟ್ಟಿತು.

ಹೀಗಾಗಿ ಎರಡನೇ ತರಗತಿಯ ಪುಟ್ಟ ಹುಡುಗಿ ಸೈಕಲ್ ಮತ್ತೊಮ್ಮೆ ತೆಗೆದುಕೊಳ್ಳಬಹುದು ಎಂದು ನಿರ್ಧರಿಸಿ, ತಾನು ನಾಲ್ಕು ವರ್ಷಗಳಿಂದ ಕೂಡಿಟ್ಟ ಹಣವನ್ನು ಕೇರಳ ಸಂತ್ರಸ್ಥರಿಗೆ ಕೊಡಲು ನಿರ್ಧರಿಸಿದಳು.ತಂದೆ ಕೆಸಿ ಷಣ್ಮುಗನಾಥನ್ ಮತ್ತು ತಾಯಿ ಲಲಿತಾರಿಗೆ ತನ್ನ ನಿರ್ಧಾರವನ್ನು ತಿಳಿಸಿದಳು.

ಪುಟ್ಟ ಹುಡುಗಿಯ ನಿರ್ಧಾರ ವೈರಲ್ ಆಗುತ್ತಿದ್ದಂತೆ ಹೀರೋ ಸೈಕಲ್ ಕಂಪನಿ ಅನುಪ್ರಿಯಳಿಗೆ ತಾನೇ ಬೆಸ್ಟ್ ಸೈಕಲ್ ಕೊಡುವುದಾಗಿ ಹೇಳಿತು.

t

ಅತ್ತ ಹುಡುಗಿ ಕೂಡಿಟ್ಟ ಕಾಸು ಕೇರಳ ತಲುಪುತ್ತಿದ್ದಂತೆ ಹುಡುಗಿಯ ಕುಟುಂಬವನ್ನು ಸಂಪರ್ಕಿಸಿದ ಹಿರೋ ಸೈಕಲ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಮನೋಜ್ ಕುಮಾರ್ ಅನುಪ್ರಿಯಾಳಿಗೆ ಸೈಕಲ್ ಒಂದನ್ನು ಕೊಡಿಸಿದ್ದಾರೆ.

DlDYsWrXcAElLsB

ಗ್ರಾಹಕನ ಆಹಾರಕ್ಕೆ ಬಾಯಿ ಹಾಕಿದ ಫುಡ್ ಡೆಲಿವರಿ ಬಾಯ್  

 ಆನ್ ಲೈನ್ ವ್ಯವಹಾರಗಳಲ್ಲಿ ಆಗುತ್ತಿರುವ ಮೋಸಕ್ಕೆ ಲೆಕ್ಕವಿಲ್ಲ. ಮೊಬೈಲ್ ಬುಕ್ ಮಾಡಿದ್ರೆ ಕಲ್ಲು ಇಟ್ಟು ಕಳುಹಿಸುತ್ತಾರೆ. ಆದರೆ ಚೈನಾದಲ್ಲಿ ಡೆಲಿವರಿ ಬಾಯ್ ಗಳು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಗ್ರಾಹಕರ ಹಸಿವು ತಣಿಸಲು ಪುಡ್ ಸರಬರಾಜು ಮಾಡುವ ಇವರು ಗ್ರಾಹಕ ಅನ್ನಕ್ಕೆ ಕನ್ನ ಹಾಕಿದ್ದಾರೆ. ಆನ್ ಲೈನ್ App ಮೂಲಕ ಫುಡ್ ಬುಕ್ ಮಾಡಿದ್ರೆ ಮನೆ ಬಾಗಿಲಿಗೆ ಬರುತ್ತದೆ ಅಂದುಕೊಂಡ ಗ್ರಾಹಕರ ಕೈಗೆ ಎಂಜಲು ಮಿಶ್ರಿತ ಆಹಾರವನ್ನು ಇವರು ಒದಗಿಸುತ್ತಿದ್ದಾರೆ.

ಆದರೆ ಸಿಸಿಟಿವಿ ಅನ್ನುವ ಗೂಢಚಾರ ಬಿಡಬೇಕಲ್ವ, ಹುಡುಗರ ನಿಜಬಣ್ಣವನ್ನು ಬಯಲು ಮಾಡಿದೆ. ಚೀನಾದಲ್ಲಿ ಗ್ರಾಹಕರ ಬಹು ಅಂತಸ್ತಿನ ಮನೆಗಳಿಗೆ ಆಹಾರ ಸರಬರಾಜು ಮಾಡುವ ತೆರಳುವ ವೇಳೆ ಲಿಫ್ಟ್ ಹತ್ತುವ ಡೆಲಿವರಿ ಹುಡುಗರು ಕವರ್ ತೆರೆದು ಬಾಕ್ಸ್ ಓಪನ್ ಮಾಡಿ ಹಾಗೇ ಬಾಯಿ ಹಾಕಿ ತಿಂದು ಬಿಡುತ್ತಾರೆ.

ಇನ್ನೇನು ಲಿಫ್ಟ್ ಡೋರ್ ಒಪನ್ ಆಗುತ್ತದೆ ಅನ್ನುವಾಗ ಹಾಗೇ ಇಟ್ಟು ಬಿಡುತ್ತಾರೆ.  ಕೊನೆಗೆ ಫುಡ್ ತಲುಪಿಸಬೇಕಾದ ಜಾಗ ಬಂದ ತಕ್ಷಣ ಪ್ಯಾಕೇಟ್ ಅನ್ನು ನೀಟಾಗಿಸಿ, ಗ್ರಾಹಕಕನ ಕೈಗಿಟ್ಟು ಥ್ಯಾಂಕ್ಸ್ ಹೇಳಿ ಬರುತ್ತಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಆನ್ ಲೈನ್ ಗಳಲ್ಲಿ ಪುಢ್ ಆರ್ಡರ್ ಮಾಡುವವರು ಸಾವಿರ ಸಲ ಯೋಚಿಸುವಂತೆ ಮಾಡಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಸಂಸ್ಥೆ ಗ್ರಾಹಕರ ಕ್ಷಮೆ ಯಾಚಿಸಿದೆ, ಮಾತ್ರವಲ್ಲದೆ ಡೆಲಿವರಿಯ ಹುಡುಗನನ್ನು ಕೆಲಸದಿಂದ ಕಿತ್ತು ಹಾಕಿದೆ. ಹಾಗಂತ ಇದು ಶಾಶ್ವತ ಪರಿಹಾರವೇ ನಾಳೆ ಮತ್ತೊಂದು ಮಾರ್ಗದ ಮೂಲಕ ಪೊಟ್ಟಣಕ್ಕೆ ಬಾಯಿ ಹಾಕುತ್ತಾರೆ.

ಸಿಧು ಸಹಾಯಕ್ಕೆ ಪಾಕಿಸ್ತಾನದ ನೂತನ ಪ್ರಧಾನಿಯೇ ಬರಬೇಕಾಯ್ತು

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ನವಜೋತ್ ಸಿಂಗ್ ಸಿಧು ಸಹಾಯಕ್ಕೆ ಇಮ್ರಾನ್ ಖಾನ್ ಧಾವಿಸಿದ್ದಾರೆ. ಭಾರತದಲ್ಲಿ ಸಿಧು ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ಸಿಧುವನ್ನು ಶಾಂತಿಯ ರಾಯಭಾರಿ ಎಂದು ಬಣ್ಣಿಸಿದ್ದಾರೆ.

ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಸಿಧು ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಒಬ್ಬ ಶಾಂತಿಯ ರಾಯಭಾರಿ ಮತ್ತು ಅವರಿಗೆ ಪಾಕಿಸ್ತಾನದ ಜನತೆ ಅದ್ಭುತ ಪ್ರೀತಿ ಮತ್ತು ವಿಶ್ವಾಸ ನೀಡಿದ್ದಾರೆ ಎಂದು ಇಮ್ರಾನ್ ಖಾನ್ ಟ್ವೀಟ್ ನಲ್ಲಿ ಹೇಳಿದ್ದಾರೆ.

ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಹಿರೋ ಉಪ್ಪಳದ ಶೆಟ್ಟಿ… ಯಾಕೆ ಗೊತ್ತಾ…?

ಪಾಕಿಸ್ತಾನಕ್ಕೆ ಬಂದ ಸಿಧು ಅವರನ್ನು ಭಾರತದಲ್ಲಿ ಟಾರ್ಗೆಟ್ ಮಾಡುತ್ತಿರುವವರು ಉಪ ಖಂಡದಲ್ಲಿ ಶಾಂತಿಯಿಂದ ದೂರವಾಗುತ್ತಿದ್ದಾರೆ. ಶಾಂತಿ ಇಲ್ಲದೆ ನಮ್ಮ ಜನ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ಕಾಶ್ಮೀರ ಸೇರಿದಂತೆ ಉಭಯ ದೇಶಗಳ ನಡುವಿನ ಎಲ್ಲಾ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮಾತುಕತೆಯ ಮೂಲಕ ನಮ್ಮ ಭಿನ್ನಾಭಿಪ್ರಾಯ ಪರಿಹರಿಸಿಕೊಂಡು ವ್ಯಾಪಾರ ಆರಂಭಿಸಬೇಕು. ಎಂದು ಪಾಕ್ ನೂತನ ಪ್ರಧಾನಿ ಹೇಳಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡ ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಸಚಿವ ಸಿಧು ವಿರುದ್ಧ ಕೇವಲ ಬಿಜೆಪಿಯವರು ಟೀಕೆ ಮಾಡಿದ್ದರೆ ರಾಜಕೀಯ ಅನ್ನಬಹುದಿತ್ತು. ಆದರೆ ಟೀಕೆಗಳು ಕಾಂಗ್ರೆಸ್ ನಲ್ಲೇ ಕೇಳಿ ಬರುತ್ತಿದೆ. ಪಂಜಾಬ್ ಮುಖ್ಯಮಂತ್ರಿಗಳೇ ಸಿಧು ವರ್ತನೆಯನ್ನು ಖಂಡಿಸಿದ್ದಾರೆ.

ರಮ್ಯರನ್ನು ಕೆಲಸದಿಂದ ಕಿತ್ತು ಹಾಕಿದ್ರಂತೆ ರಾಹುಲ್…!

ಆದರೆ ಮಾತಿನ ಮಲ್ಲನಾಗಿರುವ ಸಿಧು ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಸಿಧು ವರ್ತನೆ ಕಾಂಗ್ರೆಸ್ ಕಂಟಕವಾಗುವುದರಲ್ಲಿ ಸಂಶಯವಿಲ್ಲ. ಮುಂದಿನ ಲೋಕಸಭೆ ಚುನಾವಣೆ ತನಕ ಬಿಜೆಪಿ ಈ ವಿಷಯವನ್ನು ಜೀವಂತವಾಗಿರಿಸುತ್ತದೆ. ರಾಹುಲ್ ಗಾಂಧಿಯ ಮೌನವೂ ಸಿಧು ವಿರುದ್ಧ ಆಕ್ರೋಶಗೊಂಡಿರುವ ಭಾರತೀಯರ ಸಹನೆ ಪರೀಕ್ಷಿಸುತ್ತಿದೆ.

ಕೇರಳದ ನಿರಾಶ್ರಿತರ ಕೇಂದ್ರದಲ್ಲಿ ಡ್ಯಾನ್ಸ್ ಸದ್ದು – ನೋವು ಮರೆಯಲು ಇನ್ನೇನಿದೆ ಅಲ್ಲಿ

ಕೇರಳದಲ್ಲಿ ಮಳೆಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಾನಂಗಳದಲ್ಲಿ ಸೂರ್ಯನ ಕಿರಣಗಳು ಕಾಣಿಸಿಕೊಳ್ಳುವ ಲಕ್ಷಣ ತೋರುತ್ತಿದೆ.ಆದರೆ ಪ್ರವಾಹದಲ್ಲಿ ಕೊಚ್ಚಿ ಹೋದವರ ಬದುಕಿನಲ್ಲಿ ಭರವಸೆಯ ಕಿರಣಗಳು ಮೂಡುವುದು ಯಾವಾಗ.

ನಿರಾಶ್ರಿತರ ಕೇಂದ್ರದಲ್ಲಿ ಕೂತವರ ಮನಸ್ಸಿನಲ್ಲಿ ಅವರ ಮನೆಯ ಚಿತ್ರ ಓಡುತ್ತಿದೆ. ಮುಂದೇನು..ಬದುಕು ಕಟ್ಟುವುದು ಹೇಗೆ ಅನ್ನುವ ಚಿಂತೆ ಕಾಡುತ್ತಿದೆ.ಈ ನಡುವೆ ತಮ್ಮ ನೋವು ಮರೆಯುವ ಪ್ರಯತ್ನ ಕೂಡಾ ನಿರಾಶ್ರಿತರ ಕೇಂದ್ರದಲ್ಲಿ ಸಾಗಿದೆ.

ನೋವಿನ ನಡುವೆ ತನ್ನ ಪಕ್ಕದಲ್ಲಿರುವ ನಿರಾಶ್ರಿತನನ್ನು ಖುಷಿಯಾಗಿಡಬೇಕು ಎಂದು ಪ್ರತಿಯೊಬ್ಬರು ಬಯಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕೊಚ್ಚಿಯ ಕ್ಯಾಂಪ್ ಒಂದರಲ್ಲಿ ವಯೋ ವೃದ್ಧರು ತಮಿಳು ಹಾಡಿಗೆ ನೃತ್ಯ ಮಾಡುವ ದೃಶ್ಯ ವೈರಲ್ ಆಗಿದೆ. ‘ಜಿಲ್ಲಾ’ ಚಿತ್ರದ ಹಾಡಿಗೆ ನೃತ್ಯ ಮಾಡುವ ಮೂಲಕ ಕ್ಯಾಂಪ್ ನಲ್ಲಿರುವ ಪ್ರತಿಯೊಬ್ಬರ ಮುಖದ ನೋವು ಒಂದು ಕ್ಷಣ ಮರೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಇದು ಒಂದು ಕಡೆಯಾದರೆ ಚೆರ್ನಲ್ಲೂರು ಕ್ಯಾಂಪ್ ನಲ್ಲೂ ಜಿಮ್ಕಿ ಕಮಾಲ್ ಹಾಡಿಗೆ ಮಹಿಳೆಯೊಬ್ಬರು ಮಕ್ಕಳೊಂದಿಗೆ ನೃತ್ಯ ಮಾಡಿದ್ದಾರೆ. ಮನೆ ಮಠ ಕಳೆದುಕೊಂಡ ಮಕ್ಕಳು ನೋವಿನ ಕ್ಷಣಗಳನ್ನು ಮರೆಯಲಿ ಅನ್ನುವುದು ಈ ಡ್ಯಾನ್ಸ್ ಉದ್ದೇಶವಾಗಿತ್ತು.

ಚೆರ್ನಲ್ಲೂರು ಕ್ಯಾಂಪ್ ವಿಡಿಯೋ ಅನ್ನು ಶೇರ್ ಮಾಡಿರುವ ಐಎಎಸ್ ಅಧಿಕಾರಿ ಪ್ರಶಾಂತ್ ನಾಯರ್ ( ಮಲಿಯಾಳಿಗಳ ಪಾಲಿಗೆ ಪ್ರಶಾಂತ್ Collector Bro ಎಂದೇ ಪ್ರಸಿದ್ಧರು) “ ನಿರಾಶ್ರಿತರ ಕ್ಯಾಂಪ್ ಗಳಿಗೆ ಇದೀಗ ಕೇರಳ ಮಾದರಿಯಾಗಿದೆ. ನೋವುಗಳನ್ನು ನುಂಗಿ ಕೊರಗುವ ಬದಲು ಹೀಗೆ ಸಂತೋಷ ತರಿಸುವ ಮೂಲಕ ನೋವನ್ನು ಮರೆಯಬಹುದಾಗಿದೆ” ಎಂದಿದ್ದಾರೆ.

ಈ ವಿಡಿಯೋ ನೋಡಿ ಕೇರಳ ಮಂದಿ ಎಷ್ಟು ಖುಷಿಯಾಗಿದ್ದಾರೆ, ಅವರಲ್ಲಿ ಪ್ರವಾಹದ ನೋವೇ ಇಲ್ಲ ಎಂದು ಟೀಕಿಸುವ ಮಂದಿ ಸಾಕಷ್ಟಿರುತ್ತಾರೆ. ಆದರೆ ಒಂದು ನೆನಪಿಡಿ ಅವರೆಲ್ಲರೂ ಡ್ಯಾನ್ಸ್ ಮಾಡುತ್ತಿದ್ದಾರೆ ಅಂದರೆ ಕೇರಳ ಸಹಜ ಸ್ಥಿತಿಗೆ ಮರಳಿದೆ ಎಂದರ್ಥವಲ್ಲ. ಹಾಡು ಡ್ಯಾನ್ಯ್ ಮೂಲಕ ನೋವನ್ನು ಮರೆಯುವ ಪ್ರಯತ್ನ ಅವರು ಮಾಡುತ್ತಿದ್ದಾರೆ. ಹೀಗೆ ನೋವಲ್ಲೇ ಕೊರಗಿ ಕೂತರೆ ನಾಳೆ ಅವರು depressionಗೆ ಹೊರಟು ಹೋಗ್ತಾರೆ. ಮತ್ತೆ ಜೀವನ ಪೂರ್ತಿ ಹಾಗೇ ಇರಬೇಕಾದಿತು. ಬದಲಿಗೆ ಹೀಗೆ ನೋವಿನಲ್ಲೂ ಕುಣಿಯುತ್ತಿದ್ದರೆ ಹೊಸ ಬದುಕು ಕಟ್ಟುವ ಛಲ ಬರುತ್ತದೆ.

https://www.facebook.com/plugins/video.php?href=https%3A%2F%2Fwww.facebook.com%2Fprasanthn%2Fvideos%2F10157737978234056%2F&show_text=0&width=560

ರಮ್ಯರನ್ನು ಕೆಲಸದಿಂದ ಕಿತ್ತು ಹಾಕಿದ್ರಂತೆ ರಾಹುಲ್…!

ನೀವು Observe ಮಾಡಿದ್ರೋ..ಇಲ್ವೋ ಗೊತ್ತಿಲ್ಲ, ಇತ್ತೀಚೆಗೆ ಚಂದನವನದ ಮೋಹಕ ತಾರೆ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ರಮ್ಯ ಸೈಲೆಂಟ್ ಆಗಿದ್ದಾರೆ. ಒಂದಲ್ಲ ಒಂದು ಟ್ವೀಟ್ ಮೂಲಕ ಸುದ್ದಿಯಾಗುತ್ತಿದ್ದ ದಿವ್ಯ ಸ್ಪಂದನ ಟ್ವೀಟ್ ಗಳ ದೂರವುಳಿದಿದ್ದಾರೆ. ಏನಿದ್ದರೂ ಅವರೀಗ ರೀ ಟ್ವೀಟ್ ಮಾಡುವುದಕ್ಕೆ ಸೀಮಿತರಾಗಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ರಮ್ಯ ಅವರು ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ಅನ್ನುವ ಹುದ್ದೆಯಿಂದ ಕೆಳಗಿಳಿದಿದ್ದಾರಂತೆ..ಅಲ್ಲ ಕೆಳಗಿಳಿಸಿದ್ದಾರಂತೆ. ಹೀಗಾಗಿಯೇ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ಬಳಿಕ ಸುಂಟರಗಾಳಿಯಂತೆ ಟ್ವೀಟ್ ಗಳನ್ನು ಮಾಡುತ್ತಿದ್ದ ಮಾಜಿ ಸಂಸದೆ, ನಟಿ ಹಾಗೂ ರಾಜಕಾರಣಿ ರಮ್ಯಾ ರೀ ಟ್ವೀಟ್ ಕೆಲಸಕ್ಕೆ ಕೂತಿದ್ದಾರೆ.

ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ ವೇಳೆ ಅನಗತ್ಯವಾಗಿ ಟ್ವೀಟ್ ಮಾಡಬಾರದು ಹಾಗೂ ರಾಹುಲ್ ಗಾಂಧಿಗೆ ಸಂಬಂಧಪಟ್ಟ ಸುದ್ದಿಗಳನ್ನು ಟ್ವೀಟ್ ಮಾಡದಂತೆ ಸೂಚ ನೀಡಲಾಗಿತ್ತು. ಆದರೆ ರಮ್ಯಾ ಇದನ್ನು ಪಾಲಿಸಿರಲಿಲ್ಲ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟ್ವೀಟ್ ಮಾಡಿ ಬಹಳಷ್ಟು ಬಾರಿ ಎಡವಟ್ಟು ಮಾಡಿಕೊಂಡಿದ್ದರು. ಇದು ಕಾಂಗ್ರೆಸ್ ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ ರಮ್ಯ ಕೆಲಸದ ಬಗ್ಗೆ ಮುನಿಸಿಕೊಂಡಿರುವ ನಾಯಕರು ರಮ್ಯಾಗೆ ಅಂಕುಶ ಹಾಕುವಂತೆ ಸಲಹೆ ನೀಡಿದ್ದರು.

ಜಯಲಲಿತಾ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕರಾವಳಿ ಕುವರಿ ಯಾರು..?

ರಮ್ಯಾ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವಂತೆ ಸಲಹೆ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದರಿಂದಾಗಿ ರಮ್ಯ ಬದಲಿಗೆ ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿಖಿಲ್ ಜೆ ಆಳ್ವಾ ಅವರಿಗೆ ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ವಹಿಸಲಾಗಿದೆಯಂತೆ. ನಿಖಿಲ್ ಮಾಧ್ಯಮಕ್ಕೆ ಸಂಬಂಧಿಸಿದ ಸಂಸ್ಥೆಯನ್ನು ಮುನ್ನಡೆಸಿದ ಅನುಭವ ಹೊಂದಿದ ವ್ಯಕ್ತಿ ಅನ್ನುವುದು ಇಲ್ಲಿ ಗಮನಾರ್ಹ.

ಹೀಗಾಗಿ ರಮ್ಯ ಮೇಡಂ ಕೆಲಸವಿಲ್ಲದೆ ಕೂರುವಂತಾಗಿದೆ.

Ramya2Ramya4

ಜಯಲಲಿತಾ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಕರಾವಳಿ ಕುವರಿ ಯಾರು..?

ಆದಿತ್ಯ ಭಾರಧ್ವಾಜ್‌ ನಿರ್ಮಾಣದ ಜಯಲಲಿತಾ ಬಯೋಪಿಕ್ ಗಾಗಿ ಭರದ ಸಿದ್ದತೆಗಳು ನಡೆಯುತ್ತಿದೆ. ಈಗಾಗಲೇ ಕಥೆ ಸಿದ್ದವಾಗಿದೆ. ತಾಂತ್ರಿಕ ತಂಡವೂ ತಯಾರಿದೆ. ಆದರೆ ಬಯೋಪಿಕ್‌ನಲ್ಲಿ ಜಯಲಲಿತಾ ಪಾತ್ರವನ್ನು ಯಾರು ಮಾಡುತ್ತಾರೆ ಅನ್ನುವುದೇ ಈಗಿನ ಕುತೂಹಲ.

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಥವಾ ಬಾಲಿವುಡ್‌ ತಾರೆ ಐಶ್ವರ್ಯಾ ರೈ ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.ಹೀಗಾಗಿ ಇಬ್ಬರ ಜೊತೆಯೂ ಮಾತುಕತೆ ನಡೆಯುತ್ತಿದ್ದು, ಯಾರು ಒಪ್ಪಿಕೊಳ್ಳುತ್ತಾರೆ ಅನ್ನುವುದು ಗೊತ್ತಿಲ್ಲ.

ಅಂದ ಹಾಗೇ  ಅಮ್ಮ-ಪುರಚ್ಚಿ ತಲೈವಿ ಹೆಸರಿನ ಈ ಬಯೋಪಿಕ್‌ ಅನ್ನು ಭಾರತಿರಾಜ ನಿರ್ದೇಶಿಸಲಿದ್ದು, ಇಳಯರಾಜ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ಎಂಜಿಆರ್‌ ಪಾತ್ರವನ್ನು ಕಮಲ್‌ ಹಾಸನ್‌ ಅಥವಾ ಮೋಹನ್‌ಲಾಲ್‌ ಮಾಡುವ ಸಾಧ್ಯತೆಗಳಿದೆ.  ಈ ನಡುವೆ ವಿಜಯ್‌ ನಿರ್ದೇಶನದಲ್ಲಿಯೂ ಜಯಲಲಿತಾ ಬಯೋಪಿಕ್‌ ಬರುತ್ತಿದ್ದು, ಇದರಲ್ಲಿ ಜಯಲಲಿತಾ ಪಾತ್ರಕ್ಕೆ ವಿದ್ಯಾ ಬಾಲನ್‌ ಹೆಸರು ಕೇಳಿಬರುತ್ತಿದೆ.

ಮಳೆ ನಿಲ್ಲಿಸಲು ಯಾಗದ ಮೊರೆ – ಮತ್ತೆ ಅನುರಣಿಸಿದ 70 ವರ್ಷದ ಹಿಂದೆ ಬಳಸಿದ ವೇದ – ಮಂತ್ರ

ಮಳೆಗಾಗಿ ಹೋಮ ಯಾಗ ನಡೆಸಿದ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಇದೀಗ ಮಳೆ ನಿಲ್ಲಿಸಲು ಯಾಗ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಅತಿವೃಷ್ಟಿ, ಜಲಪ್ರಳಯ, ಭೂ ಕುಸಿತ ಸೇರಿದಂತೆ ಅನೇಕ ಜಲಗಂಡಾಂತರ ನಿವಾರಣೆಗಾಗಿ ಸುಳ್ಯದ ಚೆನ್ನಕೇಶವ ದೇವಾಲಯದಲ್ಲಿ ವರುಣ ಮಹಾಯಾಗ ನಡೆಯಿತು.

ಮಳೆಗಾಗಿ ಪರ್ಜನ್ಯ ಯಾಗ ನಡೆಸಿ ಫಲ ಕಂಡಿರುವ ಸುಳ್ಯ ಕೇಶವ ಕೃಪಾ ವೇದ ಶಾಲೆಯ ಬ್ರಹ್ಮಶ್ರೀ ಪುರೋಹಿತ ನಾಗರಾಜ್ ಭಟ್ ನೇತೃತ್ವದಲ್ಲಿ ಜಲಗಂಡಾಂತರ ನಿವರಣಾ ಯಾಗಗಳು ನಡೆದಿದ್ದು, ಶೀಘ್ರದಲ್ಲೇ ವರುಣ ದೇವ ವಿರಾಮ ನೀಡುವ ಸಾಧ್ಯತೆಗಳಿದೆಯಂತೆ.

ವಿಶೇಷ ಅಂದರೆ ಇಂತಹುದೊಂದು ಯಾಗ ನಡೆದು 70 ವರ್ಷಗಳು ಕಳೆದು ಹೋಗಿದೆ. 70 ವರ್ಷಗಳ ಹಿಂದೆ  ತಮಿಳುನಾಡಿನಲ್ಲಿ ಇದೇ ತರಹದ ಯಾಗ ನಡೆದಿತ್ತು. ಅಲ್ಲಿ ಅತಿವೃಷ್ಟಿಯಾದ ಸಂದರ್ಭದಲ್ಲಿ ಚಂದ್ರಶೇಖರಾನಂದ ಸರಸ್ವತಿ ಸ್ವಾಮೀಜಿ ಇಂತಹುದೊಂದು ಯಾಗ ಫಲ ಕಂಡಿದ್ದರಂತೆ. ಹೀಗಾಗಿ ಅಲ್ಲಿ ಬಳಸಿದ ವೇದ ಮಂತ್ರಗಳನ್ನು ಸುಳ್ಯದಲ್ಲೂ ಬಳಸಲಾಗಿದೆ ಎಂದು ನಾಗರಾಜ್ ಭಟ್ ಹೇಳಿದ್ದಾರೆ.

ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…

ಕೊಡಗಿನಲ್ಲಿ ಅಬ್ಬರಿಸಿದ ಮಳೆ ಮಾಡಿದ ಹಾನಿಗೆ ಲೆಕ್ಕವಿಲ್ಲ. ತೋಟ, ಸೂರು ಎಲ್ಲವನ್ನೂ ನೆರೆ ನುಂಗಿ ಹಾಕಿದೆ. ಬಡವ ಶ್ರೀಮಂತ, ಜಾತಿ ಧರ್ಮ ಅನ್ನುವ ಬೇಧ ತೋರದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.

ಕೊಡಗು ಮತ್ತೆ ಸಹಜ ಸ್ಥಿತಿಗೆ ಬರಲು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.ಆದರೆ ಇದೀಗ ಸುರಿದಿರುವ ಮಳೆ, ಮದುವೆ ಕನಸನ್ನು ನುಚ್ಚು ನೂರು ಮಾಡಿದೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ರಾಟೆಮನೆ ಪೈಸಾರಿಯ ಬೇಬಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು.ದುಡಿದು ಕೂಡಿಟ್ಟ ಹಣದಲ್ಲಿ ಮಗಳು ಮಂಜುಳಾ ಮದುವೆ ನಡೆಸಲು ಅವರು ನಿರ್ಧರಿಸಿದ್ದರು ಕೇರಳದ ಹುಡುಗನೊಂದಿಗೆ ಮದುವೆ ಕೂಡಾ ನಿಗದಿಯಾಗಿತ್ತು. ಆಗಸ್ಟ್ 26ರಂದು ಮಕ್ಕಂದೂರಿನ ಹಾಲ್ ಕೂಡಾ ಬುಕ್ ಆಗಿತ್ತು.ಆಹ್ವಾನ ಪತ್ರಿಕೆ ಹಂಚಿಯಾಗಿದೆ.

ಆದರೆ ಸುರಿದಿರುವ ಮಳೆ ಮದುವೆ ಮಂಟಪವನ್ನು ನುಂಗಿದೆ. ಒಂದೆರೆಡು ದಿನದಲ್ಲಿ ಪರಿಸ್ಥಿತಿ ನೋಡಿ ಹೇಳುತ್ತೇವೆ ಎಂದು ಕೇರಳದ ಹುಡುಗರ ಮನೆಯವರಿಗೆ ತಿಳಿಸಲಾಗಿದೆ.

ಆದರೆ ಮಳೆ ಬಂತು ಎಂದು ಉಟ್ಟ ಬಟ್ಟೆಯಲ್ಲಿ ಬೇಬಿ ಮತ್ತು ಮಂಜುಳಾ ಹೊರ ಬಂದಿದ್ದಾರೆ. ಕೂಲಿ ಮಾಡಿ, ಸಾಲ ಮಾಡಿ ತೆಗೆದಿದ್ದ ಚಿನ್ನ, ಬಟ್ಟೆ ಬರೆ ಮನೆಯೊಳಗೆ ಇದೆಯೋ ಇಲ್ಲವೋ ಎಂದು ಗೊತ್ತಿಲ್ಲ.ಗಂಜಿ ಕೇಂದ್ರದಿಂದ ಮನೆಯತ್ತ ಹೋಗಿ ನೋಡಿದ ಮೇಲಷ್ಟೇ ಪರಿಸ್ಥಿತಿ ಗೊತ್ತಾಗಲಿದೆ ಅನ್ನುತ್ತಾರೆ ಬೇಬಿ.

ಇನ್ನು ಸರ್ಕಾರ ಸಹಾಯ ಮಾಡದಿದ್ದರೆ ಮದುವೆ ಮಾಡುವುದು ಕಷ್ಟ ಅನ್ನುವು ಬೇಬಿಗೆ ದನಿಗೂಡಿಸಿರುವ ಮಂಜುಳಾ ಪರಿಸ್ಥಿತಿ ನೋಡಿದರೆ ಮದುವೆಯೇ ಬೇಡ ಅನ್ನುತ್ತಾರೆ ಮಂಜುಳಾ.

ಇದು ಅವರ ಕಥೆಯಾದರೆ ಇದೇ ಊರಿನ ಸುಮಿತ್ರಾ ತಮ್ಮ ಮಗಳು ರಂಜಿತಾಳ ಮದುವೆಯನ್ನು ಸೆಪ್ಟಂಬರ್ 2 ರಂದು ನಿಶ್ಚಯ ಮಾಡಿದ್ದಾರೆ.

ಮಗಳ ಮದುವೆಗಾಗಿ ಕಾಫಿ ತೋಟದ ಮಾಲೀಕರಿಂದ ಸಾಲವನ್ನೂ ಕೂಡಾ ಪಡೆದಿದ್ದಾರೆ. ಆದರೆ ಇದೀಗ ಮಾಲೀಕರ ಕಾಫಿ ತೋಟ ಕೊಚ್ಚಿ ಹೋಗಿದೆ.

ಪ್ರವಾಹದೊಂದಿಗೆ ಮದುವೆಗೆ ಮಾಡಿಟ್ಟ ಚಿನ್ನಾಭರಣ, ಬಟ್ಟೆ ಬರೆ ಕೊಚ್ಚಿ ಕೊಂಡು ಹೋಗಿದೆ. ಮದುವೆಗಾಗಿ ಲಕ್ಷಗಟ್ಟಲೆ ಸಾಲ ಮಾಡಿರುವ ಕುಟುಂಬ ಈಗ ನೋಡಿರುವ ಕೇರ ಹುಡುಗ ಕೈ ಕೊಟ್ಟರೆ ಅನ್ನುವ ಆತಂಕದಲ್ಲಿದೆ. ಸರ್ಕಾರ ಸಹಾಯ ಹಸ್ತ ಚಾಚದಿದ್ದರೆ ಇವರ ಬದುಕು ಏನಾಗುತ್ತದೋ ಗೊತ್ತಿಲ್ಲ.