Advertisements

ಮೋದಿ ಸಂಸತ್ ಹೊರಗೆ ಹುಲಿ, ಒಳಗೆ ಇಲಿ: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಮೋದಿ ಒಂದು ತಾಸು ಬೊಗಳೆ ಬೊಗಳ್ತಾನೆ ಆದ್ರೆ ಅದು ಪಾರ್ಲಿಮೆಂಟ್ ಹೊರಗೆ. ಪಾರ್ಲಿಮೆಂಟ್‌ನಲ್ಲಿ ಕಳೆದ ಐದು ವರ್ಷದಲ್ಲಿ ಅವ ಮಾತನಾಡಿದ್ದು ಕೇವಲ 25 ಗಂಟೆ 25 ನಿಮಿಷ. ಪಾರ್ಲಿಮೆಂಟ್ ನಲ್ಲಿ ಯಾರೊಂದಿಗಾದರೂ ಕಣ್ಣಲ್ಲಿ ಕಣ್ಣಿಟ್ಟು ಇದು ಸರಿಯಾಗಿಲ್ಲ ಅಂತಾ ಹೇಳೋ ಧೈರ್ಯ ಒಂದು ದಿನವೂ ಮೋದಿ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಧಾನಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದಾರೆ.

ಕಲಬುರ್ಗಿ ಲೋಕಸಭಾ ಕ್ಷೇತ್ರದ ಯಡ್ರಾಮಿ ತಾಲೂಕಿನ ‌ಇಜೇರಿಯಲ್ಲಿ‌ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು ‘ಬಹಾರ್ ಶೇರ್ ಜೈಸಾ ದಿಕಾತಾ ಹೈ, ಪಾರ್ಲಿಮೆಂಟ್ ಮೇ ಚುವ್ವೆ ಜೈಸಾ ಚುಪಾ ರೆಹತಾ ಹೈ’ (ಪ್ರಧಾನಿ ಮೋದಿ ಪಾರ್ಲಿಮೆಂಟ್ ಹೊರಗೆ ಹುಲಿಯಂತಿದ್ರೆ, ಪಾರ್ಲಿಮೆಂಟ್‌ನಲ್ಲಿ ಇಲಿಯಂತಿರ್ತಾನೆ) ಎಂದರು.

ಪ್ರಧಾನಿ ಮೋದಿ ಮತ್ತು ಅವರ ಬೆಂಬಲಿಗರು ನನ್ನನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ. ಇಬ್ಬರು ಕಾಲಿಲ್ಲದವರು ಪೈಲ್ವಾನ್ ಆಗಲು ಸಾಧ್ಯವಿಲ್ಲ. ಎಲ್ಲರಿಗೂ ಬೈಯುವುದು ಮಾತ್ರ ಪ್ರಧಾನಿ ಮೋದಿ ಅವರಿಗೆ ಗೊತ್ತಿದೆ.

ಬಿಜೆಪಿಗಾಗಿ ದುಡಿದವರನ್ನು ಕಡೆಗಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಬಿಜೆಪಿಯ ಹಿರಿಯ ಮುಖಂಡರಾದ ಎಚ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಸುಮೀತ್ರಾ ಮಹಾಜನ್ ಸೇರಿದಂತೆ ಅನೇಕರಿಗೆ ಗೇಟ್ ಪಾಸ್ ನೀಡಿದ್ದಾರೆ. ನನ್ನನ್ನ ಬಿಟ್ಟರೆ ಯಾರೂ ಪ್ರಧಾನಿಯಾಗಲು ಯೋಗ್ಯರಿಲ್ಲ ಅಂತ ಮೋದಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.

Advertisements

ಕನ್ನಡಕ್ಕೆ ಅಂಬರೀಶ್ ಕೊಡುಗೆ ಅನನ್ಯ : ಸುಮಲತಾ ಅವರಿಗೆ ಶಕ್ತಿ ತುಂಬಲು ಮೋದಿ ಕರೆ

ಮೈಸೂರಿನಲ್ಲಿ ನಡೆದ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ಮೋದಿ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್​ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಅಂಬರೀಶ್​ ಎಲ್ಲರ ಮನದಲ್ಲಿದ್ದಾರೆ. ​ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಅವರು ನೀಡಿರುವ ಕೊಡುಗೆ ಅಪಾರ. ದೇಶಕ್ಕಾಗಿ ಅದ್ರಲ್ಲೂ ಕನ್ನಡ ಭಾಷೆ, ಸಂಸ್ಕೃತಿಗೆ ಅಂಬರೀಶ್ ನೀಡಿದ ಕೊಡುಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ.

 ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯದಲ್ಲಿದ್ದಾರೆ. ಸುಮಲತಾ ಅವರ ಜೊತೆ ಸೇರಿ ಅಂಬರೀಶ್ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ, ನಾವೆಲ್ಲ ಸುಮಲತಾ ಅಂಬರೀಶ್​ ಅವರ ಪ್ರಯತ್ನಕ್ಕೆ ಶಕ್ತಿ ತುಂಬಬೇಕು. ಸುಮಲತಾ ಅಂಬರೀಶ್ ಅವರಿಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊನೆಗೂ ಈಡೇರಿತು ಸುಮಲತಾ ಬೇಡಿಕೆ – ಮಂಡ್ಯ ಜಿಲ್ಲಾಧಿಕಾರಿ ಎತ್ತಂಗಡಿ

ಮಂಡ್ಯ ಲೋಕಸಭಾ ಕ್ಚೇತ್ರದಲ್ಲಿ  ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಂತೆ ರಾಜ್ಯ ಸರ್ಕಾರ ಮಂಡ್ಯ ಜಿಲ್ಲಾಧಿಕಾರಿಯನ್ನು ವರ್ಗಾಯಿಸಿದ್ದು, ಆ ಜಾಗಕ್ಕೆ ಸಿ.ಕೆ. ಜಾಫರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನಿಖಿಲ್ ನಾಮಪತ್ರ ಸಲ್ಲಿಕೆ ವಿಚಾರ, ಪಕ್ಷಪಾತ ಸೇರಿದಂತೆ ಅನೇಕ ಗಂಭೀರ ಆರೋಪಗಳು ಮಂಜುಶ್ರೀ ಮೇಲೆ ಕೇಳಿ ಬಂದಿತ್ತು.

 ಈ ಬಗ್ಗೆ ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಕದ ತಟ್ಟಿದ್ದರು.

ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಚುನಾವಣಾ ಆಯೋಗ ಈ ವರ್ಗಾವಣೆ ತೀರ್ಮಾನಕ್ಕೆ ಬಂದಿದೆ.

ಕೆಲ ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ವರ್ಗಾವಣೆಯಾಗಿದ್ದರು.

ಇನ್ನೂ ವಯಸ್ಸಿದೆ, ಶಕ್ತಿ ಇದೆ ಅಲ್ಪ, ಸ್ವಲ್ಪ ಬುದ್ದಿ ಇದೆ :ದಳಪತಿಗಳ ವಿರುದ್ಧ ತೊಡೆ ತಟ್ಟಿದ ಯಶ್

ಮಂಡ್ಯದಲ್ಲಿ ಜೋಡೆತ್ತುಗಳನ್ನು ವೈಯುಕ್ತಿಕವಾಗಿ ಟೀಕಿಸಲು ಹೋಗಿ ದಳಪತಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಅದರಲ್ಲೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಟ್ರೋಲ್ ಪೇಜ್ ಗಳ ಮಾತು ಓದಿ ಹೇಳಿಕೆ ಕೊಟ್ಟು ಎಡವಿದ್ದಾರೆ.

ಯಶ್ ಮನೆ ಬಾಡಿಗೆ ವಿಚಾರಕ್ಕೆ ಕೈ ಹಾಕಿದ ನಿಖಿಲ್ ಇದೀಗ ತುಟಿ ಕಚ್ಚುವ ಪರಿಸ್ಥಿತಿ ಬಂದಿದೆ.

ಮಂಡ್ಯದಲ್ಲಿ ಇಂದು ವಾಹಿನಿಯೊಂದರ ಜೊತೆ ಮಾತನಾಡಿದ ಯಶ್ “ ಇದಕ್ಕೆ ಏನು ಉತ್ತರ ಕೊಡಬೇಕು. ಅದೇನಾಗಿದೆ..ಅವಾಗ ಬಾಡಿಗೆ ಕಟ್ಟೋಕೆ ಅದೇನು ದುಡ್ಡು ಅಂತಾ ಇಟ್ಟುಕೊಂಡಿದ್ದೆ ಅದೆಲ್ಲವನ್ನು ತೆಗೆದುಕೊಂಡು ಹೋಗಿ ಕೆರೆ ಕೆಲಸ. ಇವರು ಈ ಸರ್ಕಾರ ಗೆದ್ದು ಬಂದು ಕೂತು ಕೊಂಡು ಕಾಲ ಕಾಲದಿಂದ ಕೊಳ್ಳೆ ಹೊಡ್ಕೊಂಡು ಏನು ಕೆಲಸ ಮಾಡಿಲ್ಲವಲ್ಲ ಅಂತಾ ಕೆಲಸ ಉಪಯೋಗಿಸೋಣ ಅಂತ ಮನೆ ಬಾಡಿಗೆ ಕಟ್ಟದೇ ತಗೊಂಡು ಹೋಗಿ ಅಲ್ಲಿ ಹೂಳು ಎತ್ತಿಸೋ ಕೆಲಸ, ಅಲ್ಲಿ ಕುಡಿಯೋ ನೀರಿಲ್ದೆ ಒಣಗ್ತಾ ಇದ್ರಲ್ಲ ಜನ ನೀರೇ ಸಿಕ್ಕಿಲ್ಲ ಅಂತಾ ಪಾಪ ಉತ್ತರ ಕರ್ನಾಟಕದಲ್ಲಿ ಅಂತವರಿಗೆ ಕೊಡೋದೋಸ್ಕರ ಆ ದುಡ್ಡನ್ನ ಉಪಯೋಗಿಸಿದ್ದೇನೆ.

ಘನತೆಯಿಂದ, ಗೌರವದಿಂದ ಎಲೆಕ್ಷನ್, ರಾಜಕೀಯ ಮಾಡಿ,ನಾವು ಯಾರ ಬಗ್ಗೆಯೂ ಟೀಕಿಸುತ್ತಿಲ್ಲ, ನಾವು ಮಾತನಾಡುತ್ತೀರೋದು ಕೆಲಸದ ಬಗ್ಗೆ. ಒಬ್ಬ ಎಂಪಿಯಾಗಿ ಅವರು ಹೋಗಿ ನಿಂತು ಕೊಂಡು ಏನೇನು ಕೆಲಸ ಮಾಡಬೇಕು ಆಷ್ಟು ಕೆಲಸ ಮಾಡುವ ಶಕ್ತಿ ಅವರಿಗಿದೆ. ಹೀಗಾಗಿ ಮಹಿಳೆಗೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದ್ದೇವೆ.

ಟೀಕೆಗಳನ್ನು ಯಾರು ಮಾಡ್ತಾ ಇರೋದು. ನಾವಾ.? ಯಾರು.? ಗಂಡ ಸತ್ತವರು ಮನೆಯಲ್ಲಿ ಇರಬೇಕು ಅಂದವರು ಯಾರು.ಕಳ್ಳ ಎತ್ತುಗಳು ರಾತ್ರಿ ಹೊತ್ತು ಮೇಯ್ಕೋಂಡು ತಿಂತಾವರೆ ಅಂತಾ ಹೇಳಿದ್ದು ಯಾರು.ನಾವಾ ಮೇಯಿಕೊಂಡು ತಿನ್ನುವವರ? ನೆರಳಿನಲ್ಲಿ ಇದ್ದವರು ಬಿಸಿಲಿಗೆ ಬಂದವರೇ ನಾವಾ ಅವರ ಎಂದು ಯಶ್ ಪ್ರಶ್ನಿಸಿದ್ದಾರೆ.

ಜನಗಳ ಬಗ್ಗೆ ನನ್ನ ಕಮಿಟ್ ಮೆಂಟ್ ಅನ್ನು ಯಾರು ಪ್ರಶ್ನಿಸಬೇಕಾಗಿಲ್ಲ. ಕೆಣಕ್ತಾನೆ ಇದ್ರೆ, ಸವಾಲು ಹಾಕಿದ್ರೆ ಫುಲ್ ಇಳಿದು ಅಭ್ಯಾಸ. ಅಲ್ಲಿಗೆ ಬಿಟ್ರೆ … ಎಲ್ಲರಿಗೂ ಒಳ್ಳೆದು. ತುಂಬಾ ಮಾತನಾಡಿದ್ರೆ.. ಇನ್ನೂ ವಯಸ್ಸಿದೆ, ಶಕ್ತಿ ಇದೆ ಅಲ್ಪ ಸ್ವಲ್ಪ ಬುದ್ದಿ ಇದೆ.. ಒಳ್ಳೆ ಮನಸ್ಸಿದೆ ತೋರಿಸಬೇಕಾಗುತ್ತದೆ.

ಬ್ಲ್ಯಾಕ್ ಮಾಡೋ ಕೆಲಸವಾಗುತ್ತಿದೆ ಇಲ್ಲಿ. ಸರ್ಕಾರದ ಕೆಲಸವಾಗಬೇಕು ಅಂದ್ರೆ ಗೆಲ್ಲಿಸಬೇಕು ಎಂದು ಇಲ್ಲ ಅಂದ್ರೆ ಸರ್ಕಾರದ ಕೆಲಸ ಆಗಲ್ಲ ಅಂತಾ. 7 ಕ್ಷೇತ್ರ ಕೊಟ್ಟಿರೋದು ಕೆಲಸ ಮಾಡಲು ತಾನೇ ಎಂದು ಇದೇ ವೇಳೆ ದಳಪತಿಗಳನ್ನು ಕುಟುಕಿದ್ದಾರೆ.

ಗುತ್ತಿಗೆದಾರರ ಮೇಲೆ ದಾಳಿ ಮಾಡಿದ್ರೆ ಸಿಎಂಗ್ಯಾಕೆ ಉರಿ : ಚುನಾವಣಾ ಆಯೋಗದ ಕದ ತಟ್ಟಿದ IT

ಮಾರ್ಚ್ 27 ರಂದು ಆದಾಯ ತೆರಿಗೆ ಇಲಾಖೆ ಕರ್ನಾಟಕ ಹಲವು ಗುತ್ತಿಗೆದಾರರು ಮತ್ತು ಉದ್ಯಮಿಗಳ ಮನೆ ಕಚೇರಿಗೆ ದಾಳಿ ನಡೆಸಿದ ವೇಳೆ ಸಿಎಂ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದರು. ಅದರ ಹಿಂದಿನ ದಿನವೇ ಐಟಿ ದಾಳಿಯಾಗಲಿದೆ ಎಂದು ಹೇಳಿದ್ದ ಸಿಎಂ ಐಟಿ ದಾಳಿಯಾಗುತ್ತಿದ್ದಂತೆ ಉರಿದು ಬಿದ್ದಿದ್ದರು. ಕೇಂದ್ರ ಸರ್ಕಾರ ಮತ್ತು ಐಟಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಹೊರ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಸಿಎಂ ಬೆಂಗಳೂರು ದಿಢೀರ್ ಧಾವಿಸಿ ಐಟಿ ವಿರುದ್ಧ ಪ್ರತಿಭಟನೆಯನ್ನು ಕೂಡಾ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ಕೂಡಾ ಸಾಥ್ ಕೊಟ್ಟಿದ್ದರು.

ಇದೀಗ ಐಟಿ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಮೈತ್ರಿ ನಾಯಕರಿಗೆ ಶಾಕ್ ಕೊಟ್ಟಿದೆ.

ಅಕ್ರಮವೆಸಗಿಲ್ಲ ಅನ್ನುವುದಾದರೆ ಪ್ರತಿಭಟನೆಯ ಅಗತ್ಯವೇನಿತ್ತು ಕುಮಾರಸ್ವಾಮಿಯವರೇ..?

ಈ ಸಂಬಂಧ ಮಾರ್ಚ್ 30 ರಂದು ಕೇಂದ್ರ ಚುನಾವಣಾ ಆಯೋಗಕ್ಕೆ 5 ಪುಟಗಳ ಪತ್ರ ಬರೆದಿರುವ ಐಟಿ ಇಲಾಖೆ ಆದಾಯ ತೆರಿಗೆ ಇಲಾಖೆ ಚುನಾವಣೆ ಸಂದರ್ಭದಲ್ಲಿ ಹೇಗೆ ದಾಳಿ ನಡೆಸಿತು, ಯಾಕೆ ದಾಳಿ ನಡೆಸಿತು. ಯಾರ ಮೇಲೆ ನಡೆಸಿತು ಅನ್ನುವ ಕುರಿತಂತೆ ವಿವರಿಸಿದ್ದಾರೆ.

ಇನ್ನು ಎಪ್ರಿಲ್ 5 ರಂದು ಮತ್ತೊಂದು 3 ಪುಟಗಳ ಬರೆದಿರುವ ಐಟಿ ಇಲಾಖೆ 7 ಬಗೆಯ IPC ಯನ್ನು ಉಲ್ಲೇಖಿಸಿ, 11 ನಾಯಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಮನವಿ ಮಾಡಿದೆ.

1961ರ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ ಅಡಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದೆವು. ಮಂಡ್ಯ ಹಾಸನ, ಮೈಸೂರು ಈ ಭಾಗದಲ್ಲಿ ದಾಳಿ ನಡೆಸಿದ್ದೆವು. ದಾಳಿ ವೇಳೆ ₹8 ಕೋಟಿ 14 ಲಕ್ಷ ಹಣ ಹಾಗೂ ₹1 ಕೋಟಿ  69 ಲಕ್ಷ ಬೆಲೆ ಬಾಳುವ ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದೆವು.

ಜೊತೆಗೆ ಇದರಲ್ಲಿ ಯಾರಾದ್ರೂ ರಾಜಕಾರಣಿಗಳು ಭಾಗಿಯಾಗಿದ್ದಾರಾ ಎಂಬುದರ ಕುರಿತು ತನಿಖೆ ನಡೆಸಿದ್ದೆವು. ಈ ಸಂಬಂಧ ಮಾರ್ಚ್ 27 ರಂದು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮ ಹೇಳಿಕೆ ಕೊಟ್ಟಿದ್ರು. ಅದರಲ್ಲಿ ಐಟಿ ಅಧಿಕಾರಿಗಳು ನಿಯಮ ಮೀರಿ ದಾಳಿ ನಡೆಸಿದ್ದಾರೆ ಎಂದಿದ್ರು. ಅಲ್ಲದೇ ದಾಳಿ‌ ಮುಂದುವರೆಸಿರುವಾಗಲೇ ರಾಜಕಾರಣಿಗಳು ಐಟಿ ಕಚೇರಿ ಮುಂದೆ ಪ್ರತಿಭಟಿಸಿದ್ರು.

ಈ‌ ಮೂಲಕ ಐಟಿ ಅಧಿಕಾರಿಗಳ‌ ಕೆಲಸಕ್ಕೆ ರಾಜಕಾರಣಿಗಳು ಅಡ್ಡಿ ಪಡಿಸಿದ್ದಾರೆ. ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಡಾ. ಜಿ.ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಆರ್. ಮಹೇಶ್, ರಾಮಲಿಂಗರೆಡ್ಡಿ, ದಿನೇಶ್ ಗುಂಡ್ ರಾವ್, ಇಷ್ಟು ರಾಜಕಾರಣಿಗಳು ನಮ್ಮ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಐಟಿ ಇಲಾಖೆ ಘನತೆಗೆ ಧಕ್ಕೆ ತಂದಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದು ತಪ್ಪು. ಇಷ್ಟು ರಾಜಕಾರಣಿಗಳ ವಿರುದ್ಧ ಐಪಿಸಿ 143, 149, 504, 505, 506, 186, 187, 189 ಅಡಿಯಲ್ಲಿ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇವೆ ಅಂತಾ ದೂರಿನಲ್ಲಿ ಉಲ್ಲೇಖ‌ ಮಾಡಿದ್ದಾರೆ.

ಬಾಡಿಗೆ ಕಟ್ಟೋ ಯೋಗ್ಯತೆ ನನಗಿಲ್ಲ…. ಕೊಪ್ಪಳಕ್ಕೆ ಏನು ಮಾಡಿದ್ದೇನೆ ಕೇಳಿ ನೋಡಿ

ಹೌದು ನನಗೆ ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲ, ಆದ್ರೆ ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಉತ್ತರ ಕರ್ನಾಟಕದಲ್ಲೂ ಇದ್ದಾರೆ. ಅವರಿಗೆ ನಾನು ಏನು ಮಾಡಿದ್ದೇನೆ ಎಂದು ಕೊಪ್ಪಳ ಅಂತ ಊರಿದೆಯಲ್ಲ ಅಲ್ಲಿ ಹೋಗಿ ಕೇಳಲಿ ಎಂದು ನಿಖಿಲ್​ ಕುಮಾರಸ್ವಾಮಿಗೆ ನಟ​ ಯಶ್ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರವಾಗಿ ಉಮ್ಮಡಹಳ್ಳಿಯಲ್ಲಿ ಪ್ರಚಾರ ನಡೆಸಿದ ಯಶ್​ ನಿಖಿಲ್​ಗೆ ಟಾಂಗ್ ಕೊಡಿ ಎಂಬ  ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಈ ಹೇಳಿಕೆ ಕೊಟ್ಟಿದ್ದಾರೆ.

ಮೊದಲು ಟಾಂಗ್ ಬೇಡ ಎಂದ ಯಶ್ ಗ್ರಾಮಸ್ಥರ ಒತ್ತಾಯಕ್ಕೆ ಮಣಿಯಲೇಬೇಕಾಯ್ತು.

ನಿನ್ನೆ ಪ್ರಚಾರದ ವೇಳೆ  ಮಾತನಾಡಿದ್ದ ನಿಖಿಲ್​ ಕುಮಾರಸ್ವಾಮಿ ಜನರಿಗೆ ಒಂದು ಮಾತು ಹೇಳಲು ಇಷ್ಟಪಡ್ತೀನಿ, ದೊಡ್ಡ ಮನುಷ್ಯ, ಮಹಾನುಭಾವ ನಮ್ಮ ತಾತ ದೇವೇಗೌಡ್ರು ಪ್ರಧಾನಿಯಾಗಿದ್ದಾಗ ನಾವು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ₹5,000 ಬಾಡಿಗೆ ಮನೆಯಲ್ಲಿದ್ದೆವು.

ಆದ್ರೆ ಇವತ್ತು ಬಾಡಿಗೆ ಕಟ್ಟದವರು. ಬಾಡಿಗೆ ಕೊಡದೇ ಇಷ್ಟೆಲ್ಲಾ ಮಾತನಾಡ್ತಾರೆ ಅಂತಾ ನಟ ಯಶ್​ ವಿರುದ್ಧ ನಿಖಿಲ್​ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು.

ಮಠ ತುಂಬಾ ಸಾಲ…ಕೈ ತುಂಬಾ ಕೇಸು…ಇದು ಶಿರೂರು ಮಠದ ಪರಿಸ್ಥಿತಿ

ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ನಿಧನದ ಬಳಿಕ ಉತ್ತರಾಧಿಕಾರಿ ನೇಮಕ ಕುರಿತಂತೆ ಇದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ಉತ್ತರಾಧಿಕಾರಿ ನೇಮಕ ಕುರಿತಂತೆ ಸಿಕ್ಕಾಪಟ್ಟೆ ವದಂತಿಗಳು ಹರಿದಾಡಿದ ಹಿನ್ನಲೆಯಲ್ಲಿ ಇತ್ತೀಚೆಗೆ ಮಠದ ಭಕ್ತರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಎಲ್ಲಾ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ಜೊತೆಗೆ ಹಲವು ಆತಂಕಕಾರಿ ವಿಷಯಗಳನ್ನು ಕೂಡಾ ಶಿರೂರು ಮಠದ ದ್ವಂದ ಮಠವಾಗಿರುವ ಸೋದೆ ಮಠದ ವಿಶ್ವವಲ್ಲಭ ತೀರ್ಥರು ಬಿಚ್ಚಿಟ್ಟಿದ್ದಾರೆ.

ಶಿರೂರು ಮಠ ಮೈ ತುಂಬಾ ಸಾಲ ಮಾಡಿಕೊಂಡಿದ್ದು, ಕೆಲ ವಾಣಿಜ್ಯ ಕಟ್ಟಡಗಳಿಂದ ಬರುವ ಆದಾಯ ಬಿಟ್ಟರೆ ಮಠಕ್ಕೆ ಮತ್ಯಾವ ಆದಾಯವಿಲ್ಲದಂತಾಗಿದೆ. ಜೊತೆಗೆ ಕನಕ ಮಾಲ್ ನಿರ್ಮಾಣ ಕುರಿತಂತೆ ಆದಾಯ ತೆರಿಗೆ ಇಲಾಖೆ ಮಠಕ್ಕೆ ನೋಟಿಸ್ ಜಾರಿ ಮಾಡಿದ್ದು 17.34 ಲಕ್ಷ ದಂಡ ಪಾವತಿಸುವಂತೆ ಸೂಚಿಸಿದೆ.

ಕನಕ ಮಾಲ್ ನಿರ್ಮಾಣಕ್ಕೆ ಕಾರ್ಪ್ ಬ್ಯಾಂಕ್ ನಿಂದ 25 ಕೋಟಿ ಸಾಲ ಪಡೆಯಲಾಗಿದ್ದು, ದಿವಂಗತ ಲಕ್ಷ್ಮೀವರ ಸ್ವಾಮೀಜಿ ಮೂರು ಕಂತುಗಳಲ್ಲಿ 7 ಕೋಟಿ ಪಾವತಿಸಿದ್ದಾರೆ. ಜಂಟಿ ಪಾಲುದಾರ ಜಯಕೃಷ್ಣ ಶೆಟ್ಟಿ2.75 ಕೋಟಿ ಪಾವತಿಸಿದ್ದಾರೆ.

ಇನ್ನೂ 19.5 ಕೋಟಿ ಪಾವತಿಸಲು ಬಾಕಿ ಇದ್ದು, ಶೆಟ್ಟಿ ಅವರು ಮಾಲ್ ಕಟ್ಟಡದಲ್ಲಿ ಅಂಗಡಿ ಕಾಯ್ದಿರಿಸಿದ 10 ಮಂದಿಯಿಂದ ಮುಂಗಡ ಹಣ ಪಡೆದಿದ್ದಾರೆ. ಅವರೆಲ್ಲರೂ ನ್ಯಾಯಾಲಯದ ಕದ ತಟ್ಟಿದ್ದಾರೆ. ಈ ನಡುವೆ ಸೋದೆ ಮಠ ಅವರಿಗೆಲ್ಲಾ ಹಣ ವಾಪಾಸು ಮಾಡುವ ಭರವಸೆ ಕೊಟ್ಟಿದೆ.

ಇಂತಹ ಸಂಕಷ್ಟ ಸಂದರ್ಭದಲ್ಲಿ ಉತ್ತರಾಧಿಕಾರಿ ನೇಮಕ ಮಾಡಿದರೆ ಅವರಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದು. ಜೊತೆಗೆ ಕೋರ್ಟ್ ಪ್ರಕರಣಗಳನ್ನು ಕೂಡಾ ನಿಭಾಯಿಸುವುದು ಕಷ್ಟ. ಹೀಗಾಗಿ ಮೂರು ವರ್ಷಗಳ ಬಳಿಕ ಮಠಕ್ಕೆ ಉತ್ತರಾಧಿಕಾರಿ ನೇಮಕವಾಗಲಿದೆ. ಅಲ್ಲಿ ತನಕ ಸೋದೆ ಮಠವೇ ಶಿರೂರು ಮಠವನ್ನು ಮುನ್ನಡೆಸಲಿದೆ.

ಈಗಾಗಲೇ ಶಿರೂರು ಮಠಕ್ಕೆ ಉತ್ತರಾಧಿಕಾರಿ ಗುರುತಿಸಲಾಗಿದ್ದು, ಸೋದೆ ಮಠದ ವಿದ್ಯಾರ್ಥಿಯೇ ಶಿರೂರು ಮಠದ ಉತ್ತರಾಧಿಕಾರಿ ಎಂದು ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ಶಿರೂರು ಸ್ವಾಮೀಜಿ ಮಾಡಿದ್ದೇನು ಅನ್ನುವ ಪ್ರಶ್ನೆ ಉದ್ಭವಿಸುತ್ತಿದೆ. ಶ್ರೀಗಳ ಸಾವಿನ ಬೆನ್ನಲ್ಲೇ ಕೇಳಿ ಬಂದ ಹಲವು ಹೆಸರುಗಳು ಸ್ವಾಮೀಜಿಯ ಬಳಿ ಇದ್ದ ನಗ ನಗದನ್ನು ಸದ್ದಿಲ್ಲದೆ, ಸಾಕ್ಷಿ ಇಲ್ಲದಂತೆ ಸಾಗಿಸಿದರೆ ಗೊತ್ತಿಲ್ಲ. ಶ್ರೀಕೃಷ್ಣನೇ ಉತ್ತರಿಸಬೇಕು.

ಮಂಡ್ಯಕ್ಕೆ ಕಾಲಿಡಲಿದ್ದಾರೆ ಸಿಂಗಂ…. ಮಂಡ್ಯ ಚುನಾವಣೆಯ ಸಾಮಾನ್ಯ ವೀಕ್ಷಕರಾಗಿ ಪಿ.ಅಣ್ಣಾಮಲೈ

ರಾಷ್ಟ್ರದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇತ್ತಿದ್ದು, ದಿನಕ್ಕೊಂದು ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. 

ಈ ನಡುವೆ ಮಂಡ್ಯ ಚುನಾವಣೆಯ ಸಾಮಾನ್ಯ ವೀಕ್ಷಕರಾಗಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಭಾನುವಾರ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಮೇಲುಕೋಟೆ, ನಾಗಮಂಗಲ, ಕೆ.ಆರ್.ಪೇಟೆ ಮತ್ತು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ. ಮಂಡ್ಯ ಚುನಾವಣಾಧಿಕಾರಿ ಮಂಜುಶ್ರೀ ಮೇಲೆ ಕೆಲ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ನೇಮಕ ನಡೆದಿದೆ ಎನ್ನಲಾಗಿದೆ.

ಈಗಾಗಲೇ ಮಂಡ್ಯದಲ್ಲಿ ಕೋಟಿ ಕೋಟಿ ರೂಪಾಯಿ ಓಡಾಡುತ್ತಿದೆ ಅನ್ನುವ ಗಾಳಿ ಸುದ್ದಿ ಹಬ್ಬಿದ್ದು, ಇದರ ಬೆನ್ನಲ್ಲೇ ನಡೆದಿರುವ ಬೆಳವಣಿಗೆ ಕುತೂಹಲ ಕೆರಳಿಸಿದೆ.

ಚುನಾವಣೆ ಬಳಿಕ ಬಿಜೆಪಿಗೆ ಹೋಗೋದಿಲ್ಲ : ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಸುಮಲತಾ

ನಾನು ಬಿಜೆಪಿ ಸೇರುತ್ತೇನೆ ಅನ್ನುವುದು ಕೇವಲ ಊಹಾಪೋಹ. ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಅಲ್ಲಿ ಟಿಕೆಟ್​ ಸಿಗದ ಕಾರಣ ಪಕ್ಷೇತರವಾಗಿ ಸ್ಪರ್ಧಿಸಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಶುಕ್ರವಾರವಾಗಿರುವ ಹಿನ್ನಲೆಯಲ್ಲಿ ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಸುಮಲತಾ ಚುನಾವಣೆ ಬಳಿಕ ನಾನು ಬಿಜೆಪಿ ಸೇರುವುದಿಲ್ಲ ಎಂದು ​ ಸ್ಪಷ್ಟಪಡಿಸಿದರು.

ಮುಸ್ಲಿಮ್ ಮತ ಸೆಳೆಯಲು ನಿಖಿಲ್ ಕಸರತ್ತು : ಮಸೀದಿಗೆ ಭೇಟಿ ನೀಡಿ ಪಾರ್ಥನೆ

ಸಕ್ಕರೆ ನಾಡಿನ ಲೋಕಸಭಾ ಅಖಾಡದಲ್ಲಿ ಚುನಾವಣಾ ಪ್ರಚಾರದ ಕಸರತ್ತು ಭರ್ಜರಿಯಾಗಿಯೇ ನಡೆಯುತ್ತಿದೆ. ಒಂದೆಡೆ ಸ್ಟಾರ್​ಗಳ ಅಬ್ಬರವಾದರೆ, ಮತ್ತೊಂದೆಡೆ ದೋಸ್ತಿ ಪಾಳಯದಲ್ಲೂ ಬಿರುಸಿನ ಪ್ರಚಾರ ನಡೆಯುತ್ತಿದೆ. ಶುಕ್ರವಾರವಾದ ಇಂದು ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರು ಮಸೀದಿಗೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದೆ.

ನಗರದ ಮಸೀದಿಗೆ ಭೇಟಿ ನೀಡಿದ ನಿಖಿಲ್, ಮುಸ್ಲಿಂ ಟೋಪಿ ಧರಿಸಿ ಮುಸ್ಲಿಂ ಬಾಂಧವರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ನಿಖಿಲ್, ಚುನಾವಣೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿದೆ. ಶುಕ್ರವಾರ ಮುಸ್ಲಿಂರಿಗೆ ಪವಿತ್ರ ದಿನವಾದ್ದರಿಂದ ಮಸೀದಿಗೆ ಬಂದೆ. ಏಪ್ರಿಲ್ 8ರಿಂದ ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ, ಡಿಕೆಶಿ ಪ್ರಚಾರ ಮಾಡುತ್ತಾರೆ. ಸಿದ್ದರಾಮಯ್ಯ ಸೇರಿ ಅನೇಕರು ಸಹ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಹಣ ಸಾಗಣೆ ಬಗ್ಗೆ ಸುಮಲತಾ ಆರೋಪ ಮಾಡುವುದು ಬಿಟ್ಟರೆ, ಅವರ ಕೈಯಲ್ಲಿ ಬೇರೇನೂ ಮಾಡುವುದಕ್ಕೆ ಆಗುತ್ತಿಲ್ಲ. ಇದಕ್ಕಾಗಿ ನಾವಾಗಲೀ, ಕಾರ್ಯಕರ್ತರಾಗಲೀ ಹೆದರುವುದು ಇಲ್ಲ. ಬಗ್ಗೋದೂ ಇಲ್ಲ ಎಂದು ತಿರುಗೇಟು ನೀಡಿದರು.