ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪತ್ರ
ಮುಡಾ ಪ್ರಕರಣದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರು ಇದೀಗ ಅದೇ ಪ್ರಕರಣದಲ್ಲಿ ದಾಖಲಾಗಿರುವ ಮತ್ತೊಂದು ದೂರಿಗೆ ಸಂಬಂಧಿಸಿದಂತೆ ಸರ್ಕಾರದಿಂದ ವರದಿ ಕೇಳಿದ್ದಾರೆ.
ದೂರಿನ ವಿವರಣೆ ಕೇಳಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪತ್ರ ಬರೆದಿದ್ದಾರೆ. ಆಗಸ್ಟ್ ೨೭ ರಂದು ಮೈಸೂರು ಮೂಲದ ನಟರಾಜ್ ಎಂಬುವವರು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡಿ, ದೂರು ಸಲ್ಲಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿಗಳ ಮೌಖಿಕ ಸೂಚನೆಯ ಮೇರೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ ೧೯೮೭ರ ಕಲಂ ೧೫ ಮತ್ತು ೨೫ ಅನ್ನು ಉಲ್ಲಂಘಿಸಿ ವರುಣ ಹಾಗೂ ಶ್ರೀರಂಗಪಟ್ಟಣದಲ್ಲಿ ೩೮೭ ಕೋಟಿ ರೂಪಾಯಿಗಳ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಧಿಕಾರದಲ್ಲಿ ಹಣ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದು, ಸಿಬಿಯ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ರಾಜ್ಯಪಾಲರು ಮುಖ್ಯಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.