ಚಿಕ್ಕಬಳ್ಳಾಪುರ : ಒಂದು ಕಡೆ ಸರ್ಕಾರ ಕೊರೋನಾ ಲಸಿಕೆ ಹಾಕಿಸಿಕೊಳ್ಳಿ ಅನ್ನುತ್ತಿದೆ, ಮತ್ತೊಂದು ಲಸಿಕೆ ಹಾಕಿಸಿಕೊಳ್ಳಲು ಹೋದರೆ ಲಸಿಕೆ ಸಿಗೋದಿಲ್ಲ, ಅದರಲ್ಲೂ ಎರಡನೇ ಡೋಸ್ ಲಸಿಕೆಗಾಗಿ ಜನರ ಪರದಾಟ ಹೇಳತೀರದಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಲಸಿಕೆ ಲಭ್ಯವಿದೆ, ಆದರೆ ಹಾಕಿಸಿಕೊಳ್ಳಲು ಜನ ಉತ್ಸಾಹ ತೋರುತ್ತಿಲ್ಲ. ಈ ನಡುವೆ ಅಧಿಕಾರಿಗಳ ಮೇಲೂ ಲಸಿಕಾ ವಿತರಣಾ ಕಾರ್ಯಕ್ಕೆ ವೇಗ ನೀಡಿ ಎಂದು ಒತ್ತಡ ಹೇರಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಡೋಸ್ ಗಳು ಪೂರೈಕೆಯಾದ್ರೆ ಅಧಿಕಾರಿಗಳು ಲಸಿಕೆ ಕೊಡಿಸಬಹುದು, ಲಸಿಕೆಯೇ ಬಂದಿಲ್ಲ ಅಂದ್ರೆ ಅವರಾದರೂ ಏನು ಮಾಡಲು ಸಾಧ್ಯ. ಹೀಗಾಗಿ ಟಾರ್ಗೇಟ್ ರೀಚ್ ಮಾಡಲು ಇನ್ನಿಲ್ಲದ ಸರ್ಕಸ್ ಅನ್ನು ಅವರು ಮಾಡುತ್ತಿದ್ದಾರೆ.
ಹೀಗೆ ಟಾರ್ಗೇಟ್ ರೀಚ್ ಮಾಡುವ ಸಲುವಾಗಿ ಚಿಕ್ಕಬಳ್ಳಾಪುರದ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ ಅವರು ಹೊರಡಿಸಿರುವ ಆದೇಶ ಇದೀಗ ವಿವಾದಕ್ಕೆ ಗುರಿಯಾಗಿದೆ. ಪಡಿತರ ಚೀಟಿ ಹೊಂದಿರುವವರು ತಮ್ಮ ಮನೆಯ ವಯಸ್ಕರಿಗೆ ಲಸಿಕೆ ಆಗಿದೆ ಅನ್ನುವ ಸರ್ಟಿಫಿಕೆಟ್ ತೋರಿಸಿದ್ರೆ ಮಾತ್ರ ರೇಷನ್ ನೀಡಲಾಗುವುದು, ಒಂದು ವೇಳೆ ಲಸಿಕೆ ಹಾಕಿಸಿಕೊಂಡಿಲ್ಲ ಅಂದ್ರೆ ರೇಷನ್ ನೀಡಲಾಗುವುದಿಲ್ಲ ಎಂದು ಆದೇಶ ಹೊರಡಿಸಿದ್ದರು. ಈ ಆದೇಶ ವಿರುದ್ಧ ಅನೇಕರು ದನಿ ಎತ್ತಿದ್ದು, ಲಸಿಕೆಯನ್ನು ಮೊದಲು ಸರಿಯಾಗಿ ಪೂರೈಕೆ ಮಾಡಿ, ಬಳಿಕ ಇಂತಹ ಆದೇಶ ಹೊರಡಿಸಿ ಅಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಲಸಿಕೆ ಕಡ್ಡಾಯ ಅನ್ನುವಂತಿಲ್ಲ ಅನ್ನುವ ಮೊಂಡು ವಾದವನ್ನು ಕೂಡಾ ಕೆಲವರು ಶುರುವಿಟ್ಟುಕೊಂಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ತಹಶೀಲ್ದಾರ್ ಹನುಮಂತರಾಯಪ್ಪ ಅವರು, ರೇಷನ್ ನಿಲ್ಲಿಸುವ ಯಾವುದೇ ಉದ್ದೇಶ ನಮಗಿಲ್ಲ. ಅದನ್ನು ನಿಲ್ಲಿಸಲು ಸಾಧ್ಯವೂ ಇಲ್ಲ. ಆದರೆ ಲಸಿಕೆ ಕುರಿತಂತೆ ಈಗಾಗಲೇ ನಾವು ಜಾಗೃತಿ ಮೂಡಿಸಿದ್ದೇವೆ. ಹಾಗಿದ್ದರೂ ಸಾಕಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇದ್ದಾರೆ. ಹೀಗಾಗಿ ಇಂತಹ ನಿರ್ಲಕ್ಷ್ಯವನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆಯಾಗಿ ಆದೇಶ ಹೊರಡಿಸಲಾಗಿದೆ ಅಂದಿದ್ದಾರೆ.
ಹಾಗೇ ನೋಡಿದರೆ ತಹಶೀಲ್ದಾರ್ ಆದೇಶ ಸರಿಯಾಗಿದೆ. ಲಸಿಕೆ ಹಾಕಿಸಿಕೊಂಡರೆ ಅನುಕೂಲಗಳೇನು ಅನ್ನುವುದು ಈಗಾಗಲೇ ಗೊತ್ತಾಗಿದೆ. ಹಾಗಿದ್ದ ಮೇಲೂ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುವ ಮೂಲಕ ಮೂರನೇ ಅಲೆಗೆ ಕಾರಣವಾಗುವ ಮೂರ್ಖರಿಗೆ ಸರ್ಕಾರಿ ಸೌಲಭ್ಯಗಳನ್ನು ನಿಲ್ಲಿಸಿದರೆ ತಪ್ಪೇನು.
Discussion about this post