ಪ್ರಭು ಶ್ರೀರಾಮ ಭಾರತದಲ್ಲಿ ಹುಟ್ಟಿಲ್ಲ. ಬದಲಾಗಿ ಶ್ರೀರಾಮ ನೇಪಾಳದವನು ಎಂದು ಕಳೆದ ವರ್ಷ ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿದ್ದ ನೇಪಾಳ ಪ್ರಧಾನಮಂತ್ರಿ ಕೆಪಿ ಶರ್ಮಾ ಓಲಿ ಈ ಬಾರಿ ಯೋಗದ ಮೂಲ ಭಾರತವಲ್ಲ, ನೇಪಾಳ ಎಂದು ಹೇಳಿದ್ದಾರೆ.
ನಿನ್ನೆ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮಾತನಾಡಿದ ಅವರು ಯೋಗದ ಮೂಲ ಭಾರತವಲ್ಲ. ಭಾರತ ಒಂದು ದೇಶವಾಗಿ ಅಸ್ತಿತ್ವಕ್ಕೆ ಬರುವ ಮೊದಲೇ ನೇಪಾಳದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿತ್ತು.
ನೇಪಾಳದಲ್ಲಿ ಯೋಗಾಭ್ಯಾಸ ಶುರುವಾದಾಗ ಹಲವು ರಾಜ್ಯಗಳಿದ್ದವೇ ಹೊರತು ಭಾರತ ಎಂಬ ದೇಶ ಇನ್ನೂ ಇರಲಿಲ್ಲ. ಹಾಗಾಗಿ ಯೋಗದ ಮೂಲ ಭಾರತವಾಗಲು ಸಾಧ್ಯವಿಲ್ಲ ಎಂದು ಓಲಿ ಹೇಳಿದ್ದಾರೆ.
ನಮ್ಮಲ್ಲಿ ಯೋಗವನ್ನು ಕಂಡು ಹಿಡಿದ ಋಷಿ ಮುನಿಗಳಿಗೆ ನಾವ್ಯಾವತ್ತೂ ಸರಿಯಾಗಿ ಮನ್ನಣೆ ನೀಡಲಿಲ್ಲ. ನಾವು ಕೇವಲ ಈಗ ಯೋಗವನ್ನು ಕಲಿಸುವ ಪ್ರಾಧ್ಯಾಪಕರು ಮತ್ತು ಅವರ ಕೊಡುಗೆಗಳ ಬಗ್ಗೆಯಷ್ಟೇ ಮಾತನಾಡುತ್ತೇವೆ.
ನಮಗೆ ಯೋಗದ ಕುರಿತಾದ ನಮ್ಮ ಹಕ್ಕನ್ನು ಇಂದಿಗೂ ಸರಿಯಾಗಿ ಪ್ರತಿಪಾದಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ನಾವು ಯೋಗವನ್ನು ಜಗತ್ತಿಗೆ ಪರಿಚಯಿಸಲಿಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭಿಸುವ ಮೂಲಕ ಯೋಗವನ್ನು ವಿಶ್ವಕ್ಕೇ ಪರಿಚಯಿಸಿದರು ಎಂದು ಓಲಿ ಹೇಳಿದ್ದಾರೆ.
ಭಾರತದೊಂದಿಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುವ ನೇಪಾಳ ಉಸ್ತುವಾರಿ ಪ್ರಧಾನಿ ಕೆಪಿ ಶರ್ಮಾ ಒಲಿ, ಆಗಾಗ ತಮ್ಮ ಭಾರತ ವಿರೋಧಿ ನಿಲುವನ್ನು ಹೊರಹಾಕುತ್ತಲೇ ಇರುತ್ತಾರೆ. ಅಲ್ಲದೇ ಭಾರತ ನಕಲಿ ಅಯೋಧ್ಯೆಯನ್ನು ಸೃಷ್ಟಿಸುವ ಮೂಲಕ ಸಾಂಸ್ಕೃತಿಕ ಅತಿಕ್ರಮಣ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನೂ ಒಲಿ ಹೊರಿಸಿದ್ದರು.
Discussion about this post