ಬೆಂಗಳೂರು : ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನ ಪ್ರಕರಣಗಳು ಈಗಾಗಲೇ ಕರ್ನಾಟಕಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೇರಳದಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣದಿಂದಲೇ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರಿನಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ.
ಈ ನಡುವೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಈ ಎರಡು ರಾಜ್ಯಗಳಿಂದ ಕರ್ನಾಟಕಕ್ಕೆ ವಿಮಾನ, ರೈಲು, ಬಸ್, ಖಾಸಗಿ ವಾಹನಗಳಲ್ಲಿ ಪ್ರವೇಶ ಮಾಡುವ ಪ್ರಯಾಣಿಕರು ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ಇಲ್ಲವಾದ್ರೆ ನೋ ಎಂಟ್ರಿ.
ಈ ಹಿಂದೆ ಕೊರೋನಾ ಲಸಿಕೆ ಒಂದು ಡೋಸ್ ಪಡೆದವರಿಗೆ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿತ್ತು, ಇದೀಗ ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ಕೇರಳ ಮತ್ತು ಮಹಾರಾಷ್ಟ್ರಗಳಿಂದ ರಾಜ್ಯಕ್ಕೆ ಬರುವವರು ಎರಡು ಡೋಸ್ ಲಸಿಕೆ ಪಡೆದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿರುವ RTPCR ಪರೀಕ್ಷೆಯ ನೆಗೆಟಿವ್ ವರದಿ ತರಬೇಕು.
ಇನ್ನು ಈ ಎರಡೂ ರಾಜ್ಯಗಳ ನಡುವೆ ನಿತ್ಯ ಓಡಾಡುವವರು 15 ದಿನಕ್ಕೊಮ್ಮೆ RTPCR ನೆಗೆಟಿವ್ ವರದಿಯನ್ನು ಹಾಜರುಪಡಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಹಾಗಾದ್ರೆ ಈ ನೆಗೆಟಿವ್ ವರದಿಯನ್ನು ಪರಿಶೀಲನೆ ನಡೆಸುವವರು ಯಾರು ಅನ್ನುವ ಬಗ್ಗೆಯೂ ಗೊಂದಲಗಳಿದ್ದು ಅದಕ್ಕೂ ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ವಿಮಾನ ಯಾನ ಸಂಸ್ಥೆಯವರು ಬೋರ್ಡಿಂಗ್ ಪಾಸ್ ಕೊಡಬೇಕು. ಬಸ್ ಗಳಲ್ಲಿ ನಿರ್ವಾಹಕರು ನೆಗೆಟಿವ್ ವರದಿಯನ್ನು ಪರಿಶೀಲಿಸಬೇಕು ಮತ್ತು ರೈಲುಗಳಲ್ಲಿ ರೈಲ್ವೇ ಪ್ರಾಧಿಕಾರ ಈ ಬಗ್ಗೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಸೂಚಿಸಲಾಗಿದೆ.
Discussion about this post