ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಕುಮ್ಮಕ್ಕಿನಿಂದ ದೂರವಾಣಿ ಕದ್ದಾಲಿಕೆ ನಡೆದಿತ್ತು ಅನ್ನುವ ಆರೋಪ ಹಾದಿ ಬೀದಿಯಲ್ಲಿ ಚರ್ಚೆಯಾಗುತ್ತಿದ್ದಂತೆ, ಕುಮಾರಸ್ವಾಮಿ ಪರ ಬ್ಯಾಟಿಂಗ್ ಬೀಸಲು ನಾಯಕರು ಸಜ್ಜಾಗಿದ್ದಾರೆ.
ಈಗಾಗಲೇ ಡಿಕೆ ಶಿವಕುಮಾರ್ ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದು, ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಇದೀಗ ಮಾಜಿ ಸಚಿವ ಸಿಎಸ್ ಪುಟ್ಟರಾಜು ಕುಮಾರಸ್ವಾಮಿ ಬೆಂಬಲಕ್ಕೆ ಧಾವಿಸಿದ್ದು, ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪ ಮಾಡುವ ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತಮ್ಮ ಕುಟುಂಬ ಸದಸ್ಯರ ದೂರವಾಣಿ ಕದ್ದಾಲಿಕೆ ಮಾಡಲಾಗಿತ್ತು. ಆಗ ಬಿಜೆಪಿ ನಾಯಕರು ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ದೂರವಾಣಿ ಕದ್ದಾಲಿಕೆ ಮಾಡಲಾಗಿತ್ತು. ಆಗ ಇಡೀ ಕುಟುಂಬದ ಎಲ್ಲಾ ಸದಸ್ಯರು ಚಿತ್ರಹಿಂಸೆಗೆ ಒಳಗಾಗಿದ್ದೆವು ಎಂದಿದ್ದಾರೆ.
ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಹಿಂದಿನ ಎಲ್ಲಾ ಪ್ರಕರಣಗಳನ್ನು ಸೇರಿಸಿ ಈಗ ತನಿಖೆಗೆ ಒತ್ತಾಯಿಸುತ್ತಿದ್ದೇನೆ. ಈಗ ಸಿಬಿಐ, ಸಿಐಡಿ, ಎಸ್ಐಟಿ ಎಲ್ಲವೂ ಬಿಜೆಪಿ ಕೈಯಲ್ಲಿಯೇ ಇದ್ದು, ಸಮಗ್ರ ತನಿಖೆ ಮಾಡಿಸಿ ಸತ್ಯ ಸಂಗತಿ ಹೊರತರಲಿ ಎಂದು ಪುಟ್ಟರಾಜು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಪುಟ್ಟರಾಜು ಅವರ ಹೇಳಿಕೆಯನ್ನು ಜೋಕ್ ಅನ್ನಬೇಕೋ, ಬೇಜಾವಾಬ್ದಾರಿ ಹೇಳಿಕೆ ಅನ್ನಬೇಕೋ ಗೊತ್ತಾಗುತ್ತಿಲ್ಲ. ಇದು ಜನರ ದಿಕ್ಕು ತಪ್ಪಿಸುವ ಹೇಳಿಕೆ ಅನ್ನುವುದರಲ್ಲಿ ಸಂಶಯವೇ ಇಲ್ಲ.
ಯಾವುದೇ ವ್ಯಕ್ತಿಗೆ ತಮ್ಮ ದೂರವಾಣಿಯ ಕದ್ದಾಲಿಕೆ ನಡೆಯುತ್ತಿದೆ ಎಂದು ಅನುಮಾನ ಬಂದರೆ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರುವ ಅವಕಾಶವಿದೆ.
kannadaಲೋಕಸಭಾ ಚುನಾವಣಾ ವೇಳೆ ಪುಟ್ಟರಾಜು ಕುಟುಂಬಸ್ಥರ ಫೋನ್ ಕದ್ದಾಲಿಕೆಯಾಗಿತ್ತು ಅನ್ನುವುದಾದರೆ ಅವರು ದೂರು ದಾಖಲಿಸಬಹುದಿತ್ತು. ಅವರದ್ದೇ ಸರ್ಕಾರವಿತ್ತು ತನಿಖೆಗೆ ಆದೇಶ ನೀಡಬಹುದಿತ್ತು.
ಅದನ್ನು ಬಿಟ್ಟು ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿರುವುದನ್ನು ನೋಡಿದರೆ, ಕುಮಾರಸ್ವಾಮಿ ಸರ್ಕಾರ ಕಳ್ಳಗಿವಿ ಹೊಂದಿತ್ತು ಅನ್ನುವ ಅನುಮಾನ ಬರುತ್ತಿದೆ.
ಮಾಜಿ ಸಚಿವರಾಗಿದ್ದವರ ಫೋನ್ ಟ್ಯಾಪ್ ಆಗಿದೆ ಅನ್ನುವುದು ಗೊತ್ತಾದ ಮೇಲೆ ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗುತ್ತಿಲ್ಲ ಅನ್ನುವುದಾದರೆ ಅವರಲ್ಲಿ ಅದೇನೋ ಹುಳುಕಿದೆ ಅನ್ನುವುದು ಸ್ಪಷ್ಟ.
ಪುಟ್ಟರಾಜು ಅವರು ಈಗ್ಲೂ ಕೋರ್ಟ್ ಮೆಟ್ಟಿಲು ಹತ್ತಲು ಸ್ವಾತಂತ್ರ್ಯ ಹೊಂದಿದ್ದಾರೆ. ಕೇಂದ್ರ ಸರ್ಕಾರದ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಲಿ, ತನಿಖೆಯಾಗಲಿ ಅದನ್ನು ಬಿಟ್ಟು ಬರೀ ಆರೋಪ ಮಾಡುವುದು ಎಡವಟ್ಟೇ ಸರಿ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಸ್ಪೀಕರ್ ಮೇಲೆ ಗುರುತರ ಆರೋಪ ಬಂದಾಗ ತನಿಖೆ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಸರ್ಕಾರ ತನಿಖೆಯನ್ನೇ ಮಾಡಲಿಲ್ಲ. ಇದೀಗ ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡುತ್ತಾರೆ.
Discussion about this post