ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಚುನಾವಣೆಗೆ ನಿಂತ ಸಂದರ್ಭದಲ್ಲೇ ಮಂಡ್ಯದಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದ್ದರು. ಆದರೆ ಗೆದ್ದ ಮೇಲೆ ಅದ್ಯಾಕೋ ಮೇಡಂ ಮಂಡ್ಯದಲ್ಲಿ ಮನೆ ಮಾಡುವ ಬಗ್ಗೆ ಮನಸ್ಸು ಮಾಡಲಿಲ್ಲ. ಇದು ಸಾಕಷ್ಟು ಟೀಕೆಗೂ ಕಾರಣವಾಗಿತ್ತು. ಈ ಹಿಂದೆ ಸಂಸದೆಯಾಗಿದ್ದ ರಮ್ಯಾ ಕೂಡಾ ಹೀಗೆ ಮಾಡಿದ್ರು. ಕಾಟಾಚಾರಕ್ಕೆ ಅನ್ನುವಂತೆ ಮನೆ ಮಾಡಿದ್ರು, ಆ ಬಳಿಕ ಪತ್ತೆಯೇ ಇರಲಿಲ್ಲ ಎಂದು ಹಳೆಯ ದಿನಗಳನ್ನು ಸಕ್ಕರೆ ನಾಡಿನ ಜನ ನೆನಪಿಸಿಕೊಂಡಿದ್ದರು.
ಅದೃಷ್ಟ ಅಂದ್ರೆ ರಮ್ಯಾ ಗೆದ್ದ ಮೇಲೆ ಮತದಾರರ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಸುಮಲತಾ ಗೆದ್ದ ಮೇಲೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಮಾತ್ರವಲ್ಲದೆ ದಳಪತಿಗಳ ಅಬ್ಬರಕ್ಕೆ ಬ್ರೇಕ್ ಹಾಕಿರುವ ಅವರು, ದಳಪತಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅದರಲ್ಲೂ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸುಮಲತಾ ಮಾಡಿದ ಕಾರ್ಯ, ದೇಶದ ಜನಪ್ರತಿನಿಧಿಗಳಿಗೆ ಮಾದರಿ.

ಈ ನಡುವೆ ಸ್ವಕ್ಷೇತ್ರ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಿಸಲು ಮುಂದಾಗಿರುವ ಸುಮಲತಾ ನಾಳೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ಮೂಲಕ ಗೆದ್ರೆ ಕ್ಷೇತ್ರದಲ್ಲಿ ಮನೆ ಮಾಡ್ತೀನಿ ಎಂದು ಚುನಾವಣೆಗೂ ಮುನ್ನ ಕೊಟ್ಟ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆ.
ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಸಂಸದೆ ಸುಮಲತಾ ಅಂಬರೀಶ್ ಮನೆ ತಲೆ ಎತ್ತಲಿದೆ. ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡ್ತೀನಿ ಎಂದು ಗೃಹಪ್ರವೇಶ ಕೂಡಾ ಮಾಡಿದ್ದರು. ಬಳಿಕ ಅವರು ಆ ಕಡೆ ತಲೆ ಹಾಕಲಿಲ್ಲ, ಕೊನೆಗೆ ಮನೆಯನ್ನು ಮಾಲೀಕರು ಮಾರಾಟ ಕೂಡಾ ಮಾಡಿದ್ದರು ಅನ್ನುವುದನ್ನು ನೆನಪಿಸಿಕೊಳ್ಳಬಹುದು.
MP Sumalatha Ambarish started to build a house in Mandya

Discussion about this post