Sunday, April 18, 2021

ನಾನು ಪೋಸ್ಟ್ ಮ್ಯಾನ್ ಅಲ್ಲ… ಸಿಎಂ ಯಡಿಯೂರಪ್ಪ ವಿರುದ್ಧ ಗುಡುಗಿದ ಈಶ್ವರಪ್ಪ

Must read

- Advertisement -
- Advertisement -

ಮೈಸೂರು : ಅನುದಾನ ಬಿಡುಗಡೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಮಾಡಿರುವ ತಾರತಮ್ಯದ ವಿರುದ್ಧ ಸಹಜವಾಗಿಯೇ ಸಿಡಿದೆದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ನಮ್ಮ ಇಲಾಖೆಗೆ ಅನ್ಯಾಯ ಮಾಡುತ್ತಿರುವುದ್ಯಾಕೆ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ನಾನು ರೆಬೆಲ್ ಆಗಿಲ್ಲ, ನಾನು ಪಕ್ಷಕ್ಕೆ, ಸಂಘಟನೆಗೆ ಸದಾ ಲಾಯಲ್. ನಾನು ಎಂದಿಗೂ ಪಕ್ಷ ಬಿಟ್ಟಿಲ್ಲ, ಬಿಡುವ ಚಿಂತನೆ ನಡೆಸಿಲ್ಲ, ನಡೆಸುವುದು ಕೂಡಾ ಇಲ್ಲ ಎಂದು ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಯಡಿಯೂರಪ್ಪ ನಾನು ಈ ಜನ್ಮದಲ್ಲಿ ಬಿಜೆಪಿ ಸೇರಲ್ಲ ಅಂದಿದ್ದರು, ಆಗ ರಾಜ್ಯಾಧ್ಯಕ್ಷನಾಗಿದ್ದ ನಾನು ನನ್ನದೇ ಭಾಷೆಯಲ್ಲಿ ಉತ್ತರ ಕೂಡಾ ಕೊಟ್ಟಿದ್ದೆ.ಹೀಗಾಗಿ ನನ್ನ ಪಕ್ಷ ನಿಷ್ಠೆಯನ್ನು ಯಾರೂ ಕೂಡಾ ಪ್ರಶ್ನಿಸಬೇಡಿ ಎಂದು ಯಡಿಯೂರಪ್ಪ ಬೆಂಬಲಿಗರಿಗೆ ಖಡಕ್ಕ್ ಸಂದೇಶ ರವಾನಿಸಿದ್ದಾರೆ.

ಇದೇ ವೇಳೆ ಅನುದಾನ ಬಿಡುಗಡೆ ಕುರಿತಂತೆ ಮಾತನಾಡಿರುವ ಈಶ್ವರಪ್ಪ 1299 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ನೇರವಾಗಿ ಬಿಡುಗಡೆ ಮಾಡಿದ್ದಾರೆ. ಇದು ನಿಯಮಗಳ ಉಲ್ಲಂಘನೆಯಾಗುತ್ತದೆ. ಆ ಅನುದಾನವನ್ನು ನಮ್ಮ ಇಲಾಖೆಗೆ ಬಿಡುಗಡೆ ಮಾಡಲಿ. ಯಡಿಯೂರಪ್ಪನವರು ಯಾರಿಗೆಲ್ಲಾ ಹಂಚಲು ಹೇಳುತ್ತಾರೋ ಅವರಿಗೆ ನಾವು ಹಂಚುತ್ತೇವೆ.

ಈ ಹಿಂದೆ ಬಜೆಟ್ ನಲ್ಲಿ ಘೋಷಣೆ ಮಾಡಿದ ಸುಮಾರ್ಗ ಯೋಜನೆಗೆ ಬಿಡಿಗಾಸು ಬಂದಿಲ್ಲ. ಈ ಬಗ್ಗೆ ಹಣಕಾಸು ಇಲಾಖೆ ಹೊಂದಿರುವ ಯಡಿಯೂರಪ್ಪ ಅವರಿಗೆ ಹಲವಾರು ಪತ್ರಗಳನ್ನು ಬರೆಯಲಾಗಿದೆ. ಆದರೆ ಯಾವುದಕ್ಕೂ ಉತ್ತರ ಬಂದಿಲ್ಲ.

ಇನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಈ ಹಿಂದೆ ನಡೆದ  ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಇದೇ ಬಿಲ್ ಮೊತ್ತ ನೂರಾರು ಕೋಟಿ ದಾಟಿದೆ ಎಂದು ತಮ್ಮ ಇಲಾಖೆ ಆಗುತ್ತಿರುವ ಅನ್ಯಾಯವನ್ನು ಈಶ್ವರಪ್ಪ ತೆರೆದಿಟ್ಟಿದ್ದಾರೆ.

ಇದೇ ವೇಳೆ ಯಡಿಯೂರಪ್ಪ ಅವರಿಗೂ ನನಗೂ ಯಾವುದೇ ವೈಯುಕ್ತಿಕ ದ್ವೇಷಗಳಿಲ್ಲ. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು ನಾವು. ಪಕ್ಷ ಸಂಘಟನೆಯನ್ನು ಜೊತೆಗೆ ಮಾಡಿದ್ದೇವೆ. ವ್ಯವಹಾರದಲ್ಲಿ ಪಾಲುದಾರರಾಗಿದ್ದೆವು.

ಆದರೆ ನನಗೂ ಅವರಿಗೂ ಕೆಲ ವಿಚಾರಗಳಲ್ಲಿ ಭಿನ್ನಮತವಿರುವುದು ಹೌದು ಎಂದು ಒಪ್ಪಿಕೊಂಡಿರುವ ಈಶ್ವರಪ್ಪ, ನಾನು ಬರೆದ ಯಾವುದೇ ಪತ್ರಕ್ಕೂ ಯಡಿಯೂರಪ್ಪ ಉತ್ತರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಅನ್ನುವುದನ್ನು ಒತ್ತಿ ಹೇಳಿದ್ದಾರೆ.

ಇನ್ನು ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಉತ್ತರಿಸಿದ ಈಶ್ವರಪ್ಪ, ಅನೇಕ ಶಾಸಕರು, ಸಚಿವರು ರಾಜ್ಯಪಾಲರಿಗೆ ಬರೆದ ಪತ್ರವನ್ನು ದೂರು ಎಂದು ಭಾವಿಸಿದ್ದಾರೆ. ನಾನು ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿಲ್ಲ.

ರಾಜ್ಯಪಾಲರು ಈ ಹಿಂದೆ ಗುಜರಾತ್ ನಲ್ಲಿ 9 ಅವಧಿಗೆ ಹಣಕಾಸು ಸಚಿವರಾಗಿದ್ದವರು. ಅವರಿಗೆ ನಿಯಮಗಳೇನು ಅನ್ನುವುದು ಗೊತ್ತಿರುತ್ತದೆ. ಅನುದಾನ ಯಾವ ರೀತಿ ಬಿಡುಗಡೆಯಾಗಬೇಕು ಅನ್ನುವುದು ಗೊತ್ತಿದೆ. ಹೀಗಾಗಿ ನಮ್ಮ ಮುಖ್ಯಮಂತ್ರಿಗಳಿಗೆ ನಿಯಮದ ಅರಿವು ಮೂಡಿಸಿ ಎಂದು ಮನವಿ ಮಾಡಿದ್ದೇನೆ. ಜೊತೆಗೆ ನನಗೆ ಮಾರ್ಗದರ್ಶನ ಮಾಡಿ ಅಂತಾ ರಾಜಭವನಕ್ಕೆ ಹೋಗಿ ಭೇಟಿ ಮಾಡಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಇನ್ನು ಸಂಪುಟದಲ್ಲಿ ಪೋಸ್ಟ್ ಮ್ಯಾನ್ ಆಗಿರಲು ಸಾಧ್ಯವಿಲ್ಲ, ಸಚಿವರಾಗಿ ಇಲಾಖೆಗೆ ಬಂದ ಅನುದಾನವನ್ನು ಹೇಗೆ ಎಲ್ಲಿ ಬಳಕೆ ಮಾಡಬೇಕು ಎಂದು ನಿರ್ಧರಿಸುವುದು ನನ್ನದೇ ಕರ್ತವ್ಯ ಅನ್ನುವ ಮೂಲಕ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ.

- Advertisement -
- Advertisement -
- Advertisement -

Latest article